‘‘ಸೋಲನ್ನೇ ಗೆಲುವಿನ ಸೋಪಾನವಾಗಿಸಿ’’ ಯುವ ಪ್ರತಿಭೆಗಳಿಗೆ ನಂದಿನಿ ಕೆ.ಆರ್. ಕಿವಿಮಾತು

Update: 2017-08-16 04:44 GMT

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ 2016ನೆ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಕರ್ನಾಟಕದ ಹೆಮ್ಮೆಯ ಪುತ್ರಿ, ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ‘ವಾರ್ತಾಭಾರತಿ’ ಜತೆ ತಮ್ಮ ಸಾಧನೆಯ ಹಾದಿಯಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೋಲಾರದ ಕೆಂಬೋಡಿಯ ರಮೇಶ್ ಕೆ.ವಿ. ಹಾಗೂ ವಿಮಲಾ ಕೆ.ವಿ. ದಂಪತಿಯ ಪುತ್ರಿಯಾಗಿರುವ ನಂದಿನಿ ಕೆ.ಆರ್., ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದವರು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ 71ನೆ ಸ್ವಾತಂತ್ರೋತ್ಸವದಲ್ಲಿ ಹಳೆ ವಿದ್ಯಾರ್ಥಿನಿಯಾದ ನಂದಿನಿ ಕೆ.ಆರ್.ರವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು, ಈ ಸಂದರ್ಭ ‘ವಾರ್ತಾಭಾರತಿ’ ತಂಡ ಅವರನ್ನು ಮಾತನಾಡಿಸಿತು. ಅವರ ಜತೆಗಿನ ಸಂಪೂರ್ಣ ಸಂದರ್ಶನದ ವಿವರ ಇಲ್ಲಿದೆ.

► ಸಾಮಾನ್ಯ ವಿದ್ಯಾರ್ಥಿನಿಯಾಗಿ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಇದೀಗ, ಅದೇ ಕಾಲೇಜಿನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿರುವುದು ಹೇಗನ್ನಿಸುತ್ತಿದೆ?

ನಂದಿನಿ: ಬಹಳ ಖುಷಿಯಾಗುತ್ತಿದೆ. ಓದುವಾಗ, ಬೆಂಗಳೂರು, ಕೋಲಾರ ಕಡೆಯಿಂದ ಇಲ್ಲಿಗೆ ಬರುತ್ತಿದ್ದ ಪ್ರಥಮ ವಿದ್ಯಾರ್ಥಿನಿ ನಾನು. ಆಗೆಲ್ಲಾ ಬರಬೇಕಾದರೆ ರಾತ್ರಿಯೆಲ್ಲಾ ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸಿ, ಇಲ್ಲಿಗೆ ಬೆಳಗ್ಗೆ ಬಂದು ತಲುಪಬೇಕಾಗುತ್ತಿತ್ತು. ಈಗ ಮತ್ತೆ ಕಾಲೇಜಿಗೆ ಬರಬೇಕಾದರೆ ಅದೆಲ್ಲಾ ನೆನಪಾಗುತ್ತಿದೆ, ಸಂತಸನೂ ಆಗುತ್ತಿದೆ.

► ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಇಂತಹ ಸಂದರ್ಭ ಬರಬಹುದೆಂದು ಅಂದುಕೊಂಡಿದ್ದಿರಾ?

ನಂದಿನಿ: ಕನಸಿತ್ತು. ಅದು ನನಸಾಗಿದೆ. ಅದಕ್ಕೆ ಖುಷಿಯಾ ಗುತ್ತಿದೆ. ನಾವಿಲ್ಲಿ ಸ್ನೇಹಿತರ ಜತೆ ಸ್ವಾತಂತ್ರೋತ್ಸವ ಆಚರಿಸುವಾಗ ಆ ಕನಸಿತ್ತು. ವಿದ್ಯಾರ್ಥಿನಿಯಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸಂದರ್ಭ ಎರಡು ಸ್ವಾತಂತ್ರೋತ್ಸವವನ್ನು ಇಲ್ಲಿ ಆಚರಿಸಿದ್ದೇನೆ. ಇದೀಗ ನನ್ನ ಮೂರನೆ ಸ್ವಾತಂತ್ರೋತ್ಸವವನ್ನು ಈ ಸಂಸ್ಥೆಯಲ್ಲಿ ವಿಶೇಷ ಅತಿಥಿಯಾಗಿ ಆಚರಿಸಲು ತುಂಬಾ ಸಂತಸವಾಗುತ್ತಿದೆ.

► ನಿಮ್ಮ ಪರಿಚಯದೊಂದಿಗೆ ಬಾಲ್ಯದ ಬಗ್ಗೆ ತಿಳಿಸುವಿರಾ?

ನಂದಿನಿ: ನಾನು ಹುಟ್ಟಿದ್ದು ಕೋಲಾರದ ಕೆಂಬೋಡಿಯಲ್ಲಿ. ಬಾಲ್ಯ ಹೆಚ್ಚಾಗಿ ಕೆಂಬೋಡಿಯಲ್ಲಿ ಕಳೆಯಿತು. ಕೋಲಾರದಲ್ಲಿ 1ರಿಂದ 10ನೆ ತರಗತಿವರೆಗೆ ಓದಿದೆ. ಬಳಿಕ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ. ನಂತರ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಮುಗಿಸಿದೆ.

► ಐಎಎಸ್ ಕನಸು ಹೇಗೆ ಆರಂಭಗೊಂಡಿತ್ತು.

ನಂದಿನಿ: ಮೂರು-ನಾಲ್ಕನೆ ತರಗತಿಯಲ್ಲೇ ಕನಸು ಚಿಗುರೊಡೆದಿತ್ತು. ನನ್ನ ತಂದೆಯ ಜತೆ ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸುತ್ತಿದ್ದೆ. ಆಗದು ಕನಸಾಗಿ ಮನದಲ್ಲಿ ಹುದುಗಿತ್ತು. ಬಳಿಕ ಯೌವನಾವಸ್ಥೆಯಲ್ಲಿ ಜೀವನದಲ್ಲಿ ಏನು ಗುರಿ ಎಂಬ ಆಲೋಚನೆ ಬಂದಾಗ, ಸಮಾಜದ ವಿಭಿನ್ನ ಸ್ತರದ ಜನತೆಯ ಜತೆಗೆ ಬೆರೆಯುವ ವೇಳೆ ನಾಗರಿಕ ಸೇವೆಗಳ ಹುದ್ದೆಗೆ ಹೋದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಹುದೆಂಬ ಕಲ್ಪನೆ ಗಟ್ಟಿಯಾಯಿತು. ಸಮಾಜವೂ ಒಂದು ರೀತಿ ಪ್ರೇರಣೆಯಾಯಿತು.

► ಕನಸನ್ನು ಹೇಗೆ ಬೆಳೆಸಿದಿರಿ?

ನಂದಿನಿ: ಕನಸೊಂದೆ ಇದ್ದರೆ ಸಾಲದು. ಅದನ್ನು ಸಾಕಾರ ಗೊಳಿಸುವ ಛಲ, ಮಾರ್ಗ ಬಹಳ ಮುಖ್ಯ. ಅದಕ್ಕಾಗಿ ಮಾರ್ಗದರ್ಶನ ಅಗತ್ಯ. ಗ್ರಾಮೀಣ ಪ್ರದೇಶದಿಂದ ಬಂದ ಬಳಿಕ ತಿಳುವಳಿಕೆ, ಮಾಹಿತಿಯ ಕೊರತೆ ಇದ್ದೇ ಇರುತ್ತದೆ. ಆ ಸಾಮಾನ್ಯ ಸವಾಲುಗಳನ್ನು ನಾನೂ ಎದುರಿಸಬೇಕಾಯಿತು. ಅದಾಗಿ ಆರ್ಥಿಕ ಪರಿಸ್ಥಿತಿ ಕೂಡಾ ಸಾಮಾನ್ಯ. ಅದೂ ಒಂದು ಸವಾಲು. ಅವೆಲ್ಲವನ್ನೂ ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿ ಸೇರಿಕೊಂಡೆ. ಅಲ್ಲಿ ಆರ್ಥಿಕ ಪರಿಸ್ಥಿತಿಗೆ ಅನುಕೂಲನೂ ಆಯಿತು. ಸರಕಾರಿ ವ್ಯವಸ್ಥೆಯೊಳಗೆ ಕೆಲಸ ಮಾಡುವ ಅವಕಾಶವೂ ನನಗೆ ಲಭ್ಯವಾಯಿತು. ಅದು ಸಾಕಷ್ಟು ಅನುಭವ ನೀಡಿತು. ಅಲ್ಲಿಂದ ನನ್ನ ಓದಿನ ಪಯಣವನ್ನು ಮತ್ತೆ ಆರಂಭಿಸಿದೆ. ಕೆಲಸಕ್ಕೆ ಹೋಗುವ ಮುಂಚೆ ಸುಮಾರು ನಾಲ್ಕು ಗಂಟೆ ಓದು. ಕೆಲಸದಿಂದ ಬಂದ ಬಳಿಕ ನಾಲ್ಕು ಗಂಟೆ ಓದು. ಅಲ್ಲಿಂದ ಭಾರತೀಯ ಕಂದಾಯ ಇಲಾಖೆಗೆ ಆಯ್ಕೆಗೊಂಡೆ. ಅಲ್ಲಿಂದ ಭಾರತೀಯ ಆಡಳಿತ ಸೇವೆಗಳತ್ತ ನನ್ನ ಆಕರ್ಷಣೆ ಬಹಳವಾಗೇ ಇತ್ತು.

►ಐಎಎಸ್‌ಗಾಗಿ ನಾಲ್ಕನೆಯ ವಿಜಯದ ಪ್ರಯತ್ನದವರೆಗಿನ ನಿಮ್ಮ ಹಾದಿ ಹೇಗಿತ್ತು?

ನಂದಿನಿ: ನನ್ನ ಪ್ರಥಮ ಪ್ರಯತ್ನ, ಸಮುದ್ರ ಎಷ್ಟು ಆಳ ಇದೆ ಎಂದು ತಿಳಿಯದೆ ಧುಮುಕಿದ ಕ್ಷಣ. ಪೂರ್ವಭಾವಿ ಪರೀಕ್ಷೆಯಲ್ಲೇ ನಾನು ತೇರ್ಗಡೆ ಆಗಿಲ್ಲ. ಕಾರಣ ನನ್ನಲ್ಲಿ ಪೂರ್ವ ತಯಾರಿಯೇ ಇರಲಿಲ್ಲ. ನಮ್ಮ ಪ್ರಯತ್ನಕ್ಕೆ ತಕ್ಕುದಾದ ರೀತಿಯಲ್ಲೇ ಫಲಿತಾಂಶವೂ ಇರುತ್ತದೆ. ಅದು ನಿರೀಕ್ಷಿತವಾಗಿತ್ತು. ಆದರೆ ಇದರಿಂದ ನಾನು ಕಲಿತದ್ದು ಬಹಳ. ನಾನು ಯಾವ ರೀತಿ ತಯಾರಿ ಮಾಡಬೇಕೆಂಬುದು ನನಗೆ ಅರಿವಾಗಿತ್ತು. ಆ ತಯಾರಿಯ ಮೂಲಕ ಗೆಲ್ಲುವ ಆತ್ಮವಿಶ್ವಾಸ ನನಗೆ ಮೂಡಿತ್ತು. ಪಿಡಬ್ಲುಡಿಯಲ್ಲಿ ಕೆಲಸ ಮಾಡುತ್ತಲೇ ಎರಡನೆ ಪ್ರಯತ್ನ ಮುಂದುವರಿಸಿದೆ. ಆವಾಗಲೂ ಸಂಪೂರ್ಣವಾದ ಪ್ರಯತ್ನ ಇರಲಿಲ್ಲ. ಆದರೂ ನನಗೆ ಭಾರತೀಯ ಕಂದಾಯ ಇಲಾಖೆಯಲ್ಲಿ ಅವಕಾಶ ದೊರೆಯಿತು. ಅಲ್ಲಿಂದ ನನ್ನ ಸವಾಲುಗಳ ಬಗ್ಗೆ, ಯಾಕೆ ನನಗೆ ರ್ಯಾಂಕ್ ಪಡೆಯಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಪ್ರಶ್ನಿಸಿಕೊಂಡು ಉತ್ತರ ಹುಡುಕಲಾರಂಭಿಸಿದೆ. ನಿಗದಿತವಾದ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಅಭ್ಯಾಸ ಬೇಕಿತ್ತು. ಅದಕ್ಕೆ ನನಗೆ ಸಮಯಾವಕಾಶ ಇರಲಿಲ್ಲ. ಇದನ್ನೆಲ್ಲ ಸರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಾನು ಕಂಡುಕೊಂಡೆ. ಆ ಮೂಲಕ ನಾನು ನಾಲ್ಕನೆ ಪ್ರಯತ್ನವನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದೆ. ಏನು ತಪ್ಪುಗಳಿತ್ತು ಅದನ್ನು ಸರಿಮಾಡಿಕೊಂಡಿದ್ದರಿಂದ ಏನೇ ಫಲಿತಾಂಶ ಬಂದರೂ ನನ್ನ ಪೂರ್ಣವಾದ ಪ್ರಯತ್ನದ ಬಗ್ಗೆ ನೆಮ್ಮದಿ ಇತ್ತು. ನಾಲ್ಕನೆ ಪ್ರಯತ್ನ ನನ್ನ ಗುರಿಯೆಡೆಗಿನ ಪಯಣವಾಗಿತ್ತು. ನಾಲ್ಕು ವರ್ಷದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಯಶಸ್ಸು ನಮ್ಮ ಪ್ರಯತ್ನಕ್ಕೆ ತಕ್ಕುದಾಗಿರುತ್ತದೆ. ಬೇವಿನ ಬೀಜ ಬಿತ್ತರೆ ಮಾವಿನ ಬೆಳೆ ಬರುವುದಿಲ್ಲ. ಹಾಗೆಯೇ ನಾವು ಹಾಕುವ ಪ್ರಯತ್ನಕ್ಕೆ ಫಲ ಸರಿಸಮಾನವಾಗಿರುತ್ತದೆ. ನಮ್ಮ ಸೋಲಿನಿಂದ ನಾವು ಕಲಿಯುವಂತಹದ್ದು ಬಹಳಷ್ಟಿರುತ್ತದೆ. ಯಾವುದೇ ಸಮಯದಲ್ಲಿ ನಾವು ನಮ್ಮ ಸೋಲಿನಿಂದ ಒಳ್ಳೆಯ ಪಾಠ ಕಲಿತರೆ ಮುಂದೆ ಜೀವನದಲ್ಲಿ ಸಾಧನೆಗೆ ಪೂರಕವಾಗಿರುತ್ತದೆ.

► ಮೂರು ಪ್ರಯತ್ನಗಳು ನಾಲ್ಕನೆಯ ವಿಜಯಕ್ಕೆ ನಾಂದಿ ಅನ್ನುವಿರಾ?

ನಂದಿನಿ: ಖಂಡಿತವಾಗಿಯೂ, ನಾಲ್ಕು ವರ್ಷದ ತಯಾರಿಯೂ ಸರಿಸಮಾನವಾಗಿ ನನ್ನ ವ್ಯಕ್ತಿತ್ವದ ಅಭಿವೃದ್ಧಿಯಲ್ಲಿ ಮಹತ್ವವಾದ ಪಾತ್ರ ವಹಿಸಿದೆ.

► ಕನ್ನಡದ ಬಗ್ಗೆ ಒತ್ತು ನೀಡಿದ್ದೀರಿ? ಸಾಹಿತ್ಯದ ಬಗ್ಗೆಯೂ ಅಭಿರುಚಿಯುಳ್ಳವರು, ಅದರ ಬಗ್ಗೆ ವಿವರಿಸುವಿರಾ? ಕನ್ನಡದಲ್ಲಿ ಓದಿದವರು ಐಎಎಸ್ ಎದುರಿಸುವುದು ಸುಲಭವೇ?

ನಂದಿನಿ: ಜ್ಞಾನದ ಅಭಿವ್ಯಕ್ತಿಗೆ ಯಾವತ್ತೂ ಭಾಷೆ ಅಡ್ಡಿಯಾಗುವುದಿಲ್ಲ. ತಿಳುವಳಿಕೆ ಇರುವ ವಿಷಯವನ್ನು ಗೊತ್ತಿರುವ ಭಾಷೆಯಲ್ಲಿ ಎಷ್ಟು ಸೂಕ್ತವಾಗಿ ನಾವು ಅಭಿವ್ಯಕ್ತ ಪಡಿಸುತ್ತೇವೆ ಎಂಬುದು ಅತೀ ಮುಖ್ಯವಾಗಿರುತ್ತದೆ. ಹಾಗಾಗಿ ಐಚ್ಛಿಕ ವಿಷಯವನ್ನು ಆಯ್ಕೆ ಮಾಡುವ ಸಂದರ್ಭ, 20 ವಿಷಯಗಳಲ್ಲಿ ನನಗೆ ಸಾಹಿತ್ಯ ಐಚ್ಛಿಕ ವಿಷಯವಾಗಿತ್ತು. ಚಿಕ್ಕಂದಿನಿಂದಲೂ ನಮಗೆ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಕಥೆ ಪುಸ್ತಕ, ಪುಸ್ತಕಗಳನ್ನೇ ನೀಡಲಾಗುತ್ತಿತ್ತು. ಪುಸ್ತಕ ಓದುವ ಗೀಳು ಬಾಲ್ಯದಲ್ಲೇ ಇತ್ತು. ಅದರ ಜತೆ ಸಾಂಸ್ಕೃತಿಕವಾಗಿ ಆಳ್ವಾಸ್ ಕಾಲೇಜು ಸಾಕಷ್ಟು ಪ್ರೇರಣೆ ನೀಡಿದೆ. ‘ಆಳ್ವಾಸ್ ವಿರಾಸತ್’, ‘ನುಡಿಸಿರಿ’ ಎಲ್ಲವೂ ಸಹಕಾರಿಯಾಗುತ್ತಿತ್ತು. ರವಿವಾರ ನಮಗೆ ಊರಿಗೆ ಹೋಗಿ ಬರಲು ಸಾಧ್ಯವಾಗುತ್ತಿತ್ತು. ಹಾಗಾಗಿ ರಜಾ ದಿನ ಕಳೆಯಲು ಆ ಸಂದರ್ಭ ಪುಸ್ತಕ ಓದುವುದು, ಬೇರೆಯವರ ಜತೆ ಚರ್ಚಿಸುವುದು, ನಾಟಕ, ಯಕ್ಷಗಾನ, ಬಯಲಾಟ, ರಂಗ ಸಜ್ಜಿಕೆಗಳು ನನಗೆ ಪರೋಕ್ಷವಾಗಿ ಸಾಹಿತ್ಯಾಭಿರುಚಿಯನ್ನು ಬೆಳೆಸಲು ಸಹಕಾರವನ್ನು ನೀಡಿದೆ. ಮನೆ, ವಾತಾವರಣ, ಕಾಲೇಜು ಎಲ್ಲಾ ಕಡೆಯಿಂದಲೂ ಸಾಹಿತ್ಯ ಎನ್ನುವುದು ನನ್ನ ವ್ಯಕ್ತಿತ್ವದಲ್ಲಿ ಬಹಳವಾದ ಪ್ರಮುಖ ಪಾತ್ರ ವಹಿಸಿದೆ.

►* ಯುಪಿಎಸ್ಸಿ ಪರೀಕ್ಷೆಯ ಕುರಿತು ಯುವ ಪೀಳಿಗೆಗೆ ನಿಮ್ಮ ಮಾರ್ಗದರ್ಶನವೇನು?

ನಂದಿನಿ: ಭಾರತಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದರಿಂದ ಈ ಪರೀಕ್ಷೆ ಕಠಿಣವಾಗಿಯೇ ಇರುತ್ತದೆ. ಖಂಡಿತವಾಗಿಯೂ ಪರೀಕ್ಷೆಯ ಗುಣಮಟ್ಟವೂ ಕಠಿಣವಾಗಿರುತ್ತದೆ. ಆದರೆ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವಂತಿಲ್ಲ. ನಾಲ್ಕು ವರ್ಷಗಳ ಹಿಂದೆ ಅಥವಾ 10 ವರ್ಷಗಳ ಹಿಂದೆ ನನಗೂ ಇದು ಕೇವಲ ಕನಸಾಗಿತ್ತು. ನನಗೂ ಈ ಪರೀಕ್ಷೆ ಕಬ್ಬಿಣದ ಕಡಲೆ ಎಂಬ ಕಲ್ಪನೆ ಇತ್ತು. ನನ್ನ ಕೈಯಲ್ಲಿ ಆಗುತ್ತಾ ಎಂಬ ಅಳುಕೂ ಇತ್ತು. ಯಾರಿಗಾದರೂ ಆರಂಭದಲ್ಲಿ ಇಂತಹ ಅನುಮಾನ ಸಹಜ. ಆದರೆ ಮುಖ್ಯವಾಗಿ ಬೇಕಿರುವುದು ಪ್ರಯತ್ನ. ನಮ್ಮ ಪ್ರಯತ್ನದಲ್ಲಿ ಸಾಧಿಸುವ ಛಲದ ಜತೆ ಪರಿಶ್ರಮ ಹಾಗೂ ತಾಳ್ಮೆ ಬೇಕು. ಸೂಕ್ತವಾದ ಮಾರ್ಗದರ್ಶನ ಬೇಕು. ಇವೆಲ್ಲಾ ಸೇರಿದಾಗ ಖಂಡಿತಾ ಅಸಾಧ್ಯವಾದುದು ಏನೂ ಇಲ್ಲ. ಆದರೆ ಮುಖ್ಯವಾಗಿ ನಾನು ಮಾಡಲೇಬೇಕು ಎಂಬ ಕನಸು, ಗುರಿ ಬೇಕು. ಎಲ್ಲರೂ ಮಾಡುತ್ತಿದ್ದಾರೆ ನಾನೂ ಮಾಡಬೇಕೆಂದಾಗ ಅದು ನನ್ನ ಪ್ರಯತ್ನವಾಗಿರುವುದಿಲ್ಲ. ನಾನು ಯಾಕೆ ಮಾಡಬೇಕು?, ಈ ಸೇವೆಗೆ ಬಂದರೆ ನಾನು ಸಮಾಜಕ್ಕೆ ಯಾವೆಲ್ಲಾ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯ ಎಂಬ ಅರಿವು, ತಿಳುವಳಿಕೆಯೊಂದಿಗೆ ಪ್ರಯತ್ನ ಸಾಗಿದರೆ, ಸೇವಾ ಮನೋಭಾವದ ಪರಿಕಲ್ಪನೆ ಇದ್ದಾಗ ಎಷ್ಟೇ ವರ್ಷವಾದರೂ ಸಾಧನೆ ಮಾಡಬೇಕೆಂಬ ತುಡಿತ ಒಳಗಡೆಯಿಂದಲೇ ಬರುತ್ತದೆ. ಆ ಮನೋಭಾವದಿಂದ ಈ ಪರೀಕ್ಷೆ ಎದುರಿಸಬೇಕು.

► ನಿಮಗೆ ಸಿಕ್ಕ ಬೆಂಬಲ?

ನಂದಿನಿ: ಹಾಂ, ನಾನು ಇಂದು ಏನಾದರೂ ಸಾಧನೆ ಮಾಡಿದ್ದರೂ ಅದರಲ್ಲಿ ಪ್ರತಿಯೊಬ್ಬರ ಪಾತ್ರ ಇದೆ. ನೇರವಾಗಿ ಯಾರೂ ಸಹಾಯ ಮಾಡಬೇಕಾಗಿಲ್ಲ. ವ್ಯಕ್ತಿತ್ವ ರೂಪಿಸುವುದರಲ್ಲಿ ಮುಖ್ಯವಾಗಿ ಪೋಷಕರು, ಕುಟುಂಬದವರು, ಶಿಕ್ಷಕರು ಜತೆಗೆ ಸಮಾಜ. ನಾನು ಕನಸು ಕಂಡಾಗ, ಸ್ತ್ರೀ ದೃಷ್ಟಿಯಿಂದ, ಗ್ರಾಮೀಣ ಪ್ರದೇಶದಿಂದ, ಆರ್ಥಿಕತೆಯ ದೃಷ್ಟಿಯಿಂದಲೂ ತಂದೆ ತಾಯಿ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಸಾಮಾನ್ಯವಾಗಿ ಮಕ್ಕಳಿಗೆ ಆಯ್ಕೆ ಸ್ವಾತಂತ್ರ ಕಡಿಮೆ. ಆದರೆ ನನ್ನ ವಿಷಯದಲ್ಲಿ ನನ್ನ ವೃತ್ತಿ ಏನು ಎಂಬುದಾಗಿ ನಾನು ನಿರ್ಧರಿಸುವ ಆಯ್ಕೆ ಸ್ವಾತಂತ್ರ ನನಗೆ ಸಿಕ್ಕಿತ್ತು. ಅದೇ ನಾನು ಎಲ್ಲಾ ಪೋಷಕರಿಗೂ ಹೇಳಲಿಚ್ಛಿಸುತ್ತೇನೆ. ಮಕ್ಕಳಿಗೆ ತಮ್ಮ ವೃತ್ತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ ನೀಡಿ. ಕ್ರೀಡೆ, ಸಾಂಸ್ಕೃತಿಕ ಏನೇ ಆಗಿದ್ದರೂ ಅವರ ಆಯ್ಕೆಗೆ ಬೆಂಬಲ ದೊರಕಿದಾಗ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಬಲ್ಲರು.

►ರಾಜ್ಯದಲ್ಲಿ ಐಎಎಸ್ ಪರೀಕ್ಷೆಗೆ ತರಬೇತಿ ಕೇಂದ್ರಗಳ ಅಗತ್ಯವಿದೆ ಅನಿಸುತ್ತಿದೆಯೇ?

ನಂದಿನಿ: ತರಬೇತಿ ಕೇಂದ್ರಗಳಿಗಿಂತ ಮಾರ್ಗದರ್ಶನ ಮುಖ್ಯ. ಈ ಪರೀಕ್ಷೆಯಲ್ಲಿ ಯಾರೇ ನಿಮಗೆ ಅದೆಷ್ಟು ತರಬೇತಿ ನೀಡಿದರೂ, ಪಾಠ ಮಾಡುತ್ತಾರೆ ಎನ್ನುವುದಕ್ಕಿಂತ ತಾವು ಎಷ್ಟು ಓದಿ ಅರ್ಥಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯ. ಸ್ವಪ್ರಯತ್ನ, ಸ್ವ ಅಧ್ಯಯನ ಅತೀ ಮುಖ್ಯ. ಹಾಗಾಗಿ ಯಾವುದನ್ನೆಲ್ಲಾ ಓದಬೇಕು, ಬರೀಬೇಕು, ಪರೀಕ್ಷೆ ಹೇಗಿರುತ್ತೆ, ಯಾವೆಲ್ಲಾ ವಿಷಯ, ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಬಹುದು. ಯಾವೆಲ್ಲಾ ಪುಸ್ತಕಗಳನ್ನು ಓದಬೇಕು. ಅದಕ್ಕಾಗಿ ತರಬೇತಿಯೇ ಬೇಕು ಎಂಬ ಪರಿಕಲ್ಪನೆ ತಪ್ಪು. ಸೂಕ್ತ ಮಾರ್ಗದರ್ಶನ ಇಲೆಕ್ಟ್ರಾನಿಕ್ ಮಾದ್ಯಮ, ಸಾಮಾಜಿಕ ಜಾಲತಾಣಗಳು ಕೂಡಾ ಮಾಹಿತಿ ಪಡೆಯಲು ಪೂರಕವಾಗಿರುತ್ತದೆ. ಕನ್ನಡದಲ್ಲಿಯೂ ಪರೀಕ್ಷೆ ಎದುರಿಸಬಹುದು. ಭಾಷೆ ಸರಿಯಾಗಿ ಗೊತ್ತಿಲ್ಲ ಎಂಬ ಅಳುಕು ಬೇಕಾಗಿಲ್ಲ. ಸೂಕ್ತ ಮಾರ್ಗದರ್ಶನವಿದ್ದಲ್ಲಿ ಕನ್ನಡದಲ್ಲಿಯೂ ಗುರಿ ಸಾಧಿಸಬಹುದು.

► ವರ್ಷದಿಂದ ವರ್ಷಕ್ಕೆ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಯಾಗುತ್ತಿದೆಯೇ?

ನಂದಿನಿ: ಖಂಡಿತಾ, ಬದಲಾವಣೆಗಳು ಆಗುತ್ತಿರು ತ್ತವೆ. ಪರೀಕ್ಷೆ ಎನ್ನುವುದು ನಿಂತ ನೀರಲ್ಲ. ಕಾಲಕ್ಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿರುತ್ತದೆ. ಹಿಂದೆ ಪ್ರಬಂಧ, ಎಥಿಕ್ಸ್ ಎಂಬ ಪೇಪರ್ ಇರಲಿಲ್ಲ. ಈಗ ಅದು ಇದೆ. ಸಾಮಾನ್ಯ ಅಧ್ಯಯನಕ್ಕೆ ಪೇಪರ್ ಹೆಚ್ಚಾಗಿದೆ. ಸಂದರ್ಶನದ ಮಾದರಿಯೂ ಬದಲಾಗಿದೆ. ಆ್ಯಪ್ಟಿಟ್ಯೂಡ್, ಗಣಿತದ ಜ್ಞಾನವನ್ನು ಪರೀಕ್ಷಿಸುವ ಪೇಪರ್ ಸೇರ್ಪಡೆಯಾಗಿದೆ. ಬದಲಾವಣೆಗಳಿಗೆ ತಕ್ಕಂತೆ ನಮ್ಮ ತಯಾರಿಯೂ ಸಾಗಬೇಕಾಗಿದೆ. ಅದಕ್ಕೆ ಹೆಚ್ಚಿನ ಗಮನ ನೀಡಬೇಕು.

► ಸಾಹಿತ್ಯಾಭಿಮಾನಿಯಾಗಿರುವ ನೀವು ಯಾರ ಪುಸ್ತಕ ಹೆಚ್ಚು ಇಷ್ಟಪಡುತ್ತೀರಿ?

ನಂದಿನಿ: ಒಬ್ಬರು ಅಂತ ಇಲ್ಲ. ಕನ್ನಡ ಸಾಹಿತ್ಯ ಎಂಬುದು ಮಹಾನ್ ಸಾಗರ. ಹಾಗಾಗಿ, ಬೇಂದ್ರೆಯವರ ಲಾಲಿತ್ಯ, ಮಾಧುರ್ಯಕ್ಕೆ ಮಾರು ಹೋದರೆ, ಕುವೆಂಪು ಅವರ ಮಹಾಕಾವ್ಯ ನಮ್ಮನ್ನು ಆಕರ್ಷಿಸುತ್ತದೆ. ಇನ್ನೂ ಮುಂದೆ ಸಾಗಿದಾಗ ದಲಿತ ಬಂಡಾಯ ಸಾಹಿತ್ಯದ ಭಾಷೆ, ತುಡಿತ, ಮಿಡಿತಗಳಿಗೆ ಮಾರುಹೋಗುತ್ತೇವೆ, ಹಾಗಾಗಿ ಒಬ್ಬರು ಇಬ್ಬರು ಅಂತ ಹೇಗೆ ಹೇಳೋಣ. ಪಂಪನನ್ನು ನೋಡಿದರೆ ಅದು ಮಹಾನ್ ಸಾಗರ, ಅದನ್ನು ಈಸ ಬಲ್ಲವರು ಯಾರು? ಹಾಗಾಗಿ ಕನ್ನಡ ಸಾಹಿತ್ಯ ಎನ್ನುವುದು ವಿಶಾಲವಾದ ಸಾಗರ. ಹಾಗಾಗಿ ಒಬ್ಬರನ್ನು ಆಯ್ಕೆ ಮಾಡುವುದು ಖಂಡಿತಾ ಸಾಧ್ಯನೇ ಇಲ್ಲ.

► ನಿಮ್ಮ ಮುಂದಿನ ಗುರಿ?

ನಂದಿನಿ: ಏನೇ ಕೆಲಸ ಕೊಟ್ಟರೂ ಅದಕ್ಕೆ ಶೇ. 100ರಷ್ಟು ಫಲಿತಾಂಶ ನೀಡಬೇಕೆಂಬುದು ನನ್ನ ಮೊದಲ ಗುರಿ. ಎಲ್ಲೇ ಪೋಸ್ಟಿಂಗ್ ಆಗಲಿ, ಏನೇ ಕೆಲಸ ಆಗಲಿ, ನನ್ನ ಕೈಲಾದ ಶೇ. 100ರಷ್ಟನ್ನು ನೀಡುವುದು ನನ್ನ ಆದ್ಯತೆ.

►ಯುವ ಪ್ರತಿಭೆಗಳಿಗೆ ನಿಮ್ಮ ಸಂದೇಶ?

ನಂದಿನಿ: ಹಳ್ಳಿಯ ವಿದ್ಯಾರ್ಥಿಗಳು ತಾವು ಗ್ರಾಮೀಣ ಪ್ರದೇಶದಿಂದ ಬಂದವರು ಎಂಬ ಕೀಳರಿಮೆಯನ್ನು ಮೊದಲು ದೂರ ಮಾಡಬೇಕು. ಯಾಕೆ ಅಂತಹ ಆಲೋಚನೆ ಇಟ್ಟುಕೊಳ್ಳಬೇಕೆಂಬುದು ನನಗೆ ಅರ್ಥವಾಗುವುದಿಲ್ಲ. ನಮ್ಮ ಗುರಿ ನಿರ್ಧರಿಸುವಾಗ ನಮ್ಮ ಹಿನ್ನೆಲೆಯನ್ನು ನೋಡಿ ನಿರ್ಧರಿಸಬಾರದು. ಅದಕ್ಕೆ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂರವರೇ ಉದಾಹರಣೆ. ದೊಡ್ಡಗಾಗಿ ಅವರು ಕನಸು ಕಾಣದಿದ್ದರೆ, ಅಷ್ಟು ದೊಡ್ಡ ವಿಜ್ಞಾನಿ, ರಾಷ್ಟ್ರಪತಿಯನ್ನು ನಾವು ಕಾಣಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸಾಮರ್ಥ್ಯವನ್ನು ಸವಾಲುಗಳಿಗೆ ಒಡ್ಡುವ ಪ್ರಯತ್ನ ನಮ್ಮಿಂದಾಗಬೇಕು. ಧನಾತ್ಮಕವಾಗಿ ಆಲೋಚನೆ ಮಾಡಬೇಕು.

► ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡದ ಬಗ್ಗೆ ನಿಮ್ಮ ಅನಿಸಿಕೆ ಏನು?

ನಂದಿನಿ: ಖಾಯಂ ಆಡಳಿತ ಮತ್ತು ರಾಜಕೀಯ ಆಡಳಿತದ ಗುರಿ ಒಂದೇ ಆಗಿರುತ್ತದೆ. ಸಾರ್ವಜನಿಕ ಹಿತಾಸಕ್ತಿ. ಇಬ್ಬರೂ ಕೆಲಸ ಮಾಡುವುದು ಆ ಒಂದೇ ಗುರಿಗಾಗಿ. ನಮ್ಮ ಕೆಲಸದಲ್ಲಿ ಪ್ರಾಮುಖ್ಯತೆ ಇದ್ದಾಗ ನಮಗೆ ಎದುರಾಗುವ ಸವಾಲುಗಳನ್ನು ನಿರಾಳವಾಗಿ ಎದುರಿಸಬಹುದು. ಹಾಗಾಗಿ ಸಾರ್ವಜನಿಕ ಹಿತಾಸಕ್ತಿಯನ್ನೇ ಮುಖ್ಯವಾಗಿರಿಸಿದಾಗ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ.

► ಓದು ಅಲ್ಲದೆ ನಿಮ್ಮ ಇತರ ಹವ್ಯಾಸ?

ನಂದಿನಿ: ಸಾಂಸ್ಕೃತಿಕವಾಗಿ ನಾಟಕ ನೋಡುವುದು, ಸಂಗೀತ ಕೇಳುವುದು. ಜತೆಗೆ ಕ್ರೀಡೆ ಬಹಳಷ್ಟು ಇಷ್ಟ, ವಾಲಿಬಾಲ್, ಬ್ಯಾಡ್ಮಿಂಟನ್ ಮೊದಲಾದವು. ಒಟ್ಟಾರೆಯಾಗಿ ಚಟುವಟಿಕೆಯಿಂದ, ಕ್ರಿಯಾಶೀಲವಾಗಿ ಇರಲು ಬಯಸುವವಳು ನಾನು.

ನಾಲ್ಕು ವರ್ಷದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಯಶಸ್ಸು ನಮ್ಮ ಪ್ರಯತ್ನಕ್ಕೆ ತಕ್ಕುದಾಗಿರುತ್ತದೆ. ಬೇವಿನ ಬೀಜ ಬಿತ್ತರೆ ಮಾವಿನ ಬೆಳೆ ಬರುವುದಿಲ್ಲ. ಹಾಗೆಯೇ ನಾವು ಹಾಕುವ ಪ್ರಯತ್ನಕ್ಕೆ ಫಲ ಸರಿಸಮಾನವಾಗಿರುತ್ತದೆ. ನಮ್ಮ ಸೋಲಿನಿಂದ ನಾವು ಕಲಿಯುವಂತಹದ್ದು ಬಹಳಷ್ಟಿರುತ್ತದೆ. ಯಾವುದೇ ಸಮಯದಲ್ಲಿ ನಾವು ನಮ್ಮ ಸೋಲಿನಿಂದ ಒಳ್ಳೆಯ ಪಾಠ ಕಲಿತರೆ ಮುಂದೆ ಜೀವನದಲ್ಲಿ ಸಾಧನೆಗೆ ಪೂರಕವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ