ಧಾರ್ಮಿಕ ನಂಬಿಕೆಯ ವಿಷಯಗಳಲ್ಲಿ ತಾಳ್ಮೆ ಇರಲಿ: ನ್ಯಾಯಾಧೀಶರಿಗೆ ಮುಖ್ಯ ನ್ಯಾಯಮೂರ್ತಿಯ ಕರೆ

Update: 2017-08-23 05:37 GMT

ಹೊಸದಿಲ್ಲಿ, ಆ.23: ತ್ರಿವಳಿ ತಲಾಖ್ ಬಗೆಗಿನ ತಮ್ಮ ಮಹತ್ವದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಜೆ.ಎಸ್.ಖೇಹರ್ ವೈಯಕ್ತಿಕ ಕಾನೂನು ವಿಚಾರಗಳಲ್ಲಿ ವಿಚಾರವಾದಿಗಳು ಮಾಡಬಹುದಾದ ಹಸ್ತಕ್ಷೇಪದ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದರಲ್ಲದೆ, ನ್ಯಾಯಾಧೀಶರುಗಳು ಧಾರ್ಮಿಕ ನಂಬಿಕೆಯ ವಿಚಾರಗಳಲ್ಲಿ ತಾಳ್ಮೆ ವಹಿಸಬೇಕೆಂದಿದ್ದಾರೆ.
‘‘ಆತ್ಮಸಾಕ್ಷಿಯ ಕರೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ... ಅಹಸನ್ ಹಾಗೂ ಹಸನ್ (ತ್ರಿವಳಿ ತಲಾಖ್ ಪದ್ಧತಿಯ ಇತರ ಎರಡು ಸ್ವೀಕಾರಾರ್ಹ ಮತ್ತು ರದ್ದುಪಡಿಸಬಹುದಾದ ಕ್ರಮ)ವನ್ನು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಅಟಾರ್ನಿ ಜನರಲ್ ಬಯಸಿದ್ದರು. 'ಹಲಾಲ' ಮತ್ತು ಬಹುಪತ್ನಿತ್ವವನ್ನು ಈಗಾಗಲೇ ಪ್ರಶ್ನಿಸಲಾಗಿದೆ. ವಿವಿಧ ಧರ್ಮಗಳ ಪದ್ಧತಿಗಳನ್ನು ಪ್ರಶ್ನಿಸಿ ವಿಚಾರವಾದಿಗಳು ಯಾವ ವಿಧದ ಸವಾಲನ್ನು ಹಾಕುತ್ತಾರೆಂದು ಅರ್ಥೈಸುವುದು ಅಸಾಧ್ಯ’’ ಎಂದು ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಅವರ ಬೆಂಬಲದೊಂದಿಗೆ ತಾವು ನೀಡಿದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ಹೇಳಿದರು.

ಎಚ್ಚರಿಕೆಯಿಂದಿರಿ:

‘‘ನಾವು ಎಚ್ಚರಿಕೆಯಿಂದಿರಬೇಕು, ಇಲ್ಲದೇ ಇದ್ದರೆ ನಮ್ಮ ಆತ್ಮಸಾಕ್ಷಿ ವಿವಿಧ ಧರ್ಮದ ಪದ್ಧತಿಗಳ ಹಾಗೂ ವೈಯಕ್ತಿಕ ಕಾನೂನುಗಳು ಎಲ್ಲಾ ಮೂಲೆಮೂಲೆಗಳಿಗೆ ಸಂಚರಿಸುವುದು’’ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

ತಕ್ಷಣದ ತಲಾಖ್ ಒಂದು ಧಾರ್ಮಿಕ ನಂಬಿಕೆಯ ವಿಚಾರ ಎಂದು ಘೋಷಿಸಿರುವ ಮುಖ್ಯ ನ್ಯಾಯಮೂರ್ತಿ, ‘‘ಒಂದು ನಂಬಿಕೆಯ ವಿಚಾರವನ್ನು, ನ್ಯಾಯಾಲಯವೊಂದು ಬದಲಾಯಿಸಬಹುದೇ ಅಥವಾ ಅದನ್ನು ಸಂಪೂರ್ಣವಾಗಿ ರದ್ದುಪಡಿಸಬಹುದೇ ?’’ ಎಂದು ಪ್ರಶ್ನಿಸಿದರು.

ಸಾಂವಿಧಾನಿಕ ಖಾತರಿ:
‘‘ಸಂವಿಧಾನವು ಎಲ್ಲಾ ಧರ್ಮದವರ ಜೀವನ ಪದ್ಧತಿಗೂ ತನ್ನ ಖಾತರಿಯನ್ನು ಒದಗಿಸುವುದು. ಇತರರಿಗೆ ವ್ಯತಿರಿಕ್ತವಾಗಿ ಅನಿಸಿದರೂ ಈ ಪದ್ಧತಿಗಳಿಗೆ ಅದು ಯಾವುದೇ ರೀತಿಯ ಸವಾಲೊಡ್ಡುವುದಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಖೇಹರ್ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ. ಧಾರ್ಮಿಕ ನಂಬಿಕೆಯ ವಿಚಾರಗಳಲ್ಲಿ ನ್ಯಾಯಾಲಯಗಳಿಗೆ ಸೀಮಿತ ಕಾರ್ಯಾವ್ಯಾಪ್ತಿಯಿರುತ್ತದೆ ಎಂದೂ ಅವರು ತಿಳಿಸಿದರು.

‘‘ಧಾರ್ಮಿಕ ಪದ್ಧತಿಗಳು ಹಾಗೂ ವೈಯಕ್ತಿಕ ಕಾನೂನಿನ ವಿಚಾರಗಳನ್ನು ಪರಿಶೀಲಿಸುವಾಗ ಯಾವುದು ಪ್ರಗತಿಶೀಲ ಅಥವಾ ಯಾವುದು ಮೂಲಭೂತವಾದಿಯಲ್ಲ ಎಂಬುದನ್ನು ನ್ಯಾಯಾಲಯ ನಿರ್ಧರಿಸುವ ಹಾಗಿಲ್ಲ. ಧರ್ಮ ಮತ್ತು ವೈಯಕ್ತಿಕ ಕಾನೂನನ್ನು ಆ ಧರ್ಮದ ಅನುಯಾಯಿಗಳು ಒಪ್ಪಿರುವುದರಿಂದ ಈ ವಿಚಾರದಲ್ಲಿ ಅದೇ ಧರ್ಮದ ಸ್ವಘೋಷಿತ ವಿಚಾರವಾದಿಗಳಿಗೆ ಬೇಕೆಂದ ಹಾಗೆ ಮಾಡಲು ಸಾಧ್ಯವಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಸರಕಾರವು ತ್ರಿವಳಿ ತಲಾಖ್ ಮುಖ್ಯವಾಗಿ ತಕ್ಷಣದ ತಲಾಖ್ ವಿಚಾರದಲ್ಲಿ ಕಾನೂನೊಂದನ್ನು ರಚಿಸಬೇಕೆಂದು ತೀರ್ಪಿನಲ್ಲಿ ಹೇಳಲಾಗಿದೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯವು ಹೆಚ್ಚೆಂದರೆ ಸರಕಾರವನ್ನು ‘‘ನಿದ್ದೆಯಿಂದ ಎಚ್ಚರಿಸಿ, ಮುಂದೆ ಹೆಜ್ಜೆಯಿರಿಸಿ ಗುರಿ ತಲುಪಲು ಒತ್ತಾಯಿಸಬಹುದು’’ ಎಂದೂ ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News