ಅಗರಬತ್ತಿ ಆರೋಗ್ಯಕ್ಕೆ ಹಾನಿಕಾರಕವೇ?: ಇದನ್ನು ಓದಿದರೆ ನಿಮಗೆ ಆಘಾತ ಖಚಿತ!

Update: 2017-08-14 10:03 GMT

ಅಗರಬತ್ತಿಗಳು ಹಾನಿಕಾರಕವೇ?

ಅಗರಬತ್ತಿಗಳನ್ನು ಹಚ್ಚುವುದು ಹೆಚ್ಚಿನವರ ದೈನಿಕ ವಿಧಿಯಾಗಿದೆ. ಅದು ನಮ್ಮ ಬದುಕಿನ ಒಂದು ಭಾಗವಾಗಿಬಿಟ್ಟಿದೆ. ಅವುಗಳಿಂದ ಹೊಮ್ಮುವ ಪರಿಮಳ ನಮ್ಮ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ ಮತ್ತು ಪ್ರಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಆದರೆ ನಿಜಕ್ಕೂ ಅಗರಬತ್ತಿ ಒಳ್ಳೆಯದೇ? ಅದರ ಪರಿಮಳ ಕೆಟ್ಟದ್ದನ್ನು ಮಾಡುತ್ತದೆಯೇ?

ಸಮಸ್ಯೆಯಿರುವುದು ಅಗರಬತ್ತಿಯ ಪರಿಮಳದಲ್ಲಲ್ಲ....ಅದರ ಹೊಗೆಯಲ್ಲಿ. ಇಂದು ಇಡೀ ಜಗತ್ತು ಈಗಾಗಲೇ ಹೊಗೆಯಿಂದ ತುಂಬಿ ಹೋಗಿದೆ. ಎಲ್ಲೆಡೆಯೂ ವಾಯು ಮಾಲಿನ್ಯದ್ದೇ ರಾಜ್ಯವಾಗಿದೆ. ನಮ್ಮ ಪೂರ್ವಜರು ಮಾಲಿನ್ಯಮುಕ್ತ ವಾತಾವರಣದಲ್ಲಿ ಬದುಕಿದ್ದರು, ಆದರೆ ಇಂದು ನಾವು ವಾಸವಾಗಿರುವ ಪರಿಸರ ಸಾಕಷ್ಟು ಹೊಗೆಯಿಂದ ಕೂಡಿದೆ. ಹೀಗಾಗಿ ಅಗರಬತ್ತಿಗಳನ್ನು ಉರಿಸಿ ಇನ್ನಷ್ಟು ಹೊಗೆಯನ್ನುಂಟು ಮಾಡುವುದು ಸರಿಯೇ?

ಈ ಬಗ್ಗೆ ಅಧ್ಯಯನ ನಡೆಸಿರುವ ಸಂಶೋಧಕರು ಅಗರಬತ್ತಿಯ ಹೊಗೆ ಮಾನವನ ಆರೋಗ್ಯಕ್ಕೆ ಹಾನಿಕರವಾಗಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅಗರಬತ್ತಿಯಿಂದ ಹೊಹೊಮ್ಮುವ ಹೊಗೆಯು ಬೆಂಝೀನ್, ಕಾರ್ಬೊನಿಲ್ ಮತ್ತು ಪಾಲಿ ಆ್ಯರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂತಹ ಕ್ಯಾನ್ಸರ್‌ಕಾರಕಗಳನ್ನು ಒಳಗೊಂಡಿದೆ ಎನ್ನುತ್ತಾರೆ ಸಂಶೋಧಕರು. ಇದು ಅಗರಬತ್ತಿಯು ಯಾವುದರಿಂದ ಮಾಡಲ್ಪಟ್ಟಿದೆ ಎನ್ನುವುದನ್ನು ಹೆಚ್ಚಾಗಿ ಅವಲಂಬಿಸಿದೆ. ಅಗರಬತ್ತಿಗಳನ್ನು ತಯಾರಿಸಲು ಬಳಸಲಾಗಿರುವ ಕೆಲವು ವಸ್ತುಗಳು ಮತ್ತು ತೈಲಗಳು ದಹಿಸಲ್ಪಟ್ಟಾಗ ಅಪಾಯಕಾರಿ ಸಂಯುಕ್ತಗಳನ್ನು ಉತ್ಪಾದಿಸುತ್ತವೆ.

 ಅಗರಬತ್ತಿಯ ಹೊಗೆ ನಮ್ಮ ದೇಹದ ಚರ್ಮ ಮತ್ತು ಕಣ್ಣುಗಳಲ್ಲಿ ಕೆರಳುವಿಕೆಯನ್ನು ಉಂಟು ಮಾಡಬಹುದು. ಅಸ್ತಮಾದಿಂದ ನರಳುತ್ತಿರುವವರಿಗೆ ಈ ಹೊಗೆ ಹಾನಿಕಾರಕ ವಾಗಿದೆ. ಇತರರಿಗೆ ಅದು ಶ್ವಾಸನಾಳಗಳಲ್ಲಿ ಉರಿಗೆ ಕಾರಣವಾಗಬಹುದು. ಮನೆಗಳಲ್ಲಿ ಸುದೀರ್ಘ ಕಾಲದಿಂದ ಅಗರಬತ್ತಿಯನ್ನು ಬಳಸುತ್ತಿದ್ದರೆ ಅದು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಉಸಿರಾಟ ವ್ಯವಸ್ಥೆಗೂ ಹಾನಿಯನ್ನುಂಟು ಮಾಡುತ್ತದೆ.

  ಅಗರಬತ್ತಿಯ ಹೊಗೆಯಲ್ಲಿರುವ ಸಲ್ಫರ್ ಡಯಾಕ್ಸೈಡ್, ಫಾರ್ಮಾಲ್ಡಿಹೈಡ್‌ನ ಮತ್ತು ಸಾರಜನಕದ ವಿವಿಧ ಹಾನಿಕಾರಕ ರೂಪಗಳು ಸುದೀರ್ಘ ಅವಧಿಯಲ್ಲಿ ಅಸ್ತಮಾ ಮತ್ತು ಸಿಒಪಿಡಿ(ಕ್ರಾನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್)ಯ ಅಪಾಯವನ್ನು ಹೆಚ್ಚಿಸುತ್ತವೆ.

ನಾವು ಎಷ್ಟು ಹೊತ್ತು ಅಗರಬತ್ತಿಯ ಹೊಗೆಗೆ ತೆರೆದುಕೊಂಡಿರುತ್ತೇವೆ, ಹೊಗೆಯ ತೀವ್ರತೆ ಮತ್ತು ಪರಿಮಳಕ್ಕಾಗಿ ಬಳಸಲಾದ ವಸ್ತುಗಳು.....ಈ ಎಲ್ಲ ಅಂಶಗಳು ನಮ್ಮ ಜೀವಕೋಶಗಳಿಗೆ ಕೆಲ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುವಲ್ಲಿ ಪಾತ್ರ ವಹಿಸುತ್ತವೆ.

ಕೆಲವು ಅಗರಬತ್ತಿಗಳು ಕಬ್ಬಿಣ, ಮ್ಯಾಗ್ನೇಷಿಯಂ ಮತ್ತು ಸೀಸವನ್ನು ಒಳಗೊಂಡಿ ರುತ್ತವೆ. ಹೊಗೆಯ ಮೂಲಕ ನಮ್ಮ ಶರೀರದಲ್ಲಿ ಸೇರಿಕೊಳ್ಳುವ ಈ ವಿಷಕಾರಿ ವಸ್ತುಗಳನ್ನು ದಿನನಿತ್ಯವೂ ಹೊರಗೆ ಹಾಕಲು ಮೂತ್ರಪಿಂಡಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಅವುಗಳ ಸುಲಲಿತ ಕಾರ್ಯ ನಿರ್ವಹಣೆಗೆ ತೊಂದರೆಯನ್ನುಂಟು ಮಾಡಬಹುದು, ಜೊತೆಗೆ ಸುದೀರ್ಘಾವಧಿಯಲ್ಲಿ ಹೃದಯದ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರಬಹುದು. ಅಗರಬತ್ತಿಯ ಹೊಗೆಯಿಂದ ಮನೆಯೊಳಗಿನ ವಾತಾವರಣದಲ್ಲಿ ಮಾಲಿನ್ಯ ಸೇರಿಕೊಳ್ಳುವುದರಿಂದ ಅದು ತಲೆನೋವು ಮತ್ತು ಕೆಲವು ನರಸಂಬಂಧಿ ಸಮಸ್ಯೆಗಳಿಗೂ ಕಾರಣವಾಗಬಲ್ಲುದು. ಹೊಗೆಯಿಂದಾಗಿ ಮನೆಯೊಳಗೆ ನೈಟ್ರೋಜನ್ ಆಕ್ಸೈಡ್ ಮತ್ತು ಕಾರ್ಬನ್ ಮೊನೊಕ್ಸೈಡ್ ತುಂಬಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News