×
Ad

ಗೋರಖ್‌ಪುರ ಆಸ್ಪತ್ರೆ ದುರಂತ ಪ್ರಕರಣ: ಉನ್ನತ ಅಧಿಕಾರಿಗಳ ಎತ್ತಂಗಡಿ

Update: 2017-08-23 21:06 IST

ಲಕ್ನೊ, ಆ.23: ಗೋರಖ್‌ಪುರ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ , ಘಟನೆಗೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಉತ್ತರಪ್ರದೇಶ ಸರಕಾರ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ವೈದ್ಯಕೀಯ ಆರೋಗ್ಯ) ಅನಿತಾ ಭಟ್ನಾಗರ್ ಜೈನ್‌ರನ್ನು ಎತ್ತಂಗಡಿಗೊಳಿಸಿದೆ.

  ಪ್ರಕರಣದ ತನಿಖೆಗೆ ನೇಮಿಸಲ್ಪಟ್ಟಿದ್ದ ಉನ್ನತ ಮಟ್ಟದ ಸಮಿತಿಯು, ಆಮ್ಲಜನಕ ಪೂರೈಕೆದಾರನಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವಲ್ಲಿ ವಿಳಂಬವಾಗಲು ಅನಿತಾ ಭಟ್ನಾಗರ್ ಕಾರಣ ಎಂದು ಕಂಡುಕೊಂಡ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ತರಬೇತಿ ವಿಭಾಗದ ಡಿಜಿ ಹುದ್ದೆಗೆ ವರ್ಗಾಯಿಸಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ದುಬೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ.

   ಅಲ್ಲದೆ ಇತರ ಐವರು ಅಧಿಕಾರಿಗಳನ್ನೂ ತಪ್ಪಿತಸ್ತರೆಂದು ಗುರುತಿಸಿರುವ ಸಮಿತಿ ಬಿಆರ್‌ಡಿ ಮೆಡಿಕಲ್ ಕಾಲೇಜಿನ ಹಲವಾರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದೆ. ಇವರಲ್ಲಿ ಅಮಾನತಾಗಿರುವ ಪ್ರಾಂಶುಪಾಲ ಡಾ ರಾಜೀವ್ ಮಿಶ್ರ, ಅವರ ಪತ್ನಿ ಡಾ ಪೂರ್ಣಿಮ ಶುಕ್ಲ, ಡಾ ಸತೀಶ್, ಡಾ ಕಫೀಲ್ ಖಾನ್ ಹಾಗೂ ಇತರ ಇಬ್ಬರು ಸೇರಿದ್ದಾರೆ. ಕರ್ತವ್ಯಲೋಪ ಹಾಗೂ ಶಿಕ್ಷಾರ್ಹ ನರಹತ್ಯೆಗಾಗಿ ಇವರ ವಿರುದ್ಧ ಶೀಘ್ರ ಎಫ್‌ಐಆರ್ ದಾಖಲಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ. ಈ ಮಧ್ಯೆ ಅಮಾನತಾಗಿರುವ ಪ್ರಾಂಶುಪಾಲ ಡಾ ರಾಜೀವ್ ಮಿಶ್ರ, ಅವರ ಪತ್ನಿ ಡಾ ಪೂರ್ಣಿಮ ಶುಕ್ಲ ಬಂಧನದ ಭೀತಿಯಲ್ಲಿ ಭೂಗತರಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News