ಅಭಿವೃದ್ಧಿ ಭ್ರಮೆಯ ಉರುಳಲ್ಲಿ ಶ್ರೀಸಾಮಾನ್ಯ

Update: 2017-08-13 18:02 GMT

ಮೋದಿ-ಶಾ ಅವರ ಗೆಲುವಿನ ‘ರಥಯಾತ್ರೆ ಮುಂದು ವರಿದ್ದು, ತನ್ನ ದಾರಿಗೆ ಅಡ್ಡಬಂದ ಅಸಂಘಟಿತ ಹಾಗೂ ದುರ್ಬಲ ಪ್ರತಿಪಕ್ಷಗಳನ್ನು ಕೆಡವಿಹಾಕುತ್ತಾ ಮುನ್ನುಗ್ಗುತ್ತಿದೆ. ಸಾಮಾನ್ಯ ಮತದಾರರನ್ನು ಮರುಳು ಮಾಡುವಲ್ಲಿ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿರುವ ಹಾಲಿ ಕೇಂದ್ರ ಸರಕಾರದ ಎರಡು ಮಹಾ ಸುಳ್ಳುಗಳ ಬಗ್ಗೆ ಈ ಸಂದರ್ಭದಲ್ಲಿ ಅವಲೋಕನ ನಡೆಸುವುದು ಅತ್ಯಂತ ಪ್ರಸ್ತುತವಾಗಿದೆ.

ಮೊದಲನೆಯದಾಗಿ 2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯುಪಿಎ ಆಡಳಿತದ ಭ್ರಷ್ಟಾಚಾರದ ರಾಜಕೀಯದಿಂದ ದೇಶವನ್ನು ಮುಕ್ತಗೊಳಿಸಿ, ಭಾರೀ ಪ್ರಮಾಣದಲ್ಲಿ ಉದ್ಯೋಗವನ್ನು ಒದಗಿಸುವುದು ಹಾಗೂ ಯಶಸ್ವಿ ‘ಗುಜರಾತ್ ಮಾದರಿಯ ಅಭಿವೃದ್ಧಿ’ಯನ್ನು ಇಡೀ ದೇಶದಲ್ಲಿ ಮರುಸೃಷ್ಟಿಸುವ ಭರವಸೆಯನ್ನು ಬಿಜೆಪಿ ನೀಡಿತ್ತು. ಈ ಆಶ್ವಾಸನೆಯು ವಿಶೇಷವಾಗಿ ಜನಸಂಖ್ಯಾ ದೃಷ್ಟಿ ಯಿಂದ ಭಾರೀ ದೊಡ್ಡ ಸಂಖ್ಯೆಯಲ್ಲಿರುವ ಉತ್ತರ ಭಾರತದ ಯುವಜನತೆಯನ್ನು ಸೆಳೆಯಿತು. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವ್ಯಾಪಕವಾಗಿ ಪ್ರಚಾರ ಮಾಡಿದ್ದ ‘ಗುಜರಾತ್ ಮಾದರಿಯ ಬೆಳವಣಿಗೆ’ಯು ವಾಸ್ತವಿಕವಾಗಿ ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ (ಗುಜರಾತ್‌ನ ಉತ್ಪಾದನಾ ಬೆಳವಣಿಗೆಯ ಗಣನೀಯ ಭಾಗವು ಪೆಟ್ರೋಲಿಯಂ ಸಂಸ್ಕರಣಾಗಾರಗಳು ಹಾಗೂ ಪೆಟ್ರೋ ಕೆಮಿಕಲ್ಸ್ ನಂತಹ ಭಾರೀ ಬಂಡವಾಳ ಹೂಡಿಕೆಯ ಆರ್ಥಿಕ ಚಟುವಟಿಕೆಗಳಿಗೆ ಸೇರಿದ್ದಾಗಿದೆ)ದಿದ್ದರೂ, ಯುವಜನತೆಯನ್ನು ಮೋಡಿ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಉದ್ಯೋಗ ಸೃಷ್ಟಿಯ ವೇಗವು ಚುರುಕುಗೊಂಡಿಲ್ಲವೆಂಬುದು ಕೇಂದ್ರ ಸರಕಾರದ ಹೊಗಳುಭಟ್ಟ ಮಾಧ್ಯಮಗಳಿಗೆ ಹಾಗೂ ರಾಜಕಾರಣಿಗಳಿಗೆ ಈಗ ಸ್ಪಷ್ಟವಾಗಿ ಅರಿವಾಗಿದೆ. ಕೆಲವು ದತ್ತಾಂಶಗಳು (ಉದಾ: ಕಾರ್ಮಿಕ ಪ್ರಾಧಾನ್ಯತೆ ಯ ಕೈಗಾರಿಕೆಗಳಿಗೆ ಸಂಬಂಧಿಸಿ ಕಾರ್ಮಿಕ ಇಲಾಖೆ ಬಿಡುಗಡೆ ಗೊಳಿಸಿದ ವರದಿಗಳು) ದೇಶದಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತಿರುವು ದನ್ನು ತೋರಿಸಿಕೊಟ್ಟಿವೆ. ವಿಶೇಷವಾಗಿ ಕಡಿಮೆ ಉತ್ಪಾದಕತೆಯ ಕೃಷಿ ಉದ್ಯೋಗಗಳನ್ನು ತೊರೆದ ಬಳಿಕ ಆಕಾಂಕ್ಷಿ ಯುವಜನರು ಆಯ್ಕೆ ಮಾಡುವ ಔಪಚಾರಿಕ ವಲಯದ ಉದ್ಯೋಗಗಳು ಒಟ್ಟು ಉದ್ಯೋ ಗದ ಒಂದು ಸಣ್ಣ ಭಾಗವಷ್ಟೇ ಆಗಿ ಉಳಿದಿವೆ. ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ರಚನೆಯಾದ ರಾಷ್ಟ್ರೀಯ ಉದ್ಯೋಗ ವರದಿ 2016ರ ಪ್ರಕಾರ ಈ ಕ್ಷೇತ್ರಗಳಲ್ಲಿನ ಹೆಚ್ಚುವರಿ ಕಾರ್ಮಿಕರ ಸಂಖ್ಯೆ 5 ಕೋಟಿಯನ್ನು ದಾಟಿದೆ. ಉದ್ಯೋಗ ನೀಡಿಕೆ ಯ ಕುರಿತಾದ ‘ವಿಕಾಸ ಪುರುಷ’ನ ವರ್ಣರಂಜಿತ ಆಶ್ವಾಸನೆಗಳು ಮಂಕಾಗುತ್ತಿದ್ದಂತೆಯೇ, ಅನಿವಾರ್ಯವಾಗಿ 2019ರ ಚುನಾವಣೆ ಗಾಗಿ ವಿಭಜನವಾದಿ ರಾಜಕೀಯ ತಂತ್ರವನ್ನು ಹೆಣೆಯುವ ಕೆಲಸ ಆರಂಭಗೊಂಡಿದೆ. ಕೋಮು ಧ್ರುವೀಕರಣ, ಬಹುಸಂಖ್ಯಾತವಾದ, ದ್ವೇಷಕಾರುವ ಹಿಂದುತ್ವವಾದಿಗಳನ್ನು ಬಳಸಿಕೊಂಡು ಮುಂದು ವರಿಯಲು ಆಡಳಿತ ಪಕ್ಷ ಸಜ್ಜಾಗಿದೆ.

ಒಂದು ವೇಳೆ ಸರಕಾರದ ಸರ್ವೋನ್ನತ ನಾಯಕನು ನಿಮಗೆ ಉತ್ತಮವಾದ ಉದ್ಯೋಗವನ್ನು ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಆತನು ಭ್ರಷ್ಟಾಚಾರದ ‘ಭೂತ’ದ ವಿರುದ್ಧ ದಿಟ್ಟ ಹೋರಾಟ ನಡೆಸಿ ಯಾದರೂ ನಿಮ್ಮನ್ನು ಮೆಚ್ಚಿಸಬಹುದಾಗಿತ್ತು. ಒಂದು ವೇಳೆ ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಕೂಡಿಹಾಕಿರುವ ಕಪ್ಪುಹಣವನ್ನು ವಾಪಸ್ ತಂದು ಪ್ರತಿಯೊಬ್ಬನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಮಾಡುವ ಚುನಾವಣಾ ಭರವಸೆಯನ್ನು ಅಸಾಧ್ಯವೆಂದು ತಳ್ಳಿಹಾಕಬಹುದಾದರೂ, 2016ರ ನವೆಂಬರ್‌ನಲ್ಲಿ ನಡೆಸಲಾದ ನಗದು ಅಮಾನ್ಯತೆಯೆಂಬ ‘ಬ್ರಹ್ಮಾಸ್ತ್ರ’ ಪ್ರಯೋಗವನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ಆದರೆ ಈ ನೋಟು ನಿಷೇಧವು ಭಾರತದ ರಾಜಕೀಯ ಇತಿಹಾಸದ ಅತಿ ದೊಡ್ಡ ಪ್ರಹಸನವಾಗಿ ಪರಿಣಮಿಸಿತು.

ಶ್ರೀಮಂತರು ಕೂಡಿ ಹಾಕಿರುವ ಭ್ರಷ್ಟ ಹಣ ವನ್ನು ವಶಪಡಿಸಿಕೊಳ್ಳುವುದು, ಖೋಟಾನೋಟು ಪಿಡುಗನ್ನು ನಿರ್ಮೂಲನಗೊಳಿಸುವುದು, ಭಯೋ ತ್ಪಾದಕರ ಹಣಕಾಸು ಮೂಲವನ್ನು ನಾಶಪಡಿಸು ವುದು ಹಾಗೂ ಅಂತಿಮ ವಾಗಿ ಡಿಜಿಟಲ್ ಹಣದ ಬಳಕೆಗೆ ಉತ್ತೇಜನ ನೀಡು ವುದು ನೋಟು ಅಮಾನ್ಯತೆಯ ಪ್ರಮುಖ ಉದ್ದೇಶಗಳಾಗಿದ್ದವು.

ಇದೀಗ ರಿಸರ್ವ್ ಬ್ಯಾಂಕ್, ನಗದು ಅಮಾನ್ಯತೆಯ ಬಳಿಕ ಮರಳಿ ಬಂದಿರುವ ನೋಟುಗಳನ್ನು ಎಣಿಸುತ್ತಿದೆ. ಆದರೆ ಅಕ್ರಮವಾಗಿ ಕೂಡಿ ಹಾಕಿದ್ದ ನಗದು ಹಣ ಅತ್ಯಂತ ಕಡಿಮೆಪ್ರಮಾಣದಲ್ಲಿತ್ತು ಹಾಗೂ ಅದನ್ನು ಕೂಡಿಟ್ಟಿದ್ದವರು ಅದನ್ನು ನಿರ್ಭೀತಿಯಿಂದ ಹಿಂದಿರುಗಿಸಿದ್ದಾರೆಂಬುದು ಈಗ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿದೆ.

(ಚಲಾವಣೆಯಲ್ಲಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದ ನೋಟು ಗಳನ್ನು ತಾವು ಮರಳಿ ಪಡೆದಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲು ರಿಸರ್ವ್ ಬ್ಯಾಂಕ್ ಬಯಸುತ್ತಿಲ್ಲವೆಂದು ಕೆಲವರು ಶಂಕಿಸುತ್ತಿದ್ದಾರೆ. ಯಾಕೆಂದರೆ ನಗದು ಅಮಾನ್ಯತೆಯು ಕೆಲವು ಖೋಟಾನೋಟುಗಳನ್ನು ಸಕ್ರಮ ಗೊಳಿಸಲು ಅವಕಾಶವನ್ನು ಒದಗಿಸಿದೆಯೆಂಬುದನ್ನು ಒಪ್ಪಿಕೊಳ್ಳಲು ಅದು ಬಯಸುತ್ತಿಲ್ಲವೆಂದು ಅವರು ವಾದಿಸುತ್ತಾರೆ). ಇನ್ನು ಡಿಜಿಟಲ್ ಹಣದ ಬಳಕೆಯನ್ನು ಉತ್ತೇಜನ ನೀಡುವ ಉದ್ದೇಶದ ಬಗ್ಗೆ ಹೇಳುವುದಾದರೆ, ಇತರ ಅನೇಕ ರಾಷ್ಟ್ರಗಳು ನೋಟು ನಿಷೇಧದ ತೊಂದರೆಯನ್ನು ತೆಗೆದುಕೊಳ್ಳದೆ, ಅದನ್ನು ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿವೆ.

ನಗದು ಅಮಾನ್ಯತೆಯಿಂದ ದೇಶವು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಬೆಂಗಳೂರಿನ ಸುತ್ತಮುತ್ತಲಿನ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳ ಮೇಲೆ ನಡೆಸಿದ ಪ್ರಾಥಮಿಕ ಸಮೀಕ್ಷಾ ದತ್ತಾಂಶವು ಡಿಸೆಂಬರ್-ಜನವರಿ ತಿಂಗಳ ನಡುವಿನ ಮಾರಾಟದಲ್ಲಿ ಸರಾಸರಿ ಶೇ.20ರಷ್ಟು ಕುಸಿತವುಂಟಾಗಿರುವುದನ್ನು ಸೂಚಿಸಿದೆ (ಸಮೀಕ್ಷೆಯಲ್ಲಿ ಪಾಲ್ಗೊಂಡ ಐದನೆ ಒಂದಂಶದಷ್ಟು ಮಂದಿ ಮಾರಾಟದಲ್ಲಿ ಶೇ.40ರಷ್ಟು ಕುಸಿತವುಂಟಾಗಿರುವುದಾಗಿ ವರದಿ ಮಾಡಿದ್ದರು). ಉತ್ತರ ಭಾರತದ ಜವಳಿ ಉದ್ಯಮದ ಕೇಂದ್ರವಾದ ಪಾಣಿಪತ್‌ನಲ್ಲಿ ಡಿಸೆಂಬರ್-ಜನವರಿ (ಇಪಿಡಬ್ಲು, ಮೇ6)ಯಲ್ಲಿ ನಡೆದ ಸಮೀಕ್ಷೆಯು, ಸ್ಥಳೀಯವಾಗಿ ಮಾರಾಟದಲ್ಲಿ ಶೇ.40ರಿಂದ ಶೇ.80ರಷ್ಟು ಕುಸಿತವುಂಟಾಗಿರುವುದಾಗಿ ತಿಳಿಸಿದ್ದರು. ಇದರ ಫಲಿತಾಂಶವೆಂಬಂತೆ, ಅಲ್ಲಿ ದುಡಿಯುತ್ತಿದ್ದ 3.50 ಲಕ್ಷ ಮಂದಿ ಕಾರ್ಮಿಕರ ಪೈಕಿ ಸರಿಸುಮಾರು ಅರ್ಧದಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಯಾಕೆಂದರೆ ಅವರಿಗೆ ದಿನಗೂಲಿ ನೀಡಲು ನಗದಿನ ಸಮಸ್ಯೆ ಎದುರಾಗಿತ್ತು.

ನಗದು ಅಮಾನ್ಯತೆಯಿಂದ ಉಂಟಾಗಬಹುದಾದ ಪ್ರತಿಕೂಲ ಸಮಸ್ಯೆಗಳ ಬಗ್ಗೆ ಎಚ್ಚರಿಸಿದ್ದ ಹಾರ್ವರ್ಡ್ ಶಿಕ್ಷಣ ತಜ್ಞರನ್ನು ಲೇವಡಿ ಮಾಡಲು ಪ್ರಧಾನಿ ಜಿಡಿಪಿ (ನಿವ್ವಳ ಆಂತರಿಕ ಉತ್ಪನ್ನ) ದತ್ತಾಂಶ ಗಳನ್ನು ಮುಂದಿಟ್ಟಿದ್ದರು. ಆದರೆ ನಗದು ಅಮಾನ್ಯತೆಯಂತಹ ಆರ್ಥಿಕ ಆಘಾತಗಳ ಸಮಯದಲ್ಲಿ ವಿಶಾಲವಾದ ಔಪಚಾರಿಕ ವಲಯದಲ್ಲಿ ದತ್ತಾಂಶವನ್ನು ಆಧರಿಸಿದ ವಿಶ್ಲೇಷಣೆಗಳು, ನೈಜವಾದ ಜಿಡಿಪಿ ಬದಲಾವಣೆಗಳನ್ನು ಸೆರೆಹಿಡಿಯುವಲ್ಲಿ ಅರ್ಥವನ್ನು ಕಳೆದುಕೊಳ್ಳುತ್ತವೆ.

ಈ ಎಲ್ಲಾ ಜಿಡಿಪಿ ದತ್ತಾಂಶಗಳ ಪ್ರಕಟನೆಯು, ಜನ ಸಾಮಾನ್ಯರಿಗೆ ಮಂಕುಬೂದಿ ಎರಚುವ ರಾಜಕೀಯ ‘ಮಾಯಾಜಾಲ’ ಆಗಿದೆ. ಈ ದತ್ತಾಂಶಗಳನ್ನು ಸಮರ್ಥಿಸ ಬಲ್ಲಂತಹ ಸಮೀಕ್ಷಾ ವರದಿಗಳೂ ಹೊರಬಂದಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಾಗೂ ಅಪ್ರಾಮಾಣಿಕ ಶ್ರೀಮಂತರನ್ನು ದಂಡಿಸಲು ಸರಕಾರ ಕೈಗೊಂಡಿರುವ ಈ ಮಹಾನ್ ಉದ್ದೇಶಕ್ಕಾಗಿ ನಾವು ನೋಟು ಅಮಾನ್ಯತೆಯಂತಹ ಎಲ್ಲಾ ರೀತಿಯ ತೊಂದರೆಗಳನ್ನು ಸಹಿಸಿಕೊಳ್ಳಲೇಬೇಕಾಗಿದೆ ಎಂದು ಜನ ಗಾಢವಾಗಿ ನಂಬಿದ್ದಾರೆ.

 ಕೇಂದ್ರ ಸರಕಾರದ ಈ ಎಲ್ಲಾ ಪ್ರಚಾರ ಅಭಿಯಾನಗಳು ಹಾಲಿ ಆಡಳಿತವು, ಹಿಂದಿನ ಸರಕಾರಕ್ಕಿಂತ ಹೆಚ್ಚು ಪರಿಶುದ್ಧವಾಗಿದೆಯೆಂಬ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ವಿವಿಧ ಮಾಧ್ಯಮಗಳ ಬೆಂಬಲವೂ ಇದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆದ ವ್ಯಾಪಂ ಹಗರಣ ಅಥವಾ ಲಲಿತ್‌ಮೋದಿ ಪ್ರಕರಣವನ್ನು ಕಡೆಗಣಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಹರಾಜು ಪ್ರಕ್ರಿಯೆ ಈಗ ಹೆಚ್ಚು ಪರಿಶುದ್ಧವಾಗಿರುವುದಾಗಿ ಜನ ಹೇಳುತ್ತಿದ್ದಾರೆ. ವಾಸ್ತವಿಕವಾಗಿ ಯುಪಿಎ ಆಡಳಿತದ ಕೊನೆಯ ವರ್ಷಗಳ ಸಮಯ ಸುಪ್ರೀಂಕೋರ್ಟ್‌ನ ಆದೇಶಗಳ ಅಡಿಯಲ್ಲಿ ಅವು ಹೆಚ್ಚು ಸ್ವಚ್ಛ ಹಾಗೂ ಪಾರದರ್ಶಕವಾಗತೊಡಗಿದವು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣಿಗಾರಿಕೆ ಉದ್ಯಮದ ಸದ್ದು ಕಡಿಮೆ ಯಾಗತೊಡಗಿದಾಗ ಈ ವಲಯಗಳಲ್ಲಿ ಹೆಚ್ಚು ಹಣವನ್ನು ಈಗ ಸಂಪಾದಿಸಲು ಸಾಧ್ಯ ವಾಗುತ್ತಿಲ್ಲ. ಹಾಲಿ ಎನ್‌ಡಿಎ ಸರಕಾರದ ಆಡಳಿತದಲ್ಲಿ ಕೆಲವು ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಕಲ್ಲಿದ್ದಲು ಹಾಗೂ ಇಂಧನ ಉಪಕರಣಗಳ ಆಮದು ಬೆಲೆಯನ್ನು ನೈಜ ಬೆಲೆಗಿಂತ ಹೆಚ್ಚಾಗಿ ತೋರಿಸಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ಪತ್ತೆಹಚ್ಚಿದ್ದರೂ, ಆ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಸರಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಭೂಕಬಳಿಕೆಗಳ ಕುರಿತ ಕಥೆಗಳು ಮುಂದುವರಿದಿವೆ. ಆದರೆ ಈ ಹಗರಣಗಳಲ್ಲಿ ಒಂದು ವೇಳೆ ಆಡಳಿತ ಪಕ್ಷದ ರಾಜಕಾರಣಿಗಳು ಶಾಮೀಲಾಗಿದ್ದಲ್ಲಿ, ತನಿಖೆಯನ್ನು ಮುಂದುವರಿಸಲು ಸಿಬಿಐ ಅಥವಾ ಜಾರಿ ನಿರ್ದೇಶನಾಲಯಗಳು ಉತ್ಸುಕತೆಯನ್ನು ಪ್ರದರ್ಶಿಸುವುದಿಲ್ಲ. ಈ ಹಗರಣವನ್ನು ಬಯಲಿಗೆಳೆಯಲು ಯತ್ನಿಸುವ ಎನ್‌ಜಿಒ ಸಂಸ್ಥೆಗಳಿಗೆ ಬೆದರಿಕೆಯೊಡ್ಡಲಾಗುತ್ತಿದೆ. ಇದರ ಜೊತೆಗೆ ಬಹುತೇಕ ಮಾಧ್ಯಮಗಳು ಯಾವುದೇ ವಿಧದಲ್ಲೂ ಪ್ರತಿಕ್ರಿಯಿಸದೆ ಸುಮ್ಮನೆ ತೆಪ್ಪಗಿದ್ದುಬಿಡುತ್ತವೆ.

ರಾಜಕೀಯ ಪಕ್ಷಗಳ ಅದರಲ್ಲೂ ವಿಶೇಷವಾಗಿ ಆಡಳಿತಾರೂಢ ಪಕ್ಷದ ಚುನಾವಣಾ ನಿಧಿಯ ವಿಷಯದಲ್ಲೂ ಜಾಣವೌನ ವಹಿಸ ಲಾಗುತ್ತಿದೆ. ಮಾಹಿತಿ ಹಕ್ಕು (ಆರ್‌ಟಿಒ)ಕಾಯ್ದೆ ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಿಂದ ರಾಜಕೀಯ ಪಕ್ಷಗಳನ್ನು ಹೊರತು ಪಡಿಸಲಾಗಿದೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ನಡೆ ಯುತ್ತಿರುವ ತಥಾಕಥಿತ ಸುಧಾರಣೆಗಳು, ಈ ವಿಷಯವನ್ನು ಇನ್ನೂ ಕಡಿಮೆ ಪಾರದರ್ಶಕಗೊಳಿಸಿವೆ. ಈ ಮಧ್ಯೆ ಅಕ್ರಮ ಬಯಲಿಗೆಳೆಯು ವವರ (whistle blowers)ರಕ್ಷಣಾ ಕಾಯ್ದೆಯನ್ನು ದುರ್ಬ ಲಗೊಳಿಸಲಾಗಿದೆ. ಕಿರಿಯ ಅಧಿಕಾರಿಗಳಿಗೆ ತೆರಿಗೆ ದಾಳಿಗಳನ್ನು ನಡೆಸುವ ಅಧಿಕಾರವನ್ನು ನೀಡಿದ ಬಳಿಕ ಸುಲಿಗೆಗಿರುವ ಅವಕಾಶಗಳು ದ್ವಿಗುಣಗೊಂಡಿವೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಬಾಡಿಗೆಯ ಟ್ರೋಲ್‌ಗಳು ದೇಶದಲ್ಲಿ ಭ್ರಷ್ಟಾಚಾರದ ರಕ್ಕಸನ ವಧೆಯು ಭವ್ಯವಾಗಿ ಮುಂದುವರಿದಿದೆ ಎಂದು ಕಿರುಚುತ್ತಲೇ ಇವೆ ಹಾಗೂ ನಮ್ಮನ್ನು ಆಳುವ ನಾಯಕರು ಪ್ರತಿಪಕ್ಷ ಮುಕ್ತ ವ್ಯವಸ್ಥೆಯಿಂದ ಅರೆ ಸರ್ವಾಧಿಕಾರದೆಡೆಗೆ ದೇಶವನ್ನು ಕೊಂಡೊಯ್ಯುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದರೆ ಇದ್ಯಾವುದನ್ನೂ ಗಮನಿಸದ ಶ್ರೀಸಾಮಾನ್ಯರು ಇನ್ನೂ ನಂಬುತ್ತಲೇ ಇದ್ದಾರೆ.

ಕೃಪೆ: indianexpress.com

Writer - ಪ್ರಣವ್ ಬರ್ಧನ್

contributor

Editor - ಪ್ರಣವ್ ಬರ್ಧನ್

contributor

Similar News

ಜಗದಗಲ
ಜಗ ದಗಲ