ರೈಲು ದುರಂತ: ಯಾರು ಹೊಣೆ?

Update: 2017-08-21 04:28 GMT

ಉತ್ತರ ಪ್ರದೇಶ ಇತ್ತೀಚಿನ ದಿನಗಳಲ್ಲಿ ಕೆಡುಕಿನ ಸುದ್ದಿಗಳಿಗಾಗಿಯೇ ದೇಶದಲ್ಲಿ ಗುರುತಿಸಿಕೊಳ್ಳುತ್ತಿದೆ. ಕೋಮುಗಲಭೆಗಳಿಗಾಗಿ, ನಕಲಿ ಗೋರಕ್ಷಕರಿಗಾಗಿ, ರೋಮಿಯೊ ಸ್ಕ್ವಾಡ್ ಹಿಂಸಾಚಾರಕ್ಕಾಗಿ ಗುರುತಿಸಿಕೊಳ್ಳುತ್ತಿದ್ದ ಉತ್ತರ ಪ್ರದೇಶ, ಇತ್ತೀಚೆಗೆ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ 100ಕ್ಕೂ ಅಧಿಕ ಮಕ್ಕಳ ಸಾವಿಗಾಗಿ ಟೀಕೆಗೊಳಗಾಯಿತು. ಆ ಸಾವು ಚರ್ಚೆಯಲ್ಲಿರುವ ಹೊತ್ತಿಗೇ, ಇದೀಗ ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ರೈಲು ಹಳಿ ತಪ್ಪಿ 23 ಮಂದಿ ಬಲಿಯಾಗಿದ್ದಾರೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ದೇಶ ಶ್ರೀಮಂತರು ಪಯಣಿಸುವ ಬುಲೆಟ್‌ಟ್ರೈನ್‌ನ ಕುರಿತಂತೆ ಮಾತನಾಡುತ್ತಿರುವ ಹೊತ್ತಿನಲ್ಲಿ, ಜನಸಾಮಾನ್ಯರು ಪ್ರಯಾಣಿಸುವ ರೈಲುಗಾಡಿಗಳು ಇನ್ನೂ ಚಲಿಸುವ ಶವಪೆಟ್ಟಿಗೆ ಎನ್ನುವ ಕಳಂಕದಿಂದ ಹೊರಬರದೇ ಇರುವುದು, ಸರಕಾರದ ಎಲ್ಲ ಆಶ್ವಾಸನೆಗಳನ್ನು, ಭರವಸೆಗಳನ್ನು ಅಣಕಿಸುವಂತಿದೆ. ಸಾಧಾರಣವಾಗಿ ರಸ್ತೆ ಅಪಘಾತ, ರೈಲು ದುರಂತಗಳನ್ನು ಅಪಘಾತಗಳೆಂದು ಕರೆದು ಪ್ರಕರಣವನ್ನು ಮುಗಿಸಲಾಗುವುದರಿಂದ, ಸರಕಾರಗಳು ಸುಲಭದಲ್ಲಿ ಈ ದುರ್ಘಟನೆಗಳ ಕುರಿತಂತೆ ಹೆಗಲು ಜಾರಿಸಿಕೊಳ್ಳುತ್ತವೆ. ಆದರೆ ರಸ್ತೆ ಅಪಘಾತಗಳಿಗೂ, ರೈಲು ದುರಂತಗಳಿಗೂ ಪರೋಕ್ಷವಾಗಿ ಸರಕಾರದ ಆಡಳಿತವೇ ಕಾರಣವಾಗಿರುತ್ತದೆೆ ಎನ್ನುವ ಅಂಶವನ್ನು ನಾವು ಒಪ್ಪಿಕೊಳ್ಳಲೇ ಬೇಕು. ಆದುದರಿಂದಲೇ ಈ ದೇಶದಲ್ಲಿ ನಡೆದ ಎಲ್ಲ ರೈಲು ದುರಂತಗಳೂ ಅವಘಡಗಳಲ್ಲ, ಅಪರಾಧಗಳು ಎಂದು ನಾವು ಭಾವಿಸಬೇಕು.

ಹಾಗೆ ಭಾವಿಸಿ ಸರಕಾರ ಕ್ರಮ ತೆಗೆದುಕೊಂಡರೆ ಮಾತ್ರ, ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಸಂಭವಿಸದಂತೆ ತಡೆಯುವುದಕ್ಕೆ ಸಾಧ್ಯ. ರಸ್ತೆ ಅಪಘಾತಗಳಿಗೂ ರೈಲು ಅಪಘಾತಗಳಿಗೂ ವ್ಯತ್ಯಾಸವಿದೆ. ಎರಡು ವಾಹನಗಳು ಆಕಸ್ಮಿಕವಾಗಿ ಢಿಕ್ಕಿ ಹೊಡೆಯುವುದರಲ್ಲಿ ಆ ವಾಹನಗಳ ಚಾಲಕರೇ ದುರಂತಕ್ಕೆ ಬಹುತೇಕ ಕಾರಣರಾಗಿರುತ್ತಾರೆ. ಆದರೆ ರೈಲು ಅಪಘಾತಗಳಲ್ಲಿ ಇಡೀ ಇಲಾಖೆಯೇ ಪಾಲ್ಗೊಂಡಿರುತ್ತವೆ. ತನಿಖೆ ವಿಸ್ತಾರಗೊಂಡರೆ, ಸರಕಾರ ಹೇಗೆ ಈ ಕ್ಷೇತ್ರದ ಕುರಿತಂತೆ ತನ್ನ ನಿರ್ಲಕ್ಷವನ್ನು ತಾಳಿದೆ ಮತ್ತು ಹೇಗೆ ರೈಲು ಹಳಿಗಳನ್ನು ಭ್ರಷ್ಟಾಚಾರಗಳು ಸುತ್ತಿಕೊಂಡಿವೆ ಎನ್ನುವುದು ಬಹಿರಂಗವಾಗಬಹುದು. ಕಳೆದ ಐದು ವರ್ಷಗಳಲ್ಲಿ 586 ರೈಲು ಅವಘಡಗಳು ಸಂಭವಿಸಿವೆ ಮತ್ತು ಇದರಲ್ಲಿ ಶೇ. 53ರಷ್ಟು ದುರಂತಗಳು ಸಂಭವಿಸಿರುವುದು ರೈಲು ಹಳಿ ತಪ್ಪಿರುವುದರಿಂದ.

ವಿಷಾದನೀಯ ಸಂಗತಿಯೆಂದರೆ, ಈ ದೇಶದ ಪ್ರಧಾನಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಒಂದು ಭೀಕರ ರೈಲು ದುರಂತ ಉತ್ತರ ಪ್ರದೇಶದಲ್ಲಿ ಸಂಭವಿಸಿತ್ತು. ಇತ್ತೀಚೆಗೆ ನಡೆದ ಭೀಕರ ರೈಲು ದುರಂತವಾಗಿ ನಾವು ಇಂದೋರ್-ಪಾಟ್ನ ಪ್ರಕರಣವನ್ನು ಉಲ್ಲೇಖಿಸಬಹುದು. ಈ ದುರಂತದಲ್ಲಿ 150ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ವಿಶ್ವದ ಅತಿ ಭೀಕರ ಎರಡನೆ ರೈಲು ದುರಂತ ಇದಾಗಿದೆ. ಈ ರೈಲು ದುರಂತ ಪ್ರಕರಣ ಕುತೂಹಲಕಾರಿಯಾಗಿದೆ. 1981ರ ಜೂನ್‌ನಲ್ಲಿ ಬಿಹಾರದಲ್ಲಿ ಸಂಭವಿಸಿದ ರೈಲು ದುರಂತವನ್ನು ನಾವು ಮೊತ್ತ ಮೊದಲ ದುರಂತವೆಂದು ಭಾವಿಸುತ್ತೇವೆ.ಈ ದುರಂತದಲ್ಲಿ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ.

ರೈಲು ಅತ್ಯಂತ ವೇಗದಲ್ಲಿ ಭಾಗಮತಿ ಸೇತುವೆಯನ್ನು ಹಾದು ಹೋಗುತ್ತಿತ್ತು. ಇಂತಹ ಸಂದರ್ಭದಲ್ಲಿ ರೈಲಿಗೆ ಒಂದು ಗೋವು ಅಡ್ಡ ಬಂದಿತು. ಇಂಜಿನಿಯರ್ ಗೋಹತ್ಯೆಯನ್ನು ತಡೆಯುವ ಒಂದೇ ಒಂದು ಉದ್ದೇಶದಿಂದ, ತನ್ನ ಸರ್ವ ಪ್ರಯತ್ನದಲ್ಲಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ. ಇಂಜಿನಿಯರ್‌ನ ಈ ಮೂರ್ಖ ಪ್ರಯತ್ನದಲ್ಲಿ, ರೈಲು ಬೋಗಿಗಳು ಹಳಿ ತಪ್ಪಿ ಸೇತುವೆಯಿಂದ ಕೆಳಗುರುಳಿದವು. ಅಧಿಕೃತವಾಗಿ 600 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಆದರೆ ಮೃತರಲ್ಲಿ ಹೆಚ್ಚಿನವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತರ ಸಂಖ್ಯೆ ಸಾವಿರವನ್ನು ದಾಟಿದೆ ಎಂದು ಅನಧಿಕೃತ ದಾಖಲೆಗಳು ಹೇಳುತ್ತವೆ.

ಒಂದು ಗೋವನ್ನು ರಕ್ಷಿಸುವ ಭರದಲ್ಲಿ ಸಾವಿರಾರು ಜನರನ್ನು ಬಲಿಕೊಟ್ಟ ಇಂಜಿನಿಯರ್‌ನ್ನು ಹೋಲುತ್ತಾರೆ ಸದ್ಯಕ್ಕೆ ನಮ್ಮನ್ನಾಳುವ ಸರಕಾರ. ಗೋವಿನಂತಹ ಭಾವನಾತ್ಮಕವಾದ ವಿಷಯಗಳಿಗಾಗಿ ಚಲಿಸುತ್ತಿರುವ ಆರ್ಥಿಕತೆಯ ರೈಲು ಗಾಡಿಯ ವೇಗವನ್ನು ತಡೆಯುವುದಕ್ಕೆ ಯತ್ನಿಸುತ್ತಿದ್ದಾರೆ. ಪರಿಣಾಮವಾಗಿ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಹಳಿ ತಪ್ಪುತ್ತಿದೆ. ಆದುದರಿಂದಲೇ, ಮುಝಫ್ಫರ್ ನಗರದ ರೈಲು ದುರಂತವಾಗಲಿ, ಗೋರಖ್‌ಪುರದ ಆಸ್ಪತ್ರೆ ದುರಂತವಾಗಲಿ ಬೇರೆ ಬೇರೆಯಲ್ಲ. ಸರಕಾರಗಳು ಪರೋಕ್ಷವಾಗಿ ಈ ದುರಂತಗಳಿಗೆ ಹೊಣೆಯಾಗಿವೆ.

ತಳಸ್ತರದಲ್ಲಿ ರೈಲ್ವೆ ಇಲಾಖೆಯ ಗಾಢ ನಿರ್ಲಕ್ಷ ರೈಲು ದುರಂತಗಳಿಗೆ ಕಾರಣವಾದರೆ, ಆರೋಗ್ಯ ಸಹಿತ ಸಾಮಾಜಿಕ ಕ್ಷೇತ್ರಗಳಿಗೆ ಸರಕಾರ ತೋರಿದ ನಿರ್ಲಕ್ಷ ಗೋರಖ್‌ಪುರದಂತಹ ಹತ್ಯಾಕಾಂಡಕ್ಕೆ ಕಾರಣವಾಗುತ್ತಿದೆ. ಈ ದೇಶ ಆರೋಗ್ಯದಂತಹ ಕ್ಷೇತ್ರವನ್ನು ಎಷ್ಟು ಕೇವಲವಾಗಿ ಕಾಣುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಆರೋಗ್ಯ ಪಾಲನೆಯ ಮೇಲಿನ ವೆಚ್ಚವನ್ನು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ.2.5ರಷ್ಟು ಹೆಚ್ಚಿಸಬೇಕೆಂಬ ಬಗ್ಗೆ ಬಲವಾದ ಬೇಡಿಕೆಗಳು ಕೇಳಿಬರುತ್ತಿದ್ದರೂ, ಅದು ಈಗಲೂ ಶೇ.1.3 ಆಸುಪಾಸಿನಲ್ಲಿಯೇ ಇದೆ. ಭಾರತಕ್ಕಿಂತ ಐದು ಪಟ್ಟು ಅಧಿಕ ಜಿಡಿಪಿ ಹೊಂದಿರುವ ಚೀನಾದಂತಹ ದೇಶವು ಸಾರ್ವಜನಿಕ ಆರೋಗ್ಯದ ಮೇಲೆ ತನ್ನ ರಾಷ್ಟ್ರೀಯ ಆದಾಯದ ಶೇ.3ಕ್ಕಿಂತಲೂ ಅಧಿಕ ಮೊತ್ತವನ್ನು ವ್ಯಯಿಸುತ್ತಿದೆ.

ಭಾರತದಲ್ಲಿ ಆರೋಗ್ಯಪಾಲನೆಯ ಮೇಲೆ ಸರಕಾರ ಮಾಡುತ್ತಿರುವ ವೆಚ್ಚವು ರಾಜ್ಯಗಳು ಹಾಗೂ ಕೇಂದ್ರದ ನಡುವೆ 2:1ರ ನಡುವೆ ವಿಭಜಿತವಾಗಿವೆ. ನೂತನ ಆದಾಯವನ್ನು ಹೆಚ್ಚಿಸುವಲ್ಲಿ ರಾಜ್ಯ ಸರಕಾರದ ಸಾಮರ್ಥ್ಯವು ತೀರಾ ಸೀಮಿತವಾಗಿರುವುದರಿಂದ, ಸಾರ್ವಜನಿಕ ಆರೋಗ್ಯದ ವೆಚ್ಚದಲ್ಲಿ ಗಣನೀಯ ಏರಿಕೆ ಮಾಡುವ ಹೊಣೆಗಾರಿಕೆಯು ಕೇಂದ್ರ ಸರಕಾರದ ಮೇಲಿದೆ. ಆದರೆ ಕೇಂದ್ರಕ್ಕೆ ಈ ಬಗ್ಗೆ ಹೆಚ್ಚು ಆಸಕ್ತಿ ಇದ್ದಂತಿಲ್ಲ. ಪರಿಣಾಮವಾಗಿ, ಸರಕಾರಿ ಆಸ್ಪತ್ರೆಗಳ ಮನವಿಗಳೆಲ್ಲ ಕಸದ ಬುಟ್ಟಿ ಸೇರುತ್ತಿವೆ.

ಇಂದಿಗೂ ಭಾರತದ ಬಹುತೇಕ ರೈಲು ಹಳಿಗಳು ಬ್ರಿಟಿಷರ ಕಾಲದವುಗಳು. ಬುಲೆಟ್‌ಟ್ರೈನ್ ಕುರಿತಂತೆ ಮಾತನಾಡಿ ಜನರನ್ನು ವಿಸ್ಮತಿಗೆ ತಳ್ಳುವ ಸರಕಾರಕ್ಕೆ ಈ ಪ್ರಾಥಮಿಕ ಆದ್ಯತೆಗಳ ಬಗ್ಗೆ ಗಮನವಿಲ್ಲ. ರೈಲ್ವೆ ಇಲಾಖೆಯನ್ನು ತಳಮಟ್ಟದಿಂದ ಸುಧಾರಿಸುವ ಅದರ ಯೋಜನೆಗಳು ಇನ್ನೂ ಕಾಯಕಲ್ಪ ಪಡೆದಿಲ್ಲ. ರೈಲ್ವೆ ಇಲಾಖೆಯನ್ನು ಹಂತಹಂತವಾಗಿ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಜೊತೆ ಜೊತೆಗೇ ರೈಲ್ವೆ ವಲಯವನ್ನು ಇನ್ನಷ್ಟು ದುಬಾರಿಗೊಳಿಸಿ ಶ್ರೀಸಾಮಾನ್ಯರ ಜೊತೆಗಿರುವ ನಂಟನ್ನು ಕಡಿದುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ರೈಲ್ವೆ ಇಲಾಖೆಯ ಪ್ರಾಥಮಿಕ, ಮೂಲಭೂತ ಅಗತ್ಯಗಳನ್ನು ಸರಿಪಡಿಸದೇ ಇದ್ದರೆ, ಯಾವುದೇ ತನಿಖೆ, ವಿಚಾರಣೆಗಳು ಇಂತಹ ದುರಂತಗಳನ್ನು ತಪ್ಪಿಸಲಾರವು. ಅಂತಿಮವಾಗಿ ಪಾಕಿಸ್ತಾನದ ಉಗ್ರರಿಗೆ ಘಟನೆಯನ್ನು ತಳಕು ಹಾಕಿ ಸರಕಾರ ಮುಖ ಉಳಿಸಿಕೊಳ್ಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News