ಪೂರ್ವ,ಈಶಾನ್ಯ ರಾಜ್ಯಗಳಲ್ಲಿ ನೆರೆ ಪ್ರಕೋಪ,ರೈಲು ಸಂಪರ್ಕ ಕಡಿತ

Update: 2017-08-15 14:08 GMT

ಹೊಸದಿಲ್ಲಿ,ಆ.15: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಬಿಹಾರದಲ್ಲಿ ಭೀಕರ ನೆರೆಯುಂಟಾಗಿದ್ದು, ಈವರೆಗೆ 45 ಜನರು ಸಾವನ್ನಪ್ಪಿ ದ್ದಾರೆ ಮತ್ತು 65.37 ಲಕ್ಷ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಸ್ಸಾಂ ಮತ್ತು ಉತ್ತರ ಬಂಗಾಳಗಳಲ್ಲಿ ಹಲವಾರು ಪ್ರದೇಶಗಳು ನೆರೆನೀರಿನಲ್ಲಿ ಮುಳುಗಿದ್ದು, ಜನಜೀವನವು ಅಸ್ತವ್ಯಸ್ತಗೊಂಡಿದೆ. ಈಶಾನ್ಯ ಭಾರತಕ್ಕೆ ರೈಲು ಸಂಪರ್ಕ ಕಡಿತಗೊಂಡಿದ

ಉತ್ತರಾಖಂಡದ ಪಿಥೋಡಗಡ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಮೇಘಸ್ಫೋಟದ ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದು, ಆರು ಸೇನಾ ಸಿಬ್ಬಂದಿಗಳು ಸೇರಿದಂತೆ 10 ಜನರು ನಾಪತ್ತೆಯಾಗಿದ್ದಾರೆ.

ಅಸ್ಸಾಮಿನಲ್ಲಿ ನೆರೆ ಸ್ಥಿತಿ ತೀರ ಬಿಗಡಾಯಿಸಿದ್ದು, 25 ಜಿಲ್ಲೆಗಳಲ್ಲಿಯ 32 ಲಕ್ಷ ಜನರು ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇಲ್ಲಿ ಇನ್ನೂ ಮೂವರು ಬಲಿಯಾಗುವುದರೊಂದಿಗೆ ರಾಜ್ಯದಲ್ಲಿ ಎರಡನೇ ಬಾರಿಗೆ ಉಂಟಾಗಿರುವ ನೆರೆಗೆ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿದೆ. ಅರುಣಾಚಲ ಪ್ರದೇಶದಲ್ಲಿಯೂ ಹಲವಾರು ಜಿಲ್ಲೆಗಳಲ್ಲಿ ನೆರೆ ಸ್ಥಿತಿ ಗಂಭೀರವಾಗಿ ಮುಂದುವರಿದಿದ್ದು, ಆಗಾಗ್ಗೆ ಸಂಭವಿಸುತ್ತಿರುವ ಭೂಕುಸಿತಗಳಿಂದಾಗಿ ರಸ್ತೆ ಸಂಚಾರದಲ್ಲಿ ವ್ಯತ್ಯಯವುಂಟಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂ ಮತ್ತು ಬಿಹಾರಗಳ ಮುಖ್ಯಮಂತ್ರಿ ಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕೇಂದ್ರದಿಂದ ಸಂಪೂರ್ಣ ಬೆಂಬಲದ ಭರವಸೆಯನ್ನು ನೀಡಿದ್ದಾರೆ.

ಬಿಹಾರದ ವಿವಿಧ ನೆರೆಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಗಳಿಗಾಗಿ ಸೇನೆ, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ಕಿಷನ್‌ಗಂಜ್ ರೈಲ್ವೆ ನಿಲ್ದಾಣದಲ್ಲಿ ಹಳಿಗಳ ಮೇಲೆ ನೀರು ನಿಂತಿರುವುದರಿಂದ ಹೊಸದಿಲ್ಲಿ-ಗುವಾಹಟಿ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಕನಿಷ್ಠ 17 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅತ್ತ ಅಸ್ಸಾಮಿನಲ್ಲಿ ಈ ವರ್ಷ ನೆರೆಗೆ ಬಲಿಯಾದವರ ಸಂಖ್ಯೆ 102ಕ್ಕೇರಿದೆ. 21 ಜಿಲ್ಲೆಗಳಲ್ಲಿ ಸುಮಾರು 22.5 ಲ.ಜನರು ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉತ್ತರ ಬಂಗಾಳದ ಗಂಗಾರಾಮಪುರ ಪ್ರದೇಶದಲ್ಲಿ ಸೋಮವಾರ ಮಣ್ಣಿನ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಇಡೀ ಪ್ರದೇಶದಲ್ಲಿ ನೆರೆ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ.

ಉತ್ತರ ಬಂಗಾಲದಿಂದ ಹಾದು ಹೋಗುವ, ಈಶಾನ್ಯ ಭಾರತವನ್ನು ಶೇಷ ಭಾರತದೊಂದಿಗೆ ಸಂಪರ್ಕಿಸುವ ರೈಲು ಸೇವೆಗಳನ್ನು ನೆರೆಯಿಂದಾಗಿ ಬುಧವಾರದವರೆಗೆ ಅಮಾನತುಗೊಳಿಸಲಾಗಿದೆ.

 ರೈಲ್ವೆ ಹಳಿಗಳು ನೀರಿನಲ್ಲಿ ಮುಳುಗಿರುವುದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ತುಂಬಿರುವುದರಿಂದ ಕೋಲ್ಕತಾದಿಂದ ಉ.ಬಂಗಾಳಕ್ಕೆ ರೈಲು ಮತು ಬಸ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಫಲಾಕತಾ ಮತ್ತು ಅಲಿಪುರ್ದ್ವಾರ್‌ಗಳನ್ನು ಸಂಪರ್ಕಿಸುವ 32 ಡಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರಮುಖ ಸೇತುವೆಯೊಂದು ನೆರೆನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News