ಭಾರತದಲ್ಲಿ ತನ್ನ 169 ರೆಸ್ಟೋರೆಂಟ್ ಗಳನ್ನು ಮುಚ್ಚಲಿರುವ ಮೆಕ್ ಡೊನಾಲ್ಡ್ಸ್

Update: 2017-08-22 06:08 GMT

ಹೊಸದಿಲ್ಲಿ, ಆ. 22: ಖ್ಯಾತ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ಭಾರತದಲ್ಲಿ ತನ್ನ 169 ಮಳಿಗೆಗಳನ್ನು ಮುಚ್ಚಲಿದ್ದು ಇದರಿಂದ 10,000 ಕ್ಕೂ ಅಧಿಕ ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಸುಮಾರು 119 ದೇಶಗಳಲ್ಲಿ ತನ್ನ ರೆಸ್ಟೋರೆಂಟ್ ಗಳನ್ನು ಹೊಂದಿರುವ ಈ ಅಮೆರಿಕನ್ ಕಂಪೆನಿ ತಾನು ಕನ್ನಾಟ್ ಪ್ಲಾಝಾ ರೆಸ್ಟಾರೆಂಟ್ ಜತೆ ತನ್ನ ಒಪ್ಪಂದವನ್ನು ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದೆಯಲ್ಲಿದೆ ಕನ್ನಾಟ್ ಪ್ಲಾಝಾ ರೆಸ್ಟೋರೆಂಟ್ (ಸಿಪಿಆರ್‌ಎಲ್) ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣ ನೀಡಿದೆ.

ವಿಕ್ರಮ್ ಬಕ್ಷಿ ಹಾಗೂ ಮೆಕ್ ಡೊನಾಲ್ಡ್ಸ್ ಇಂಡಿಯಾ ಅವರ ನಡುವಣ ಸಹ ಪಾಲುದಾರಿಕೆಯ ಸಂಸ್ಥೆ ಸಿಪಿಆರ್‌ಎಲ್ ಆಗಿದೆಯಲ್ಲದೆ ಒಪ್ಪಂದ 23 ವರ್ಷಗಳಿಂದ ಊರ್ಜಿತದಲ್ಲಿದೆ. ಇದೀಗ ಒಪ್ಪಂದ ಮುರಿದು ಬಿದ್ದಿರುವುದರಿಂದ ಮೆಕ್ ಡೊನಾಲ್ಡ್ಸ್ ಸಂಸ್ಥೆಯ ರೆಸ್ಟೋರೆಂಟ್ ಗಳನ್ನು ಉತ್ತರ, ಪೂರ್ವ ಭಾರತ ಹಾಗೂ ದಿಲ್ಲಿಯಲ್ಲಿ ನಡೆಸುತ್ತಿದ್ದ ಸಿಪಿಆರ್‌ಎಲ್, ತನಗೆ ನೋಟಿಸ್ ದೊರೆತ ಹದಿನೈದು ದಿನಗಳ ನಂತರ ಸಂಸ್ಥೆಯ ಲಾಂಛನ, ಟ್ರೇಡ್ ಮಾರ್ಕ್ ಮತ್ತು ರೆಸಿಪಿಗಳನ್ನು ಉಪಯೋಗಿಸುವ ಹಾಗಿಲ್ಲ.

ಪ್ರತಿಯೊಂದು ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ನಲ್ಲಿ ಕನಿಷ್ಠ 40ರಿಂದ 60 ಸಿಬ್ಬಂದಿಗಳಿದ್ದು, ಭಾರತದಾದ್ಯಂತ ಅದು ಸಿಪಿಆರ್‌ಎಲ್ ಮೂಲಕ 430 ರೆಸ್ಟೋರೆಂಟ್ ಗಳನ್ನು ಹೊಂದಿದೆ. 2013ರಲ್ಲಿ ವಿಕ್ರಮ್ ಬಕ್ಷಿ ಅವರನ್ನು ಸಿಪಿಆರ್‌ಎಲ್ ನ ಆಡಳಿತ ನಿರ್ದೇಶಕ ಹುದ್ದೆಯಿಂದ ಕಿತ್ತೊಗೆದಂದಿನಿಂದ ಮೆಕ್ ಡೊನಾಲ್ಡ್ಸ್ ಸಂಸ್ಥೆ ವಿಕ್ರಮ್ ಬಕ್ಷಿ ಜತೆ ಕಾನೂನು ಹೋರಾಟದಲ್ಲಿದೆ. ಜುಲೈ ತಿಂಗಳಲ್ಲಿ ಬಕ್ಷಿ ಅವರನ್ನು ಕಂಪೆನಿಯ ಎಂಡಿ ಹುದ್ದೆಯಲ್ಲಿ ರಾಷ್ಟ್ರೀಯ ಕಾನೂನು ನ್ಯಾಯಾಧೀಕರಣ ಮರು ನೇಮಿಸಿತ್ತು. ಇದು ಮೆಕ್ ಡೊನಾಲ್ಡ್ಸ್ ಸಂಸ್ಥೆಯ ಈಗಿನ ನಿರ್ಧಾರಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News