ಕಾಲಕ್ರಮೇಣ ನಿಮ್ಮ ಬೆನ್ನುಮೂಳೆಗೆ ಹಾನಿಯನ್ನುಂಟು ಮಾಡುವ ನಿಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಗೊತ್ತೇ?

Update: 2017-08-22 11:28 GMT

ನಮ್ಮ ಶರೀರದಲ್ಲಿ ಬೆನ್ನುಮೂಳೆ ಪ್ರಧಾನ ಅಂಗವಾಗಿದ್ದು, ಇಡೀ ಶರೀರ ವ್ಯವಸ್ಥೆಯನ್ನು ಒಂದಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯಾವುದೇ ವಯಸ್ಸಿನಲ್ಲಿಯೂ ಬೆನ್ನುಮೂಳೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಬೆನ್ನುಮೂಳೆ ಬಹಳ ಗಟ್ಟಿಯೆಂದು ಪರಿಗಣಿಸಲಾಗಿದೆ, ಆದರೆ ಇದೇ ವೇಳೆ ಅದು ತುಂಬ ನಾಜೂಕು ಮತ್ತು ವಾರಗಟ್ಟಲೆ ಹಾಸಿಗೆಗೆ ಅಂಟಿಕೊಂಡಿರಬೇಕಾಗುತ್ತದೆ ಮತ್ತು ತೀವ್ರ ನೋವನ್ನೂ ಅನುಭವಿಸಬೇಕಾಗುತ್ತದೆ. ಹೀಗಾಗಿ ಬೆನ್ನುಮೂಳೆಯ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮುಖ್ಯವಾಗಿದೆ.

ಆದರೆ ನಮ್ಮ ಕೆಲವು ದೈನಂದಿನ ಚಟುವಟಿಕೆಗಳು ಮತ್ತು ಚಲನವಲನಗಳು ನಿಧಾನವಾಗಿ ಬೆನ್ನುಮೂಳೆಗೆ ಹಾನಿಯನ್ನುಂಟು ಮಾಡಬಲ್ಲವು. ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಚಟುವಟಿಕೆಗಳನ್ನು ಸೂಕ್ತರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ.

ಹಲ್ಲುಜ್ಜುವಿಕೆ:

ಪ್ರತಿನಿತ್ಯ ಹಲ್ಲುಜ್ಜುವಾಗ ಸಾಮಾನ್ಯವಾಗಿ ನಾವು ನಿಂತುಕೊಂಡೇ ಇರುತ್ತೇವೆ. ನಾವು ನಡೆಯುವ ಸಂದರ್ಭಕ್ಕಿಂತ ಇಲ್ಲಿ ಬೆನ್ನುಮೂಳೆಯ ಮೇಲಿನ ಒತ್ತಡ ಹೆಚ್ಚಿರುತ್ತದೆ. ಹೀಗಾಗಿ ನಿಂತುಕೊಂಡಿರುವ ಸಂದರ್ಭ ಬೆನ್ನುಮೂಳೆಯ ಮೇಲಿನ ಒತ್ತಡವನ್ನು ನಿವಾರಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ. ಗೋಡೆಗೊರಗಿ ನಿಲ್ಲುವುದು ಅಥವಾ ಸಿಂಕ್‌ನ ಮೇಲೆ ಒಂದು ಕೈಯಿರಿಸುವುದು ಉತ್ತಮ.

ಪಾತ್ರೆ ತೊಳೆಯುವಿಕೆ:

ಮಹಿಳೆಯರು ಸಿಂಕ್‌ನಲ್ಲಿ ಪಾತ್ರೆಗಳನ್ನು ತೊಳೆಯುವಾಗ ಸಾಮಾನ್ಯವಾಗಿ ಅರ್ಧ ಬಗ್ಗಿದ ಭಂಗಿಯಲ್ಲಿ ನಿಂತುಕೊಂಡಿರುತ್ತಾರೆ. ಇದರಿಂದಾಗಿ ಕುತ್ತಿಗೆ ಮತ್ತು ಜಠರದ ನಡುವಿನ ಭಾಗದಲ್ಲಿಯ ಕಶೇರುಕದ ಡಿಸ್ಕಗಳು ಬೇಗನೆ ಸವೆಯುತ್ತವೆ ಮತ್ತು ಇದು ಭುಜಗಳಲ್ಲಿ ನೋವಿಗೆ ಕಾರಣವಾಗುತ್ತದೆ. ಪಾತ್ರೆಗಳನ್ನು ತೊಳೆಯುವಾಗ ಮಂಡಿಯ ಕೆಳಗೆ ಸ್ಟೂಲ್ ಇಟ್ಟುಕೊಳ್ಳುವುದು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ತಗ್ಗಿಸಲು ನೆರವಾಗುತ್ತದೆ.

ಕಾರಿನ ಚಕ್ರ ಬದಲಾವಣೆ:

ಬಗ್ಗಿಕೊಂಡು ಕಾರಿನ ಚಕ್ರ ಬದಲಾಯಿಸುವುದರಿಂದ ಇಡೀ ದಿನ ಬೆನ್ನುನೋವು ಕಾಡುತ್ತಿರುತ್ತದೆ. ಹೀಗಾಗಿ ಕಾರಿನ ಚಕ್ರವನ್ನು ಬದಲಿಸುವಾಗ ಬಗ್ಗಕೂಡದು. ಬದಲು ನೆಲದ ಮೇಲೆ ಕುಳಿತುಕೊಂಡು ಚಕ್ರವನ್ನು ಬದಲಿಸಬೇಕು ಮತ್ತು ಕಣ್ಣುಗಳು ಕಾರಿನ ಮಡ್‌ಗಾರ್ಡ್ ಮಟ್ಟದಲ್ಲಿಬೇಕು.

ಭಾರದ ಚೀಲಗಳು:

ಪೇಟೆಯಿಂದ ಸಾಮಾನು ತುಂಬಿದ ಚೀಲಗಳನ್ನು ಕೈಗಳಲ್ಲಿ ಹಿಡಿದುಕೊಂಡು ಬರುವುದು ಸಾಮಾನ್ಯ ಪದ್ಧತಿ. ಆದರೆ ಒಂದೇ ಕೈಯಲ್ಲಿ ಭಾರವಾದ ಬ್ಯಾಗ್ ಹಿಡಿದುಕೊಳ್ಳುವುದು ಒಳ್ಳೆಯದಲ್ಲ. ಸಾಮಾನುಗಳನ್ನು ಎರಡು ಚೀಲಗಳಲ್ಲಿ ತುಂಬಿ ಎರಡೂ ಕೈಗಳಲ್ಲಿ ಹಿಡಿದುಕೊಳ್ಳುವದರಿಂದ ಬೆನ್ನುಮೂಳೆಯ ಮೇಲಿನ ಹೆಚ್ಚುವರಿ ಒತ್ತಡವನ್ನು ನಿವಾರಿಸಬಹುದಾಗಿದೆ.

ನೆಲ ಒರೆಸುವಿಕೆ:

ನೆಲವನ್ನು ಕೈಯಲ್ಲಿ ಒದ್ದೆ ಬಟ್ಟೆ ಹಿಡಿದುಕೊಂಡು ಒರೆಸುವ ಗೋಜಿಗೆ ಎಂದೂ ಹೋಗಲೇಬೇಡಿ. ಇದಕ್ಕಾಗಿ ನೆಲ ಒರೆಸುವ ಕೋಲು ಅಥವಾ ಬ್ರಷ್ ಬಳಸಬೇಕು. ಬಗ್ಗಿಕೊಂಡು ನೆಲ ಒರೆಸುವುದರಿಂದ ಕಾಲುಗಳು ಮತ್ತು ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ. ಇದು ಬೆನ್ನುಮೂಳೆಗೆ ಹಾನಿಕಾರಕವಾಗಿದೆ.

ಶೂಗಳ ಲೇಸ್ ಕಟ್ಟುವಿಕೆ:

ಶೂಗಳ ಲೇಸ್ ಕಟ್ಟಿಕೊಳ್ಳುವಂತಹ ಬಗ್ಗಿಕೊಂಡು ನಾವು ಮಾಡುವ ಯಾವುದೇ ಕೆಲಸವು ನಮ್ಮ ಬೆನ್ನುಮೂಳೆಯ ಡಿಸ್ಕ್‌ಗಳಿಗೆ ಹಾನಿಯನ್ನುಂಟು ಮಾಡುತ್ತದೆ. ನಿರಂತರ ಒತ್ತಡದಿಂದಾಗಿ ಬೆನ್ನುಮೂಳೆಯಲ್ಲಿನ ಪೋಷಕಾಂಷಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ ಮತ್ತು ಅದು ಚಪ್ಪಟೆಯಾಗುತ್ತದೆ. ಇದರಿಂದಾಗಿ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಕುಳಿತುಕೊಂಡ ಭಂಗಿಯಲ್ಲಿ ಶೂಗಳ ಲೇಸ್‌ಗಳನ್ನು ಕಟ್ಟಿಕೊಳ್ಳುವುದು ಒಳ್ಳೆಯದು ಎನ್ನುವುದು ವೈದ್ಯರ ಸಲಹೆ.

ಬ್ಯಾಕ್‌ಪ್ಯಾಕ್:

ಬ್ಯಾಕ್‌ಪಾಕ್‌ಗಳು ಭಾರವು ನಮ್ಮ ಬೆನ್ನ ಮೇಲೆ ಸಮನಾಗಿ ಹರಡಿಕೊಳ್ಳುವಂತೆ ಎರಡು ಪಟ್ಟಿಗಳನ್ನು ಹೊಂದಿರುತ್ತವೆ. ಹೀಗಾಗಿ ಎರಡೂ ಪಟ್ಟಿಗಳನ್ನು ಸರಿಯಾಗಿ ಧರಿಸಬೇಕು. ಸರಿಯಾಗಿ ಬ್ಯಾಕ್‌ಪ್ಯಾಕ್‌ಗಳನ್ನು ಬಳಸುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ತಗ್ಗಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News