ವಾರಣಾಸಿಯ ಮುಕ್ತಿಭವನದ ಕರೆ-ಇಷಾರೆ!

Update: 2023-06-30 06:09 GMT

ಮನೆಯಲ್ಲಿರುವ ಹಿರಿಯರು ಒಂದು ಬೆಳಗ್ಗೆ, ‘‘ಆಯಿತು ಇನ್ನು ನನ್ನ ಕಾಲ ಮುಗಿಯಿತೆಂದು ತೋರುತ್ತದೆ; ಕಾಶಿಗೆ ಹೋಗಲು ಕರೆ ಬಂದಿದೆ’’ ಎಂದು ಪ್ರಯಾಣ ಹೊರಟು ನಿಂತರೆ ಏನನ್ನಿಸುತ್ತದೆ? ಗಾಬರಿ, ದಿಗಿಲು, ದುಗುಡ-ದಿಗ್ಭ್ರಮೆಯಿಂದ ಏನೂ ತೋಚದೇ ಹೋಗುತ್ತದೆ. ಎಲ್ಲರೂ ರಿಟರ್ನ್ ಟಿಕೆಟ್ ಮಾಡಿಸಿ ಬಂದವರೇ ಆದರೂ ಅದು ಹೇಗಪ್ಪಾಇವರಿಗೆ ಕೊನೆ ಪ್ರಯಾಣದ ದಿನ, ಸಮಯ ಗೊತ್ತಾಗಿ ಹೋಯಿತು ಎಂದು ತುಟಿ ಸೊಟ್ಟಗಾಗಿ ಒಂದು ಶುಷ್ಕ ನಗು. ಶುಭಶಿಷ್ ಭೂಟಿಯಾನಿ ನಿರ್ದೇಶಿಸಿರುವ ‘ಮುಕ್ತಿ ಭವನ್-ಹೊಟೇಲ್ ಸಾಲ್ವೇಷನ್’ (2016) ತೆರೆದುಕೊಳ್ಳುವುದು ಯಥಾವತ್ತಾಗಿ ಹೀಗೆಯೇ! ಸ್ವಾತಂತ್ರ್ಯ ದಿನಾಚರಣೆಯ ಕಳೆದ ವಾರ, ಬರೀ ಮುಕ್ತಿ, ಬಿಡುಗಡೆ ಪದಗಳೇ ಕಿವಿಗೆ ಬೀಳುತ್ತಿದ್ದ ವೇಳೆ ನೋಡಲು ಸಿಕ್ಕಿದ್ದು ಜೀವನ್ಮುಕ್ತಿಯನ್ನು ವಸ್ತುವಾಗಿಸಿಕೊಂಡ ಈ ಉಜ್ವಲ ಸಿನೆಮಾ.

ಆಜಾನುಬಾಹು ಶರೀರದೊಂದಿಗೆ ಗಂಟಲೂ ಜೋರಾಗಿರುವ ಹಟವಾದಿ ತಂದೆಯ ಮೆತ್ತನೆಯ ಮಗ, ‘‘ಯಾಕೆ ಹೀಗೆ, ನೀನು ಅವರಿಗೆ ಏನಾದರೂ ಅಂದೆಯಾ?’’ ಎಂದು ಹೆಂಡತಿಯನ್ನು ಪಿಸುದನಿಯಲ್ಲಿ ವಿಚಾರಿಸುತ್ತಾನೆ. ಆಕೆಯೋ ಅವನಿಗಿಂತ ನಮ್ರ ಸ್ವಭಾವದವಳು. ವಿವಾಹ ನಿಶ್ಚಯವಾಗಿರುವ ಮೊಮ್ಮಗಳು ಮಾತ್ರ ಗೆಲುವಾಗಿ ಉಳಿದು, ತಾತನಿಗೆ ಬಟ್ಟೆ ಬರೆ ಪ್ಯಾಕ್ ಮಾಡಿಕೊಡಲು ಮುಂದಾಗುತ್ತಾಳೆ. ‘‘ನಿನ್ನ ಅಜ್ಜಿಯದು, ಮದುವೆ ದಿನ ತೊಟ್ಟುಕೊ’’ ಎಂದು ಜೋಪಾನವಾಗಿ ತೆಗೆದಿಟ್ಟಿದ್ದ ನೆಕ್ಲೇಸ್ ಹುಡುಗಿಗೆ ಕೊಡುತ್ತಾನೆ.

‘‘ಇನ್ನು ಮೇಲೆ ಈ ಕೋಣೆ ಪೂರ್ತಿ ನಿನ್ನದು; ನನ್ನೊಂದಿಗೆ ರೂಮ್ ಶೇರ್ ಮಾಡಬೇಕಿಲ್ಲ, ಖುಷಿ ಅಲ್ವಾ’’ ಎಂದು ಕಿಚಾಯಿಸುತ್ತಾನೆ. ‘‘ಅಲ್ಲಿ ನಿನ್ನನ್ನು ನೋಡಲು ಬರುತ್ತೇನೆ’’ ಎಂದವಳು ಉತ್ತರಿಸುತ್ತಾಳೆ. ಈ ಪಯಣಕ್ಕೆ ಮುನ್ನ ಶಾಸ್ತ್ರೋಕ್ತವಾಗಿ ಮಾಡಬೇಕಾದ ಗೋದಾನ ಹಗಲಲ್ಲಿ ನಡೆದರೆ, ರಾತ್ರಿ ಕೇಕ್ ಕತ್ತರಿಸಿ ಕುಟುಂಬದ ವಿದಾಯ ಆಚರಣೆ. ಮುದುಕನ ಮನಸ್ಸು ಬದಲಾಯಿಸುವ ಸಲುವಾಗಿ ಕರೆಯಿಸಿಕೊಂಡ ಇನ್ನೊಂದು ವೃದ್ಧ ದಂಪತಿ, ಸಿಹಿ ಚಪ್ಪರಿಸಿ, ‘‘ಬಹಳ ಹಟಮಾರಿ, ಮಾತು ಕೇಳುವುದಿಲ್ಲ’’ ಎಂದು ಮಗ-ಸೊಸೆಯ ಮುಂದೆ ತಲೆ ಅಲ್ಲಾಡಿಸುತ್ತಾರೆ.

ಕಾಶಿಯಲ್ಲಿ ಸಾವು, ಸ್ವರ್ಗ ತಲುಪಲು ಇರುವ ಡೆಲಿಗೇಟ್ ಪಾಸ್‌ನಂತೆ ಎಂದು ತಲೆ ತಲಾಂತರಗಳಿಂದ ಬೇರೂರಿರುವ ನಂಬಿಕೆ, ಎಂತಹ ಯಂತ್ರ-ತಂತ್ರಗಳ ಯುಗವೇ ಆದರೂ ಸಾಮಾನ್ಯ ಜನತೆ-ಸಂಪ್ರದಾಯಸ್ಥ, ಆಧುನಿಕ ಎಂಬ ಭೇದವಿಲ್ಲದೆ ಅದಕ್ಕೆ ಜೋತುಬೀಳುವುದು, ಅದರಲ್ಲಿರುವ ವಿಸಂಗತಿ, ವಿನೋದ ಎಲ್ಲದರ ಸಮ್ಮಿಶ್ರ ರುಚಿ ಮುಂದಿನ ಭಾಗದಲ್ಲಿ. ‘‘ಇನ್ನೊಂದು ಹದಿನೈದು ದಿನ ತಡೆಯಪ್ಪಾ, ಕಚೇರಿಯಲ್ಲಿ ಏನೋ ತುಂಬ ಮುಖ್ಯ ಕೆಲಸ’’ ಎಂದು ಕೊನೆಯ ಪ್ರಯತ್ನವಾಗಿ ರಾಗ ಎಳೆಯುವ ಮಗನಿಗೆ, ಖಡಕ್ಕಾಗಿ, ‘‘ವಾಹನದಲ್ಲಿ ಕೂಡಿಸಿ ಕಳುಹಿಸು, ನಾನೊಬ್ಬನೇ ಹೋಗುತ್ತೀನಿ’’ ಎಂದು ತಂದೆ ಬ್ಲ್ಯಾಕ್‌ಮೇಲ್ ಮಾಡುತ್ತಾನೆ.

ಇಬ್ಬರೂ ಬಂದು ತಲುಪುವುದು, ‘ಮುಕ್ತಿಧಾಮ’ ಹೆಸರಿನ ಒಂದು ಲಾಡ್ಜ್‌ಗೆ. ಹದಿನೈದು ದಿನಗಳ ಗಡುವಿನಲ್ಲಿ ಕಂತೆ ಒಗೆಯುತ್ತೇವೆಂದು ಉಳಿಯಲು ಬಂದವರೇ ಅಲ್ಲಿ ಎಲ್ಲ. ಹಾಗೆ ಆಗಲಿಲ್ಲವೋ ಮುಲಾಜಿಲ್ಲದೆ ಜಾಗ ಖಾಲಿ ಮಾಡ್ತಿರಬೇಕು ಎಂಬ ನಿಬಂಧನೆ, ಮ್ಯಾನೇಜರ್‌ನಿಂದ. ಮಂಕು ಬೆಳಕಿನ, ಮಿತ ಸೌಕರ್ಯಗಳುಳ್ಳ ಆ ಪುರಾತನ ಕಟ್ಟಡದ ಕೋಣೆಗಳು ವಾಸಕ್ಕೆ ಯೋಗ್ಯವೆ ಎಂಬ ಸಂದೇಹ ಬರುವಷ್ಟು ಶಿಥಿಲ-ಜೀರ್ಣ. ಎಲ್ಲ ವ್ಯವಸ್ಥೆಯನ್ನು ಅಭ್ಯರ್ಥಿಗಳೇ ಮಾಡಿಕೊಳ್ಳಬೇಕು. ಮುಂದೆ ಹರಿಯುತ್ತಿದ್ದಾಳೆ, ಗಂಗೆ. ಪುರಾತನ ಕೊಠಡಿಯಲ್ಲಿ ಹೇಗೋ ಸಾಮಾನು-ಸಲಕರಣೆ ಹೊಂದಿಸಿಕೊಂಡು ಅಡುಗೆ ಮಾಡಿ ಬಡಿಸಿದರೆ, ‘‘ಯಾವ ಸೀಮೆ ಊಟವಯ್ಯಾ ಇದು?’’ ಎಂದು ಮಗನನ್ನು ಮೂದಲಿಸುವಷ್ಟು ರುಚಿಗ್ರಾಹಿ, ಸಾವಿನ ಸಿದ್ಧತೆ ನಡೆಸಿರುವ ಆ ಹಿರಿಯ! ಹೊಸಹೊಸದರಲ್ಲಿ ಎಲ್ಲ ಚೆನ್ನ.

ತಂತಮ್ಮ ಕೋಣೆಗಳಿಂದ ಬಂದು ಹಾಲ್‌ನಲ್ಲಿ ಇಟ್ಟಿರುವ ಟಿವಿಯಲ್ಲಿ ಕಣ್ಣು ಕೀಲಿಸುತ್ತ ಧಾರಾವಾಹಿ ನೋಡುವ ಸಹವಾಸಿಗಳನ್ನು ಮುದ್ದಾಂ ಆಗಿ ಪರಿಚಯ ಮಾಡಿಕೊಳ್ಳುತ್ತಾನೆ. ಅವರಲ್ಲಿ ಒಬ್ಬರು ಕಲಿಸುವ ಉಚ್ಛಾಸ-ನಿಶ್ವಾಸದ ಕಸರತ್ತು ಕಲಿಯುತ್ತಾನೆ. ದೋಣಿಯಲ್ಲಿ ಕುಳಿತು ಗಂಗಾನದಿಯಲ್ಲಿ ವಿಹರಿಸುತ್ತಾನೆ...ಹದಿನೈದು ದಿನ ತಂದೆಯನ್ನು ಕಾದು, ಉಪಾಯವಾಗಿ ಅವನ ಮನವೊಲಿಸಿ ಮನೆಗೆ ವಾಪಸ್ ಕರೆದೊಯ್ಯುವ ಇರಾದೆಯ ಮಗನಿಗೆ ಆಫೀಸಿಂದ ಫೋನ್ ಮೇಲೆ ಫೋನ್. ಈ ಮಧ್ಯೆ ಒಬ್ಬ ಸ್ನೇಹಮಯಿ ವೃದ್ಧೆಯೊಂದಿಗೆ ಗಡಸು ಮುದುಕ ನಿಕಟವಾಗಿದ್ದಾನೆ. ತಂದೆ-ಮಕ್ಕಳಿಬ್ಬರನ್ನು ತನ್ನ ಕೋಣೆಗೆ ಕರೆದು, ರುಚಿಯಾದ ಊಟ ಬಡಿಸಿ, ಆಕೆ ಹೇಳುತ್ತಾಳೆ, ‘‘ಕಳೆದ ಹದಿನೆಂಟು ವರ್ಷಗಳಿಂದ ನಾನಿಲ್ಲಿ ಕಾಯುತ್ತಿದ್ದೇನೆ.. ಸದ್ಯ, ದಾಖಲಾತಿ ಪ್ರಕಾರ ನನ್ನ ಹೆಸರು ಸುರಭಿ!.’’ ಓಹೋ! ಘಾಟಿ ಮ್ಯಾನೇಜರ್ ತನ್ನದೇ ಆಣತಿಗೆ ಹೀಗೊಂದು ತಿದ್ದುಪಡಿಯನ್ನೂ ಮಾಡಬಲ್ಲ....ಹದಿನೈದು ದಿನಗಳ ಗಡುವು ಕಳೆಯುತ್ತಲೇ ಬೇರೆ ಹೆಸರಲ್ಲಿ ವಾಸ್ತವ್ಯ ಮುಂದುವರಿಸಬಹುದು ಎಂಬ ಸುಳಿವು ಇಬ್ಬರಿಗೂ ಸಿಗುತ್ತದೆ.

ಇನ್ನೊಂದೆರಡು ದಿನ ಕಳೆಯುವಷ್ಟರಲ್ಲಿ ಪ್ರಯಾಣದ ಆಯಾಸ, ತಣ್ಣೀರು ಸ್ನಾನ ಇತ್ಯಾದಿ ಕಾರಣಗಳಿಂದಲೋ ಏನೋ ತಂದೆಗೆ ಜ್ವರ ಬರುತ್ತದೆ. ಹತ್ತಿರ ಇದ್ದು ಉಪಚರಿಸುತ್ತ, ಹಣೆಯ ಮೇಲೆ ಒದ್ದೆ ಬಟ್ಟೆ ಹಾಕುತ್ತ, ಸುತ್ತ ಕುಳಿತು ಭಜನೆ ಮಾಡುತ್ತಿರುವವರ ಪ್ರತಿಕ್ರಿಯೆ ನೋಡುತ್ತ ಜವರಾಯ ಬಳಿಸಾರಿಯೇ ಬಿಟ್ಟನಾ ಎಂಬ ಗೊಂದಲ ಮಗನಿಗೆ. ಜ್ವರ ಬಿಟ್ಟುಹೋಗಿ, ನಿಸೂರಾಗಿ ಮಲಗಿರುವಾತನ ಮೂಗಿನ ಬಳಿ ಬೆರಳು ತೆಗೆದುಕೊಂಡು ಹೋದರೆ, ಫಟಾರೆಂದು ತಳ್ಳಿಹಾಕುವಷ್ಟು ಆತನ ಪ್ರಚೋದನೆ-ಪ್ರತಿಕ್ರಿಯೆಗಳು ಜೀವಂತ ಎಂಬಲ್ಲಿಗೆ ಈ ಸಾವಿನ ನಿರೀಕ್ಷೆ ಠುಸ್ಸಾಗಿ ಅಲ್ಲೊಂದು ಪ್ರಹಸನ!

‘‘ಸಂದರ್ಭ ಹಾಗಿದೆ; ನೀವಿಬ್ಬರೂ ಇಲ್ಲಿಗೆ ಶೀಘ್ರ ಹೊರಟುಬಂದರೆ ಒಳ್ಳೆಯದು’’ ಎಂದ ಪತಿಯ ಮಾತನ್ನು ಅನುಸರಿಸಿ ಮುದುಕನ ಸೊಸೆ, ಮೊಮ್ಮಗಳೂ ಅಲ್ಲಿ ಬಂದು ಕೆಲ ದಿನ ಇದ್ದು ಹೋದದ್ದೇ ಆ ಪ್ರಹಸನದ ಸಿಹಿ ಪರಿಣಾಮ. ಹಿಂದೆ ಮನೆಯಲ್ಲಿ ಮಾಡುತ್ತಿದ್ದಂತೆಯೇ ನಾಲ್ವರೂ ಸೇರಿ, ಆ ಕತ್ತಲ ಕೋಣೆಯಲ್ಲಿ ಕಲೆತು ಮಾತಾಡಿ, ಬನಾರಸ್ ನೋಡಿ, ಶಾಪಿಂಗ್ ಮಾಡಿ ಸಂಸಾರ ಸುಖ ಅನುಭವಿಸುತ್ತಾರೆ. ತನ್ನ ಮದುವೆ ಬಗ್ಗೆ ಮೊಮ್ಮಗಳು ಅಷ್ಟೇನೂ ಉತ್ಸುಕತೆ ಹೊಂದಿಲ್ಲದೇ ಇರುವುದು ಸಹ ಈ ಒಡನಾಟದಲ್ಲಿ ಅಜ್ಜನಿಗೆ ಅರಿವಾಗುತ್ತದೆ. ಅದನ್ನು ಸೂಕ್ಷ್ಮವಾಗಿ ಮಗನ ಮುಂದೆ ಆಡುತ್ತಾನೆ ಕೂಡ. ಕಚೇರಿಯ ಬೆಂಬಿಡದ ದೂರವಾಣಿ ಕರೆಗಳ ಜತೆ ತಲೆದೋರಿದ ಈ ಹೊಸ ಸಂಕಷ್ಟದಿಂದ ಆತ ಚದುರಿಹೋಗುವುದು ಸಹಜವೇ. ಅಂದರೆ, ಮುಕ್ತಾಯದ ಕಡೆ ಸಿನೆಮಾ ಓಡಲು ಹೀಗೊಂದು ಟ್ರಿಗರ್ ಪಾಯಿಂಟ್.

ಒಂದು ದುರದೃಷ್ಟಕರ ದಿನ, ಮಗಳು ಎಂಗೇಂಜ್‌ಮೆಂಟ್ ಮುರಿಯಬಯಸುತ್ತಾಳೆ; ಆಕೆಗೆ ನೌಕರಿ ದೊರೆತಿದೆ ಎಂಬ ಸ್ಫೋಟಕ ವರ್ತಮಾನವೂ ಸೈಬರ್ ಕೆಫೆಯಲ್ಲಿ ತಾಯಿ-ಮಗಳೊಂದಿಗೆ ವೀಡಿಯೊ ಚಾಟ್ ನಡೆಸುವಾಗ ಬಿತ್ತರಗೊಳ್ಳುತ್ತದೆ. ಇನ್ನವನು ಅಲ್ಲಿ ನಿಲ್ಲಲಾರ. ಆಗ್ರಹ, ಬಿನ್ನಹಗಳಿಂದ ಬಗೆಬಗೆಯಾಗಿ ನಿವೇದನೆ ಮಾಡಿಕೊಂಡರೂ ತಂದೆಯ ತೀರ್ಮಾನ ಅಚಲ. ಈ ನಡುವೆ, ಹದಿನೆಂಟು ವರ್ಷಗಳಿಂದ ಕಾದಿದ್ದ ಆತನ ಸಹವರ್ತಿ ವೃದ್ಧೆ ಸದ್ದುಗದ್ದಲವಿಲ್ಲದೆ ಜಾಗ ತೆರವು ಮಾಡಿದ್ದಾರೆ. ಆ ಅಗಲಿಕೆಯಿಂದಲೋ ಎಂಬಂತೆ ವಿಷಾದ-ಗಾಂಭೀರ್ಯಗಳ ಸ್ಥಿರ ಭಾವ ಆ ಹಿರಿಯನಲ್ಲಿ. ಏನನ್ನೋ ಮನಸ್ಸಿನಲ್ಲಿಯೇ ನಿಶ್ಚಯ ಮಾಡಿಕೊಂಡಿರುವ ಹಾಗೆ ವರ್ತನೆ. ಮನೆಗೆ ಧಾವಿಸಿಬಂದ ಮಗ ಏನೇನು ಹಾರಾಡಿದರೂ ಆತನ ಮಗಳು ತನ್ನ ನಿರ್ಧಾರದಿಂದ ಹಿಂದೆಗೆದಿಲ್ಲ. ತಾಯಿಯ ಸಂಪೂರ್ಣ ಬೆಂಬಲವೂ ಆಕೆಗೆ ಇರುವಂತಿದೆ. ಮನೆಯಲ್ಲಿದ್ದ ತಾತನ ಸ್ಕೂಟರ್‌ನಲ್ಲಿ ಈಗವಳು ಕೆಲಸಕ್ಕೆ ಹೋಗಿಬರುತ್ತಿದ್ದಾಳೆ.

ಮೂವರೂ ಒಟ್ಟಿಗೆ ಇರುವ ಸಂದರ್ಭ, ತಂದೆ-ಮಗಳ ಮುನಿಸಿನಿಂದ ಕಾವೇರುತ್ತದೆ. ಯಾವಾಗ ಇದು ಸರಿಹೋಗುತ್ತದೆಯೋ ಎಂದು ಪತ್ನಿ ಬಳಲುತ್ತಾಳೆ. ಅತ್ತ ವಾರಣಾಸಿಯಲ್ಲಿ, ಈ ಗಳಿಗೆಯನ್ನೇ ಕಾದುಕೊಂಡಿದ್ದಂತೆ ಮೃತ್ಯು ಹೊಂಚಿದೆ. ಮುಕ್ತಿಭವನದಲ್ಲಿರುವ ವೃದ್ಧ ಕಾಲನ ಕರೆಗೆ ಅಂತೂ ಉತ್ತರಿಸಿದ್ದಾನೆ. ‘‘ಒಬ್ಬನೇ ಇದ್ದುಕೊಂಡು ಸಂಭಾಳಿಸುವುದು ಅಭ್ಯಾಸವಾಗುತ್ತದೆ ಹೋಗು, ನಾನು ಬರುವುದಿಲ್ಲ’’ ಎಂಬ ಖಂಡಿತ ಉತ್ತರ ನೀಡಿ ಮಗನನ್ನು ಸಾಗಹಾಕಿದಾತನಿಗೆ ಇಷ್ಟಮರಣ ಸಿದ್ಧಿಸಿದೆ. ಮುಂದಿನ ಚಿತ್ರಿಕೆಯಲ್ಲಾಗಲೇ ಗಂಡ-ಹೆಂಡತಿ-ಮಗಳು ಮೂವರೂ ಕಾಶಿಗೆ ಬಂದು ತಲುಪಿದ್ದಾರೆ. ಕುಟುಂಬದ ಈ ಸಂತಾಪದ ಗಳಿಗೆ, ಅಪ್ಪ-ಮಗಳನ್ನು ಹತ್ತಿರ ತರುವ ಸಂದರ್ಭವಾಗಿಯೂ ಒದಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

ಒಂದು ಕೊನೆಯಲ್ಲಿ ಸಾವು ತಮ್ಮನ್ನು ಸೋಕುವುದಿಲ್ಲ ಎಂಬ ಭ್ರಮೆಯಲ್ಲಿರುವಂತೆ ಈ ಲೋಕದ ವ್ಯಾಪಾರಗಳಲ್ಲಿ ಮೂಗುಮಟ್ಟ ಮುಳುಗಿ ಸುಖಿಸುವ ಮಂದಿ, ಇನ್ನೊಂದರಲ್ಲಿ ಕಾದು ಅದನ್ನು ಬರಮಾಡಿಕೊಳ್ಳುವ ವಿಶ್ವಾಸದವರು. ಇಹದಲ್ಲಿ ಇದ್ದುಕೊಂಡೇ ಪರಕ್ಕಾಗಿ ಕೈಚಾಚುವ ಆ ಸಮಯ ಅವರು ಎದುರಿಸುವ ವಿಚಿತ್ರ ತಾಕಲಾಟ. ಬೇಕೆಂದಾಗ ಬಾರದೇ ಸತಾಯಿಸಿ, ಹೊಂಚಿ ಎರಗುವ ಮೃತ್ಯುವಿನ ರೀತಿ-ನೀತಿ. ಅದನ್ನು ಮಾತನಾಡಿ ಚರ್ಚಿಸುವುದೇ ಅನಿಷ್ಟ ಎಂದು ದೂರ ಇಡುವ ಮಂದಿ ಇರುವ ಕಡೆ ಅದು ಚುಪ್‌ಚುಪ್ ವ್ಯವಹಾರವಾದರೆ, ದಿನ ಬೆಳಗಾದರೆ ನಾಲ್ವರ ಹೆಗಲಿನ ಮೇಲೆ ‘‘ರಾಮ ನಾಮ ಸತ್ಯ ಹೈ’’ ಮೆರವಣಿಗೆಗಳು, ಸಂಜೆಗತ್ತಲಿನ ಸುಡುಚಿತೆಗಳು ಸರ್ವೇಸಾಮಾನ್ಯವಾಗಿರುವ ಕಾಶಿಯ ಘಟ್ಟಗಳು... ಹೀಗೆ ವೈರುಧ್ಯಗಳ ಪಕ್ಕಪಕ್ಕ ಕೂರಿಸುವಿಕೆಯಿಂದ ಸಿನೆಮಾ ಕಂಗೊಳಿಸಿದೆ. ಇಪ್ಪತ್ತಾರು ವರ್ಷದ ನಿರ್ದೇಶಕರ ಪ್ರಬುದ್ಧತೆ, ತಮ್ಮ ಅಭಿವ್ಯಕ್ತಿ ಮಾಧ್ಯಮದ ಮೇಲೆ ಅವರಿಗೆ ಇರುವ ಹಿಡಿತ ಅದನ್ನು ಪುಟಕ್ಕಿಟ್ಟಿದೆ.

ಒಂದು ಮಾಮೂಲಿ ಮಧ್ಯಮ ವರ್ಗದ ದೈನಿಕ, ಜೀವನಸಂದರ್ಭಗಳು ನಮ್ಮ ನಮ್ಮ ಮನೆಗಳಲ್ಲಿ ನಡೆಯುವಂತಹವನ್ನೇ ಹೋಲುತ್ತ, ಭಾವಾತಿರೇಕ-ಕ್ಲೀಷೆ ಮುಕ್ತವಾಗಿ ಆಶ್ಚರ್ಯಗೊಳಿಸುತ್ತವೆ. ಕೇವಲ ಒಂದು ಉದ್ಗಾರದಲ್ಲಿ, ಕ್ಷಣದ ಕಣ್ಣೋಟದಲ್ಲಿ, ಹ್ಞಾಂ, ಹ್ಞೂಂಗಳಲ್ಲಿ ನೂರು ಭಾವ ಬಯಲು ಮಾಡುವ ನುರಿತ ನಟ-ನಟಿಯರ ತಂಡ ಚಂದವನ್ನು ಇಮ್ಮಡಿಗೊಳಿಸಿದೆ. ಕಾಶಿಯ ಕಾಶಿತನವನ್ನು ಕೆಮರಾಗಳು ಕಮ್ಮಗೆ ದೋಚಿವೆ. ಈಗಾಗಲೇ ಕೆಲ ಕಿರು ಚಿತ್ರಗಳನ್ನು ನಿರ್ಮಿಸಿರುವ ಶುಭಶಿಷ್‌ರ ಮೊದಲ ಫೀಚರ್ ಫಿಲ್ಮ್ ‘ಮುಕ್ತಿ ಭವನ್’. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೆರೆ ಕಂಡಿದೆ. ತುಂಬಿ ತುಳುಕುವ ಉತ್ಸಾಹವೇ ಬಂಡವಾಳವಾಗಿದ್ದ ತಮ್ಮ ಪ್ರತಿಭಾನ್ವಿತ ತಂಡಕ್ಕೆ ಸವಾಲಾಗಿ ತೋರುತ್ತಿದ್ದುದು, ಹಣಕಾಸಿನ ಮುಗ್ಗಟ್ಟು ಮಾತ್ರ ಎಂಬ ಅವರ ನುಡಿ ಮನಕಲಕುತ್ತದೆ.

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News