ಇಮಿಗ್ರೇಶನ್ ಅಡ್ಡಿ ನಿವಾರಣೆ: ಕೊನೆಗೂ ಹಜ್ ಗೆ ತೆರಳಿದ ಕೇರಳದ ದಂಪತಿ

Update: 2017-08-28 08:30 GMT

ಕಲ್ಲಿಕೋಟೆ,ಆ.28: ನೆಡುಂಬಶ್ಶೇರಿ ವಿಮಾನನಿಲ್ದಾಣದಲ್ಲಿ ಇಮಿಗ್ರೇಶನ್ ವಿಭಾಗ ತಡೆದು ನಿಲ್ಲಿಸಿದ್ದರಿಂದ ಹಜ್ ಯಾತ್ರೆಗೆ  ತೆರಳಲು ಸಾಧ್ಯವಾಗದೆ ಉಳಿದಿದ್ದ ದಂಪತಿಗೆ ಕೊನೆಗೂ ಹಜ್‍ಗೆ ತೆರಳಲು ಅವಕಾಶ ದೊರಕಿದೆ. ತಿರೂರ್ ಚೆರಿಯಮುಂಡಂ ಪುಕ್ಕಾಟ್ ಮನೆಯ ಕುಂಞ್ ಮುಹಮ್ಮದ್  ಮತ್ತು ಪತ್ನಿಮೈಮೂನ ಕೊನೆಯ ಹಜ್ ವಿಮಾನದಲ್ಲಿ ಮುಂಬೈಯಿಂದ ಮಕ್ಕಾಗೆ  ಪ್ರಯಾಣಿಸಿದ್ದಾರೆ.

ಮಲಪ್ಪುರಂ ಜಿಲ್ಲಾಧಿಕಾರಿ ಅಮಿತ್ ಮೀನಾ, ಮಲಪ್ಪುರಂ ಪಾಸ್‍ಪೋರ್ಟ್ ಅಧಿಕಾರಿ, ಹಜ್ ಸಮಿತಿ ಚೇರ್‍ಮೆನ್ ತೊಡಿಯೂರ್ ಮುಹಮ್ಮದ್ ಕುಂಞ್ ಮೌಲವಿ, ಹಜ್‍ಕಮಿಟಿ ಅಧಿಕಾರಿಗಳ ಪ್ರಯತ್ನದಿಂದ ಇಮಿಗ್ರೇಶನ್ ಅಡ್ಡಿ ನಿವಾರಣೆಗೊಂಡಿದೆ. ರವಿವಾರ ರಜಾದಿನವಾಗಿದ್ದರೂ ಪಾಸ್‍ಪೋರ್ಟ್ ಕಚೇರಿ ತೆರೆದು ಪಾಸ್‍ಪೋರ್ಟಿನ ತಾಂತ್ರಿಕ ಅಡಚಣೆಯನ್ನು ನಿವಾರಿಸಿಕೊಡಲಾಗಿದೆ.

ಶನಿವಾರ ನೆಡುಂಬಶ್ಶೇರಿಯಿಂದಕೊನೆಯ ಹಜ್ ವಿಮಾನದಲ್ಲಿ ದಂಪತಿ ಪ್ರಯಾಣಿಸಬೇಕಿತ್ತು. ಆದರೆ ಮೈಮುನಾರ ಪಾಸ್‍ಪೋರ್ಟ್‍ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು. ಆದ್ದರಿಂದ ಅವರ ಪ್ರಯಾಣವನ್ನು ತಡೆಹಿಡಿಯಲಾಗಿತ್ತು. ನಂತರ ಜಿಲ್ಲಾಧಿಕಾರಿ ಮತ್ತು ಹಜ್‍ಕಮಿಟಿ ಚೇರ್‍ಮೆನ್ ಮುಂತಾದವರು ದಂಪತಿಯನ್ನು ರವಿವಾರ ಕಳುಹಿಸಿಕೊಡಲು ತೀವ್ರಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ. ಕೊಯಮತ್ತೂರಿನಲ್ಲಿದ್ದ ಪಾಸ್‍ಪೋರ್ಟ್ ಅಧಿಕಾರಿ ರವಿವಾರ ಬೆಳಗ್ಗೆ ಕಚೇರಿಗೆ ಬಂದು ತಾಂತ್ರಿಕ ಅಡಚಣೆ ನಿವಾರಿಸಿಕೊಟ್ಟಿದ್ದಾರೆ. ಪಾಸ್‍ಪೋರ್ಟ್ ನವೀಕರಣ ಮಾಡಿದಾಗ ಪಾಸ್‍ಪೋರ್ಟ್‍ನಲ್ಲಿ ವಿಳಾಸದಲ್ಲಿ ಆದ ವ್ಯತ್ಯಾಸ ಸಮಸ್ಯೆಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದ ಪೊಲೀಸ್ ವರದಿ ಎಲ್ಲ ವಿಮಾನನಿಲ್ದಾಣಗಳಿಗೆ ಬಂದಿತ್ತು. ಇತರ ಸಮಸ್ಯೆಗಳೇನಿಲ್ಲ ಎಂದು ಅಧಿಕಾರಿಗಳಿಗೆ ಮನವರಿಕೆಯಾದ್ದರಿಂದ ಎಲ್ಲ ವಿಮಾನ ನಿಲ್ದಾಣಗಳಿಗೆ ಪುನಃ ಸಂದೇಶ ಕಳುಹಿಸಿಲಾಗಿತ್ತು.

ದಂಪತಿಯನ್ನು ರವಿವಾರ ಮಧ್ಯಾಹ್ನ ವಿಮಾನದಲ್ಲಿ ಮುಂಬೈಗೆ ಕಳುಹಿಸಲಾಯಿತು. ಕೇಂದ್ರ ಹಜ್ ಸಮಿತಿ ಅಧಿಕಾರಿಗಳು ಅವರನ್ನು ಸ್ವಾಗತಿಸಿದ್ದು, ರಾತ್ರೆಯ ವಿಮಾನದಲ್ಲಿ ಮಕ್ಕಕ್ಕೆ ಪ್ರಯಾಣಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News