ನಮ್ಮ ಪ್ರಜಾಪ್ರಭುತ್ವಕ್ಕೆ ಬಹುತ್ವ-ಜಾತ್ಯತೀತತೆಯ ಅಗತ್ಯ

Update: 2017-08-17 06:13 GMT

ಉಪರಾಷ್ಟ್ರಪತಿಯಾಗಿದ್ದಾಗ ಹಾಮಿದ್ ಅನ್ಸಾರಿಅವರು ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ 25ನೆ ಘಟಿಕೋತ್ಸವದಲ್ಲಿ 2017ರ ಆಗಸ್ಟ್ 6ರಂದು ಮಾಡಿದ ಭಾಷಣ.

ಎಲ್ಲರನ್ನೂ ಒಳಗೊಳ್ಳುವ ಬಹುತ್ವದ ಸಮಾಜ ಕಟ್ಟುವಲ್ಲಿ ಸಹಿಷ್ಣುತೆಯೊಂದೇ ಬಲವಾದ ತಳಪಾಯವಾಗಲಾರದು. ಅದರ ಜತೆಗೆ ಪರಸ್ಪರ ತಿಳುವಳಿಕೆ ಮತ್ತು ಒಪ್ಪಿಕೊಳ್ಳುವ ಮನೋಧರ್ಮವೂ ಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವು ಇತರ ಧರ್ಮಗಳ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳುವುದಷ್ಟೇ ಅಲ್ಲ, ಅವುಗಳನ್ನು ಧನಾತ್ಮಕವಾಗಿ ಪೋಷಿಸಬೇಕು, ಸತ್ಯವೇ ಎಲ್ಲ ಧರ್ಮಗಳ ಮೂಲ.

 ಭಾರತದ ಜನಸಂಖ್ಯೆಯಲ್ಲಿ ಮುಸಲ್ಮಾನರು ಶೇ.14.23 ಇದ್ದರೂ 790 ಸದಸ್ಯ ಬಲದ ಎರಡು ಸಂಸತ್ ಸದನಗಳಲ್ಲಿ ಮುಸ್ಲಿಂ ಸಂಸದರ ಸಂಖ್ಯೆ 1980ರಲ್ಲಿ 49 ಇದ್ದರೆ, 1999ರಿಂದ 2009ರ ವರೆಗೆ 30ರಿಂದ 35 ಇತ್ತು. 2014ರಲ್ಲಿ ಇದು 23ಕ್ಕೆ ಕುಸಿಯಿತು.

 ತಜ್ಞರ ಸಮಿತಿಯೊಂದು ಕೆಲವು ವರ್ಷಗಳ ಹಿಂದೆ ನೀಡಿದ ವರದಿಯಲ್ಲಿ ಅಸಮಾನತೆಯ ಬಲೆಗಳನ್ನು / ಅಡ್ಡಿಗಳನ್ನು ಗುರುತಿಸಲು ವೈವಿಧ್ಯತೆಯ ಸೂಚ್ಯಂಕವನ್ನು ರೂಪಿಸುವಂತೆ ಆಗ್ರಹ ಮಾಡಿತ್ತು. ಜಾತ್ಯತೀತತೆಯ ನೈಜ ಅನುಷ್ಠಾನ-ಜಾತ್ಯತೀತತೆ ರಾಜಕೀಯ ಮತ್ತು ಕಾನೂನು ಹೋರಾಟದ ಕೇಂದ್ರವಾಗಿದೆ. ಇಲ್ಲಿ ಧರ್ಮದಿಂದ ಪ್ರತ್ಯೇಕಿಸಲ್ಪಡುವುದೇ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಜೀವನ ವಿಧಾನದ ವಾದವನ್ನು ತರಲಾಗುತ್ತಿದೆ.ಇದರಿಂದ ಬಹು ಧಾರ್ಮಿಕ ಸಮಾಜದಲ್ಲಿ ಸಮಾನತೆಯ ಸಾಮಾನ್ಯ ತತ್ವಗಳನ್ನು ಗುರುತಿಸುವುದಕ್ಕೂ ಅಡ್ಡಿಯಾಗುತ್ತಿದೆ. ಭಾರತೀಯ ಪರಿಸ್ಥಿತಿಯಲ್ಲಿ ಪ್ರತ್ಯೇಕತೆಯ ಗೋಡೆ ಸಾಧ್ಯವಿಲ್ಲದಿದ್ದರೂ ಸಮಾನ ದೂರ ಮತ್ತು ಕನಿಷ್ಠ ಭಾಗೀದಾರಿಕೆಯ ಸೂತ್ರವನ್ನು ಅನುಷ್ಠಾನಿಸುವುದೊಂದು ಸವಾಲು ಆಗಿದೆ. ಇದಕ್ಕಾಗಿ ಸಂಸ್ಕೃತಿಯಿಂದ ನಂಬಿಕೆಯನ್ನು ಪ್ರತ್ಯೇಕಿಸಬೇಕಾಗಿದೆ.

ಚುನಾವಣಾ ಪರಿಭಾಷೆಯಲ್ಲಿ ‘ಬಹುಮತ’ ಎಂದರೆ ಅದು ಸಾಂಖ್ಯಿಕ ಬಹುಮತ. (ಉದಾಹರಣೆಗೆ ಚುನಾವಣೆಗಳು) ಇದು ಸಾಮಾನ್ಯವಾಗಿ ಅವಧಿಗೆ ಸಂಬಂಧಿಸಿ ನಿರ್ದಿಷ್ಟವಾಗಿರುತ್ತದೆ. ಅಂದರೆ ಅವಧಿ ಬದ್ಧ. ಇದೇ ನೀತಿ ‘ಅಲ್ಪಮತ’ಕ್ಕೂ ಅನ್ವಯಿಸುತ್ತದೆ. ಎರಡೂ ಮೌಲ್ಯ ನಿರ್ಣಯವನ್ನು ಪ್ರತಿಪಾದಿಸುತ್ತವೆ. ಸಮಾಜೋ -ರಾಜಕೀಯ ಪರಿಭಾಷೆಯಲ್ಲಿ ‘ಬಹುಮತ’ ಮತ್ತು ‘ಅಲ್ಪಮತ’ ಪದಗಳು ಸ್ಥಾಪಿತವಾದ ಪರಿಸ್ಥಿತಿಯನ್ನು ಸೂಚಿಸುತ್ತವೆ. ಇವುಗಳೂ ಮೌಲ್ಯ ನಿರ್ಣಯವನ್ನು ತರುತ್ತವೆ. ಆಗ ಪೌರತ್ವ ಅಥವಾ ನಾಗರಿಕತ್ವಕ್ಕೆ ಸಂಬಂಧಿಸಿ ನಮ್ಮ ಸಂವಿಧಾನದಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿ ‘ಬಹುಮತ’ ಮತ್ತು ‘ಅಲ್ಪಮತ’ ಎಂಬ ವಿವರಣೆಗಳಿಗೆ ಮೌಲ್ಯ ನಿರ್ಣಯ ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ದಾಖಲೆಗಳು ಏನು ಹೇಳುತ್ತವೆ ಎಂದರೆ ಬಹುಮತೀಯ ಮತ್ತು ಅಲ್ಪಮತೀಯತೆ ವಿಭಜಕವಾದಿ ಪರಿಣಾಮಗಳನ್ನುಂಟು ಮಾಡುತ್ತದೆ.ಮತ್ತು ಅದು ಭ್ರಾತೃತ್ವದ ಪೀಠಿಕೆಗೇ ವಿರುದ್ಧವಾದುದಾಗಿದೆ.

ಅದೇ ರೀತಿಯಲ್ಲಿ ಸ್ಥಾನಮಾನಗಳ ಸಮಾನತೆ ಮತ್ತು ಅವಕಾಶಗಳಲ್ಲಿ ಸಮಾನತೆ ಎಂಬ ಸಾಂವಿಧಾನಿಕ ತತ್ವ ಪರಿಚ್ಛೇದ 14,15 ಮತ್ತು 16ರಲ್ಲಿ ಹೇಳಲಾಗಿದೆ. ಇದಕ್ಕೆ ಅವಶ್ಯ ಕ್ರಮಗಳ ಮೂಲಕ ರೂಪ ಕೊಡಬೇಕಾಗಿದೆ. ಆಗ ಅಭಿವೃದ್ಧಿಯ ಪ್ರಯಾಣದ ಪಥಕ್ಕೆ ಒಂದೇ ಆರಂಭಿಕ ಬಿಂದು ಇರುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯಾದ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನೀತಿಗೆ ಕ್ರಿಯಾಶೀಲ ರೂಪ ಕೊಡುವ ಹಾದಿಯಾಗಿದೆ.

ಇಲ್ಲಿ ಪ್ರಭುತ್ವದ, ನ್ಯಾಯಾಂಗದ ಕೈಯ ಪಾತ್ರ ಬರುತ್ತದೆ. ಸಂವಿಧಾನದಲ್ಲಿ ಸೂಚಿಸಲಾದ ಪ್ರಾಧಿಕಾರವಾಗಿ, ಅದು ಸಂವಿಧಾನದಲ್ಲಿ ಹೇಳಿದಂತೆ ಕಾನೂನು ಎಲ್ಲ ನಾಗರಿಕರಿಗೆ ಒಂದೇ ಎನ್ನುವಂತೆ ಸಮಾನವಾಗಿ ಅನ್ವಯಿಸುವಂತೆ ಮಾಡುವ ಎಲ್ಲ ರೀತಿಯ ಜವಾಬ್ದಾರಿಯನ್ನು ಹೊಂದಿದೆ ಮತ್ತು ಅದು ಆ ನಿಟ್ಟಿನಲ್ಲಿ ಶ್ರಮಿಸಬೇಕಾಗುತ್ತದೆ.

ಹಾಗಿದ್ದರೆ ನಾವು ಬಹುತ್ವ ಮತ್ತು ಜಾತ್ಯತೀತತೆಯ ಎರಡು ಉದ್ದೇಶಗಳನ್ನು ಹೆಚ್ಚು ಸಮಗ್ರವಾಗಿ ಜಾರಿಗೆ ತರಲು ಅವಶ್ಯ ಪರಿಸ್ಥಿತಿ ಮತ್ತು ಅವಕಾಶಗಳನ್ನು ನಿರ್ಮಿಸುವುದು ಹೇಗೆ?. ಅವುಗಳನ್ನು ಸಂವಿಧಾನ ನಿಗದಿಪಡಿಸಿದ ಪ್ರಜಾಸತ್ತಾತ್ಮಕ ಉದ್ದೇಶಗಳಲ್ಲಿ ನೇಯ್ಗೆ ಮಾಡಿ ಸಮಗ್ರಗೊಳಿಸುವುದು ಹೇಗೆ?. ಇದಕ್ಕೆ ಉತ್ತರ ಇರುವುದು, ಮೊದಲನೆಯದಾಗಿ ವೈವಿಧ್ಯತೆಯನ್ನು ಸಾಂಸ್ಥಿಕವಾಗಿ ಮತ್ತು ನಾಗರಿಕರಲ್ಲಿ ಸ್ಥಾಪಿಸುವಲ್ಲಿ ಇರುವ ಅಡೆ-ತಡೆಗಳನ್ನು ನಿವಾರಿಸುವುದರಲ್ಲಿ. ಎರಡನೆಯದಾಗಿ ಭಾರತೀಯ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆ ಯಲ್ಲಿ ರಾಜಕೀಯ-ಕಾನೂನು ಸ್ಪರ್ಧೆಯ ಕೇಂದ್ರಗಳಾಗಿರುವ ಬಹುತ್ವ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನು ಅಲ್ಲಿಂದ ಸ್ಥಳಾಂತರಗೊಳಿಸಿ ಅವುಗಳ ಅನುಷ್ಠಾನ ಮತ್ತು ಸಾಂಸ್ಥಿಕ ಚೌಕಟ್ಟು ಪುನರುಜ್ಜೀವನಗೊಳಿಸುವುದರಲ್ಲಿ. ಈ ಎರಡೂ ಧೋರಣೆಗಳು ಸಮಾನಾಂತರವಾಗಿರಬೇಕು.ರಾಜ್ಯಾಡಳಿತದಲ್ಲಿ ಇವುಗಳಿಗೆ ಸಂಬಂಧಿಸಿ ವೈಯಕ್ತಿಕ ನಿಲುವುಗಳು ಒಳಪ್ರವೇಶ ಮಾಡಬಾರದು, ಎರಡೂ ಕಡೆ ಚರ್ಚೆಯಲ್ಲಿ ಕುತರ್ಕ ನುಸುಳಬಾರದು. ಭ್ರಾತೃತ್ವ ಮತ್ತು ನಮ್ಮ ಸಂಯುಕ್ತ ಸಂಸ್ಕೃತಿಯನ್ನು ಸಂವಿಧಾನದ ಪರಿಚ್ಛೇದ 51 ಎ (ಇ) ಮತ್ತು (ಎಫ್) ಗಳಲ್ಲಿ ಸ್ಪಷ್ಟವಾಗಿ ತಿಳಿಸಿದಂತೆ ಪ್ರೋತ್ಸಾಹಿಸಲ್ಪಡಬೇಕು. ನಾಯಕರು ಮತ್ತು ಅವರ ಅನು ಯಾಯಿಗಳು ಇದನ್ನು ಅನುಷ್ಠಾನದಲ್ಲಿ ತರಬೇಕಾದ ಆವಶ್ಯಕತೆ ಇದೆ.

ಸಹಿಷ್ಣುತೆಯನ್ನು ಬಲವಾಗಿ ಸಮರ್ಥಿಸಬೇಕು. ಇದೊಂದು ಮೌಲ್ಯ. ಮತಾಂಧತೆಯಿಂದ ಬಿಡುಗಡೆ. ವಿವಿಧ ಧರ್ಮಗಳು, ರಾಜಕೀಯ ಚಿಂತನೆಗಳು, ರಾಷ್ಟ್ರೀಯತೆಗಳು, ಜನಾಂಗೀಯ ಗುಂಪುಗಳು ಮತ್ತು ಇತರ ಪಂಗಡಗಳು ಬಿಕ್ಕಟ್ಟು ರಹಿತವಾಗಿ ಸಮಾಜದಲ್ಲಿ ಕಾರ್ಯನಿರ್ವಹಿಸಲು ಇರುವ ಪ್ರಾಯೋಗಿಕ ಸೂತ್ರ ಇದು.

ಎಲ್ಲರನ್ನೂ ಒಳಗೊಳ್ಳುವ ಬಹುತ್ವದ ಸಮಾಜ ಕಟ್ಟುವಲ್ಲಿ ಸಹಿಷ್ಣುತೆಯೊಂದೇ ಬಲವಾದ ತಳಪಾಯವಾಗಲಾರದು. ಅದರ ಜತೆಗೆ ಪರಸ್ಪರ ತಿಳುವಳಿಕೆ ಮತ್ತು ಒಪ್ಪಿಕೊಳ್ಳುವ ಮನೋಧರ್ಮವೂ ಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವು ಇತರ ಧರ್ಮಗಳ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳುವುದಷ್ಟೇ ಅಲ್ಲ, ಅವುಗಳನ್ನು ಧನಾತ್ಮಕವಾಗಿ ಪೋಷಿಸಬೇಕು, ಸತ್ಯವೇ ಎಲ್ಲ ಧರ್ಮಗಳ ಮೂಲ.

ಒಪ್ಪಿಕೊಳ್ಳುವಿಕೆ ಸಹಿಷ್ಣುತೆಗಿಂತ ಒಂದು ಹೆಜ್ಜೆ ಮುಂದೆ. ಸಹಿಷ್ಣುತೆ ಗಿಂತ ಒಪ್ಪಿಕೊಳ್ಳುವಿಕೆ ಅಥವಾ ಅಂಗೀಕರಿಸುವಿಕೆ ನಮ್ಮಿಳಗೇ ಆರಂಭ ವಾಗುವ ಒಂದು ಪ್ರಯಾಣ. ನಮಗಿಂತ ಭಿನ್ನರಾಗಿರುವವರನ್ನು ತಿಳಿದು ಕೊಳ್ಳುವ ಮತ್ತು ಇತರರನ್ನು ಒಪ್ಪಿಕೊಳ್ಳುವ ಗುಣ ಅದು. ಇತರರನ್ನು ಒಪ್ಪಿಕೊಳ್ಳುವಲ್ಲಿ ತಡೆಯೊಡ್ಡುವ ಪೂರ್ವ ಮಾದರಿಗಳಿಗಿಂತ ಭಿನ್ನವಾಗಿ ನೋಡುವುದು ಈಗಿರುವ ಸವಾಲು. ಇದಕ್ಕೆ ಸತತ ಚರ್ಚೆ, ಮಾತುಕತೆ ಬೇಕು. ವರ್ಗ ವೈವಿಧ್ಯತೆ ನಡುವೆ ಸೌಹಾರ್ದವನ್ನು ಪ್ರೋತ್ಸಾಹಿಸಲು ಇದೊಂದು ರಾಷ್ಟ್ರೀಯ ಮೌಲ್ಯವಾಗಬೇಕು. ಇದಕ್ಕೆ ರಾಷ್ಟ್ರ ಮಟ್ಟದಲ್ಲಿ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಾಯೋಗಿಕ ರೂಪ ಕೊಡುವುದು ತುರ್ತು ಅಗತ್ಯ. ದಲಿತರು, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಲ್ಲಿ ಇರುವ ಪೌರ ಸಂಸ್ಥೆಗಳ ಘಟಕಗಳಲ್ಲಿ ಅಸುರಕ್ಷೆಯ ಕಳವಳವನ್ನು ತೆಗೆದು ಹಾಕಲು ಸಲಹೆಗಳನ್ನು ಸ್ವೀಕರಿಸುವುದೂ ಅಗತ್ಯ.

  ಮನಸ್ಸಿಗೆ ಅಹಿತಕರವಾಗಿದ್ದರೂ ಪರ್ಯಾಯವನ್ನು ನಾವು ದೃಷ್ಟೀಕರಿಸಿಕೊಳ್ಳಬೇಕಾಗಿದೆ. ತನ್ನ ಜತೆ ತಾನೇ ಯುದ್ಧ ಮಾಡುವಂತಹ ರಾಜ್ಯಾಡಳಿತವನ್ನು ನಾವು ಹೊಂದಿದ್ದೇವೆ ಎನ್ನುವುದಕ್ಕೆ ಅಲ್ಲಿ ಸಾಕ್ಷಾಧಾರ ಗಳಿವೆ. ಇದರಲ್ಲಿ ಭಾವುಕ ಸಮಗ್ರತೆಯ ಪ್ರಕ್ರಿಯೆ ತತ್ತರಿಸಿದೆ. ಮತ್ತು ಅದನ್ನು ಸುಸ್ಥಿತಿಗೆ ತರಬೇಕಾಗಿದೆ. ಒಂದು ಕಡೆ ನಮ್ಮ ಕಾನೂನಿಗೆ ಬದ್ಧತೆ ವ್ಯಕ್ತಪಡಿಸುವ ಕುರಿತ ಪ್ರಶ್ನೆ ಗಂಭೀರ ಅಪಾಯಕ್ಕೆ ಸಿಲುಕಿದೆ. ಪ್ರಭುತ್ವದ ಸಂಸ್ಥೆಗಳ ಸಾಮರ್ಥ್ಯದಲ್ಲಿ ಕುಸಿತ, ನಿರ್ಧಾರ ಕೈಗೊಳ್ಳುವಲ್ಲಿ ದೋಷಗಳು ಮತ್ತು ಗುಂಪಿನ ಆಡಳಿತ ಹಾಗೂ ಅದರ ಫಲಿತಾಂಶವಾದ ‘ಸಾರ್ವಜನಿಕ ಭ್ರಮನಿರಸನ’ ಒಂದೆಡೆಯಾದರೆ, ಅಭಿವೃದ್ಧಿ ಕೇಂದ್ರಿತ ವಾದ ರಾಜಕೀಯ ಚರ್ಚೆಯನ್ನು, ಆಕ್ರೋಶಭರಿತವಾದ ಬೇಡಿಕೆಗಳನ್ನು ಒಳಗೊಂಡ ಹಾಗೂ ಉಗ್ರಗಾಮಿ ಪ್ರತಿಭಟನಾ ರಾಜಕೀಯಕ್ಕೆ ವರ್ಗಾವಣೆಯಾದ ಸ್ಥಿತಿ ಇನ್ನೊಂದೆಡೆ ಇದೆ. ಮೌನದ ಸಂಸ್ಕೃತಿ ಪ್ರತಿಭಟನೆಯ ಫಲವನ್ನು ನೀಡಿದೆ. ವಿವಿಧ ರಾಜ್ಯಗಳಲ್ಲಿ ಕೃಷಿ ವಲಯದ ಅಸಂತೋಷ, ನಕ್ಸಲ್ ಬಂಡಾಯಗಳು, ಭಾಷಾ ಸಂಬಂಧಿ ಗುರುತಿಸುವಿಕೆಯ ಪ್ರಶ್ನೆಗಳ ಪುನರವತಾರ, ಸಮಾಜದ ದುರ್ಬಲ ವರ್ಗಗಳ ಸಮಸ್ಯೆ, ಸ್ಥಳೀಯ ರಾಷ್ಟ್ರೀಯವಾದದ ಕೋರಿಕೆಗಳನ್ನು ಇನ್ನು ದೀರ್ಘ ಕಾಲ ನಿರ್ಲಕ್ಷಿಸಲಾಗದು. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿ ರಾಜಕೀಯ ಚಲನಶೀಲತೆಯ ಕೊರತೆ ಇನ್ನೂ ಇತ್ಯರ್ಥಗೊಂಡಿಲ್ಲ. ಇದಲ್ಲದೆ ನೈತಿಕ ಕಾನೂನು ಬದ್ಧತೆಯ ಬಿಕ್ಕಟ್ಟು ವಿವಿಧ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು ಅದನ್ನು ಭಾರತ ಎದುರಿಸಬೇಕಿದೆ.

 ಹಿಂದೆ ನಾನು ಎರಡು ತತ್ವಗಳ/ಇಸಂಗಳ ಬಗ್ಗೆ ವಿವರವಾಗಿ ಚರ್ಚಿಸಿದೆ. ಎರಡು ಮೌಲ್ಯ ವ್ಯವಸ್ಥೆಗಳು ಮಾತು ಮತ್ತು ಕೃತಿಯಲ್ಲಿ ಅವುಗಳಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಮತ್ತು ಆಮೂಲಕ ಸಂವಿಧಾನದ ತತ್ವಗಳಿಗೆ, ಅದರಿಂದ ಉದ್ಭವಿಸುವ ರಚನೆಗಳಿಗೆ ಹೆಚ್ಚು ಶಕ್ತಿ ಒದಗಿಸುವ ಬಗ್ಗೆ ಪ್ರಸ್ತಾವಿಸಿದೆ. ನನಗೀಗ ಮೂರನೆ ತತ್ವ/ಇಸಂ ಕುರಿತಂತೆ ಪ್ರಸ್ತಾವಿಸಲು ಅನುವು ಮಾಡಿಕೊಡಿ. ಆಧುನಿಕ ಆಡಳಿತದಲ್ಲಿ ಇದು ಮೂಲಭೂತವಾದ ತತ್ವ ಮತ್ತು ಇದೇನು ಇತ್ತೀಚೆಗೆ ಹುಟ್ಟಿದ್ದಲ್ಲ. ಆದರೆ ಅತಿಶಯೋಕ್ತಿಯಿಂದ ಇದು ಇಂದಿನ ಶೈಲಿಯಾಗಿ ಹೋಗಿದೆ. ನಾನಿಲ್ಲಿ ಪ್ರಸ್ತಾವಿಸುವುದು ರಾಷ್ಟ್ರೀಯತೆಯನ್ನು.

 ವಿದ್ವಾಂಸರು ಈ ಚಿಂತನೆಯ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಿ ದ್ದಾರೆ. ಭಾರತೀಯ ಗುರುತಿಸುವಿಕೆಯ ಪೂರ್ವ ಶರತ್ತು ಇರುವುದೇ ಒಂದು ವಿಷಯದಲ್ಲಿ, ಅದು ಪ್ರಾದೇಶಿಕತೆ ಮತ್ತು ವಸಾಹತು ವಿರೋಧಿ ದೇಶಪ್ರೇಮ. 1920ರ ವೇಳೆಗಾಗಲೇ ಬಹುತ್ವದ ರಾಷ್ಟ್ರೀಯತೆಯ ಪ್ರಾದೇಶಿಕ ಭಾಷಾ ಸಂಸ್ಕೃತಿಗಳನ್ನು ಮತ್ತು ಧಾರ್ಮಿಕ ಸಮುದಾಯಗಳ ಗುರುತಿಸುವಿಕೆಯ ವೈವಿಧ್ಯಮಯ ಆಶೋತ್ತರಗಳನ್ನು ಹೇಗೆ ಸಮಗ್ರಗೊಳಿಸಬೇಕು ಎಂಬ ಪ್ರಶ್ನೆಗೆ ಉತ್ತರ ಒದಗಿಸಿತ್ತು. ಕೆಲ ವರ್ಷಗಳಿಗೆ ಮೊದಲು ರವೀಂದ್ರ ನಾಥ ಟಾಗೋರ್ ಅವರು ‘ರಾಷ್ಟ್ರ ಭಕ್ತಿಯ ಪೂಜೆ’ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸ್ವಾತಂತ್ರ್ಯದ ಹಲವು ದಶಕಗಳ ಬಳಿಕ ರಾಷ್ಟ್ರೀಯತೆಗೆ ಸಂಬಂಧಿಸಿದ ಬಹುತ್ವದ ದೃಷ್ಟಿಕೋನ ಮತ್ತು ಭಾರತೀಯತೆಯ ಪ್ರತಿಬಿಂಬ ‘ಸಲಾದ್ ಬೋಗುಣಿ’ಯ ಧೋರಣೆಯ ಒಳಗೊಳ್ಳುವಿಕೆಯ ವಿಸ್ತಾರ ವೃತ್ತದ ಚಿಂತನೆಯನ್ನು ಮೈಗೂಡಿಸಿಕೊಂಡಿತು. ತೀರಾ ಇತ್ತೀಚೆಗೆ ಪರ್ಯಾಯ ದೃಷ್ಟಿಕೋನವಾಗಿ ‘ಹೊರಗುಳಿದವರ ಶುದ್ಧೀಕರಣ’ ಒಳಪ್ರವೇಶ ಮಾಡಿ ರಾಜಕೀಯ ಮತ್ತು ಸಾಂಸ್ಕೃತಿಕ ಭೂಮಿಕೆಯನ್ನು ಆವರಿಸಿಕೊಂಡಿತು. ಇದರಿಂದಾಗಿ ಯಾವುದೇ ಮುಗ್ಧ್ದ ಭಿನ್ನಮತವನ್ನು ತಳ್ಳಿ ಹಾಕುವಂತಹ ‘ಒಣ ರಾಷ್ಟ್ರೀಯ ಹೆಮ್ಮೆ’’ಯ ಮೈದೋರುವಿಕೆ ಹೆಚ್ಚುತ್ತಾ ಹೋಯಿತು. ಅತಿಯಾದ ರಾಷ್ಟ್ರೀಯತೆ ಮತ್ತು ಮನಸ್ಸನ್ನೇ ಮುಚ್ಚಿ ಬಿಡುವ ಧೋರಣೆ ವಿಶ್ವದಲ್ಲಿ ಓರ್ವನ ಅಸ್ತಿತ್ವಕ್ಕೆ ಒದಗುವ ಅಭದ್ರತೆಯ ಮೈದೋರುವಿಕೆಯೂ ಆಗಿರುತ್ತದೆ.

 ಬಾಹ್ಯ ಮತ್ತು ಆಂತರಿಕ ಸುರಕ್ಷೆ ಒದಗಿಸುವುದು ಸರಕಾರದ ಕರ್ತವ್ಯ ಆಗಿರುವಂತೆಯೇ ಸೇನೆಯನ್ನು ಪವಿತ್ರೀಕರಿಸುವ ವಿದ್ಯಮಾನ ಸಂಭವಿಸುತ್ತಿದೆ. ಜಾರ್ಜ್ ವಾಶಿಂಗ್ಟನ್ ತನ್ನ ದೇಶವಾಸಿಗಳಿಗೆ ಎರಡು ಶತಮಾನಗಳ ಹಿಂದೆ ನೀಡಿದ ‘‘ಅತೀ ಹೆಚ್ಚು ಕೊಬ್ಬಿದ ಪ್ರಬಲ ಮಿಲಿಟರಿ ವ್ಯವಸ್ಥೆ , ಯಾವ ಸರಕಾರದ ಅಡಿಯಲ್ಲಿದ್ದರೂ ಸ್ವಾತಂತ್ರ್ಯಕ್ಕೆ ಅಪಾಯ’’ ಎಂಬ ಎಚ್ಚರಿಕೆಯ ಹೊರತಾಗಿಯೂ ಇದು ನಡೆಯುತ್ತಿದೆ.

 ಪೌರತ್ವ ರಾಷ್ಟ್ರೀಯ ಬದ್ಧತೆಯನ್ನು ಅಪೇಕ್ಷಿಸುತ್ತದೆ. ರಾಷ್ಟ್ರದ ಬಗ್ಗೆ ಅದರ ಎಲ್ಲ ಶ್ರೀಮಂತ ವೈವಿಧ್ಯತೆಗಳೊಂದಿಗೆ ಪ್ರೀತಿ, ನಿಷ್ಠೆಗೆ ಬದ್ಧವಾಗಿರಬೇಕಾದ ಅಗತ್ಯವನ್ನು ಹೇಳುತ್ತದೆ.. ರಾಷ್ಟ್ರೀಯತೆ ಎಂದರೆ, ಇದು ಮತ್ತು ರಾಷ್ಟ್ರಗಳ ಜಾಗತಿಕ ಸಮುದಾಯದಲ್ಲಿ ಇರಬೇಕಾದ ಅರ್ಥವೂ ಇದೇ. ಇಸ್ರೇಲಿ ವಿದ್ವಾಂಸರಾದ ಯೇಲ್ ಟಮೀರ್ ಈ ಬಗ್ಗೆ ಸ್ವಲ್ಪವಿಸ್ತಾರವಾಗಿ ವಿಷದಪಡಿಸುತ್ತಾರೆ. ಮುಕ್ತ ರಾಷ್ಟ್ರೀಯತೆ ಆಕೆಯ ಪ್ರಕಾರ ಅದು ತೀವ್ರಗಾಮಿತ್ವ ರಹಿತವಾದ ಮನೋಭೂಮಿಕೆ. ಸಂವಿಧಾನ ಮತ್ತು ಅದರ ಪೀಠಿಕೆಗೆ ಮಾತಿನಲ್ಲಿ ಮತ್ತು ಕೃತಿಯಲ್ಲಿ ಬದ್ಧವಾದ, ಮತ, ಜಾತಿ, ಧರ್ಮ, ಮೊದಲಾದ ತಾತ್ವಿಕ ಹಿನ್ನೆಲೆಯಿಂದ ಮುಕ್ತವಾದ ಪೌರತ್ವವನ್ನು ಖಾತ್ರಿಪಡಿಸುವ, ಭಾರತೀಯತೆಯನ್ನು ನಿರ್ಧರಿಸುವ ಪೌರತ್ವ. ಆದ್ದರಿಂದ ನಮ್ಮ ಬಹುತ್ವದ ಪ್ರಜಾಪ್ರಭುತ್ವದಲ್ಲಿ ‘ಇತರ’ ಎಂದರೆ ಅದು ಬೇರಾರೂ ಅಲ್ಲ ‘ನಾವೇ’. ಇದಕ್ಕೆ ಕುಂದು ತರುವ, ಭಂಗ ತರುವ ಯಾವುದೇ ಯತ್ನ ಅದರ ಪ್ರಧಾನ ಮೌಲ್ಯಗಳಿಗೆ ಹಾನಿಕಾರಕ.

ಜೈಹಿಂದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News