ಮುಳ್ಳೂರು ನಾಗರಾಜು ಎಂಬ ನೈಜ ಹೋರಾಟಗಾರ

Update: 2017-08-12 18:39 GMT

ಇತ್ತೀಚಿನ ದಲಿತ ಸಂಘಟನೆಗಳು, ವಿಘಟನೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಸಂದರ್ಭದಲ್ಲಿ ಮುಳ್ಳೂರು ನಾಗರಾಜುರವರು ಮುನ್ನಡೆಸುತ್ತಿದ್ದ ಹೋರಾಟದ ಆಯಾಮವನ್ನು ಆ ಕಾಲದ ಸ್ನೇಹಿತರು ಅಲಲ್ಲಿ ಸ್ಮರಿಸಿಕೊಳ್ಳುತ್ತಿದ್ದ ರೀತಿಯನ್ನು ಗಮನಿಸಿ ನಾಗರಾಜುರವರ ಬದುಕಿನ ಆಯಾಮವನ್ನು ತಿಳಿಯುವ ಕುತೂಹಲದಿಂದ ಅವರ ಒಡನಾಡಿಗಳನ್ನು ಭೇಟಿಯಾದೆ. ಅವರ ಸ್ವಂತ ಬದುಕಿನ ಆಯಾಮವೇ ಇರಲಿಲ್ಲ. ಯಾಕೆಂದರೆ ಅವರ ಬದುಕೇ ಸಂಘಟನೆಯಾಗಿತ್ತು. ಅವರ ಹೋರಾಟದ ಆಯಾಮವೇ ಅವರ ಬದುಕಾಗಿತ್ತು, ಅವರಿಗೆ ಇದ್ದ ಒಂದೇ ಒಂದು ಸ್ವಂತ ಆಸ್ತಿ ಎಂದರೆ ಅದು ‘ಸಂಘಟನೆ’ ಮಾತ್ರ. ಸಮಾಜದ ಅಂತರಂಗವನ್ನು ಶುದ್ಧೀಕರಿಸಲು ಹೊರಟವರು ಸಂಸಾರದ ಅಂತರಂಗದಿಂದ ದೂರ ಉಳಿಯುತ್ತಾರೆ ಎಂಬುದಕ್ಕೆ (ಡಿಎಸ್‌ಎಸ್) ಸಂಘಟನೆಯ ಏಕೈಕ ಉದಾಹರಣೆ ಮುಳ್ಳೂರು ನಾಗರಾಜುರವರು.

ಒಬ್ಬ ಅಪ್ಪಟ ಹೋರಾಟಗಾರನಿಗೆ ನಾನು ಇಂದು ಎಲ್ಲಿದ್ದೇನೆ? ನಾಳೆ ಎಲ್ಲಿರುತ್ತೇನೆ? ಇಂದು ನಾನು ಎಲ್ಲಿ ತಿಂದೆ? ನಾಳೆ ಎಲ್ಲಿ ಮಲಗುವುದು, ಎಂಬ ಪರಿವಿರುವುದಿಲ್ಲ. ಎಲ್ಲಿ ನೋವಿರುತ್ತದೋ ಅಲ್ಲಿ ಹೋರಾಟ ಹುಟ್ಟುತ್ತದೆ. ಹೋರಾಟಗಾರ ಎಲ್ಲಿ ನೋವಿರುತ್ತದೋ ಅಲ್ಲಿ ಬದುಕಲೆತ್ನಿಸುತ್ತಾನೆ. ಎಲ್ಲಿ ನೋವಿರುತ್ತದೋ ಅಲ್ಲಿಗೆ ಪಯಣಿಸುತ್ತಾನೆೆ. ಎಲ್ಲಿ ಶೋಷಣೆ ಇರುತ್ತದೆಯೋ ಅಲ್ಲಿ ಭರವಸೆಯಾಗುತ್ತಾನೆ. 80ರ ದಶಕದ ನಂಜನಗೂಡು ಭಾಗದ ಅದೆಷ್ಟೋ ನೊಂದ, ದಮನಿತರ ಬದುಕಿನ ಬಹುದೊಡ್ಡ ಭರವಸೆಯಾಗಿದ್ದವರು ಮುಳ್ಳೂರು ನಾಗರಾಜುರವರು.

ಇಂದಿನ ಸಂಘಟನೆಗಳ ಹಾಗೆ, ದೌರ್ಜನ್ಯಕೊಳ್ಳಗಾದವರ ಆಹ್ವಾನವನನ್ನು ಅವರು ಬಯಸುತ್ತಿರಲಿಲ್ಲ ಒಂದು ವಾಹನದ ಅಗತ್ಯವಿರಲಿಲ್ಲ, ಸಮಯದ ಪರಿವಿರಲಿಲ್ಲ, ಕಾಲ್ನಡಿಗೆಯಲ್ಲ್ಲಿ, ಅರ್ಧರಾತ್ರಿಗಳಲ್ಲಿ, ದೌರ್ಜನ್ಯಕ್ಕೊಳ್ಳಗಾದವರ ಮನೆಗೆ ‘ಏಕಾಂಗಿಯಾಗಿ’ ತೆರಳಿದ್ದುಂಟು.

ಅವರ ಹೋರಾಟದ ಬದುಕಿನೊಡನೆ ಇಷ್ಟೊಂದನ್ನು ಬರೆದದ್ದು ಹೇಗೆ? ಮತ್ತು ಎಲ್ಲಿ? ಎಂದರೆ ಅವರಿಗೆ ಬರೆಯಲಿಕ್ಕೆ ಅಂತ ಒಂದು ಸ್ಥಳ ಬೇಕಿರಲಿಲ್ಲ. ಅವರಿಗೆ ಬರೆಯಲು ಸುಸಜ್ಜಿತವಾದ ಬಿಳಿ ಬಿಳಿ ಬಿಡಿ ಹಾಳೆಗಳು, ಮೇಜು, ಕುರ್ಚಿ, ಪ್ಯಾಡ್‌ಗಳ ಅಗತ್ಯವಿರಲಿಲ್ಲ. ಯಾವುದೋ ರಸ್ತೆ ಬದಿಯಲ್ಲಿ ಗಾಳಿಯೊಟ್ಟಿಗೆ ತೂರುತ್ತಿದ್ದ ಬಿಳಿ ಹಾಳೆಯ ಮೇಲೆ ಕವಿತೆ ಮೂಡುತ್ತಿತ್ತು, ನಂಜನಗೂಡಿನ ಸರಕಾರಿ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಅದಷ್ಟೋ ಕವಿತೆಗಳು ಹುಟ್ಟಿ, ಅದಾವುದೊ ವೇಸ್ಟ್ ಹಾಳೆಯಲ್ಲಿ ರೂಪತಾಳಿದವು. ಸಾರ್ ಇದೆಲ್ಲಾ ಹೇಗೆ ಸಾಧ್ಯ ಎಂದರೆ, ‘‘ಸಾಹಿತ್ಯ ನನ್ನೊಳಗೆ ‘ಬಾವಿಯೊಳಗಿನ ಜಲದಂಗಕಯ್ಯೊ’ ಮೊಗೆದಷ್ಟು ಅಂತರ್ಜಲ ಮತ್ತೆ ಸುರತದ. ನನಗೆ ಯಾವಾಗ ಸುಸ್ತಾಗುತ್ತದೊ ಆಗ ಜಲ ಬತ್ದಂಗ ಕಯ್ಯಾ’’ ಎನ್ನೊ ರೂಪಕದಲ್ಲಿಯೇ ಒಂದು ಕಾವ್ಯವನ್ನು ಸೃಷ್ಟಿಸುವ ಶಕ್ತಿ ಅವರೊಳಗಡಗಿತ್ತು. ಇಂತಹ ಸಂಚಾರಿ ಸಾಹಿತ್ಯದೊಳಗೆ ಹುಟ್ಟಿದ್ದು, ಕನ್ನಡ ಸಾಹಿತ್ಯದೊಳಗಿನ ದಲಿತ ಸಾಹಿತ್ಯದ ಮೊತ್ತಮೊದಲ ‘ಮಹಾಕಾವ್ಯ’ ‘ಏಕಾಂಗಿ ಏಕಲವ್ಯ’ ಈ ಬಹುದೊಡ್ಡ ಸಮೂಹದೊಳಗೆ ‘ಏಕಾಂಗಿ’ ಮತ್ತು ಏಕಲವ್ಯನಾಗಿ ಬದುಕಿದ್ದು ನಾಗರಾಜುರವರ ಅದಮ್ಯತೆಗೆ ಸಾಕ್ಷಿ. 10 ತಿಂಗಳ ತಗಡೂರು ಭೂ ಹೋರಾಟದಲ್ಲಿ ಏಕಾಂಗಿಯಾಗಿ 10 ತಿಂಗಳು ಸತತ ಸ್ಥಾಯಿಮೂರ್ತಿಯಾಗಿ, ಟೆಂಟಿನೊಳಗಡೆ ಕುಳಿತಾಗ ಹುಟ್ಟಿದ್ದೇ ಅವರ ‘‘ಮರಣ ಮಂಡಲ ಮಧ್ಯದೊಳಗೆ’’, ‘ಕಾ ಪುರುಷ’ ಕೃತಿಗಳು ‘ಸಿಂಗಳಿಕೆ’, ‘ಬೇತಾಳ’ ಎನ್ನುವ ಕತೆಗಳು, ‘ನೀರು ನೆರಳಿಲ್ಲದ ಹಾದಿ’ ಎಂಬ ಕಾದಂಬರಿಗಳು ಇವು ಪೂರ್ಣಗೊಂಡಿದ್ದು ಗೌತಮ್ ಹಾಸ್ಟೆಲ್‌ನ ರೂಂಗಳಲ್ಲಿ.

‘ಮಾಮರದ ಮೇಲೊಂದು ಕೋಗಿಲೆ’ ಎಂಬ ಅವರ ಆತ್ಮಕಥನ, ಅವರ ಬದುಕಿನ ಅಂತ್ಯದೊಳಗೆ ಹುಟ್ಟಿದ ಸಾಹಿತ್ಯ. ನಾಗರಾಜುರವರ ಹತ್ತಿರ, ಆಸ್ತಿ, ಅಧಿಕಾರ, ಅಂತಸ್ತುಗಳಿರಲಿಲ್ಲ. ಆದರೂ ಅಧಿಕಾರಿಗಳು ಅವರನ್ನು ಕಂಡರೆ ಭಯ ಪಡುತಿದ್ದರು. ಅಧಿಕಾರಿ ವರ್ಗಕ್ಕೆ ಭಯವಿದ್ದುದು ನಾಗರಾಜುರವರು ಬರೆದ ಅರ್ಜಿಗಳಿಗಲ್ಲ ಅವರಲ್ಲಿದ್ದ ‘ಪ್ರಾಮಾಣಿಕತೆ’.

ನೇರ, ನಿಷ್ಠುರ, ನ್ಯಾಯಪರ ನಿಲುವು, ನಿಸ್ವಾರ್ಥತೆಯಿಂದ ಹಣ, ಅಧಿಕಾರ, ಅಂತಸ್ತು, ಒಳ ಒಪ್ಪಂದಗಳಿಂದ ದೂರ ನಿಂತು ನೀರ್ಗಲ್ಲಾದುದ್ದು, ರಾಜಕಾರಣ-ರಾಜಕಾರಣಿಗಳನ್ನು ಹಿಂಬಾಲಿಸದೆ, ಸಾಂಸ್ಕೃತಿಕವಾಗಿ ಶೋಷಿತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನೆಯೊಳಗೆ ಕಂಡ ಅವರ ದೂರದೃಷ್ಟಿ ಇಂದಿನ ಎಲ್ಲ ಸಂಘಟನೆಗಳಿಗೆ ಅನುಕರಣೀಯವಾಗಿದೆ.

ನಂಜನಗೂಡು ಭಾಗದಲ್ಲಿ ನಾಗರಾಜುರವರಿದ್ದಾಗ ಡಿಎಸ್‌ಎಸ್ ‘ವಿರೋಧ ಪಕ್ಷದಂತೆ’ ಕೆಲಸ ಮಾಡುತಿತ್ತು. ಅವರು ಅದರ ನಾಯಕರಂತೆ ಬದುಕಿದ್ದರು. ಇಂದಿನ ಸಂಘಟನೆಗಳು ಆ ಎಳೆಯನ್ನು ಹಿಡಿದೇ ಬದುಕಬೇಕಿದೆ. ಆ ಸಂದರ್ಭದಲ್ಲಿ ‘ಪಂಚಮ’ ಪತ್ರಿಕೆ ಸಂಪಾದಕರಾಗಿ, ‘ಮುಂಗಾರು’ ಪತ್ರಿಕೆ ವರದಿಗಾರರಿಗೆ ಚಳವಳಿಗೆ ಪೂರಕವಾಗಿ ಮಾಧ್ಯಮವನ್ನು ಬಳಸಿಕೊಂಡ ರೀತಿಯನ್ನು ಇಂದಿನವರು ಕಲಿಯಬೇಕಿದೆ.

ಅವರು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬರೆದ, ‘ದಿಲ್ಲಿ ದುರಗವ್ವನ ಕರಾಳ ಶಾಸನ’ ಎಂಬ ಪದ್ಯ ಅಮೆರಿಕದ ‘ಜಾನ್ ಅಲಿವರ್ ಪರ್ರಿ’ ಎನ್ನುವ ಪುಸ್ತಕದಲ್ಲಿ ದಾಖಲಾಗಿದೆ. ಇಲ್ಲಿ ದಾಖಲಾದ ಇಡೀ ದಲಿತ ಸಾಹಿತ್ಯದ ಮೇರು ಸಾಹಿತಿಗಳೆಂದರೆ ನಾಗರಾಜುರವರು ಮತ್ತು ಸಿದ್ದಲಿಂಗಯ್ಯ ಮಾತ್ರ.

ಇವರ ಬದುಕನ್ನು ತಾಳಿಕೊಂಡ ಸಹನಾ ಮೂರ್ತಿ ಶ್ರೀಮತಿ ಪುಟ್ಟ ಲಕ್ಷ್ಮಮ್ಮರವರಿಗೆ ಗೌರವ ಸಲ್ಲಬೇಕು. ಸಾರ್ವಜನಿಕ ಹಾಸ್ಟೆಲ್‌ನಲ್ಲಿ ಒಂದು ಕಪ್ ಟೀ, ಎರಡು ಬಿಸ್ಕೆಟ್ ನೀಡುವುದರೊಟ್ಟಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ಇವರ ಬದುಕು ಅನನ್ಯ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ