ನಮ್ಮ ಪ್ರಜಾಪ್ರಭುತ್ವಕ್ಕೆ ಬಹುತ್ವ-ಜಾತ್ಯತೀತತೆಯ ಅಗತ್ಯ

Update: 2017-08-15 18:52 GMT

ಭಾಗ-2

ಬಹಳ ಮೊದಲೇ ಗಾಂಧೀಜಿಯವರು ಸ್ವಾತಂತ್ರ್ಯದ ಪರಿಕಲ್ಪನೆ ಇರುವ, ಸ್ವಯಂ ಗೌರವ ಇರುವ ಮತ್ತು ಒಂದುಗೂಡುವಿಕೆಯ ಭಾವ ಇರುವ ಜನರಿದ್ದರೆ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ ಎಂದು ಊಹಿಸಿದ್ದರು. ಉತ್ತಮ ವ್ಯಕ್ತಿಗಳನ್ನು ಮತ್ತು ಸತ್ಯವಂತರನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡುವುದು ಇದಕ್ಕೆ ಅಗತ್ಯ ಎಂಬುದನ್ನು ಅವರು ಮನಗಂಡಿದ್ದರು ಮಾತ್ರವಲ್ಲ ಇದಕ್ಕಾಗಿ ಒತ್ತಾಯ ಮಾಡುವಂತಹ ಜನರು ಇರಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಇದನ್ನು ಅಂಬೇಡ್ಕರ್ ಅವರ ಓರ್ವ ವ್ಯಕ್ತಿ, ಒಂದು ಮತ, ಒಂದೇ ಮೌಲ್ಯ ಸಾಧಿಸಲ್ಪಡದಿದ್ದರೆ ಸಮಾನತೆಯ ಗೈರು ಹಾಜರಿ ಮತ್ತು ಭ್ರಾತೃತ್ವದ ಗೈರುಹಾಜರಿ ಜೀವನವನ್ನು ವೈರುಧ್ಯಮಯಗೊಳಿಸುತ್ತದೆ ಎಂಬ ಹೇಳಿಕೆಯ ಜತೆಯಲ್ಲಿ ಓದಿದಾಗ ಪ್ರಜಾಪ್ರಭುತ್ವಕ್ಕೆ ಇರುವ ಸವಾಲುಗಳು ಅರ್ಥವಾಗುತ್ತವೆ..
ನಮ್ಮ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯ ಕುರಿತ ಯಾವುದೇ ಮೌಲ್ಯಮಾಪನ ಪ್ರಕ್ರಿಯಾತ್ಮಕವಾಗಿರಬೇಕಾಗುತ್ತದೆ. ನಿಯಮಿತವಾಗಿ ಚುನಾವಣೆ ನಡೆಸುವಿಕೆ, ಚುನಾವಣಾ ವ್ಯವಸ್ಥೆಯ ದಕ್ಷತೆ, ಮತದಾರರ ಪಾಲ್ಗೊಳ್ಳುವಿಕೆಯಲ್ಲಿ ಸತತ ಏರಿಕೆ ಮತ್ತು ಶಾಸಕರ ಆಯ್ಕೆ ಹೀಗೆ ಆಗುತ್ತದೆ. ದಾಖಲೆಗಳು ಇದಕ್ಕೆ ಸಮಾಧಾನಕರ ಉತ್ತರ ಹೇಳುತ್ತವೆ.. ಆದರೆ ಅಸ್ತಿತ್ವದ ನಿಟ್ಟಿನಲ್ಲಿ ನೋಡಿದರೆ ಶ್ರೇಯಾಂಕ ಮೌಲ್ಯ ಸ್ಪಷ್ಟವಾಗಿಲ್ಲದಿರುವುದು ಕಂಡು ಬರುತ್ತದೆ. ಇವುಗಳಲ್ಲಿ 5 ಅಂಶಗಳನ್ನು ನೇರ ಪರಿಶೀಲನೆಗೆ ಒಳಪಡಿಸಬಹುದು. (1)ಕಾನೂನಿನೆದುರು ಸಮಾನತೆ ಮತ್ತು ಕಾನೂನಿನ ಮೂಲಕ ಸಮಾನ ರಕ್ಷಣೆ ನಡುವಿನ ಅಂತರ. (2)ಚುನಾಯಿತ ಪ್ರತಿನಿಧಿಗಳ ಪ್ರಾತಿನಿಧ್ಯ (3)ಶಾಸಕಾಂಗದ ಕಾರ್ಯವೈಖರಿ (4)ಲಿಂಗ ಮತ್ತು ವೈವಿಧ್ಯತೆಯ ಅಸಮತೋಲನ. (5)ಅನುಷ್ಠಾನದಲ್ಲಿರುವ ಜಾತ್ಯತೀತತೆ.
ಕಾನೂನಿನೆದುರು ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ:   ಸಮಾನತೆ ಸಾಧಿಸುವ ಪ್ರಯತ್ನ ಎರಡು ಮಟ್ಟದಲ್ಲಿ ಮಾಡಲಾಗಿದೆ. ಒಂದು ಹಂತದಲ್ಲಿ ಸಾಮಾಜಿಕ ರಚನೆಯನ್ನು ಬದಲಿಸಲು ಸಾಂವಿಧಾನಿಕ ಪ್ರಯತ್ನ. ಜಾತಿ ಪದ್ಧತಿ ಮತ್ತು ಅಸ್ಪಶ್ಯತೆ ಆಚರಣೆಯನ್ನು ಅಕ್ರಮ ಎಂದು ಹೇಳಲಾಗಿದೆ. ಪ್ರಭುತ್ವದ ಕಾರ್ಯಚಟುವಟಿಕೆಯ ಮೇಲೆ ಧಾರ್ಮಿಕತೆಯ ಪ್ರಭಾವಕ್ಕೆ ತಡೆ ಹಾಕಲಾಗಿದೆ. ಎರಡನೆ ಮಟ್ಟದಲ್ಲಿ ಆರ್ಥಿಕ ಸಮಾನತೆ ತರಲು ಪ್ರಯತ್ನ ಮಾಡಲಾಗಿದೆ. ಈ ಕೆಲಸದಲ್ಲಿ ಆಸ್ತಿಯ ಹಕ್ಕು ಮತ್ತು ವರ್ಗ ಅಸಮಾನತೆ ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇದರಿಂದಾಗಿ ಸಂವಿಧಾನದಲ್ಲಿಯ ಆರ್ಥಿಕ ಸಮಾನತೆಯ ಪ್ರಸ್ತಾಪ, ನ್ಯಾಯಾಲಯಗಳಲ್ಲಿ ಅಥವಾ ರಾಜಕೀಯ ವೇದಿಕೆಗಳಲ್ಲಿ ಮೂಲತಃ ತರ್ಕದ ಮಾತಾಗಿ ಉಳಿದಿದೆ.
ಚುನಾಯಿತ ಪ್ರತಿನಿಧಿಗಳ ಪ್ರಾತಿನಿಧ್ಯ: 2014ರ ಚುನಾವಣೆಯಲ್ಲಿ ಶೇ. 61 ಚುನಾಯಿತ ಸಂಸದರು ಚಲಾಯಿಸಲಾದ ಮತಗಳ ಪೈಕಿ ಶೇ. 50 ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರು. ಇದಕ್ಕೆ ಕಾರಣ ಪಕ್ಷಗಳ ಹೆಚ್ಚಳ ಮತ್ತು ಅಭ್ಯರ್ಥಿಗಳ ಸಂಖ್ಯೆಯಲ್ಲಿಯ ಹೆಚ್ಚಳ.
 ಶಾಸಕಾಂಗದ ಕಾರ್ಯಚಟುವಟಿಕೆ, ಉತ್ತರದಾಯಿತ್ವ ಮತ್ತು ಜವಾಬ್ದಾರಿ: ಶಾಸಕರ ಮೊದಲ ಕೆಲಸ ಶಾಸನಗಳನ್ನು ರೂಪಿಸುವುದು, ಕಾರ್ಯಾಂಗದ ಉತ್ತರದಾಯಿತ್ವವನ್ನು ಹೆಚ್ಚಿಸುವುದು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಚರ್ಚೆ ಮತ್ತು ಕುಂದುಕೊರತೆಗಳ ನಿವಾರಣೆ. ಈ ಮೂರು ಅಂಶಗಳು ಕೆಲವೊಮ್ಮೆ ಒಂದರ ಮೇಲೊಂದರಂತೆ ಆವರಿಸಿಕೊಳ್ಳುತ್ತವೆ. 1953ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದ ದಿನಗಳ ಸಂಖ್ಯೆ ಅನುಕ್ರಮವಾಗಿ 137 ಮತ್ತು 100 ಇತ್ತು. 2016ರಲ್ಲಿ ಇದು ಅನುಕ್ರಮವಾಗಿ 49 ಮತ್ತು 52ಕ್ಕೆ ಇಳಿದಿದೆ. ಇದರಿಂದಾಗಿ ಕಾರ್ಯಾಂಗದ ಉತ್ತರದಾಯಿತ್ವದ ಮೇಲೆ ಪರಿಣಾಮವುಂಟಾಗಿದೆ. ಕೆಲ ವರ್ಷಗಳ ಹಿಂದೆ ಮಾಡಲಾದ ಅಧ್ಯಯನವನ್ನು ಆಧರಿಸಿ ಹೇಳುವುದಾದರೆ ಶೇ. 40 ವಿಧೇಯಕಗಳು ಲೋಕಸಭೆಯಲ್ಲಿ 1 ಗಂಟೆಯ ಚರ್ಚೆಯ ಒಳಗೇ ಅಂಗೀಕಾರಗೊಳ್ಳುತ್ತಿವೆ. ರಾಜ್ಯ ಸಭೆಯಲ್ಲಿ ಈ ಪರಿಸ್ಥಿತಿ ಕೊಂಚ ಉತ್ತಮವಾಗಿದೆ. ಸರಕಾರದ ಕಾರ್ಯಾಂಗದ ಮೇಲೆ ನಿಗಾ ಇಡುವಲ್ಲಿ ಶಾಸಕಾಂಗ ಅಸಮರ್ಥವಾಗುತ್ತಿದೆ ಎಂದು ಭಾರತೀಯ ಸಂಸತ್ತು ಮತ್ತು ಅದರ ಉತ್ತರದಾಯಿತ್ವ ಕುರಿತು ನಡೆದ ಅಧ್ಯಯನ ಹೇಳಿದೆ.
ರಾಜ್ಯ ವಿಧಾನ ಸಭೆಗಳ ಕಾರ್ಯ ಚಟುವಟಿಕೆಯ ವಸ್ತುಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ. ಚುನಾವಣೆಯಲ್ಲಿ ಸಾರ್ವಜನಿಕರ ಪಾಲುದಾರಿಕೆ ಗಮನಾರ್ಹವಾಗಿ ಹೆಚ್ಚುತ್ತಿದ್ದರೆ, ಚುನಾಯಿತ ಸಂಸ್ಥೆಯ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಸಾರ್ವಜನಿಕ ಅತೃಪ್ತಿ ಹೆಚ್ಚುತ್ತಿದೆ.
ಲಿಂಗ ಮತ್ತು ವೈವಿಧ್ಯತೆಯ ಅಸಮತೋಲನ: 2014ರಲ್ಲಿ ಮಹಿಳಾ ಸಂಸದರು ಶೇ. 12.15 ಇದ್ದರು. ಇದು ಜಾಗತಿಕವಾಗಿ ಮತ್ತು ಸಾರ್ಕ್ ದೇಶಗಳ ಮಟ್ಟದಲ್ಲಿ ತೃಪ್ತಿ ತರುವ ಪ್ರಮಾಣ ಅಲ್ಲ. 2009ರ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡರೂ ಲೋಕಸಭೆಯಲ್ಲಿ ಅದನ್ನು ಎತ್ತಿಕೊಳ್ಳಲಿಲ್ಲ ಮತ್ತು ಅದು 2014ರ ಸಾರ್ವತ್ರಿಕ ಚುನಾವಣೆ ಸಂದರ್ಭ ಸಂಸತ್ತು ವಿಸರ್ಜನೆ ಗೊಂಡಾಗ ಮಸೂದೆ ನಿರರ್ಥಕಗೊಂಡಿತು. ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕೂಡಾ ಇದೇ ಸ್ಥಿತಿಯಲ್ಲಿದೆ.

(ಮುಂದುವರಿಯುವುದು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ