ಸುರಕ್ಷತೆಗೆ ಭಾರತೀಯ ರೈಲ್ವೆಯ ಮೊದಲ ಆದ್ಯತೆ:ಲೋಹಾನಿ
ಹೊಸದಿಲ್ಲಿ,ಆ.29: ಮಂಗಳವಾರವೂ ಸೇರಿದಂತೆ 10 ದಿನಗಳಲ್ಲಿ ನಾಲ್ಕು ರೈಲು ಅಪಘಾತಗಳು ಸಂಭವಿಸಿರುವ ಮಧ್ಯೆಯೇ ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಅಶ್ವನಿ ಲೋಹಾನಿ ಅವರು, ಸುರಕ್ಷತೆಯು ಭಾರತೀಯ ರೈಲ್ವೆಯ ಮೊದಲ ಆದ್ಯತೆಯಾಗಿರಲಿದೆ ಎಂದು ಹೇಳಿದ್ದಾರೆ. ಸುರಕ್ಷತೆಯು ತುಂಬ ನಾಜೂಕು ಸ್ಥಿತಿಯಲ್ಲಿದ್ದು, ಇತ್ತೀಚಿನ ಕೆಲವು ದುರದೃಷ್ಟಕರ ಘಟನೆಗಳು ರೈಲ್ವೆಯ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿವೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ಸೋಮವಾರ ರೈಲ್ವೆ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಲೋಹಾನಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ವ್ಯಂಗ್ಯವೆಂದರೆ ಕಳೆದ ಹತ್ತು ದಿನಗಳಲ್ಲಿ ನಾಲ್ಕನೇ ರೈಲು ಅಪಘಾತವು ಮಂಗಳವಾರ ಬೆಳಗಿನ ಜಾವ ಮಹಾರಾಷ್ಟ್ರದ ವಾಸಿಂದ್ ಮತ್ತು ಅಸನ್‌ಗಾಂವ್ ನಿಲ್ದಾಣಗಳ ನಡುವೆ ಸಂಭವಿಸಿದೆ. ಭೂಕುಸಿತದಿಂದಾಗಿ ನಾಗ್ಪುರ-ಮುಂಬೈ ತುರಂತೊ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಮತ್ತು ಒಂಭತ್ತು ಬೋಗಿಗಳು ಹಳಿ ತಪ್ಪಿದ್ದು, ಸಾವುನೋವುಗಳು ವರದಿಯಾಗಿಲ್ಲ.
ರೈಲ್ವೆಯು ಈಗ ನಿರ್ಣಾಯಕ ಕಾಲಘಟ್ಟದಲ್ಲಿದೆ ಮತ್ತು ಅದರ ವರ್ಚಸ್ಸಿಗೆ ಗಂಭೀರ ಹಾನಿಯ ಸ್ಥಿತಿ ಎದುರಾಗಿದೆ. ಇದನ್ನು ಸರಿಪಡಿಸಲು ನನ್ನ ಎಲ್ಲ ಸಹೋದ್ಯೋಗಿಗಳೂ ಹೃತ್ಪೂರ್ವಕವಾಗಿ ಶ್ರಮಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೇನೆ ಎಂದು ಲೋಹಾನಿ ಪತ್ರದಲ್ಲಿ ಬರೆದಿದ್ದಾರೆ.
ಪ್ರತಿದಿನ ಮೂರು ಕೋಟಿ ಪ್ರಯಾಣಿಕರನ್ನು ಸಾಗಿಸುತ್ತಿರುವ ರೈಲ್ವೆಯಲ್ಲಿ ಸುರಕ್ಷತೆ ಮೊದಲ ಆದ್ಯತೆಯಾಗಿರಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ರೈಲುಗಳ ಕಾರ್ಯಾಚರ ಣೆಯಲ್ಲಿ ಗರಿಷ್ಠ ಸುರಕ್ಷಾ ಮಟ್ಟವನ್ನು ಕಾಯ್ದುಕೊಳ್ಳಲು ನಾವು ಎಚ್ಚರಿಕೆ ವಹಿಸಬೇಕು ಮತ್ತು ನಮ್ಮ ಪ್ರಯಾಣಿಕರಲ್ಲಿ ಮತ್ತೊಮ್ಮೆ ವಿಶ್ವಾಸವನ್ನು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಕೆಲವು ದುರದೃಷ್ಟಕರ ಘಟನೆಗಳಿಂದಾಗಿ ರೈಲ್ವೆಗೆ ಗಂಭೀರವಾದ ಹಾನಿಯಾಗಿದೆ ಮತ್ತು ಇದು ರೈಲ್ವೆಯು ಪ್ರತಿದಿನ ನಿರ್ವಹಿಸುವ ಮಹತ್ವದ ಕಾರ್ಯಗಳ ಮೇಲೆ ಕರಿನೆರಳು ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ರೈಲ್ವೆಯಲ್ಲಿ ಆಹಾರ ಪೂರೈಕೆ, ಹಾಸಿಗೆ-ಹೊದಿಕೆಗಳು ಮತ್ತು ಸ್ವಚ್ಛತೆಯೆಡೆಗೆ ಹೆಚ್ಚಿನ ಗಮನವನ್ನು ಹರಿಸುವ ಅಗತ್ಯವಿದೆಯೆಂದು ಹೇಳಿರುವ ಅವರು, ಅವುಗಳಲ್ಲಿ ತ್ವರಿತ ಸುಧಾರಣೆಯನ್ನು ತರಲು ಆಂದೋಲನದ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಜೊತೆಗೆ ರೈಲ್ವೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿಯೂ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.