ಗ್ರೀನ್ ಟೀ ನಿಮ್ಮ ಹಲ್ಲು ಮತ್ತು ವಸಡುಗಳಿಗೆ ಒಳ್ಳೆಯದು ಗೊತ್ತೇ?

Update: 2017-08-29 09:29 GMT

‘ಗ್ರೀನ್ ಟೀ’ ಎಂಬ ಶಬ್ದ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತು. ಅದು ತನ್ನ ಅದ್ಭುತ ಆರೋಗ್ಯ ಲಾಭಗಳೊಂದಿಗೆ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಅದೀಗ ಆರೋಗ್ಯಕರ ಪಾನೀಯವಾಗಿ ಹೆಚ್ಚು ಜನಪ್ರಿಯ ಗೊಳ್ಳುತ್ತಿದ್ದು, ಬಹಳಷ್ಟು ಜನರು ಅದನ್ನು ಸೇವಿಸುತ್ತಿದ್ದಾರೆ. ಚಹಾಗಿಡದ ಒಣಗಿದ ಎಲೆಗಳಿಂದ ಗ್ರೀನ್ ಟೀ ಅನ್ನು ಉತ್ಪಾದಿಸಲಾಗುತ್ತದೆ.

 ಗ್ರೀನ್ ಟೀ ಮೂಲತಃ ಚೀನಾದ್ದಾಗಿದ್ದರೂ, ಅದರ ಜನಪ್ರಿಯತೆಯಿಂದಾಗಿ ವಿಶ್ವದ ಎಲ್ಲೆಡೆ ಉತ್ಪಾದನೆಯಾಗುತ್ತಿದೆ. ಅದೊಂದು ಅದ್ಭುತ ಪಾನೀಯವಾಗಿದ್ದು, ಅದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಶೇ.99.9ರಷ್ಟು ನೀರನ್ನೊಳಗೊಂಡಿರುವ ಗ್ರೀನ್ ಟೀಯ ಪ್ರತಿ 100 ಎಂಎಲ್‌ನಲ್ಲಿ ಕ್ಯಾಲೊರಿಯ ಪ್ರಮಾಣ ಕೇವಲ ಶೇ.1ರಷ್ಟಿದೆ. ಪಾಲಿಫಿನಾಲ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಅದು ಕ್ಯಾನ್ಸರ್, ಮಧುಮೇಹ, ಹೃದಯ ಸಮಸ್ಯೆಗಳು, ಅಲ್ಝೀಮರ್ಸ್ ಇತ್ಯಾದಿಗಳಿಗೆ ರಾಮಬಾಣವಾಗಿದೆ ಎನ್ನುತ್ತಾರೆ ಸಂಶೋಧಕರು. ಬಾಯಿಯ ಆರೋಗ್ಯ ಕಾಯ್ದುಕೊಳ್ಳುವಲ್ಲಿಯೂ ಅದರ ಕೊಡುಗೆ ಗಮನಾರ್ಹವಾಗಿದೆ.

ಉರಿಯೂತವನ್ನು ತಡೆಯಬಲ್ಲ ಮತ್ತು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಸಂಯುಕ್ತಗಳು ಗ್ರೀನ್ ಟೀಯಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.

ಸರಿಯಾಗಿ ಹಲ್ಲುಜ್ಜದಿದ್ದರೆ ಹಲ್ಲುಗಳು ಪಾಚಿಗಟ್ಟುತ್ತವೆ. ಸೂಕ್ಷ್ಮಜೀವಿಗಳು ಈ ಪಾಚಿಯ ಮೂಲಕ ಸುಲಭವಾಗಿ ಹರಡುತ್ತವೆ ಮತ್ತು ದಂತಕ್ಷಯವನ್ನುಂಟು ಮಾಡುತ್ತವೆ. ಗ್ರೀನ್ ಟೀಯಲ್ಲಿರುವ ಎಪಿಗ್ಯಾಲೊಕೇಟಚಿನ್ ಗ್ಯಾಲೇಟ್ ಈ ಸೂಕ್ಷ್ಮಜೀವಿಗಳ ವಿರುದ್ಧ ಪರಿಣಾಮಕಾರಿಯಾಗಿದೆ.

ಪ್ರತಿ ಬಾರಿ ನಾವು ಆಹಾರ ಸೇವಿಸಿದಾಗಲೂ ಅದರ ಸ್ವಲ್ಪ ಭಾಗ ನಮ್ಮ ಹಲ್ಲಿನ ಮೇಲೆ ದಾಸ್ತಾನಾಗಿರುತ್ತದೆ. ಬ್ಯಾಕ್ಟೀರಿಯಾಗಳು ಇದನ್ನು ಸುಲಭವಾಗಿ ಆಕ್ರಮಿಸುತ್ತವೆ ಮತ್ತು ಇದು ಹಲ್ಲುಗಳಲ್ಲಿ ಕುಳಿಗಳಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಗ್ರೀನ್ ಟೀ ಬಾಯಿಯ ಜೊಲ್ಲಿನಲ್ಲಿಯ ಆಮ್ಲೀಯತೆಯನ್ನು ತಗ್ಗಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

ಗ್ರೀನ್ ಟೀಯಿಂದ ಐದು ನಿಮಿಷಗಳ ಕಾಲ ಬಾಯಿ ಮುಕ್ಕಳಿಸುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆ ಗಮನಾರ್ಹ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಹೀಗಾಗಿ ದಂತಕುಳಿ ಗಳನ್ನು ದೂರವಿಡಲು ಗ್ರೀನ್ ಟೀ ಅತ್ಯಂತ ಉಪಯುಕ್ತವಾಗಿದೆ.

ಬಾಯಿಯ ದುರ್ವಾಸನೆ ಸಾಮಾನ್ಯ ಸಮಸ್ಯೆಯಾಗಿದೆ. ಗಂಟಲಿನ ಒಳಭಾಗದಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳು ಈ ದುರ್ವಾಸನೆಗೆ ಮೂಲಕಾರಣವಾಗಿವೆ. ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಟೂಥ್‌ಬ್ರಷ್ ಗಂಟಲಿನ ಒಳಭಾಗವನ್ನು ತಲುಪುವುದಿಲ್ಲ. ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್‌ಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಶೇ.30ರಷ್ಟು ನಿರ್ಬಂಧಿಸುತ್ತವೆ ಮತ್ತು ದುರ್ವಾಸನೆಗೆ ಕಾರಣವಾಗುವ ಸಂಯುಕ್ತಗಳ ಉತ್ಪಾದನೆಯನ್ನು ತಗ್ಗಿಸುತ್ತವೆ. ಅದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ದಿನವಿಡೀ ಉಸಿರನ್ನು ತಾಜಾಗೊಳಿಸುತ್ತದೆ.

ಗ್ರೀನ್ ಟೀ ವಸಡುಗಳು ಮತ್ತು ಹಲ್ಲುಗಳ ಸುತ್ತಲಿನ ಎಲುಬುಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಉತ್ಕರ್ಷಣ ನಿರೋಧಕ ಗುಣವು ಆ್ಯಂಟಿ ಆಕ್ಸಿಡಂಟ್‌ಗಳು ಮತ್ತು ಆಕ್ಸಿಡಂಟ್‌ಗಳ ನಡುವಿನ, ಬ್ಯಾಕ್ಟೀರಿಯಾಗಳಿಂದ ತಾಳ ತಪ್ಪಿದ ಸಮತೋಲನವನ್ನು ಮರುಸ್ಥಾಪಿಸುವಲ್ಲಿ ನೆರವಾಗುತ್ತದೆ ಮತ್ತು ವಸಡುಗಳು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳುತ್ತದೆ. ಅದರ ಉರಿಯೂತ ನಿರೋಧಕ ಗುಣವು ನಮ್ಮ ವಸಡುಗಳಿಗೆ ಊತ ಮತ್ತು ರಕ್ತಸ್ರಾವದಿಂದ ರಕ್ಷಣೆಯನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News