ಸಾವಿನ ಮನೆಯಾದ ಗೋರಖ್‌ಪುರ

Update: 2017-08-20 07:26 GMT

ಭಾಗ-1

‘ಇಡೀ ಹಜಾರದ ಉದ್ದಕ್ಕೂ ಕೂಗುಗಳು ಕೇಳಿಬರುತ್ತಿದ್ದವು.’’
ಗೋರಖ್‌ಪುರದ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ನಿಂತುಹೋದಾಗ ತಮ್ಮ ಮಕ್ಕಳು ಹೇಗೆ ಸಾಯತೊಡಗಿದವೆಂದು ಮಕ್ಕಳ ಪೋಷಕರು ಜ್ಞಾಪಿಸಿಕೊಳ್ಳುತ್ತಾರೆ. ಆಗಸ್ಟ್ 10ರಂದು ಸಂಭವಿಸಿದ ಮಕ್ಕಳ ಸಾವುಗಳ ಸರಮಾಲೆಗೆ ಕಾರಣವೇನೆಂದು ವಿವರಿಸಲು ರಾಜ್ಯ ಸರಕಾರ ವಿಫಲವಾಗಿದೆ.

ಆಸ್ಪತ್ರೆಯೊಂದಕ್ಕೆ ಆಮ್ಲಜನಕದ ಪೂರೈಕೆ ನಿಂತು ಹೋದ ಬಳಿಕ 48 ಗಂಟೆಯೊಳಗೆ 30 ಮಕ್ಕಳು ಮೃತಪಟ್ಟವೆಂಬ ಸುದ್ದಿ ಆಗಸ್ಟ್ 11ರ ರಾತ್ರಿ ಹೊರಬರಲಾರಂಭಿಸಿತು. ಈ ಸುದ್ದಿ ಭಾರತದಾದ್ಯಂತ ಆಕ್ರೋಶ ಉಂಟುಮಾಡಿತು. ಆದರೆ ಬಾಬಾ ರಾಘವದಾಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಂದ ಬೆಳಕಿನ ವಾರ್ಡುಗಳಲ್ಲಿ, ಪೋಷಕರು ತಮ್ಮ ಮಕ್ಕಳ ಗತಿ ಏನಾಗುತ್ತದಪ್ಪಾ ಎಂದು ಆತಂಕದಿಂದ ಕಾಯುತ್ತಿದ್ದಾಗ, ಈ ಆಕ್ರೋಶದಿಂದ ಅಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

 ಮಧ್ಯರಾತ್ರಿ ಕಳೆದ ಬಳಿಕ, ಸುಮಾರು 1:30ಕ್ಕೆ ಶ್ರೀಕೃಷ್ಣ ಗುಪ್ತಾರ ನಾಲ್ಕು ವರ್ಷಗಳ ಮಗು ನಿಧಾನವಾಗಿ ಮೃತ್ಯುವಿನೆಡೆಗೆ ಸಾಗತೊಡಗಿತು. ಅದರ ಉಸಿರಾಟ ಕಷ್ಟವಾಗತೊಡಗಿತು. ಆಗ ದಾದಿಯರು ಅವನಿಗೆ, ಬಾಯಿಯಲ್ಲಿ ಊದಿ ಗಾಳಿ ತುಂಬಬೇಕಾದ ಒಂದು ಬ್ಯಾಗ್ ನೀಡಿದರು. ಮಗು ಉಸಿರಾಡಲು ಗಾಳಿಯನ್ನು ಪಂಪ್ ಮಾಡಲಿಕ್ಕಾಗಿ ಈ ಬ್ಯಾಗ್ ನೀಡಲಾಗಿತ್ತು. ಮಗುವಿಗೆ ಉಸಿರಾಟದ ಸಮಸ್ಯೆ ಇತ್ತು. ಮಗುವಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಾಗ ಬಾಯಿ ಮೂಲಕ ಗಾಳಿ ಹಾಕಿ ಮಗುವಿಗೆ ಆಮ್ಲಜನಕ ಸಿಗುವಂತೆ ಮಾಡಲು ಹೇಳಿದರು. ‘‘ವೆಂಟಿಲೇಟರ್ ಲಭ್ಯವಿಲ್ಲ’’ ಎಂದು ವೈದ್ಯರು ಹೇಳಿದರು.’’ ಎನ್ನುತ್ತಾರೆ ಗುಪ್ತಾ. ಆತ ನಾಲ್ಕು ಗಂಟೆಗಳ ಕಾಲ ಒಂದೇ ಸಮನೆ ಬ್ಯಾಗನ್ನು ಪಂಪ್ ಮಾಡಿದ ಆದರೂ ಆತನಿಂದ ಮಗುವನ್ನು ಉಳಿಸಲಾಗಲಿಲ್ಲ. ಆಗಸ್ಟ್ 12ರಂದು ಬೆಳಗ್ಗೆ ಸುಮಾರು 5:30ಕ್ಕೆ ಮಗು ಮೃತಪಟ್ಟಿತು.

 ಆಗಸ್ಟ್ 10ರಂದು ಸಂಜೆ 7:30ರ ಸುಮಾರಿಗೆ, ಪೈಪ್ ಮೂಲಕ ಪೂರೈಕೆ ಯಾಗುವ ದ್ರವ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.ಎಂದು ಹಿಂದಿನ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರು. ಆಮ್ಲಜನಕದ ಪೂರೈಕೆ ಸ್ಥಗಿತಗೊಂಡ ಕೂಡಲೇ, ಕಾಯ್ದಿರಿಸಲಾಗಿದ್ದ 52 ಸಿಲಿಂಡರ್‌ಗಳನ್ನು ಸೇವೆಗೆ ಒದಗಿಸಲಾಯಿತು. ಆಗಸ್ಟ್ 10ರ ರಾತ್ರಿ ಅನಿಲ ಸಿಲಿಂಡರ್‌ಗಳು ಖಾಲಿಯಾದಾಗ, ಎರಡು ಗಂಟೆಗಳನ್ನು ಹೊರತುಪಡಿಸಿ, ಆಸ್ಪತ್ರೆಯ ವಾರ್ಡ್‌ಗಳಲ್ಲಿ ಸಾಕಷ್ಟು ಆಮ್ಲಜನಕದ ಪೂರೈಕೆ ಇತ್ತು. ಆದ್ದರಿಂದ ಸಂಭವಿಸಿದ ಸಾವುಗಳು ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ್ದಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಪುನಃ ಪುನಃ ಹೇಳಿದರು.

ಆದರೆ ಆಮ್ಲಜನಕದ ಕೊರತೆಯಿಂದಾಗಿಯೇ ತಮ್ಮ ಮಕ್ಕಳು ಕೊನೆಯುಸಿರೆಳೆದವೆಂದು ಮಕ್ಕಳನ್ನು ಕಳೆದುಕೊಂಡವರಿಗೆ ಮನರಿಕೆಯಾಗಿದೆ. ಗೋರಖ್‌ಪುರ ಜಿಲ್ಲೆಯ ಬಗಾಗ್ದಾ ಹಳ್ಳಿಯ ಬ್ರಹ್ಮದೇವ ಯಾದವ್ ಆಗಸ್ಟ್ 7ರಂದು ತನ್ನ ನಾಲ್ಕು ದಿನಗಳ ಅವಳಿ ಮಕ್ಕಳನ್ನು ಆಸ್ಪತ್ರೆಗೆ ತಂದಿದ್ದರು. ಹುಟ್ಟಿ ಕೇವಲ ನಾಲ್ಕು ದಿನಗಳಾಗಿದ್ದ ಆ ಅವಳಿಯಲ್ಲಿ ಒಂದು ಮಗುವಿಗೆ ಜ್ವರ ಬಂದಿತ್ತು. ‘‘ಆಮ್ಲಜನಕದ ಮಟ್ಟ ಕಡಿಮೆಯಾಗಿರುವುದನ್ನು ಸೂಚಿಸುವ ಕೆಂಪು ದೀಪಗಳು ಉರಿಯುತ್ತಲೇ ಇದ್ದವು. ಆ ಮೇಲೆ ಆ ಯಂತ್ರ ನಿಂತು ಹೋಗುತ್ತಿತ್ತು’’ ಎನ್ನುತ್ತಾರೆ ಬ್ರಹ್ಮದೇವ್. ಆಗಸ್ಟ್ 9ರ ರಾತ್ರಿ ಎರಡು ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿತು. ಇನ್ನೊಂದು ಮಗು ಮರುದಿನ ಬೆಳಗ್ಗೆ ಸಾವನಪ್ಪಿತು.

  ಜಹೀದ್ ಖಾನ್‌ರ ಐದು ವರ್ಷದ ಮಗಳು ಖುಶಿಗೆ ತೀವ್ರ ಜ್ವರ ಬಂದಿತ್ತು ಆಗಸ್ಟ್ 10ರ ತಡರಾತ್ರಿ ಆಕೆಯನ್ನು ಆಸ್ಪತ್ರೆಯ ತೀವ್ರನಿಗಾ ಘಟಕ (ಐಸಿಯು)ಕ್ಕೆ ಸೇರಿಸಲಾಯಿತು. ಅವಳಿಗೆ ರಾತ್ರಿ 2ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೂ ಆಮ್ಲಜನಕ ನೀಡಲಾಯಿತು. ‘‘ಸುಮಾರು 6ಗಂಟೆಗೆ, ಆಮ್ಲಜನಕ ಪೂರೈಕೆ ನಿಂತುಹೋಗಿದೆ ಎಂದು ಹೇಳಿದ ನರ್ಸ್ ಗಾಳಿಯನ್ನು ಪಂಪ್‌ಮಾಡಲು ನನಗೆ ಒಂದು ಗಾಳಿ ಬ್ಯಾಗ್ ನೀಡಿದಳು. ಪಂಪ್ ಮಾಡಿ ಮಾಡಿ ನನ್ನ ಕೈಗಳು ಸೋತುಹೋದವು, ಆದರೂ ನಾನು ಪಂಪ್‌ಮಾಡುವುದನ್ನು ನಿಲ್ಲಿಸಲಿಲ್ಲ’’ ಎಂದಿದ್ದಾರೆ ಜಹೀದ್ ಖಾನ್. ಆತ ಐದು ಗಂಟೆಗಳ ಕಾಲ ಪಂಪ್ ಮಾಡಿದ್ದರು, ಪಂಪ್ ಮಾಡಲು ಅವರ ಇಬ್ಬರು ಬಂಧುಗಳು ಜಹೀದ್‌ರಿಗೆ ನೆರವಾಗಿದ್ದರು. ಆದರೂ ಬೆಳಗ್ಗೆ ಸುಮಾರು 5:30ರ ವೇಳೆಗೆ ಮಗು ತೀರಿಕೊಂಡಿತು.

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಓರ್ವ ಹಿರಿಯ ಮಕ್ಕಳ ವೈದ್ಯರಾಗಿರುವ ಡಾ.ಯೋಗೇಶ್ ಜೈನ್, ‘‘ಗಾಳಿ ತುಂಬಿಸುವ ಬ್ಯಾಗ್‌ಗಳು ಆಮ್ಲಜನಕ ಪೂರೈಕೆಗೆ ಬದಲಿ ವ್ಯವಸ್ಥೆಯಲ್ಲ’’ ಎಂದಿದ್ದಾರೆ. ‘‘ ಅಂಬು ಬ್ಯಾಗ್ ವಾತಾವರಣದಿಂದ ಗಾಳಿಯನ್ನು ಎಳೆದುಕೊಳ್ಳುತ್ತದೆ ಅದು ಸ್ವಲ್ಪ ಹೊತ್ತಿನವರೆಗೆ ವೆಂಟಿಲೇಟರ್‌ಗೆ ಬದಲಿಯಾಗಬಹುದು, ಆದರೆ ಅದು ಖಂಡಿತವಾಗಿಯೂ ಆಮ್ಲಜನಕ ಪೂರೈಕೆಗೆ ಬದಲಿ ವ್ಯವಸ್ಥೆಯಲ್ಲ’’

ಆಗಸ್ಟ್ 7 ಮತ್ತು ಆಗಸ್ಟ್ 11ರ ನಡುವೆ, ಐದು ದಿನಗಳಲ್ಲಿ 60ಕ್ಕಿಂತಲೂ ಹೆಚ್ಚು ಮಕ್ಕಳು ಮೃತಪಟ್ಟವು. 14 ಶಿಶುಗಳೂ ಸೇರಿದಂತೆ 23 ಮಕ್ಕಳು ಆಗಸ್ಟ್ 10ರಂದು ಸಾವನ್ನಪ್ಪಿದವು. ನವಜಾತ ಶಿಶುಗಳು ತೀವ್ರನಿಗಾ ಘಟಕದಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ತನ್ನ ನಾಲ್ಕು ದಿನಗಳ ಗಂಡು ಮಗುವಿನ ಬಗ್ಗೆ ಆತಂಕಗೊಂಡಿರುವ ಇಶ್ರತ್ ಅಹ್ಮದ್ ಸರಣಿ ಸಾವುಗಳನ್ನು ಜ್ಞಾಪಿಸಿಕೊಳ್ಳುತ್ತ ಹೇಳುತ್ತಾರೆ: ‘‘ಆಸ್ಪತ್ರೆಯ ಇಡೀ ಹಜಾರದಲ್ಲಿ ಕೂಗುಗಳು ಕೇಳಿಬರುತ್ತಿದ್ದವು, ಆ ರಾತ್ರಿ ಹಲವು ಮಕ್ಕಳು ಮೃತ ಪಟ್ಟವು. ನಾವೆಲ್ಲ ಹೆದರಿಹೋಗಿದ್ದೆವು’’ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳು ರಾಷ್ಟ್ರದ ಗಮನ ಸೆಳೆದವಾದರೂ, ಆಸ್ಪತ್ರೆಗೆ ದ್ರವ ಆಮ್ಲಜನಕದ ಪೂರೈಕೆ ಪುನಃ ಆರಂಭಗೊಂಡದ್ದು ಆಗಸ್ಟ್ 13ರ ಬೆಳಗ್ಗೆ. ಅಲ್ಲಿಯವರೆಗೆ ಆಸ್ಪತ್ರೆ ಏನೂ ಮಾಡಲಿಲ್ಲ.

ವಾರ್ಡ್‌ಗಳ ಮಧ್ಯೆ ಪರದಾಟ

ಗೋರಖ್‌ಪುರದಲ್ಲಿ ವಿಶಾಲವಾದ ಒಂದು ಕ್ಯಾಂಪಸ್‌ನಲ್ಲಿರುವ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸದಾ ರೋಗಿಗಳಿಂದ ಗಿಜಿಗುಟ್ಟುತ್ತಿರುತ್ತದೆ. ಒಂದು ಆಯ ಕಟ್ಟಿನ ಆರೈಕೆ ಸವಲತ್ತಾಗಿ ಈ ಆಸ್ಪತ್ರೆಯು ಗಂಭೀರ ಸ್ಥಿತಿಯ ರೋಗಿಗಳಿಗೆ ಮತ್ತು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ವಿಫಲರಾದವರಿಗೆ ಕೊನೆಯ ಆಶ್ರಯವಾಗಿದೆ. ಆಸ್ಪತ್ರೆಯಲ್ಲಿ ಮೂರು ತೀವ್ರನಿಗಾ ಘಟಕಗಳಿವೆ, ಮಕ್ಕಳ ವಿಭಾಗ, ನವಜಾತ ಶಿಶುಗಳ ಘಟಕ ಮತ್ತು ಹಿರಿಯ ರೋಗಿಗಳಿಗಾಗಿ ಇನ್ನೊಂದು ಘಟಕ. ಈ ಮೂರು ವಿಭಾಗಗಳಿಗೆ ತಡೆರಹಿತವಾದ ಆಮ್ಲಜನಕ ಪೂರೈಕೆ ಬೇಕು.

ಪ್ರತಿ ಮಳೆಗಾಲದಲ್ಲೂ ಎನ್ಸೆಫಲಿಟಿಸ್ ಪೀಡಿತ ಮಕ್ಕಳಿಂದ ಆಸ್ಪತ್ರೆ ತುಂಬಿಹೋಗುತ್ತದೆ. ತೀವ್ರಜ್ವರ ಮತ್ತು ಮೆದುಳಿನ ಉರಿಯೂತ ಈ ಕಾಯಿಲೆಯ ಲಕ್ಷಣಗಳು. ಮಕ್ಕಳ ವಿಭಾಗದಲ್ಲಿ 60 ಹಾಸಿಗೆಗಳಿವೆ. ಎರಡು ಮಹಡಿಯ ಕಟ್ಟಡದ ಮೊದಲ ಮಾಳಿಗೆಯಲ್ಲಿ, 54 ಹಾಸಿಗೆಗಳ ಒಂದು ಮಕ್ಕಳ ವಿಭಾಗದ ಐಸಿಯು ಮತ್ತು 40 ಹಾಸಿಗೆಗಳ ನವಜಾತ ಶಿಶುಗಳು ಐಸಿಯು ಸಹಿತ ಎನ್ಸೆಫಲಿಟಿಸ್ ಆರೈಕೆಗಾಗಿಯೇ ಒಂದು ಪ್ರತ್ಯೇಕ ವಿಭಾಗವಿದೆ. ಎಲ್ಲಾ ಗಂಭೀರ ಸ್ವರೂಪದ ಪ್ರಕರಣಗಳನ್ನು ಇಲ್ಲಿಗೆ ದಾಖಲಿಸಲಾಗುತ್ತದೆ.

ತೀವ್ರನಿಗಾ ಘಟಕಗಳಿಗೆ ಮಕ್ಕಳ ಪೋಷಕರಿಗೆ ಪ್ರವೇಶವಿಲ್ಲ. ಸುರಕ್ಷಿತ ವೆಂದು ಪರಿಗಣಿಸುವಷ್ಟು ಗುಣಮುಖವಾದ ಅಥವಾ ಯುನಿಟ್‌ಗಳಿಗೆ ದಾಖಲಾಗಲು ಕಾಯುತ್ತಿರುವ ಮಕ್ಕಳಿಗಾಗಿ ಐಸಿಯು ಪಕ್ಕದಲ್ಲೇ ಎರಡು ಕೋಣೆಗಳಿವೆ. ಇವುಗಳಿಗೆ 'ಸ್ಟೆಪ್ ಡೌನ್ ವಾರ್ಡ್’ ಎಂದು ಹೆಸರು.

ಕೃಪೆ: scroll.in

Writer - ಮೇನಕಾರಾವ್

contributor

Editor - ಮೇನಕಾರಾವ್

contributor

Similar News

ಜಗದಗಲ
ಜಗ ದಗಲ