×
Ad

ಮಕ್ಕಳ ಬಗ್ಗೆ ತನ್ನಷ್ಟು ಸಂವೇದನೆ ಹೊಂದಿರುವವರು ಬೇರಿಲ್ಲ: ಆದಿತ್ಯನಾಥ್

Update: 2017-08-13 21:50 IST

ಲಕ್ನೊ, ಆ.13: ಕಳೆದ ಐದು ದಿನದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಗೋರಖ್‌ಪುರದ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಆದಿತ್ಯನಾಥ್, ತಪ್ಪಿತಸ್ತರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸರಕಾರ ನೇಮಿಸಿರುವ ತನಿಖಾ ಸಮಿತಿಯ ವರದಿಗಾಗಿ ಕಾಯಲಾಗುತ್ತಿದೆ . ಮಕ್ಕಳ ಬಗ್ಗೆ ತನಗಿಂತಲೂ ಹೆಚ್ಚು ಸೂಕ್ಷ್ಮಸಂವೇದನೆ ಹೊಂದಿರುವವರು ಇನ್ಯಾರೂ ಇರಲಿಕ್ಕಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡ ಜೊತೆ ಬಾಬಾ ರಾಘವ್‌ದಾಸ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ಆದಿತ್ಯನಾಥ್ ಹೇಳಿದರು.

 ಪ್ರಧಾನಿ ನರೇಂದ್ರ ಮೋದಿ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ . ಈ ನಿಟ್ಟಿನಲ್ಲಿ ಆರೋಗ್ಯ ಸಚಿವರು ರಾಜ್ಯಕ್ಕೆ ಆಗಮಿಸಿದ್ದಾರೆ. ಮಕ್ಕಳ ಸಾವಿಗೆ ಆಸ್ಪತ್ರೆಯ ಅಧಿಕಾರಿಗಳ ಅಸಡ್ಡೆಯ ವರ್ತನೆ ಕಾರಣ ಎಂದು ತಿಳಿದುಬಂದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾರನ್ನೂ ಸುಮ್ಮನೆ ಬಿಡಲಾಗದು ಎಂದು ಮುಖ್ಯಮಂತ್ರಿ ಹೇಳಿದರು.

    ವಿಪಕ್ಷಗಳು ಈ ವಿಷಯವನ್ನು ರಾಜಕೀಯಗೊಳಿಸುತ್ತಿವೆ ಎಂದು ಟೀಕಿಸಿದ ಆದಿತ್ಯನಾಥ್, ಸಂವೇದನಾಶೀಲತೆ ಇಲ್ಲದ ಮಂದಿ, ಈಗ ಅನವಶ್ಯಕವಾಗಿ ಸಂವೇದನೆಯ ವಿಷಯವನ್ನು ಎತ್ತುವ ಮೂಲಕ ಗಾಯಕ್ಕೆ ಉಪ್ಪು ಸವರುತ್ತಿದ್ದಾರೆ. ಕನಿಷ್ಠ ನೈಜ ವಿಷಯವನ್ನು ತಿಳಿದುಕೊಳ್ಳುವ ಪ್ರಯತ್ನವಾದರೂ ಮಾಡಬೇಕಿದೆ ಎಂದವರು ಹೇಳಿದರು.

ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ಗೆ ಸಂವೇದನಾಶೀಲತೆಯ ಎಂಬುದೇ ಇಲ್ಲ. ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ಆಮ್ಲಜನಕದ ಪೂರೈಕೆಯಲ್ಲಿ ಸ್ಥಗಿತವಾಗಿತ್ತೇ ಎಂದು ಮನದಟ್ಟು ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ಉತ್ತರಪ್ರದೇಶದಲ್ಲಿ ವೈರಸ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News