ದಿಲ್ಲಿ: ಇಬ್ಬರು ಜಾಡಮಾಲಿ ಸಹೋದರರು ಸಾವು

Update: 2017-08-13 04:00 GMT

ಹೊಸದಿಲ್ಲಿ, ಆ.13: ನಗರದ ಸಿಟಿ ಮಾಲ್‌ನಲ್ಲಿ ಶನಿವಾರ ಸಂಜೆ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಸಹೋದರರಿಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಅವರ ಜತೆ ಸಹಕರಿಸುತ್ತಿದ್ದ ಮೃತ ಸಹೋದರರ ತಂದೆ ಯೂಸುಫ್ (50) ಹಾಗೂ ನೆರವಿಗೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಸಿಟಿ ಮಾಲ್‌ನ ಸೆಪ್ಟಿಕ್ ಟ್ಯಾಂಕ್ ಆಗಿದ್ದು, ಪಾಲಿಕೆಯ ಒಳಚರಂಡಿ ಟ್ಯಾಂಕ್ ಅಲ್ಲ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉನ್ನತ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯೂಸುಫ್ ಹಾಗೂ ಅವರ ಮಕ್ಕಳಾದ ಜಹಾಂಗೀರ್ (24), ಇಜಾಝ್(22) ಅವರು ಅಗರ್‌ವಾಲ್ ಫನ್ ಸಿಟಿ ಮಹಲ್‌ನ ಒಳಚರಂಡಿ ಘಟಕವನ್ನು ಸ್ವಚ್ಛಗೊಳಿಸಲು ತೆರಳಿದ್ದರು. ಸೆಪ್ಟಿಕ್ ಟ್ಯಾಂಕ್‌ಗೆ ಇಳಿದು ಕೆಲಸ ನಿರ್ವಹಿಸುವ ವೇಳೆ ಉಸಿರಾಟದಿಂದ ಇಬ್ಬರು ಮೃತಪಟ್ಟರು. ಇವರಿಗೆ ಯಾವುದೇ ಸುರಕ್ಷಾ ಪರಿಕರಗಳನ್ನು ನೀಡಿರಲಿಲ್ಲ ಎಂದು ಡಿಸಿಪಿ ನೂಪುರ್ ಪ್ರಸಾದ್ ಹೇಳಿದ್ದಾರೆ.

ನಿರ್ವಹಣೆ ಕೆಲಸವನ್ನು ಹೊರಗುತ್ತಿಗೆಗೆ ನೀಡಲಾಗಿದ್ದು, ನಮಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಮಾಲ್ ಅಧಿಕಾರಿಗಳು ನುಣುಚಿಕೊಂಡಿದ್ದಾರೆ. ಆದರೆ ಹೊರಗುತ್ತಿಗೆಯ ಷರತ್ತುಗಳನ್ನು ನೋಡಿದ ಬಳಿಕ ಯಾರು ಸಾವಿಗೆ ಕಾರಣ ಎಂಬ ನಿರ್ಧಾರಕ್ಕೆ ಬರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News