ಬಾಲಕಿಯ ಜಡೆ ಕತ್ತರಿಸಿದ ಶಂಕೆಯಲ್ಲಿ ಮಹಿಳೆಯನ್ನು ಹೊಡೆದು ಕೊಂದ ಗುಂಪು

Update: 2017-08-19 15:42 GMT

ಹೊಸದಿಲ್ಲಿ, ಆ.19: ಬಾಲಕಿಯ ಜಡೆ ಕತ್ತರಿಸುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಗುಂಪೊಂದು ಮಹಿಳೆಯನ್ನು ಹೊಡೆದು ಕೊಂದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಸಾಹಿಬ್ ಗಂಜ್ ಜಿಲ್ಲೆಯ ರಾಧಾನಗರ್ ಗ್ರಾಮಸ್ಥರು ಓರ್ವ ಮಹಿಳೆ ಹಾಗೂ ಬಾಲಕನಿದ್ದ ಭಿಕ್ಷುಕರ ಗುಂಪೊಂದರ ಮೇಲೆ ದಾಳಿ ನಡೆಸಿದ್ದಾರೆ. ಮಹಿಳೆಗೆ ಕಲ್ಲೆಸೆದಿದ್ದಾರೆ. ದಾಳಿಯಿಂದ ಮಹಿಳೆ ಮೃತಪಟ್ಟಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಾರದ ಹಿಂದಷ್ಟೇ ಸ್ಥಳೀಯ ಬಾಲಕಿಯೊಬ್ಬಳ ಜಡೆ ಕತ್ತರಿಸಿದ್ದ ಘಟನೆ ನಡೆದಿತ್ತು. “ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದೇವೆ. ಅನುಮಾನದಿಂದಾಗಿ ದಾಳಿ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆಯುತ್ತಿದ್ದಾಗ ಅಲ್ಲಿದ್ದವರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಾಳಿಕೋರರನ್ನು ತಡೆಯಲು ಅವರು ಸತತ ಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಹಿಳೆ ಮೃತಪಟ್ಟಿದ್ದಾರೆ.

ಮಲಗಿದ್ದ ಮಹಿಳೆಯರ ಕೂದಲು ಕತ್ತರಿಸಿದ್ದಾರೆ ಎಂದು ಆರೋಪಿಸಿ 60 ವರ್ಷದ ವೃದ್ಧೆಯೋರ್ವರನ್ನು ಹೊಡೆದು ಕೊಂದಿದ್ದ ಘಟನೆ ಕೆಲದಿನಗಳ ಹಿಂದಷ್ಟೇ ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News