ನಾಲ್ಕು ವರ್ಷಗಳ ಬಳಿಕ ಕ್ರಿಕೆಟ್ ಮೈದಾನಕ್ಕೆ ಇಳಿದ ಶ್ರೀಶಾಂತ್

Update: 2017-08-15 18:37 GMT

ಕೊಚ್ಚಿ, ಆ.15: 71ನೆ ಸ್ವಾತಂತ್ರೋತ್ಸವದ ಸಂಭ್ರಮದ ನಡುವೆ ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಪ್ರದರ್ಶನ ಪಂದ್ಯದಲ್ಲಿ ಆಡುವ ಮೂಲಕ ನಾಲ್ಕು ವರ್ಷಗಳ ಬಳಿಕ ಕ್ರಿಕೆಟ್ ಮೈದಾನಕ್ಕೆ ವಾಪಸಾದರು.

ಶ್ರೀಶಾಂತ್ ಕ್ರಿಕೆಟ್ ಮೈದಾನಕ್ಕೆ ಇಳಿದ ತಕ್ಷಣ ನೆರೆದಿದ್ದ ಪ್ರೇಕ್ಷಕರು ಹುರಿದುಂಬಿಸಿದರು. ಉಭಯ ತಂಡದ ಆಟಗಾರರು ಶ್ರೀಶಾಂತ್‌ಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಆಗಸ್ಟ್ 7 ರಂದು ಕೇರಳ ಹೈಕೋರ್ಟ್ ಬಿಸಿಸಿಐ ಶ್ರೀಶಾಂತ್‌ಗೆ ವಿಧಿಸಿದ್ದ ಆಜೀವ ನಿಷೇಧವನ್ನು ತೆರವುಗೊಳಿಸಲು ಆದೇಶ ನೀಡಿತ್ತು. ಕೋರ್ಟ್‌ನ ಈ ತೀರ್ಪಿನಿಂದ ಕೇರಳದ ವೇಗಿ ನಿಟ್ಟುಸಿರುಬಿಟ್ಟಿದ್ದಾರೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ದಿಲ್ಲಿ ಪೊಲೀಸರು ಶ್ರೀಶಾಂತ್‌ರನ್ನು ಬಂಧಿಸಿ ದಿಲ್ಲಿಯ ತಿಹಾರ್ ಜೈಲಿಗೆ ತಳ್ಳಿದ್ದರು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯದಿಂದ ದೋಷ ಮುಕ್ತಗೊಂಡಿದ್ದ ಶ್ರೀಶಾಂತ್ ಬಿಸಿಸಿಐ ಆಜೀವ ನಿಷೇಧ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಹೈಕೋರ್ಟ್ ಮೊರೆ ಹೋಗಿದ್ದರು.

ಹಾಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನೇತೃತ್ವದ ಬಿಸಿಸಿಐ ಶಿಸ್ತು ಸಮಿತಿ 2013ರ ಸೆ.13 ರಂದು ಶ್ರೀಶಾಂತ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಅಂಕಿತ್ ಚವಾಣ್‌ಗೆ ಆಜೀವ ನಿಷೇಧ ಹೇರಿತ್ತು. ಮಂಗಳವಾರ ನಡೆದ ಪ್ರದರ್ಶನ ಪಂದ್ಯದಲ್ಲಿ ಶ್ರೀಶಾಂತ್ ಪ್ರೊಡ್ಯೂಸರ್ಸ್‌ ಇಲೆವೆನ್ ವಿರುದ್ಧ ಪ್ಲೇಬ್ಯಾಕ್ ಸಿಂಗರ್ಸ್‌ ಇಲೆವೆನ್ ತಂಡವನ್ನು ಮುನ್ನಡೆಸಿದರು. ‘‘ಕ್ರಿಕೆಟ್ ಮೈದಾನಕ್ಕೆ ವಾಪಸಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇಲ್ಲಿಂದ ತಿರುವನಂತಪುರಕ್ಕೆ ತಲುಪಲು ಬಯಸುತ್ತೇನೆ. ಅಲ್ಲಿಂದ ಟೀಮ್ ಇಂಡಿಯಕ್ಕೆ ವಾಪಸಾಗುವೆ’’ಎಂದು ಶ್ರೀಶಾಂತ್ ವಿಶ್ವಾಸ ವ್ಯಕ್ತಪಡಿಸಿದರು. ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಆಜೀವ ನಿಷೇಧ ತೆರವು ಗೊಳಿಸುವಂತೆ ಬಿಸಿಸಿಐಗೆ ಆದೇಶಿಸಿದ್ದರೂ ಅದನ್ನು ಪಾಲನೆ ಮಾಡಲು ನಿರಾಕರಿಸಿರುವ ಬಿಸಿಸಿಐ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News