ಜಾವೆಲಿನ್‌ನಲ್ಲಿ ಭಾರತದ ಕಾಂಗ್‌ಗೆ 12ನೆ ಸ್ಥಾನ

Update: 2017-08-13 18:45 GMT

ಲಂಡನ್, ಆ.13: ಇಲ್ಲಿ ನಡೆ ಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ದೇವಿಂದರ್ ಸಿಂಗ್ ಕಾಂಗ್ ಇಂದು ಫೈನಲ್‌ನಲ್ಲಿ 80.02 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು 12ನೆ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. ಇಂದು ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟು 13 ಮಂದಿ ಅಥ್ಲೀಟ್‌ಗಳು ಪದಕಕ್ಕಾಗಿ ಸ್ಪರ್ಧಾ ಕಣದಲ್ಲಿದ್ದರು.

ಕಾಂಗ್ ಅವರು ಮೊದಲ ಪ್ರಯತ್ನದಲ್ಲಿ 75.40 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಎರಡನೆ ಯತ್ನ ವಿಫಲಗೊಂಡಿತು. ಮೂರನೆ ಯತ್ನದಲ್ಲಿ 80.02 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರೊಂದಿಗೆ ನಿರಾಶೆಗೊಂಡರು.

ಜರ್ಮನಿಯ ಜೋಹಾನೆಸ್(89.89 ಮೀ.) ಚಿನ್ನ, ಝೆಕ್ ಗಣರಾಜ್ಯದ ಅಥ್ಲೀಟ್‌ಗಳಾದ ಜಾಕಬ್ ವಾದ್ಲೆಜಿಕ್ (89.79 ಮೀ.) ಬೆಳ್ಳಿ ಹಾಗೂ ಪೆಟ್ರಾ ಫೆಡ್ರಿಕ್ (88.32 ಮೀ.) ಕಂಚು ಪಡೆದರು.

  ಕಾಂಗ್ ಅವರು ಗುರುವಾರ ಜಾವೆಲಿನ್‌ನಲ್ಲಿ ಅಂತಿಮ ಸುತ್ತಿಗೆೆ ತೇರ್ಗಡೆಯಾಗುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದರು. ಆದರೆ ಇದೇ ವೇಳೆ ಭಾರತದ ಭರವಸೆಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಫಲರಾಗಿದ್ದರು.
 ಕಾಂಗ್ ಅರ್ಹತಾ ಸುತ್ತಿನ ಬಿ’ ಗ್ರೂಪ್‌ನ ಸ್ಪರ್ಧೆಯಲ್ಲಿ 84.22ಮೀ. ದೂರಕ್ಕೆ ಜಾವೆಲಿನ್ ಎಸೆದು ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದರು.
 ಫೈನಲ್‌ಗೆ ಅರ್ಹತೆ ಪಡೆಯಲು 83 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬೇಕಿತ್ತು. ಕಾಂಗ್ ಅವರು ಮೊದಲ ಪ್ರಯತ್ನದಲ್ಲಿ 82.22 ಮೀ; ಎರಡನೆ ಪ್ರಯತ್ನದಲ್ಲಿ 82.14 ಮೀ. ಮತ್ತು ಮೂರನೆ ಯತ್ನದಲ್ಲಿ 84.22 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಅಂತಿಮ ಹಂತಕ್ಕೆ ತೇರ್ಗಡೆಯಾದರು.
ಪಂಜಾಬ್‌ನ 26ರ ಹರೆಯದ ಕಾಂಗ್ ಭುಜನೋವಿನ ನಡುವೆಯೂ ಉತ್ತಮ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News