ಹಾಕಿ: ಭಾರತಕ್ಕೆ ಆಸ್ಟ್ರಿಯಾ ವಿರುದ್ಧ ರೋಚಕ ಜಯ

Update: 2017-08-17 03:46 GMT

ಹೊಸದಿಲ್ಲಿ, ಆ.17: ಯೂರೋಪ್ ಪ್ರವಾಸದಲ್ಲಿರುವ  ಭಾರತ ಹಾಕಿ ತಂಡವು ರಮಣ್‌ದೀಪ್ ಹಾಗೂ ಚಿಂಗ್ಲೇಸನ ಸಿಂಗ್ ಕೊನೆಯ ಘಟ್ಟದಲ್ಲಿ ಎರಡು ಗೋಲುಗಳನ್ನು ಸಿಡಿಸುವುದರೊಂದಿಗೆ ಆಸ್ಟ್ರಿಯಾ ವಿರುದ್ಧ ರೋಚಕ ಜಯ ದಾಖಲಿಸಿದೆ. ನೆದರ್ಲೆಂಡ್ಸ್‌ನ ಅಮ್‌ಸ್ಟೆಲ್ವೀನ್‌ನಲ್ಲಿ ನಡೆದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 4-3 ಗೋಲುಗಳಿಂದ ಎದುರಾಳಿಯನ್ನು ಮಣಿಸಿತು.

ಕೊನೆಯ ಕ್ಷಣದಲ್ಲಿ ಚಿಂಗ್ಲೆನ್‌ ಸನಾ ಗೋಲು ಬಾರಿಸಿ ಭಾರತದ ಜಯ ಖಾತ್ರಿಪಡಿಸಿದರು. ಆಸ್ಟ್ರಿಯಾ ಕೂಡಾ ಎರಡು ಗೋಲುಗಳನ್ನು ಕೊನೆ ಹಂತದಲ್ಲಿ ಸಿಡಿಸಿ ಪ್ರತಿ ಹೋರಾಟ ನೀಡಿತು. ನೆದರ್ಲೆಂಡ್ಸ್ ವಿರುದ್ಧ ಸತತ ಎರಡು ಜಯ ಸಾಧಿಸಿದ್ದ ಭಾರತಕ್ಕೆ ಈ ಪ್ರವಾಸದಲ್ಲಿ ಇದು ಮೂರನೇ ಜಯ. ಮನ್‌ಪ್ರೀತ್ ಸಿಂಗ್ ನೇತೃತ್ವದ ಯುವ ಪಡೆ ಯೂರೋಪ್ ಪ್ರವಾಸವನ್ನು 3 ಗೆಲುವು ಹಾಗೂ 2 ಸೋಲಿನೊಂದಿಗೆ ಪೂರ್ಣಗೊಳಿಸಿತು.

ಮೊದಲ ಅವಧಿಯಲ್ಲಿ ಆಸ್ಟ್ರಿಯಾ ಆರಂಭಿಕ ಮುನ್ನಡೆ ಸಾಧಿಸಿತ್ತು. ಎರಡನೇ ಅವಧಿಯಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲ್ ಆಗಿ ಪರಿವರ್ತಿಸುವ ಮೂಲಕ ರಮಣದೀಪ್ ಸಮಬಲ ಸಾಧಿಸಲು ಕಾರಣರಾದರು. ಭಾರತದ ಮಿಡ್‌ಫೀಲ್ಡ್ ಆಟಗಾರರು ಸತತವಾಗಿ ಎದುರಾಳಿ ವಿರುದ್ಧ ದಾಳಿ ನಡೆಸಿ, ಒತ್ತಡ ಹೇರಿದರು. ರಮಣದೀಪ್ ಭಾರತಕ್ಕೆ ಎರಡನೇ ಗೋಲು ತಂದಿತ್ತರು. ಕೊನೆ ಕ್ಷಣದಲ್ಲಿ ವರುಣ್ ಕುಮಾರ್ ಅವರ ಪಾಸ್ ಅನ್ನು ಚಿಂಗ್ಲೆನ್‌ಸನಾ ಗೋಲುಪೆಟ್ಟಿಗೆ ಸೇರಿಸುವ ಮೂಲಕ ಭಾರತಕ್ಕೆ ಮುನ್ನಡೆ ಹಿಗ್ಗಿಸಿದರು.

ಅದರೆ ಆಟ ಮುಗಿಯುವ ಹಂತದಲ್ಲಿ 10 ಸೆಕೆಂಡ್ ಅಂತರದಲ್ಲಿ ಆಸ್ಟ್ರಿಯಾ ಲಗುಬಗನೆ ಎರಡು ಗೋಲುಗಳನ್ನು ಗಳಿಸಿ ಮತ್ತೆ ಸಮಬಲ ಸಾಧಿಸಿತು. ಅದರೆ ಭಾರತದ ಉಪನಾಯಕ, ಆಟ ಮುಗಿಯಲು 10 ಸೆಕೆಂಡ್ ಇರುವಾಗ ಮತ್ತೊಂದು ಗೋಲು ಸಾಧಿಸಿ ಭಾರತಕ್ಕೆ ಅದ್ಭುತ ವಿಜಯ ದೊರಕಿಸಿಕೊಟ್ಟರು.
ಈ ಪಂದ್ಯಕ್ಕೂ ಮುನ್ನ ಭಾರತ ಬೆಲ್ಜಿಯಂ ವಿರುದ್ಧ ಎರಡೂ ಪಂದ್ಯ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News