ಟ್ವೆಂಟಿ-20 ಪಂದ್ಯ: ಅಫ್ರಿದಿ ಆರ್ಭಟ; ಹ್ಯಾಂಪ್‌ಶೈರ್‌ಗೆ ಭರ್ಜರಿ ಜಯ

Update: 2017-08-23 18:41 GMT

ಲಂಡನ್, ಆ.23: ‘ಬೂಮ್ ಬೂಮ್’ ಖ್ಯಾತಿಯ, ತನ್ನ ಭರ್ಜರಿ ಬ್ಯಾಟಿಂಗ್‌ನಿಂದ ಪಂದ್ಯದ ಚಿತ್ರಣ ಬದಲಿಸಬಲ್ಲ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇಂಗ್ಲೆಂಡ್‌ನಲ್ಲಿ ನಡೆದ ನಾಟ್‌ವೆಸ್ಟ್ ಟ್ವೆಂಟಿ-20 ಬ್ಲಾಸ್ಟ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ.

ಕೇವಲ 43 ಎಸೆತಗಳಲ್ಲಿ 101 ರನ್ ಗಳಿಸಿರುವ ಅಫ್ರಿದಿ 7 ಸಿಕ್ಸರ್ ಹಾಗೂ 10 ಬೌಂಡರಿ ಬಾರಿಸಿ ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿದರು. ಅಫ್ರಿದಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಹ್ಯಾಂಪ್‌ಶೈರ್ ತಂಡ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್(8 ವಿಕೆಟ್‌ಗೆ 249 ರನ್) ದಾಖಲಿಸಿತು. ಮಾತ್ರವಲ್ಲ ಎದುರಾಳಿ ಡರ್ಬಿಶೈರ್ ತಂಡದ ವಿರುದ್ಧ 101 ರನ್‌ಗಳ ಅಂತರದಿಂದ ಜಯ ಸಾಧಿಸಿತು.

ಅಫ್ರಿದಿ ಹಾಗೂ ನಾಯಕ ಜೇಮ್ಸ್ ವಿನ್ಸಿ(55 ರನ್, 36 ಎಸೆತ) ಸಾಹಸದ ನೆರವಿನಿಂದ ಹ್ಯಾಂಪ್‌ಶೈರ್ ತಂಡ 2006ರಲ್ಲಿ ತಾನು ಗಳಿಸಿದ್ದ ಗರಿಷ್ಠ ಟ್ವೆಂಟಿ-20 ಸ್ಕೋರ್‌ನ್ನು(225)ಹಿಂದಿಕ್ಕಿತು.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಡರ್ಬಿಶೈರ್ ತಂಡ ಲಿಯಾಮ್ ಡಾಸನ್ ಹಾಗೂ ಕೈಲ್ ಅಬಾಟ್(ತಲಾ 3 ವಿಕೆಟ್) ದಾಳಿಗೆ ಸಿಲುಕಿ ಕೇವಲ 148 ರನ್‌ಗೆ ಆಲೌಟಾಯಿತು.

ಆರಂಭಿಕ ಆಟಗಾರನಾಗಿ ಇನಿಂಗ್ಸ್ ಆರಂಭಿಸಿದ ಅಫ್ರಿದಿ ಕೇವಲ 20 ಎಸೆತಗಳಲ್ಲಿ 50 ರನ್ ಪೂರೈಸಿದರು. 42 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಈ ಸಾಧನೆ ಮಾಡಿದ 2ನೆ ಪಾಕ್ ಆಟಗಾರ ಎನಿಸಿಕೊಂಡರು. ಅಹ್ಮದ್ ಶೆಹಝಾದ್(40 ಎಸೆತ) ಬಾಂಗ್ಲಾ ಪ್ರೀಮಿಯರ್ ಲೀಗ್‌ನಲ್ಲಿ ವೇಗದ ಟ್ವೆಂಟಿ-20 ಶತಕ ಬಾರಿಸಿದ್ದರು. ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ತಾನು ಈಗಲೂ ‘ಬಿಗ್‌ಹಿಟ್ಟರ್’ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. 65 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಅಫ್ರಿದಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಟ್ಟು 200 ಸಿಕ್ಸರ್‌ಗಳನ್ನು ಸಿಡಿಸಿದ ಪಾಕ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ ಗರಿಷ್ಠ ಸಿಕ್ಸರ್‌ಗಳನ್ನು(752) ಸಿಡಿಸಿದ ವಿಶ್ವದ ಅಗ್ರಮಾನ್ಯ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News