ಉ.ಪ್ರದೇಶ: ಘೋಷಣೆಗೆ ಸೀಮಿತವಾದ ಭರವಸೆಗಳು

Update: 2017-08-18 14:20 GMT

ಲಕ್ನೊ, ಆ.18: ಪ್ರತೀಬಾರಿ ಚುನಾವಣೆಯ ಸಂದರ್ಭ ಪ್ರಮುಖ ರಾಜಕೀಯ ಪಕ್ಷಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತವೆ. ಆದರೆ ಬಹುತೇಕ ಭರವಸೆಗಳು ಘೋಷಣೆಗೆ ಮಾತ್ರ ಸೀಮಿತಗೊಂಡು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಉತ್ತರಪ್ರದೇಶ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೋರಖ್‌ಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸಮಯದಿಂದ ಮಿದುಳುಜ್ವರದ ಬಾಧೆ ಜನರನ್ನು ಕಾಡುತ್ತಿದೆ. ಆದರೆ ಇಲ್ಲಿಯ ಪ್ರಮುಖ ಆಸ್ಪತ್ರೆಯಾದ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಇರುವುದು ಇತ್ತೀಚಿಗೆ ನಡೆದ ಮಕ್ಕಳ ಸಾವಿನ ಪ್ರಕರಣದಿಂದ ಸಾಬೀತಾಗಿದೆ. ಆರೋಗ್ಯಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ತಾವು ಬದ್ಧರಾಗಿದ್ದು ಸಾಕಷ್ಟು ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ಹೇಳಿಕೆ ನೀಡುತ್ತಾ ಬಂದಿವೆ. ಆದರೆ ಇದು ಕೇವಲ ಘೋಷಣೆ ಮಾತ್ರಕ್ಕೆ ಸೀಮಿತವಾಗಿದೆ ಎಂಬುದಕ್ಕೆ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ದುರಂತವೇ ಸಾಕ್ಷಿಯಾಗಿದೆ.

  2014ರಲ್ಲಿ ಗೋರಖ್‌ಪುರಕ್ಕೆ ಭೇಟಿ ನೀಡಿದ್ದ ಅಂದಿನ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ , ಇಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಮತ್ತು ಮೆದುಳು ಜ್ವರ ಪೀಡಿತ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗ ಆರಂಭಿಸುವುದಾಗಿ ಘೋಷಿಸಿದ್ದರು. ರಾಮದಾಸ್ ನೀಡಿದ್ದ ಭರವಸೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ . ಈ ಮಧ್ಯೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸರಕಾರ 85 ಕೋಟಿ ರೂ. ಬಿಡುಗಡೆಗೊಳಿಸಿರುವುದಾಗಿ ಕಳೆದ ರವಿವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡ ಘೋಷಿಸಿದ್ದಾರೆ.

2007ರಲ್ಲಿ ರಾಜ್ಯದಲ್ಲಿ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಅಧಿಕಾರದಲ್ಲಿದ್ದ ಸಂದರ್ಭ , ಬಿಆರ್‌ಡಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಅಂದಿನ ಮುಖ್ಯಮಂತ್ರಿ ಮಾಯಾವತಿ ಘೋಷಿಸಿದ್ದರು. ಆದರೆ ಈ ಯೋಜನೆ ಭರವಸೆಯಾಗಿಯೇ ಉಳಿಯಿತು. 2011ರಲ್ಲಿ ಗೋರಖ್‌ಪುರಕ್ಕೆ ಭೇಟಿ ನೀಡಿದ್ದ ಅಂದಿನ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಝಾದ್, ಜಿಲ್ಲೆಯಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿ ತರಬೇತಿ ಕೇಂದ್ರ ಹಾಗೂ ಪುನಶ್ಚೈತನ್ಯ ಕೇಂದ್ರ ಆರಂಭಿಸುವುದಾಗಿ ಘೋಷಿಸಿದ್ದರು. ಆದರೆ ಇದು ಕೂಡಾ ಕಾರ್ಯರೂಪಕ್ಕೆ ಬರಲಿಲ್ಲ.

2012ರಲ್ಲಿ ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ , ಗೋರಖ್‌ಪುರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅಖಿಲೇಶ್ ಯಾದವ್ , ಇಲ್ಲಿ ಮಿದುಳುಜ್ವರ ಕಾಯಿಲೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ 500 ಹಾಸಿಗೆಗಳನ್ನು ಒಳಗೊಂಡಿರುವ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಐದು ವರ್ಷ ಕಳೆದರೂ ಈ ಆಸ್ಪತ್ರೆ ನಿರ್ಮಾಣದ ಬಗ್ಗೆ ಯಾವುದೇ ಸೂಚನೆ ಕಾಣುತ್ತಿಲ್ಲ.

ಗೋರಖ್‌ಪುರ ಹಾಗೂ ನೆರೆಯ ಜಿಲ್ಲೆಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ನಿಗೂಢ ಮಿದುಳುಜ್ವರಕ್ಕೆ ‘ಜಪಾನೀಸ್ ಎನ್ಸೆಫಲಿಟಿಸ್’ ವೈರಸ್ ಕಾರಣವಾಗಿದೆ ಎಂದು 1978ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿ ನೀಡಿತ್ತು.ಆದರೆ ಆರೋಗ್ಯ ಸೌಲಭ್ಯದ ಕೊರತೆ ಮಕ್ಕಳ ಸಾವಿಗೆ ಕಾರಣ ಎಂಬುದನ್ನು ಅರಿಯಲು ಕೇಂದ್ರ ಮತ್ತು ರಾಜ್ಯಸರಕಾರಗಳಿಗೆ ಎರಡು ದಶಕಕ್ಕೂ ಹೆಚ್ಚಿನ ಅವಧಿ ಬೇಕಾಯಿತು ಎಂದು ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ ಕೆ.ಪಿ.ಖುಷ್‌ವಾಲ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

2004ರಲ್ಲಿ , ಆಸ್ಪತ್ರೆಗಳ ವಾರ್ಡ್‌ಗಳಲ್ಲಿ ಆಮ್ಲಜನಕದ ಪೈಪ್‌ಲೈನ್ ಅಳವಡಿಸಲು ಹಾಗೂ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ವೆಂಟಿಲೇಟರ್‌ಗಳನ್ನು ಖರೀದಿಸುವ ನಿಟ್ಟಿನಲ್ಲಿ 93 ಲಕ್ಷ ರೂ.ಗಳನ್ನು ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಬಿಡುಗಡೆಗೊಳಿಸಿದ್ದರು. ಅಲ್ಲದೆ, 2005ರಲ್ಲಿ ಮಿದುಳು ಜ್ವರದ ಸೋಂಕು ಹರಡಿರುವ ಪ್ರದೇಶಗಳಲ್ಲಿ ಕೇಂದ್ರ ಸರಕಾರ ಲಸಿಕೆ ಹಾಕುವ ಅಭಿಯಾನ ನಡೆಸಿರುವುದನ್ನು ಹೊರತುಪಡಿಸಿ, ರೋಗಿಗಳಿಗೆ ಸುಧಾರಿತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News