×
Ad

ದಕ್ಷಿಣ ಆಫ್ರಿಕ: ಮಾನವ ಮಾಂಸ ತಿಂದಿದ್ದಾಗಿ ನೂರಾರು ಮಂದಿಯಿಂದ ತಪ್ಪೊಪ್ಪಿಗೆ

Update: 2017-08-24 23:01 IST

ಜೊಹಾನ್ಸ್‌ಬರ್ಗ್, ಆ. 24: ದಕ್ಷಿಣ ಆಫ್ರಿಕದಲ್ಲಿ ನರಮಾಂಸ ಭಕ್ಷಣೆ ಆರೋಪಗಳನ್ನು ಎದುರಿಸುತ್ತಿರುವ ನಾಲ್ವರಲ್ಲಿ ಒಬ್ಬ ನೀಡಿರುವ ಮಾನವ ಮಾಂಸವನ್ನು ತಿಂದಿರುವುದಾಗಿ ನೂರಾರು ಮಂದಿ ಒಪ್ಪಿಕೊಂಡಿದ್ದಾರೆ.

 ಆರೋಪಿಗಳಾದ ನಿನೊ ಮಬತ (32 ವರ್ಷ), ಲಿಂಡೊಕುಹ್ಲೆ ಮಸೊಂಡೊ (32), ಸ್ತೆಂಬಿಸೊ ಸಿಟ್‌ಹೋಲ್ (31) ಮತ್ತು ಲುಂಗಿಸಾನಿ ಮಗುಬೇನ್ (30) ಎಸ್ಟ್‌ಕೋರ್ಟ್‌ನಲ್ಲಿರುವ ನ್ಯಾಯಾಲಯಕ್ಕೆ ಸೋಮವಾರ ಹಾಜರಾದರು.

ಮಹಿಳೆಯೊಬ್ಬರನ್ನು ಅತ್ಯಾಚಾರಗೈದು, ಕೊಲೆಮಾಡಿ, ದೇಹವನ್ನು ಛಿದ್ರಗೊಳಿಸಿ ತಿಂದ ಆರೋಪಗಳನ್ನು ಈ ನಾಲ್ವರು ಎದುರಿಸುತ್ತಿದ್ದಾರೆ ಎಂದು ‘ದ ವಿಟ್ನೆಸ್’ ಪತ್ರಿಕೆ ವರದಿ ಮಾಡಿದೆ.

ಆರೋಪಿಗಳಲ್ಲಿ ಓರ್ವ ಮಾನವ ದೇಹದ ಅಂಗಾಂಗಗಳನ್ನು ಹಿಡಿದುಕೊಂಡು ಕಳೆದ ಶುಕ್ರವಾರ ಮಧ್ಯ ದಕ್ಷಿಣ ಆಫ್ರಿಕದಲ್ಲಿರುವ ಎಸ್ಟ್‌ಕೋರ್ಟ್ ಪಟ್ಟಣದ ಪೊಲೀಸ್ ಠಾಣೆಯೊಂದಕ್ಕೆ ಹೋದನು ಹಾಗೂ ‘ಮಾನವ ಮಾಂಸವನ್ನು ತಿನ್ನಲು ಪ್ರಯತ್ನಿಸಿದ್ದಾಗಿ’ ಒಪ್ಪಿಕೊಂಡನು ಎಂದು ಪತ್ರಿಕೆ ಹೇಳಿದೆ.

ಎಸ್ಟ್‌ಕೋರ್ಟ್‌ನ ರೆನ್ಸ್‌ಬರ್ಗ್‌ಡ್ರಿಫ್ಟ್‌ನ ಮನೆಯೊಂದರಲ್ಲಿ ಹೆಚ್ಚಿನ ಮಾನವ ಅವಯವಗಳನ್ನು ಪೊಲೀಸರು ಪತ್ತೆಹಚ್ಚಿದರು.

ಆರೋಪಿಗಳ ಪೈಕಿ ಓರ್ವನಾಗಿರುವ ಮಬತನನ್ನು ಅಮಂಗ್ವೆ ಎಂಬಲ್ಲಿ ಬಂಧಿಸಲಾಗಿದ್ದು, ಆತನ ಮನೆಯಲ್ಲಿ ಮಾನವ ಅವಯವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು. ಮಬತನು ನಾಟಿ ವೈದ್ಯನೂ ಆಗಿದ್ದಾನೆ.

ಈ ನಡುವೆ, ಸೋಮವಾರ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದ ಬಳಿಕ, ವಾರ್ಡ್ ಕೌನ್ಸಿಲರ್ ಮತೆಂಬನಿ ಮಜೊಲ ಸಮುದಾಯ ಸಭೆಯೊಂದನ್ನು ನಡೆಸಿದರು. ತಾವು ಮಬತನ ಮನೆಗೆ ಭೇಟಿ ಗೊತ್ತಿದ್ದೇ ಮಾನವ ಮಾಂಸವನ್ನು ತಿಂದಿರುವುದಾಗಿ ಸುಮಾರು 300 ನಿವಾಸಿಗಳು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಮಾನವ ಮಾಂಸವನ್ನು ತಿನ್ನುವ ಪದ್ಧತಿ ಎಸ್ಟ್‌ಕೋರ್ಟ್‌ಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಉತುಲೇಕ ಜಿಲ್ಲೆಯಲ್ಲಿ ಆತ ಸಂಪರ್ಕ ಹೊಂದಿದ್ದಾನೆ ಎಂದು ಮಜೋಲ ಹೇಳಿದರು.

ಯಾರನ್ನು ನಂಬಬೇಕೆಂದು ಗೊತ್ತಾಗುತ್ತಿಲ್ಲ

‘‘ಏನು ಮಾಡಬೇಕು ಅಥವಾ ಯಾರನ್ನು ನಂಬಬೇಕೆಂದು ನಮಗೆ ಗೊತ್ತಾಗುತ್ತಿಲ್ಲ’’ ಎಂದು ಕೌನ್ಸಿಲರ್ ಮಜೋಲ ಪತ್ರಿಕೆಯೊಂದಿಗೆ ಹೇಳಿದರು.

‘‘ಇದು ನಮ್ಮ ಸಮುದಾಯದಲ್ಲೇ ನಡೆದಿದೆ. ಈ ಮಹಿಳೆಯನ್ನು ತಿಂದಿರುವುದಾಗಿ ನಮಗೆ ಗೊತ್ತಿರುವ ಹಾಗೂ ನಾವು ವ್ಯವಹರಿಸುವ ಜನರೇ ಈಗ ಒಪ್ಪಿಕೊಂಡಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News