ನಿಷೇಧಿತ ಔಷಧಿಗಳು ಮತ್ತು ವಿದೇಶಿ ಜೈಲು

Update: 2017-08-17 19:10 GMT

ವಿದೇಶಗಳಿಗೆ ಪ್ರಯಾಣಿಸುವವರು ಯಾವುದೇ ಔಷಧಿಯನ್ನು ಪ್ರಿಸ್ಕ್ರಿಪ್ಷನ್ ಮತ್ತು ಖರೀದಿ ರಶೀದಿ ರಹಿತವಾಗಿ ಕೊಂಡೊಯ್ಯಬಾರದು. ತಮ್ಮಲ್ಲಿರುವ ಔಷಧಿಗಳನ್ನು ಅಧಿಕಾರಿಗಳ ಕಣ್ತಪ್ಪಿಸಿ ಕೊಂಡೊಯ್ಯುವ ಪ್ರಯತ್ನ ಮಾಡಲೇಬಾರದು. ತಮ್ಮಲ್ಲಿರುವ ಔಷಧಿಗಳು ನಿಷೇಧಿತವೇ ಎಂಬುವುದನ್ನು ಸಾಧ್ಯಂತ ಖಾತರಿಪಡಿಸಿಕೊಳ್ಳಬೇಕು. 

ವಿದೇಶಗಳಿಗೆ ನಿಷೇಧಿತ ಔಷಧ ಸಾಗಿಸಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿ ಅಲ್ಲಿನ ಜೈಲು ಕೋಣೆಗಳಲ್ಲಿ ವರ್ಷಾನುಗಟ್ಟಲೆ ಕಳೆದವರ, ಈಗಲೂ ಜೈಲಲ್ಲಿದ್ದು ಬದುಕು, ಭವಿಷ್ಯ ಅತಂತ್ರಗೊಂಡವರ ಬಗ್ಗೆ ನಾವೆಲ್ಲಾ ಕೇಳಿರುತ್ತೇವೆ. ಇಲ್ಲಿ ನಿಷೇಧಿತ ಔಷಧಿ ಎಂದ ಮಾತ್ರಕ್ಕೆ ಹಲವರು ತಪ್ಪು ಕಲ್ಪನೆಗೊಳಗಾಗುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಏನಿದರ ಒಳಮರ್ಮ....? ಅರಿಯಲು ಮುಂದೆ ಓದಿ. ಛೆ, ಆತ ಅಂತವನೇ ಅಲ್ಲ. ಆತ ಅಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆತ ನಿಷೇಧಿತ ಔಷಧಿ ಸಾಗಾಟ ಕೇಸಿನಲ್ಲಿ ಸಿಕ್ಕಿ ಬಿದ್ದಿದ್ದಾನೆಂದರೆ ನಂಬಲು ಸಾಧ್ಯವಾಗುವುದಿಲ್ಲ ಎಂಬ ಉಚ್ಚಾರಗಳನ್ನೂ ನಾವು ಕೇಳಿರುತ್ತೇವೆ. ನಿಷೇಧಿತ ಔಷಧಿ ಎಂದ ಮಾತ್ರಕ್ಕೆ ಯಾರೂ ಬೆಚ್ಚಿ ಬೀಳಬೇಕಾದದ್ದಿಲ್ಲ. ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಔಷಧ ನಿಯಂತ್ರಣ ಕಾಯ್ದೆಯಿದೆ. ನಮ್ಮ ದೇಶದಲ್ಲಿ ಬಳಕೆಯಲ್ಲಿರುವ ಔಷಧಿಗಳೆಲ್ಲವೂ ಬೇರೆ ದೇಶಗಳಲ್ಲಿ ಬಳಕೆಯಲ್ಲಿರಬೇಕೆಂದೇನಿಲ್ಲ.

ಕೆಲವು ಉದಾಹರಣೆಗಳು:

ನಮ್ಮ ದೇಶದಲ್ಲಿ ಎಗ್ಗಿಲ್ಲದೇ ಬಳಸಲಾಗುವ Nimusulide ಎಂಬ ನೋವು ನಿವಾರಕ ಔಷಧಿ ಜಗತ್ತಿನ ಅನೇಕ ದೇಶಗಳಲ್ಲಿ ನಿಷೇಧಿತ ಔಷಧಿಗಳ ಪಟ್ಟಿಯಲ್ಲಿದೆ. Diclofenac sodium ಎಂಬುವುದು ಒಂದು ಅತೀ ಸಾಮಾನ್ಯ ನೋವು ನಿವಾರಕ ಔಷಧ. ಇದು ಬಹಳ ಪರಿಣಾಮಕಾರಿಯೂ ಹೌದು. ಇದನ್ನು ಕಿಡ್ನಿ ಖಾಯಿಲೆಯಿರುವವರು, ಮಧುಮೇಹಿಗಳು, ಗರ್ಭಿಣಿಯರು ಸೇವಿಸುವಂತಿಲ್ಲ. ಕಿಡ್ನಿ ಕಾಯಿಲೆಯಿರುವವರಿಗೆ ಇದಕ್ಕೆ ಬದಲಾಗಿ Tramadol hydrochloride ಎಂಬ ನೋವು ನಿವಾರಕ ಔಷಧಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು Diclofenac sodium ಎಂಬ ಔಷಧಿಗಿಂತ ಸುರಕ್ಷಿತ ಎಂಬ ನೆಲೆಯಲ್ಲಿ ನಮ್ಮಲ್ಲಿ ಇದನ್ನು ಬಳಸಲಾಗುತ್ತಿದೆ. ಆದರೆ Tramadol hydrochloride Etodolac ಜಗತ್ತಿನ ಅನೇಕ ದೇಶಗಳಲ್ಲಿ ನಿಷೇಧಕ್ಕೊಳಗಾಗಿದೆ. ಎಂಬ ಔಷಧವನ್ನು ನಮ್ಮ ದೇಶದಲ್ಲಿ ಮೂಳೆ ತಜ್ಞರು ವ್ಯಾಪಕವಾಗಿ ಬಳಸುತ್ತಾರೆ. ಇದು ಮೂಳೆ, ಗಂಟು ನೋವು ಇತ್ಯಾದಿಗಳಿಗೆ ಅತ್ಯಂತ ಪರಿಣಾಮಕಾರಿ ಔಷಧ. ಇದು ಅನೇಕ ದೇಶಗಳಲ್ಲಿ ನಿಷೇಧಿತ ಔಷಧಿಗಳ ಪಟ್ಟಿಗೆ ಸೇರಿದೆ.

ಭಾರತದಲ್ಲಿ ಬಳಸಲಾಗುವ ಅನೇಕ ಸೈಕಿಯಾಟ್ರಿಕ್ ಡ್ರಗ್ಸ್ (ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳು) ಕೊಲ್ಲಿ ದೇಶಗಳಲ್ಲಿ ನಿಷೇಧಿತ ಔಷಧಿಗಳಾಗಿವೆ. ಅನೇಕ ಸೈಕಿಯಾಟ್ರಿಕ್ ಡ್ರಗ್ಸ್‌ಗಳಲ್ಲಿ ಮಂಪರು ಕವಿಯುತ್ತದೆ. ಆದುದರಿಂದಲೇ ಕೆಲವು ಮಾದಕ ದ್ರವ್ಯ ವ್ಯಸನಿಗಳು ಇವುಗಳನ್ನು ಅಮಲು ಪದಾರ್ಥದಂತೆ ಸೇವಿಸುತ್ತಾರೆ. ಟ್ರಿಪಲ್ ಕಾಂಬಿನೇಶನ್ ಡ್ರಗ್ಸ್ (ಮೂರು ವಿಧದ ಅಥವಾ ಅದಕ್ಕಿಂತ ಹೆಚ್ಚಿನ ರಾಸಾಯನಿಕಗಳಿಂದ ಸಂಯೋಜನೆಗೊಂಡಿರುವ ಔಷಧಿಗಳು) ಅನೇಕ ದೇಶಗಳಲ್ಲಿ ನಿಷೇಧಕ್ಕೊಳಗಾಗಿವೆ. ಉದಾ: ರಕ್ತದೊತ್ತಡ ಚಿಕಿತ್ಸೆಯಲ್ಲಿ ಬಳಸಲಾಗುವ Valsartan with Amlodipine and hydrochlorothiazide ಇದಲ್ಲದೆ ಕೆಲವು ಹೃದಯ ಸಂಬಂಧೀ ಕಾಯಿಲೆಗಳಲ್ಲಿ ಬಳಸುವ ಔಷಧಿಗಳು, ಕೆಲವೊಂದು ಸೋಂಕು ನಿವಾರಕಗಳು ಟ್ರಿಪಲ್ ಕಾಂಬಿನೇಶನ್ ಹೊಂದಿವೆ. ಹೀಗೆ ನೂರಾರು ಔಷಧಿಗಳು ನಮ್ಮ ದೇಶದಲ್ಲಿ ಬಳಕೆಯಲ್ಲಿದ್ದರೂ ವಿದೇಶಗಳಲ್ಲಿ ನಿಷೇಧಿತ. ಕೊಲ್ಲಿ ರಾಷ್ಟ್ರಗಳಂತೂ ಔಷಧಿಗಳ ವಿಚಾರದಲ್ಲಿ ಬಹಳ ಕಠಿಣ ನಿಲುವು ತಾಳುತ್ತದೆ. ಅಂತಹ ರಾಷ್ಟ್ರಗಳಿಗೆ ಪ್ರಯಾಣಿಸುವವರು ತಮ್ಮ ಸ್ವಯಂ ಬಳಕೆಗಾಗಿಯೋ, ಗೆಳೆಯರಿಗೆ, ಆಪ್ತರಿಗೆ, ಬಂಧುಗಳಿಗೆಂದು ಅನೇಕ ಔಷಧಿಗಳನ್ನು ಕೊಂಡುಯ್ಯುವುದಿದೆ. ಹೀಗೆ ಕೊಂಡೊಯ್ಯುವವರಲ್ಲಿ ಶೇ. 99 ಜನರಿಗೆ ತಾವು ಎಂತಹ ಔಷಧಿ ಕೊಂಡೊಯ್ಯುತ್ತಿದ್ದೇವೆಂಬ ಜ್ಞಾನವಿರುವುದಿಲ್ಲ. ತಾವು ಕೊಂಡೊಯ್ಯುತ್ತಿರುವ ಔಷಧಿಗಳೇ ತಮ್ಮನ್ನು ಜೈಲಿಗೆ ತಳ್ಳಬಹುದೆಂಬ ಕಿಂಚಿತ್ ಅರಿವೂ ಇರುವುದಿಲ್ಲ. ಔಷಧಿಗಳ ಸಾಗಾಟಕ್ಕೆ ಸಂಬಂಧಿಸಿ ಹಿಂದಿನಿಂದಲೂ ಅನೇಕ ನಿರ್ಬಂಧಗಳಿವೆ. ವೈದ್ಯರ ಹೆಸರು, ಪದವಿ, ನೋಂದಣಿ ಸಂಖ್ಯೆಯಿರುವ ಮೊಹರು ಹಾಕಿದ ಪ್ರಿಸ್ಕ್ರಿಪ್ಷನ್ ಮತ್ತು ಖರೀದಿ ರಶೀದಿಯನ್ನು ಕೊಂಡೊಯ್ಯುವವರು ಹೊಂದಿರಬೇಕು. ವೈದ್ಯರು ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆದುದಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಿಯನ್ನು ಕೊಂಡೊಯ್ಯಬಾರದು. ಒಂದು ವೇಳೆ ನಿಷೇಧಿತ ಔಷಧಿಯಲ್ಲದಿದ್ದರೂ ಪ್ರಿಸ್ಕ್ರಿಪ್ಷನ್ ಮತ್ತು ಖರೀದಿ ರಶೀದಿ ಹೊಂದಿರದಿದ್ದರೆ ತಪಾಸಣೆ ವೇಳೆ ಸಿಕ್ಕಿಬಿದ್ದರೆ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ರಾಷ್ಟ್ರಗಳು ಔಷಧಿಗಳಿಗೆ ಸಂಬಂಧಿಸಿದಂತೆ ಬಿಗಿಯಾದ ಕಾನೂನು ಮಾಡಿವೆ. ಈ ಕಾನೂನಿನಡಿಯಲ್ಲಿ ನಿಷೇಧಿತ ಔಷಧಿ ಸಾಗಾಟದ ಅಪರಾಧಕ್ಕೆ ಕಠಿಣ ಸಜೆ ವಿಧಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಔಷಧಿ ಬರೆದುಕೊಡುವ ವೈದ್ಯನಿಗೂ, ಔಷಧಿ ಮಾರಾಟ ಮಾಡುವವನಿಗೂ ಯಾವುದು ಯಾವ ದೇಶದಲ್ಲಿ ನಿಷೇಧಿತ ಎಂಬ ಅರಿವು ಇರುವುದಿಲ್ಲ. ಹಾಗೆ ಅರಿವಿರಬೇಕಾದದು ಕಡ್ಡಾಯವೂ ಅಲ್ಲ. ವೈದ್ಯರು ಸಹಜವಾಗಿಯೇ ಪ್ರಿಸ್ಕ್ರಿಪ್ಷನ್ ಬರೆದುಕೊಡುತ್ತಾರೆ ಮತ್ತು ಜನ ಆ ಪ್ರಿಸ್ಕ್ರಿಪ್ಷನ್‌ನನ್ವಯ ಔಷಧಿ ಖರೀದಿಸಿಕೊಂಡು ಹೋಗುತ್ತಾರೆ. ಯಾವುದೇ ಅಪರಾಧಗೈಯುವ ಉದ್ದೇಶವಿಲ್ಲದಿದ್ದರೂ ತಪಾಸಣೆಗೈಯುವಾಗ ಆಯಾ ದೇಶದಲ್ಲಿ ನಿಷೇಧಿತ ಔಷಧಿಯಿರುವುದು ಸಿಕ್ಕಿಬಿದ್ದರೆ ಆತನಿಗೆ ಜೈಲೇ ಗತಿ. ಹೀಗೆ ತಮಗರಿವಿಲ್ಲದೇ ಮಾಡಿದ ತಪ್ಪಿಗಾಗಿ ದುಡಿಯಲು ಹೋದವರು ಜೈಲು ಸೇರುತ್ತಾರೆ. ಹೀಗೆ ತಮಗರಿವಿಲ್ಲದೇ ಮಾಡಿದ ತಪ್ಪಿಗಾಗಿ ಅಮಾಯಕರು ಶಿಕ್ಷೆ ಅನುಭವಿಸುವುದನ್ನು ತಪ್ಪಿಸಲು ನಮ್ಮ ದೇಶದ ಯಾವುದೇ ಸರಕಾರವೂ ಕ್ರಮ ಕೈಗೊಂಡ ಉದಾಹರಣೆಯಿಲ್ಲ. ವಿದೇಶಗಳಿಗೆ ಪ್ರಯಾಣಿಸುವವರು ಯಾವುದೇ ಔಷಧಿಯನ್ನು ಪ್ರಿಸ್ಕ್ರಿಪ್ಷನ್ ಮತ್ತು ಖರೀದಿ ರಶೀದಿ ರಹಿತವಾಗಿ ಕೊಂಡೊಯ್ಯಬಾರದು. ತಮ್ಮಲ್ಲಿರುವ ಔಷಧಿಗಳನ್ನು ಅಧಿಕಾರಿಗಳ ಕಣ್ತಪ್ಪಿಸಿ ಕೊಂಡೊಯ್ಯುವ ಪ್ರಯತ್ನ ಮಾಡಲೇಬಾರದು. ತಮ್ಮಲ್ಲಿರುವ ಔಷಧಿಗಳು ನಿಷೇಧಿತವೇ ಎಂಬುದನ್ನು ಸಾಧ್ಯಂತ ಖಾತರಿಪಡಿಸಿಕೊಳ್ಳಬೇಕು.

ಸರಕಾರ ಮಾಡಬೇಕಾದುದೇನು:

ದೇಶದ ಎಲ್ಲಾ ವೈದ್ಯರಿಗೂ ನಿಷೇಧಿತ ಔಷಧಿಗಳ ಪಟ್ಟಿಯನ್ನು ಕಾಲ ಕಾಲಕ್ಕೆ ನೀಡುತ್ತಾ ಹೋಗುವುದು ಸುಲಭ ಸಾಧ್ಯವಲ್ಲ. ಯಾವ ದೇಶದಲ್ಲಿ ಯಾವ ಔಷಧಿ ನಿಷೇಧಕ್ಕೊಳಗಾಗಿದೆ ಎಂಬುವುದನ್ನು ಅಪ್‌ಡೇಟಾಗಿ ಪತ್ತೆ ಹಚ್ಚಿ ವೈದ್ಯರಿಗೆ ನೀಡುವುದು ಸುಲಭದ ಕೆಲಸವಲ್ಲವಾದ್ದರಿಂದ ಪ್ರತಿಯೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನುರಿತ ಮತ್ತು ಅರ್ಹ ಔಷಧ ತಪಾಸಕರನ್ನು ಕೆಲಸಕ್ಕೆ ನೇಮಿಸಬೇಕು. ಅವರು ಯಾವ ಯಾವ ದೇಶದಲ್ಲಿ ಯಾವ್ಯಾವ ಔಷಧಿಗಳು ನಿಷೇಧಕ್ಕೊಳಗಾಗಿವೆ ಎಂಬುವುದರ ಬಗ್ಗೆ ಅಪ್‌ಡೇಟ್ ಆಗುತ್ತಿರಬೇಕು. ಈಗಾಗಲೇ ನಿಷೇಧಿತ ಔಷಧಿಗಳನ್ನು ವಿದೇಶಗಳಿಗೆ ಸಾಗಿಸಿದ ಆರೋಪದಲ್ಲಿ ಬಂಧಿತರಾಗಿರುವ ಭಾರತೀಯ ಪ್ರಜೆಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ ಮುಂದಡಿಯಿಡಬೇಕು.

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News

ಜಗದಗಲ
ಜಗ ದಗಲ