ಭಾರತದಂತಹ ಮುಕ್ತ ದೇಶ ನಮಗೆ ಆಶ್ರಯ ನೀಡಬೇಕು: ರೊಹಿಂಗ್ಯಾ ನಿರಾಶ್ರಿತೆ ಫಾತಿಮಾ

Update: 2017-08-20 12:10 GMT

ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ರಾಯಭಾರಿ ಕಚೇರಿ(ಯುಎನ್‌ಎಚ್‌ಸಿಆರ್) ಯಲ್ಲಿ ನೋಂದಣಿಯನ್ನು ಹೊಂದಿರುವ ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಂ ನಿರಾಶ್ರಿತರು ಸೇರಿದಂತೆ ಎಲ್ಲ ‘ಅಕ್ರಮ ವಲಸಿಗರನ್ನು’ ಗುರುತಿಸುವಂತೆ ಮತ್ತು ಅವರನ್ನು ಗಡೀಪಾರು ಮಾಡುವಂತೆ ರಾಜ್ಯಗಳಿಗೆ ನಿರ್ದೇಶ ನೀಡಲಾಗಿದೆ ಎಂದು ಕೇಂದ್ರ ಸರಕಾರವು ಕಳೆದ ವಾರ ಸಂಸತ್ತಿನಲ್ಲಿ ತಿಳಿಸಿದೆ. ಸುಮಾರು 40,000 ರೊಹಿಂಗ್ಯಾಗಳು ಭಾರತದಲ್ಲಿ ವಾಸವಾಗಿದ್ದಾರೆ. ಸುದ್ದಿಗಾರರ ತಂಡವೊಂದು ದಿಲ್ಲಿಯಲ್ಲಿರುವ ರೊಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದಾಗ ಮಾತಿಗೆ ಸಿಕ್ಕವರು 25ರ ಹರೆಯದ ಫಾತಿಮಾ. ರೊಹಿಂಗ್ಯಾ ನಿರಾಶ್ರಿತರ ಪೈಕಿ ಇವರು ಒಬ್ಬರಾಗಿದ್ದು,ದಿಲ್ಲಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಪುಟ್ಟ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ (indianexpress.com) ಫಾತಿಮಾರ ಸಂದರ್ಶನ ನಡೆಸಿದ್ದು, ತನ್ನ ಭಾವನೆಗಳನ್ನು ಅವರು ಬಿಚ್ಚಿಟ್ಟಿದ್ದಾರೆ. ಆಕೆಯ ಮಾತುಗಳು ಜೀವಭಯದಿಂದ ಸ್ವದೇಶವನ್ನು ತೊರೆದು ಬಂದಿರುವ, ಈ ಶಿಬಿರದಲ್ಲಿ ಬದುಕು ದೂಡುತ್ತಿರುವ ರೊಹಿಂಗ್ಯಾ ನಿರಾಶ್ರಿತರ ಭಾವನೆ ಗಳನ್ನು ಪ್ರತಿನಿಧಿಸುತ್ತಿವೆ.

  • ನೀವು ಭಾರತಕ್ಕೆ ಬಂದಿದ್ದು ಯಾವಾಗ?

ಐದು ವರ್ಷಗಳ ಹಿಂದೆ ನಾನು ಮತ್ತು ನನ್ನ ಗಂಡ ದಿಲ್ಲಿಗೆ ಬಂದಿದ್ದೆವು. ನನ್ನ ಇಬ್ಬರೂ ಮಕ್ಕಳು ಹುಟ್ಟಿದ್ದು ಇಲ್ಲಿಯೇ. ಈವರೆಗೆ ಬದುಕು ನನ್ನ ಮತ್ತು ನನ್ನ ಕುಟುಂಬದ ಪಾಲಿಗೆ ಶಾಂತಿಯುತವಾಗಿದೆ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ ಎಂದು ಆಶಿಸಿದ್ದೇನೆ. ಆರಂಭದಲ್ಲಿ ನಮಗೆ ಯಾವುದೇ ಕೆಲಸವಿರಲಿಲ್ಲ ಮತ್ತು ಇಲ್ಲಿಯ ಭಾಷೆಯೂ ಬರುತ್ತಿರಲಿಲ್ಲ. ಈಗ ನಾನು ಹಿಂದಿ ಮಾತನಾಡಬಲ್ಲೆ.

  • ನಿಮ್ಮ ಬಳಿ ಯುಎನ್‌ಎಚ್‌ಸಿಆರ್ ಗುರುತಿನ ಚೀಟಿ ಇದೆಯೇ?

ಹೌದು. ಗುರುತಿನ ಚೀಟಿ ಇಲ್ಲದಿದ್ದರೆ ನಾವು ಇಲ್ಲಿ ಏನೂ ಅಲ್ಲ. ಅದೊಂದೇ ನಮ್ಮ ಬಳಿಯಿರುವ ದಾಖಲೆಯಾಗಿದೆ. ಅದೊಂದೇ ನಮ್ಮ ಗುರುತಿನ ಪುರಾವೆಯಾಗಿದೆ. ನಾನದನ್ನು ಸದಾ ನನ್ನ ಬಳಿಯೇ ಇಟ್ಟುಕೊಂಡಿರುತ್ತೇನೆ. ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅದನ್ನು ಕಳೆದುಕೊಂಡರೆ ಮತ್ತೆ ಹೊಸದಾಗಿ ಮಾಡಿಸಲು ತುಂಬ ಕಷ್ಟವಾಗುತ್ತದೆ.

  • ಭಾರತ ಸರಕಾರವು ಎಲ್ಲ ರೊಹಿಂಗ್ಯನ್ನರನ್ನು ಗಡೀಪಾರು ಮಾಡಲು ಮುಂದಾಗಿರುವ ಸುದ್ದಿ ಗೊತ್ತಿದೆಯೇ?

ಹೌದು, ಒಂದೆರಡು ದಿನಗಳ ಹಿಂದೆ ಸ್ಥಳೀಯ ವ್ಯಕ್ತಿಯೋರ್ವರು ಈ ಮಾಹಿತಿ ನೀಡಿದ್ದರು. ಆದರೆ ನಮ್ಮನ್ನು ಗಡೀಪಾರು ಮಾಡಲಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ. ನಾವು ಕಳೆದ ಐದು ವರ್ಷಗಳಿಂದಲೂ ಇಲ್ಲಿ ಇದ್ದೇವೆ ಮತ್ತು ಅವರು(ಸರಕಾರ) ನಮ್ಮನ್ನು ವಾಪಸ್ ಕಳುಹಿಸಿಲ್ಲ. ಈಗ ಅವರು ಹಾಗೆ ಮಾಡುತ್ತಾರೆಂದು ನನಗನ್ನಿಸುವುದಿಲ್ಲ. ಕನಿಷ್ಠ ನಾನು ಹಾಗೆ ಆಶಿಸಿದ್ದೇನೆ. ನಮ್ಮ ಭವಿಷ್ಯದಲ್ಲಿ ಏನಿದೆ ಎನ್ನುವುದು ನಮಗ್ಯಾರಿಗೂ ಗೊತ್ತಿಲ್ಲ. ಭಾರತದಂತಹ ಸ್ವತಂತ್ರ ದೇಶವು ನಮಗೆ ಆಶ್ರಯ ನೀಡಬೇಕು.

  • ಗಡೀಪಾರು ಮಾಡಿದರೆ ಎಲ್ಲಿಗೆ ಹೋಗುತ್ತೀರಿ?

ಎಲ್ಲಿಗೆ ಬೇಕಾದರೂ ಹೋಗುತ್ತೇನೆ, ಆದರೆ ಮ್ಯಾನ್ಮಾರ್‌ಗೆ ಮಾತ್ರ ಹೋಗುವುದಿಲ್ಲ. ಈಗಲೂ ಅಲ್ಲಿ ನಮ್ಮಂಥವರಿಗೆ ಬದುಕಲು ಬಿಡುತ್ತಿಲ್ಲ. ಅಲ್ಲಿ ಹೆಚ್ಚುಕಡಿಮೆ ಪ್ರತಿ ದಿನವೂ ನಮ್ಮ ಹೆಂಗಸರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಪೊಲೀಸರೂ ನಮ್ಮ ನೆರವಿಗೆ ಬರುತ್ತಿಲ್ಲ. ಎಲ್ಲಿ ಕೆಲಸವಿದೆಯೋ ಅಲ್ಲಿಗೆ....ಅಮೆರಿಕ,ಆಸ್ಟ್ರೇಲಿಯಾ ಹೀಗೆ ಎಲ್ಲಿಗೂ ಹೋಗಲು ನಾನು ಸಿದ್ಧಳಿದ್ದೇನೆ. ಯಾವುದಾದರೂ ದೇಶ ನಮಗೆ ಆಶ್ರಯ ನೀಡಬಹುದು ಎಂಬ ಆಸೆಯಿದೆ.

  • ತಮ್ಮನ್ನು ಗಡೀಪಾರು ಮಾಡಬಹುದೆಂಬ ಭೀತಿ ಇಲ್ಲಿಯ ರೊಹಿಂಗ್ಯಾಗಳನ್ನು ಕಾಡುತ್ತಿದೆಯೇ?

ಇಲ್ಲ,ಎಲ್ಲರಿಗೂ ಇಲ್ಲ. ಆದರೆ ಕೆಲವರು ಆತಂಕಗೊಂಡಿದ್ದಾರೆ. ನಾವು ಸ್ವದೇಶಕ್ಕೆ ಮರಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಿದ್ದರೆ, ಭಾರತ ಸರಕಾರವು ನಮ್ಮನ್ನು ವಾಪಸ್ ಕಳುಹಿಸುವುದಿಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ನಮ್ಮನ್ನು ಗಡೀಪಾರು ಮಾಡುವಂತಿಲ್ಲ ಎಂದು ಯುಎನ್‌ಎಚ್‌ಸಿಆರ್ ಹೇಳಿದೆಯೆಂದು ಯಾರೋ ನನಗೆ ತಿಳಿಸಿದ್ದಾರೆ. ಏನಾಗುತ್ತದೋ ನೊಡೋಣ.....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News