ಮನೆಗೆ ನುಗ್ಗಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಆ್ಯಸಿಡ್ ದಾಳಿ

Update: 2017-08-23 03:57 GMT

ಬರೇಲಿ, ಆ.23: ಜಿಲ್ಲೆಯ ನವಾಬ್‌ಗಂಜ್‌ನ ತಾಂಡಾದಲ್ಲಿ ಮನೆಗೆ ನುಗ್ಗಿದ ಆಗಂತುಕರು ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಆ್ಯಸಿಡ್ ದಾಳಿ ಮಾಡಿದ ಘಟನೆ ವರದಿಯಾಗಿದೆ.

15 ಹಾಗೂ 17 ವರ್ಷ ವಯಸ್ಸಿನ ಸಹೋದರಿಯರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಅವರ ಮುಖ ಹಾಗೂ ಕಣ್ಣುಗಳು ಹಾನಿಗೀಡಾಗಿವೆ. ಸಂತ್ರಸ್ತೆಯರು ಬರೇಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

"ನವಾಬ್‌ಗಂಜ್‌ನ ತಾಂಡಾ ಪ್ರದೇಶದಲ್ಲಿ ಈ ಘಟನೆ ನಡೆಯುತ್ತಿದ್ದು, ಸಹೋದರಿಯರು ಹಜಾರದಲ್ಲಿ ಮಂಚದ ಮೇಲೆ ನಿದ್ರಿಸುತ್ತಿದ್ದರು. ಮನೆಗೆ ನುಗ್ಗಿದ ವ್ಯಕ್ತಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ ಎಂದು ಬರೇಲಿಯ ಹಿರಿಯ ಪೊಲೀಸ್ ಅಧೀಕ್ಷಕ ಜೋಗೀಂದರ್ ಕುಮಾರ್ ಹೇಳಿದ್ದಾರೆ. ದಾಳಿಕೋರರ ವಿರುದ್ಧ ಬಾಲಕಿಯರ ತಂದೆ ದೂರು ನೀಡಿದ್ದಾರೆ.

ಆವರಣ ಗೋಡೆಯನ್ನು ಹತ್ತಿ ಮನೆಯೊಳಕ್ಕೆ ಬಂದ ದಾಳಿಕೋರರು ಈ ಕೃತ್ಯ ಎಸಗಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಇತರರು ಇದ್ದರೂ ಯಾರ ಗಮನಕ್ಕೂ ಬರಲಿಲ್ಲ. ಬಾಲಕಿಯರು ಚೀರಿಕೊಂಡಾಗ ಎಚ್ಚರಗೊಂಡು ನೋಡಿದಾಗ ಘಟನೆ ತಿಳಿದುಬಂದಿದೆ. ತಕ್ಷಣ ಸ್ಥಳೀಯರು ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆ ಮೂಲಗಳ ಪ್ರಕಾರ ಬಾಲಕಿಯರಿಗೆ ಎರಡನೇ ಹಾಗೂ ಮೂರನೇ ಹಂತದ ಸುಟ್ಟಗಾಯಗಳಾಗಿವೆ. ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ.

ಉತ್ತಮ ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಹಣವಿಲ್ಲದೇ ಇಲ್ಲೇ ಚಿಕಿತ್ಸೆ ಮುಂದುವರಿಸಲು ಕೋರಿಕೊಂಡಿದ್ದೇವೆ ಎಂದು ತಂದೆ ಹೇಳಿದ್ದಾರೆ. ಇದೇ ಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ ಇಬ್ಬರು ಸಹೋದರಿಯರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News