ಹೃದಯಾಘಾತಕ್ಕೆ ಒಂದು ತಿಂಗಳು ಮೊದಲೇ ನಿಮ್ಮ ಶರೀರ ಈ ಏಳು ಸಂಕೇತಗಳನ್ನು ನೀಡುತ್ತದೆ

Update: 2017-08-19 10:55 GMT

ಹೃದಯಾಘಾತ ಮತ್ತು ಪಾರ್ಶ್ವವಾಯು ವಿಶ್ವಾದ್ಯಂತ ಸಾವುಗಳಿಗೆ ಪ್ರಮುಖ ಕಾರಣಗಳಾಗಿವೆ. ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಕೊರತೆಯುಂಟಾದರೆ ಅಥವಾ ಪರಿಧಮನಿಯಲ್ಲಿ ತಡೆಯುಂಟಾಗಿದ್ದರೆ ಹೃದಯಾಘಾತ ಸಂಭವಿಸುತ್ತದೆ. ವ್ಯಕ್ತಿಗೆ ಹೃದಯಾಘಾತ ಸಂಭವಿಸುವ ಒಂದು ತಿಂಗಳು ಮೊದಲೇ ಶರೀರವು ಏಳು ಸಂಕೇತಗಳನ್ನು ನೀಡುತ್ತದೆ. ಆದರೆ ಈ ಬಗ್ಗೆ ಗೊತ್ತಿಲ್ಲದವರೇ ಅಧಿಕ, ಹೀಗಾಗಿ ಅವುಗಳನ್ನು ನಿರ್ಲಕ್ಷಿಸಿಬಿಡುತ್ತಾರೆ.

60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ಬೊಜ್ಜು ಅಥವಾ ಮಧುಮೇಹ ಹೊಂದಿದ್ದರೆ, ಅಧಿಕ ಕೊಲೆಸ್ಟರಾಲ್ ಅಥವಾ ರಕ್ತದೊತ್ತಡದಿಂದ ಬಳಲುತ್ತಿರುವವರಾದರೆ ಈ ಸಂಕೇತ ಗಳನ್ನು ತಿಳಿದುಕೊಂಡಿರುವುದು ತುಂಬ ಮುಖ್ಯವಾಗಿದೆ.

ವಿಪರೀತ ನಿಶ್ಯಕ್ತಿ:

ಇದು ಹೃದಯರೋಗದ ಬಹು ಮುಖ್ಯ ಲಕ್ಷಣವಾಗಿದೆ. ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳು ಸಂಕುಚಿತಗೊಂಡಿದ್ದರೆ, ಸ್ನಾಯುಗಳು ದುರ್ಬಲ ವಾಗಿದ್ದರೆ ಇಂತಹ ವಿಪರೀತ ಸುಸ್ತು ಕಾಣಿಸಿಕೊಳ್ಳುತ್ತದೆ ಮತ್ತು ಇದು ಸಂಭಾವ್ಯ ಹೃದಯಾಘಾತವನ್ನು ಸೂಚಿಸುವ ಕೆಂಪು ನಿಶಾನೆಯಾಗಿದೆ.

ತಲೆಸುತ್ತುವಿಕೆ:

ರಕ್ತ ಪೂರೈಕೆಯಲ್ಲಿ ಕೊರತೆಯಾದರೆ ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ ಮತ್ತು ಇದು ಸಂಭಾವ್ಯ ಹೃದಯಾಘಾತದ ಇನ್ನೊಂದು ಸಂಕೇತವಾಗಿದೆ. ಮಿದುಳಿಗೆ ರಕ್ತ ಪೂರೈಕೆಯು ಕಡಿಮೆಯಾಗುವುದು ತಲೆ ಸುತ್ತುವಿಕೆಯನ್ನುಂಟು ಮಾಡುತ್ತದೆ.

ತಣ್ಣನೆಯ ಬೆವರು:

ತಣ್ಣನೆಯ ಬೆವರು ನಮ್ಮ ಶರೀರವು ಒತ್ತಡದಲ್ಲಿದೆ ಎನ್ನುವುದನ್ನು ಸೂಚಿಸುವ ಇನ್ನೊಂದು ಸಂಕೇತವಾಗಿದೆ. ರಕ್ತದ ಸಂಚಲನಕ್ಕೆ ಅಡಚಣೆಯುಂಟಾದರೆ ನಮ್ಮ ಶರೀರವು ಬೆವರತೊಡಗಿ ತಂಪು ಅನುಭವ ನೀಡಬಹುದು. ಇಡೀ ಶರೀರವೇ ತಣ್ಣಗಾದಂತೆ ಅನ್ನಿಸಬಹುದು.

ಎದೆನೋವು:

ಎದೆ, ತೋಳುಗಳು, ಬೆನ್ನು ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಂಡರೆ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು. ಎದೆ ನೋವು ಮತ್ತು ಎದೆ ಬಿಗಿದುಕೊಂಡಂತೆ ಅನ್ನಿಸಿದರೆ ಅವು ಹೃದಯ ಸಮಸ್ಯೆಗಳ ಪ್ರಮುಖ ಲಕ್ಷಣಗಳಾಗಿವೆ.

ಶೀತ ಅಥವಾ ಫ್ಲೂ ಶೀತ ಉಂಟಾದರೆ ಅಥವಾ ಫ್ಲೂ ಲಕ್ಷಣಗಳು ಕಾಣಿಸಿಕೊಂಡರೆ ಅದು ಸಂಭಾವ್ಯ ಹೃದಯಘಾತದ ಸಂಕೇತವಾಗಿರಬಹುದು.

ಉಸಿರಾಟದಲ್ಲಿ ತೊಂದರೆ:

ಇದು ಸಂಭಾವ್ಯ ಹೃದಯಾಘಾತದ ಇನ್ನೊಂದು ಪ್ರಮುಖ ಲಕ್ಷಣವಾಗಿದೆ. ನಮ್ಮ ಶ್ವಾಸಕೋಶಗಳಿಗೆ ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ಆಮ್ಲಜನಕ ಮತ್ತು ರಕ್ತ ಸಂಚಲನೆ ಅಗತ್ಯವಾಗಿವೆ. ಆದರೆ ಹೃದಯವು ಒತ್ತಡದಲ್ಲಿದ್ದರೆ ಶ್ವಾಸಕೋಶಗಳಿಗೆ ರಕ್ತದ ಪೂರೈಕೆಯಲ್ಲಿ ಕೊರತೆಯಾಗುತ್ತದೆ ಮತ್ತು ಇದು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡಬಹುದು, ದಮ್ಮು ಬಂದ ಹಾಗೆ ಆಗಬಹುದು.

ವಾಕರಿಕೆ, ಅಜೀರ್ಣ, ಹೊಟ್ಟೆನೋವು:

ವಾಕರಿಕೆ,ಅಜೀರ್ಣ,ಎದೆಯುರಿ ಅಥವಾ ಹೊಟ್ಟೆನೋವು ಇವು ಸಂಭಾವ್ಯ ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News