ಸೈನಾ, ಪ್ರಣೀತ್, ಶ್ರೀಕಾಂತ್ ಪ್ರಿ-ಕ್ವಾರ್ಟರ್ ಫೈನಲ್ ಗೆ

Update: 2017-08-23 18:38 GMT

ಗ್ಲಾಸ್ಗೊ, ಆ.23: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ನೆಹ್ವಾಲ್ ಸಾಯಿ ಪ್ರಣೀತ್ ಹಾಗೂ ಶ್ರೀಕಾಂತ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ಎಮಿರೇಟ್ಸ್ ಅರೆನಾದಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ನ 2ನೆ ಸುತ್ತಿನ ಪಂದ್ಯದಲ್ಲಿ ಸ್ವಿಸ್‌ನ ಎದುರಾಳಿ ಸಬ್ರಿನಾ ಜಾಕ್ವೆಟ್‌ರನ್ನು 21-11, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.

ಮೊದಲ ಸುತ್ತಿನಲ್ಲಿ ಬೈ ಪಡೆದಿರುವ 27ರ ಹರೆಯದ ಸೈನಾ ಕೇವಲ 33 ನಿಮಿಷಗಳ ಆಟದಲ್ಲಿ ಸಬ್ರಿನಾ ವಿರುದ್ಧ ಎರಡನೆ ಬಾರಿ ಗೆಲುವು ಸಾಧಿಸಿದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸಬ್ರಿನಾರನ್ನು ಮಣಿಸಿದ್ದರು.

  12ನೆ ಶ್ರೇಯಾಂಕದ ಸೈನಾ ಆರಂಭದಲ್ಲಿ 4-0 ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಸ್ವಿಸ್ ಆಟಗಾರ್ತಿ ತಿರುಗೇಟು ನೀಡಲು ಯತ್ನಿಸಿದರೂ ಸತತ 5 ಅಂಕ ಗಳಿಸಿದ ಸೈನಾ ಮೊದಲ ಗೇಮ್‌ನ್ನು 14 ನಿಮಿಷಗಳಲ್ಲಿ ಗೆದ್ದುಕೊಂಡರು.

ಎರಡನೆ ಗೇಮ್‌ನಲ್ಲಿ ಸೈನಾ ಆರಂಭದಲ್ಲೇ 5-2 ಮುನ್ನಡೆ ಪಡೆದರು. ಮಧ್ಯಂತರದಲ್ಲಿ 11-7 ಲೀಡ್ ಕಾಯ್ದುಕೊಂಡರು. ಅಂತಿಮವಾಗಿ 21-12 ರಿಂದ 2ನೆ ಗೇಮ್‌ನ್ನು ಜಯಿಸಿದರು.

ಸೈನಾ ಜಕಾರ್ತದಲ್ಲಿ 2015ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ವರ್ಷ ನಡೆದಿದ್ದ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸಬ್ರಿನಾ ಕಂಚು ಜಯಿಸಿದ್ದರು.

 ಸೈನಾ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಸಂಗ್ ಜಿ ಹ್ಯೂನ್‌ರನ್ನು ಎದುರಿಸಲಿದ್ದಾರೆ. ಕೊರಿಯಾದ ಹ್ಯೂನ್ ಭಾರತದ ತನ್ವಿ ಲಾಡ್‌ರನ್ನು 21-9, 21-19 ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರು. 2010ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ಅವರು ಹ್ಯೂನ್ ವಿರುದ್ಧ 7-2 ಹೆಡ್-ಟು ಹೆಡ್ ದಾಖಲೆ ಹೊಂದಿದ್ದು, ಜೂನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಹ್ಯೂನ್‌ರನ್ನು ಮಣಿಸಿದ್ದರು.

ಪ್ರಣೀತ್, ಶ್ರೀಕಾಂತ್‌ಗೆ ಜಯ:   ಸಿಂಗಾಪುರ ಓಪನ್ ಚಾಂಪಿಯನ್ ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ 20ರ ಹರೆಯದ ಇಂಡೋನೇಷ್ಯಾ ಆಟಗಾರ ಅಂಥೋನಿ ಸಿನಿಸುಕ ಗಿಂಟಿಂಗ್‌ರನ್ನು 14-21, 21-18, 21-19 ಗೇಮ್‌ಗಳ ಅಂತರದಿಂದ ಮಣಿಸಿದರು. ಒಂದು ಗಂಟೆ, 12 ನಿಮಿಷಗಳ ಕಾಲ ನಡೆದಿದ್ದ ಪಂದ್ಯದಲ್ಲಿ ಪ್ರಣೀತ್ ಮೊದಲ ಗೇಮ್‌ನ್ನು 14-21 ರಿಂದ ಸೋತಿದ್ದರು. ಆನಂತರ 2 ಹಾಗೂ 3ನೆ ಗೇಮ್‌ನ್ನು 21-18, 21-19 ರಿಂದ ಜಯಿಸಿದ ಪ್ರಣೀತ್ ಪಂದ್ಯವನ್ನು ಗೆದ್ದುಕೊಂಡರು.

ವಿಶ್ವದ ನಂ.19ನೆ ಆಟಗಾರ ಪ್ರಣೀತ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿಯ ಮಾರ್ಕ್ ಝ್ವೆಬ್ಲೆರ್ ಅಥವಾ ಚೀನಾದ ಚೌ ಟಿಯೆನ್‌ರನ್ನು ಎದುರಿಸಲಿದ್ದಾರೆ.

   ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.8ನೆ ಆಟಗಾರ ಶ್ರೀಕಾಂತ್ ಫ್ರಾನ್ಸ್‌ನ ಲುಕಾಸ್ ಕೊರ್ವಿ ಅವರನ್ನು 21-9, 21-17 ಅಂತರದಿಂದ ಸೋಲಿಸಿದ್ದಾರೆ. ಗುರುವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಅಂಟೊನ್ಸನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News