ಬೆಳ್ಳಿ ಬಟ್ಟಲಲ್ಲಿ ಆಹಾರ ಆರೋಗ್ಯಕ್ಕೆ ಹಿತಕರ....ಗೊತ್ತಾ?

Update: 2017-08-20 09:15 GMT

ಹಲವಾರು ಭಾರತೀಯರು ಈಗಲೂ ಊಟಕ್ಕೆ ಬೆಳ್ಳಿಯ ಬಟ್ಟಲು ಮತ್ತು ಆಹಾರ ವನ್ನಿಡಲು ಬೆಳ್ಳಿಯ ಪಾತ್ರೆಗಳನ್ನು ಬಳಸುತ್ತಾರೆ. ಇದು ಶ್ರೀಮಂತಿಕೆಯ ಸಂಕೇತ ಎಂದು ನೀವು ಭಾವಿಸಿದ್ದೀರಾದರೆ ಬೆಳ್ಳಿಯ ಪಾತ್ರೆಗಳಲ್ಲಿ ಆಹಾರ ಸೇವನೆಯ ಲಾಭಗಳು ಖಂಡಿತ ವಾಗಿಯೂ ನಿಮಗೆ ಗೊತ್ತಿಲ್ಲ. ಹೌದು, ಇತರ ಹಲವಾರು ಲೋಹಗಳು ಮತ್ತು ಪ್ಲಾಸ್ಟಿಕ್‌ಗೆ ಹೋಲಿಸಿದರೆ ಅಡುಗೆಮನೆಯಲ್ಲಿ ಬೆಳ್ಳಿ ಪಾತ್ರೆಗಳ ಬಳಕೆ ತುಂಬ ಒಳ್ಳೆಯದು. ಅದರಿಂದ ಕೆಲವು ಅತ್ಯುತ್ತಮ ಲಾಭಗಳಿವೆ.

ನೀವು ನೋಡಿರಬಹುದು, ಹೊಸದಾಗಿ ಅಪ್ಪ-ಅಮ್ಮನಾದ ದಂಪತಿಗೆ ಬೆಳ್ಳಿ ಪಾತ್ರೆಗಳನ್ನು ಉಡುಗೊರೆಯಾಗಿ ನೀಡುವುದಿದೆ. ‘ಅನ್ನ ಪ್ರಾಶನ’ದ ಸಂದರ್ಭದಲ್ಲಿ ಮೊದಲ ಬಾರಿಗೆ ಮಗುವಿಗೆ ಅನ್ನವನ್ನು ತಿನ್ನಿಸಲು ಹೆಚ್ಚಿನವರು ಬೆಳ್ಳಿಯ ಬಟ್ಟಲುಗಳನ್ನು ಬಳಸುತ್ತಾರೆ. ನಮ್ಮ ದೈನಂದಿನ ಜೀವನದಲ್ಲಿ ಬೆಳ್ಳಿಯ ಪಾತ್ರೆಗಳ ಬಳಕೆ ಆರೋಗ್ಯಕ್ಕೆ ಹೇಗೆ ಹಿತಕರ ಎನ್ನುವುದನ್ನು ನೋಡೋಣ.

ಬೆಳ್ಳಿ ಬ್ಯಾಕ್ಟೀರಿಯಾ ಪ್ರತಿರೋಧಕವಾಗಿದೆ. ಹೀಗಾಗಿ ಬೆಳ್ಳಿ ಬಟ್ಟಲುಗಳಲ್ಲಿ ಆಹಾರ ಸೇವನೆ ಸುರಕ್ಷಿತವಾಗಿರುತ್ತದೆ. ಬೆಳ್ಳಿಯ ಪಾತ್ರೆಯಲ್ಲಿ ಕುಡಿಯುವ ನೀರನ್ನು ಕುದಿಸುವು ದರಿಂದ ಅದು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗುತ್ತದೆ. ಬ್ಯಾಕ್ಟೀರಿಯಾಗಳು ಆ್ಯಂಟಿ ಬಯಾಟಿಕ್ ಔಷಧಿಗಳನ್ನೂ ಪ್ರತಿರೋಧಿಸುವ ಶಕ್ತಿಯನ್ನು ಹೊಂದಿವೆ, ಆದರೆ ಬೆಳ್ಳಿಯನ್ನಲ್ಲ.

ಬೆಳ್ಳಿ ಮಕ್ಕಳಿಗೂ ಒಳ್ಳೆಯದು. ಬೆಳ್ಳಿ ಬ್ಯಾಕ್ಟೀರಿಯಾ ಮುಕ್ತವಾಗಿರುವುದರಿಂದ ಈಗಲೂ ಭಾರತದಲ್ಲಿ ಹೆಚ್ಚಿನ ಮನೆಗಳಲ್ಲಿ ಮಕ್ಕಳಿಗೆ ಬೆಳ್ಳಿಯ ಬಟ್ಟಲುಗಳಲ್ಲಿ ಆಹಾರ, ಹಾಲು ನೀಡಲಾಗುತ್ತದೆ.

ಬೆಳ್ಳಿ ಪಾತ್ರೆಗಳಲ್ಲಿಟ್ಟ ಆಹಾರ ತಾಜಾ ಆಗಿರುತ್ತದೆ. ಹಳೆಯ ಕಾಲದಲ್ಲಿ ವೈನ್, ನೀರು ಮತ್ತು ಇತರ ಆಹಾರ ಪದಾರ್ಥಗಳನ್ನು ಬೆಳ್ಳಿಯ ಪಾತ್ರೆಗಳಲ್ಲಿಡಲಾಗುತ್ತಿತ್ತು. ಬೆಳ್ಳಿಯು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ ಮತ್ತು ಅವುಗಳ ಬೆಳವಣಿಗೆಯನ್ನು ತಡೆಯುತ್ತದೆ. ಹೀಗೆ ಅದು ಆಹಾರವನ್ನು ಹೆಚ್ಚು ಸಮಯದವರೆಗೆ ಸಂರಕ್ಷಿಸುತ್ತದೆ.

 ಬೆಳ್ಳಿಯ ಬಟ್ಟಲಿನಲ್ಲಿ ಊಟ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಎಂದು ನಂಬಲಾಗಿದೆ. ನಾವು ಸೇವಿಸುವ ಬಿಸಿ ಆಹಾರದೊಂದಿಗೆ ಬೆಳ್ಳಿಯ ಅಂಶ ಸೇರಿಕೊಳ್ಳುವುದರಿಂದ ಅದು ಆಹಾರವನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತ ಗೊಳಿಸುತ್ತದೆ ಮತ್ತು ಶರೀರವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

ಬೆಳ್ಳಿಯು ನಮ್ಮ ಶರೀರವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಇದೇ ಕಾರಣದಿಂದ ಜನರು ಬೆಳ್ಳಿಯ ಆಭರಣಗಳನ್ನು ಧರಿಸುತ್ತಾರೆ.

ಕೆಲವು ವಸ್ತುಗಳು ವಿಷಯುಕ್ತವಾಗಿರುತ್ತವೆ. ಉದಾಹರಣೆಗೆ ಪ್ಲಾಸ್ಟಿಕ್ ಕೊಂಚ ವಿಷಕಾರಿ ಗುಣವನ್ನು ಹೊಂದಿರುತ್ತದೆ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಹಳ ಕಾಲ ಆಹಾರವನ್ನು ಸಂಗ್ರಹಿಸಿಟ್ಟರೆ ಅಥವಾ ಪ್ಲಾಸ್ಟಿಕ್ ಬಟ್ಟಲುಗಳಲ್ಲಿ ಬಿಸಿಯಾದ ಆಹಾರವನ್ನು ಬಡಿಸಿದರೆೆ ಪ್ಲಾಸ್ಟಿಕ್‌ನ ಕೆಲವು ಅಪಾಯಕಾರಿ ಸಂಯುಕ್ತಗಳು ಅದರಲ್ಲಿ ಸೇರಿಕೊಳ್ಳುತ್ತವೆ. ಆದರೆ ಬೆಳ್ಳಿಯ ವಿಷಯದಲ್ಲಿ ಇಂತಹ ಯಾವುದೇ ಸಮಸ್ಯೆಯಿಲ್ಲ. ಅದು ವಿಷಕಾರಿಯಲ್ಲ, ಅದು ಉತ್ಕರ್ಷಣ ಕ್ರಿಯೆಗೆ ಒಳಗಾಗುವುದಿಲ್ಲ. ಕೆಲವು ಲೋಹಗಳು ಉತ್ಕರ್ಷಣಗೊಳ್ಳುತ್ತವೆ ಮತ್ತು ನಮ್ಮ ಶರೀರಕ್ಕೆ ಹಾನಿಕಾರಕವಾಗುತ್ತವೆ.

ಬೆಳ್ಳಿ ಎಂದಿಗೂ ಹಾಳಾಗುವದಿಲ್ಲ. ಬೆಳ್ಳಿಯ ಬಟ್ಟಲುಗಳನ್ನು ನಮ್ಮ ಜೀವಮಾನವಿಡೀ ಬಳಸಬಹುದು. ಹೀಗಾಗಿ ಅದು ಒಂದು ಬಾರಿಯ ಹೂಡಿಕೆಯಾಗಿದೆ. ಪ್ಲಾಸ್ಟಿಕ್ ಅಥವಾ ಇತರ ವಸ್ತುಗಳ ಬಟ್ಟಲುಗಳನ್ನು ಬಳಸುತ್ತಿದ್ದರೆ ಪ್ರತಿ ವರ್ಷ ಹೊಸದನ್ನು ಖರೀದಿಸುತ್ತಲೇ ಇರಬೇಕಾಗುತ್ತದೆ. ಆದರೆ ಬೆಳ್ಳಿಯ ಬಟ್ಟಲನ್ನು ಪದೇ ಪದೇ ಖರೀದಿಸಬೇಕಾಗಿಲ್ಲ. ಹೀಗಾಗಿ ಆರಂಭದಲ್ಲಿ ಬೆಳ್ಳಿ ಪಾತ್ರೆಗಳು ದುಬಾರಿ ಎಂದೆನಿಸಿದರೂ ಸುದೀರ್ಘಾವಧಿಯಲ್ಲಿ ಅವು ಮಿತವ್ಯಯಕಾರಿಯಾಗಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News