ಮುರುಗನ್ ಸಾವು ಪ್ರಕರಣ: ವೆಂಟಿಲೇಟರ್ ಕೊರತೆ ಇರಲಿಲ್ಲ

Update: 2017-08-18 15:19 GMT

ತಿರುವನಂತಪುರಂ, ಆ.18: ಮುರುಗನ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟೀಕರಣ ನೀಡಿರುವ ತಿರುವನಂತಪುರಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಹಾಗೂ ಅಧೀಕ್ಷಕರು, ಆಸ್ಪತ್ರೆಯಲ್ಲಿ ‘ವೆಂಟಿಲೇಟರ್’ ಇಲ್ಲ ಎಂದು ಮುರುಗನ್‌ಗೆ ಚಿಕಿತ್ಸೆ ನಿರಾಕರಿಸಲಾಗಿದೆ ಎಂಬುದು ಸರಿಯಲ್ಲ. ಆ ಸಂದರ್ಭ ಆಸ್ಪತ್ರೆಯಲ್ಲಿ 15 ವೆಂಟಿಲೇಟರ್‌ಗಳು ಲಭ್ಯವಿದ್ದವು ಎಂದು ಹೇಳಿದ್ದಾರೆ.

ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಇತ್ತೀಚೆಗೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದು , ಈತನಿಗೆ ವಿವಿಧ ಕಾರಣ ನೀಡಿ ಕೊಲ್ಲಂ ಹಾಗೂ ತಿರುವನಂತಪುರದ ಹಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಕಾರಣ ಆತ ಮೃತಪಟ್ಟಿದ್ದ ಎಂದು ವರದಿಯಾಗಿತ್ತು.

 ಮುರುಗನ್‌ನನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ಎರಡು ವೆಂಟಿಲೇಟರ್ ಲಭ್ಯವಿದ್ದವು ಎಂದು ಈಗ ವರದಿಯಾಗಿದೆ. ಆದರೆ ಘಟನೆಯ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ಸಮಿತಿಯ ವರದಿಯಲ್ಲಿ, ಮುರುಗನ್‌ನನ್ನು ಆಸ್ಪತ್ರೆಗೆ ತಂದಾಗ ವೆಂಟಿಲೇಟರ್ ಲಭ್ಯವಿರಲಿಲ್ಲ ಎಂದು ತಿಳಿಸಲಾಗಿತ್ತು ಹಾಗೂ ವೈದ್ಯರನ್ನು ಆರೋಪಮುಕ್ತಗೊಳಿಸಲಾಗಿತ್ತು. ಮುರುಗನ್‌ನನ್ನು ಆಸ್ಪತ್ರೆಗೆ ತಂದಾಗ ಆತನ ಆರೋಗ್ಯಸ್ಥಿತಿ ವಿಷಮಿಸಿತ್ತು. ಆಗ ತುರ್ತುಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ‘ಆ್ಯಂಬು ಬ್ಯಾಗ್’ (ಆ್ಯಂಬುಲೆನ್ಸ್‌ನಲ್ಲಿ ಬಳಸಲಾಗುವ ಬ್ಯಾಗ್ ಆಕಾರದ ವೆಂಟಿಲೇಷನ್ ವ್ಯವಸ್ಥೆ) ವ್ಯವಸ್ಥೆಗೊಳಿಸಲು ಸಾಧ್ಯ ಎಂದರು. ಆದರೆ ಮುರುಗನ್ ಜತೆಗಿದ್ದವರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯನ್ನು ಪೊಲೀಸರಿಗೆ ಹಸ್ತಾಂತರಿಸಲು ಆರೋಗ್ಯ ಇಲಾಖೆ ಅನಗತ್ಯ ವಿಳಂಬಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News