ಚಲಿಸುವ ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವ್ಯಾಪಕ ಆಕ್ರೋಶ

Update: 2017-08-23 03:41 GMT

ಲಂಡನ್, ಆ.23: ಕೆಸೆಬ್ಲಾಂಕಾ ನಗರದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರಿಗೆ ಹದಿಹರೆಯದ ಯುವಕರ ಗುಂಪು ಲೈಂಗಿಕ ಕಿರುಕುಳ ನೀಡಿದ ಘಟನೆ ಕುರಿತ ವೀಡಿಯೊ ಮೊರಾಕ್ಕೊದಲ್ಲಿ ಸಾರ್ವನಿಕ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಂ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಇಡೀ ದೇಶ ಸಿಡಿದೆದ್ದಿದೆ.
ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಪೋಸ್ಟ್ ಮಾಡಲಾಗಿದ್ದು, ನಾಲ್ವರು ಯುವಕರು ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಗಹಗಹಿಸಿ ನಗುತ್ತಾ ಯುವತಿಯ ಬಟ್ಟೆಯನ್ನು ಹರಿದು ಅರೇಬಿಕ್ ಭಾಷೆಯಲ್ಲಿ ಅವರನ್ನು ನಿಂದಿಸುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಯುವತಿ ಅಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇಷ್ಟಾಗಿಯೂ ಬಸ್ ಚಾಲಕ ಅಥವಾ ಪ್ರಯಾಣಿಕರು ಮಧ್ಯಪ್ರವೇಶಿಸಲಿಲ್ಲ.

ಮೊರಾಕ್ಕೊದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಮಿತಿಮೀರಿದ್ದು, ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ಮೂರನೇ ಎರಡರಷ್ಟು ಮಹಿಳೆಯರು ದೈಹಿಕ, ಮಾನಸಿಕ, ಲೈಂಗಿಕ ಅಥವಾ ಆರ್ಥಿಕ ಕಿರುಕುಳಕ್ಕೆಒಳಗಾಗುತ್ತಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾದ ಇನ್ನೊಂದು ವೀಡಿಯೊದಲ್ಲಿ ಪುರಷರ ಗುಂಪೊಂದು ಬೀದಿಯಲ್ಲಿ ಮಹಿಳೆಯನ್ನು ಪೀಡಿಸುತ್ತಿರುವ ದೃಶ್ಯ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ರವಿವಾರದ ಘಟನೆಗೆ ಸಂಬಂಧಿಸಿದಂತೆ 15ರಿಂದ 17 ವರ್ಷದ ಆರು ಮಂದಿ ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಈ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರೂ, ಕೆಲವರು, "ಬಹುಶಃ ಆ ಮಹಿಳೆ ಅಸಭ್ಯ ಉಡುಗೆಯಲ್ಲಿದ್ದು, ಯುವಕರನ್ನು ಪ್ರಚೋದಿಸಿರಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News