ಸುಭಾಷ್ ಪಾರ್ಟಿ ಕಟ್ಟಿದ್ದ ರೇವಣ್ಣ

Update: 2017-08-14 18:20 GMT

1857ರ ಸಿಪಾಯಿ ದಂಗೆಯ ಮೂಲಕ ವ್ಯವಸ್ಥಿತವಾಗಿ ಆರಂಭಗೊಂಡರೂ ಅದಕ್ಕೆ ಹೆಚ್ಚು ಪುಷ್ಟಿ ಬಂದಿದ್ದು, 1920ರ ನಂತರ ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ ಚಳವಳಿಯ ನೇತೃತ್ವ ವಹಿಸಿದ ನಂತರ. ಗಾಂಧೀಜಿಯವರ ಒಂದು ಕರೆಗೆ ಆಗಿನ್ನೂ ಯೌವನಕ್ಕೆ ಕಾಲಿಡುತ್ತಿದ್ದ ಲಕ್ಷಾಂತರ ಯುವಕರು ತನ್ನ ವೈಯಕ್ತಿಕ ಬದುಕನ್ನು ಬದಿಗಿಟ್ಟು ಸ್ವಾತಂತ್ರ ಹೋರಾಟಕ್ಕೆ ಧುಮಕಿದವರಿದ್ದಾರೆ. ಅಂತಹವರಲ್ಲಿ ತುಮಕೂರಿನ ಕಮ್ಯುನಿಸ್ಟ್ ನಾಯಕ ಟಿ.ಆರ್.ರೇವಣ್ಣ ಒಬ್ಬರು. ಸಾಕಷ್ಟು ಸ್ಥಿತಿವಂತರೆನಿಸಿದ ಮಂಡಿ ವರ್ತಕರ ಕುಟುಂಬದಲ್ಲಿ ಜನಿಸಿದರೂ ಎಲ್.ಎಸ್(7ನೆ ತರಗತಿ)ಓದುವಾಗಲೇ 1942ರಲ್ಲಿ ಗಾಂಧೀಜಿಯವರ ಕ್ವಿಟ್ ಇಂಡಿಯಾ, ಮಾಡು ಇಲ್ಲವೇ ಮಡಿ ಹೋರಾಟಗಳಲ್ಲಿ ಭಾಗವಹಿಸಿ 3 ತಿಂಗಳಕಾಲ ಜೈಲುವಾಸ ಅನುಭವಿಸಿದವರು.

ಶಿಕ್ಷಣ ಬಿಟ್ಟು ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯರಾಗಿ ಪಿಯುಸಿ ಶಿಕ್ಷಣವನ್ನು ಮುಗಿಸಲು ಸಾಧ್ಯವಾಗದಿದ್ದರೂ ಇಂದಿನ 82ರ ಇಳಿ ವಯಸ್ಸಿನಲ್ಲಿಯೂ ಹಲವಾರು ಹೋರಾಟಗಳಲ್ಲಿ ಕೆಂಬಾವುಟ ಹಿಡಿದ ಯುವಕರನ್ನು ನಾಚಿಸುವ ರೀತಿ ಸಂಗಾತಿಗಳನ್ನು ಹುರಿದುಂಬಿಸುವುದನ್ನು ನೋಡಿದರೆ, ಹೊಟ್ಟೆಪಾಡಿನ ಹೋರಾಟಗಾರರೇ ಹೆಚ್ಚಾಗಿರುವ ಈ ಕಾಲದಲ್ಲಿ ಟಿ. ಅರ್. ರೇವಣ್ಣ ನಿಜಕ್ಕೂ ಆದರ್ಶಪ್ರಾಯರಾಗಿ ಕಂಡು ಬರುತ್ತಾರೆ.

1928 ಸೆಪ್ಟಂಬರ್ 16 ರಂದು ತುಮಕೂರಿನ ಮಂಡಿ ಮರ್ಚೆಂಟ್ ರಾಜಪ್ಪ ಅವರ ಮಗನಾಗಿ ಹುಟ್ಟಿದ ಟಿ. ಆರ್. ರೇವಣ್ಣ, ವಿದ್ಯಾರ್ಥಿ ದಿಸೆಯಲ್ಲಿಯೇ ಸೇರಿದ್ದು ಸ್ವಾತಂತ್ರ ಚಳವಳಿ, ಆನಂತರದ ಕೆಂಬಾವುಟದ ನಂಟು ಅವರನ್ನು ಓರ್ವ ಅಪ್ರತಿಮ ಹೋರಾಟಗಾರರನ್ನಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. 1932ರಲ್ಲಿ ಮಹಾತ್ಮಾ ಗಾಂಧಿಯವರು ತುಮಕೂರು ನಗರಕ್ಕೆ ಭೇಟಿ ನೀಡಿ, ಇಂದಿನ ಸರಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದು ಮಂಡಿಗೆ ಬಂದಿದ್ದ ಕೊರಟಗೆರೆ ಭಾಗದ ರೈತರೊಬ್ಬರು ಟಿ.ಆರ್.ರೇವಣ್ಣ ಅವರನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಗಾಂಧೀಜಿಯನ್ನು ತೋರಿಸಿದ್ದ ನೆನಪನ್ನು ಅವರು ಇಂದಿಗೂ ಮರೆತಿಲ್ಲ.ಗಾಂಧೀಜಿ ಅಂದು ವಿಶ್ರಾಂತಿ ಪಡೆದಿದ್ದ ಹೈಸ್ಕೂಲ್‌ನ ಕೊಠಡಿ ಇಂದು ಗಾಂಧಿ ಸ್ಮಾರಕವಾಗಿ ಮಾರ್ಪಾಟಾಗಿದೆ.

ಸುಭಾಷ್ ಪಾರ್ಟಿ ಉದಯ:
ಕ್ವಿಟ್ ಇಂಡಿಯಾ ಚಳವಳಿಯ ನಂತರ ತಮ್ಮದೇ ವಯಸ್ಸಿನ ಗೆಳೆಯರೊಂದಿಗೆ ಸೇರಿ ಸುಭಾಷ್ ಪಾರ್ಟಿ ಕಟ್ಟಿ ಸ್ವಾತಂತ್ರ ಹೋರಾಟವನ್ನು ಉಗ್ರವಾಗಿಸುವ ನಿಟ್ಟಿ ನಲ್ಲಿ ಟಿ.ಆರ್.ರೇವಣ್ಣ, ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುತ್ರ ರಾಮಚಂದ್ರ, ಹನುಮಾನ್‌ಸಿಂಗ್, ಆನಂತ್, ಶರತ್‌ಕುಮಾರ್, ನರಸಿಂಹಮೂರ್ತಿ ಅವರ ಒಡಗೂಡಿ ಗುಪ್ತವಾಗಿ ಸ್ವಾತಂತ್ರ ಚಳವಳಿಯನ್ನು ನಡೆಸಿದ ವರು. ಸೈಕಲ್ ಮೇಲೆ ಊರೂರು ತಿರುಗಿ ಬ್ರಿಟಿಷರ ವಿರುದ್ಧ ಕರಪತ್ರಗಳನ್ನು ಹಂಚಿ ಹೋರಾಟಗಾರರನ್ನು ಸಂಘಟಿಸುವ ಕೆಲಸವನ್ನು ಅಂದು ಸುಭಾಷ್ ಪಾರ್ಟಿ ಮಾಡಿತ್ತು.

ಸ್ನೇಹಿತರನ್ನು ಕಳೆದುಕೊಂಡ ದಿನ:
ದೇಶಕ್ಕೆ ಸ್ವಾತಂತ್ರ ಬಂದ ನಂತರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾಗಲು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಒಪ್ಪಂದ ಕಾರಣ. ಅವರ ವಿರುದ್ಧ ಮೈಸೂರು ಚಲೋ ಚಳವಳಿ ಆರಂಭಗೊಂಡಿತ್ತು. 1947ರ ಸೆಪ್ಟಂಬರ್ 14ರಂದು ತುಮಕೂರಿನಲ್ಲಿ ನಡೆದ ಬೃಹತ್ ಹೋರಾಟವನ್ನು ಹತ್ತಿಕ್ಕಲು ಚರ್ಚ್ ಸರ್ಕಲ್(ಇಂದಿನ ಸ್ವಾತಂತ್ರ ಚೌಕ)ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇವರ ಸಂಗಾತಿಗಳಾದ ನಂಜುಂಡಪ್ಪ (ಮುನಿಸ್ವಾಮಯ್ಯರ ಪುತ್ರ), ರಂಗಪ್ಪ(ಗಂಗಾಧರಶಾಸ್ತ್ರಿಯವರ ಪುತ್ರ) ಹಾಗೂ ರಾಮಚಂದ್ರ (ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರ ಪುತ್ರ) ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಪೊಲೀಸರ ಗುಂಡೇಟು ತಿಂದು ಇನ್ನೂ ಜೀವಂತವಿದ್ದ ರಾಮಚಂದ್ರ ಅವರನ್ನು ಆಸ್ಪತ್ರೆಗೆ ಸೇರಿಸಲು ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗ ಆತ ನೀರಿಗಾಗಿ ಪರಿತಪಿಸಿದ್ದು, ರಸ್ತೆಯ ಅಕ್ಕಪಕ್ಕದ ಮನೆಯವರು ನೀರು ನೀಡದೆ ಬಾಗಿಲು ಹಾಕಿಕೊಂಡ ಘಟನೆಯನ್ನು ಇಂದಿಗೂ ಟಿ.ಆರ್.ರೇವಣ್ಣ ತಮ್ಮ ಸ್ಮತಿ ಪಟಲದಿಂದ ಮರೆತಿಲ್ಲ.
ಸಿಪಿಐ ಕಾರ್ಯಕರ್ತರಾಗಿ ಮಕ್ಕಳು, ಮೊಮ್ಮಕ್ಕ ಳೊಂದಿಗೆ ಜೀವನ ನಡೆಸುತ್ತಿರುವ 82 ವರ್ಷದ ಟಿ.ಆರ್.ರೇವಣ್ಣ ಇಂದಿಗೂ ಕೆಲ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ರೂಢಿಸಿಕೊಂಡಿದ್ದಾರೆ. ಸಾಹಿತ್ಯಕ, ಸಾಂಸ್ಕೃತಿಕ ಹೋರಾಟಗಳಲ್ಲಿ ಆಹ್ವಾನವಿಲ್ಲದಿದ್ದರೂ ಭಾಗವಹಿಸಿ ಹೋರಾಟಗಳಿಗೆ ಪುಷ್ಟಿ ನೀಡುತ್ತಲೆ ಬಂದವರು.

Writer - ರಂಗರಾಜು ಎನ್.ಡಿ.

contributor

Editor - ರಂಗರಾಜು ಎನ್.ಡಿ.

contributor

Similar News