ಭಾಗ್ವತ್ ಧ್ವಜಾರೋಹಣ: ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

Update: 2017-08-16 03:37 GMT

ಪಾಲಕ್ಕಾಡ್, ಆ. 16: ಡಿಸಿ ಆದೇಶವನ್ನು ಉಲ್ಲಂಘಿಸಿ, ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಧ್ವಜಾರೋಹಣ ನೆರವೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಉಲ್ಲಂಘಿಸಿದ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಪಾಲಕ್ಕಾಡ್ ಜಿಲ್ಲಾಧಿಕಾರಿ ಮೇರಿ ಕುಟ್ಟಿ, ಈ ಸಂಬಂಧ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತದ ಎಚ್ಚರಿಕೆ ಮತ್ತು ಸೂಚನೆಯನ್ನು ಉಲ್ಲಂಘಿಸಿದ ಆರೋಪ ಕರ್ಣಾಕಿಯಮ್ಮನ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕನ ಮೇಲಿದೆ. ಆರೆಸ್ಸೆಸ್ ಮುಖಂಡನ ವಿರುದ್ಧವೂ ಜಿಲ್ಲಾಡಳಿತ ಪ್ರಕರಣ ದಾಖಲಿಸಲಿದೆಯೇ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಭಾಗ್ವತ್ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ ಮಾಡುವುದನ್ನು ನಿರ್ಬಂಧಿಸಿ ಮೇರಿ ಕುಟ್ಟಿ ಆದೇಶ ಹೊರಡಿಸಿದ್ದರು. ಸರ್ಕಾರಿ ಅನುದಾನಿತ ಶಾಲೆಯಲ್ಲಿ ರಾಜಕೀಯ ಮುಖಂಡರೊಬ್ಬರು ಧ್ವಜಾರೋಹಣ ನೆರವೇರಿಸುವುದು ಸರಿಯಲ್ಲ ಎಂದು ಡಿಸಿ ಅಭಿಪ್ರಾಯಪಟ್ಟಿದ್ದರು.

ಮುಖ್ಯಶಿಕ್ಷಕ ಅಥವಾ ವಿದ್ಯಾರ್ಥಿ ಸಂಘದ ಮುಖಂಡ ಧ್ವಜಾರೋಹಣ ನೆರವೇರಿಸಬಹುದು ಎಂದು ಡಿಸಿ ಸೂಚಿಸಿದ್ದರು. ಜಿಲ್ಲಾಧಿಕಾರಿ ಆದೇಶವನ್ನು ಶಾಲೆಗೆ ತಹಶೀಲ್ದಾರರು ಮತ್ತು ಡಿವೈಎಸ್ಪಿ ಸಮಾರಂಭಕ್ಕೆ ಒಂದು ಗಂಟೆ ಮುನ್ನ ತಲುಪಿಸಿದ್ದರು.

ಪಾಲಕ್ಕಾಡ್ ಪಟ್ಟಣದ ಹೊರವಲಯದಲ್ಲಿರುವ ಶಾಲೆ, ವಾರಗಳ ಹಿಂದೆಯೇ ತನ್ನ ನಿರ್ಧಾರವನ್ನು ಪ್ರಕಟಿಸಿ, ಸಿದ್ಧತೆ ಮಾಡಿಕೊಂಡಿತ್ತು. ಆರೆಸ್ಸೆಸ್ ಮುಖ್ಯಸ್ಥ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸಂಸ್ಕೃತಿ ಖಾತೆ ಸಚಿವ ಎ.ಕೆ. ಬಾಲನ್ ಕಿಡಿ ಕಾರಿದ್ದಾರೆ. ಶಾಲೆ ಮತ್ತು ಕೇಸರಿ ಸಂಘಟನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಆದರೆ ಜಿಲ್ಲಾಡಳಿತದ ಕ್ರಮ ದ್ವೇಷಪೂರಿತ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಆರೆಸ್ಸೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News