ಹೋಪ್, ಬ್ರಾತ್‌ವೇಟ್ ಸಾಹಸ: ವಿಂಡೀಸ್‌ಗೆ ಐತಿಹಾಸಿಕ ಜಯ

Update: 2017-08-29 19:19 GMT

ಲೀಡ್ಸ್, ಆ.29: ಶೈ ಹೋಪ್ ಶತಕ ಹಾಗೂ ಬ್ರಾತ್‌ವೇಟ್ ಅರ್ಧಶತಕದ ಕೊಡುಗೆಯ ನೆರವಿನಿಂದ ವೆಸ್ಟ್‌ಇಂಗ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಐತಿಹಾಸಿಕ ಜಯ ಸಾಧಿಸಿರುವ ವಿಂಡೀಸ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

       ಐದನೆ ದಿನವಾದ ಮಂಗಳವಾರ ಗೆಲುವಿಗೆ 322 ರನ್ ಗುರಿ ಪಡೆದ ವಿಂಡೀಸ್ ತಂಡ ಹೋಪ್(ಅಜೇಯ 118, 211 ಎಸೆತ, 14 ಬೌಂಡರಿ) ಹಾಗೂ ಬ್ರಾತ್‌ವೇಟ್(95, 180 ಎಸೆತ, 12 ಬೌಂಡರಿ) 3ನೆ ವಿಕೆಟ್‌ಗೆ ಸೇರಿಸಿದ 144 ರನ್ ಜೊತೆಯಾಟದ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು. ಬ್ರಾತ್‌ವೇಟ್ ಔಟಾದ ಬಳಿಕ ಬ್ಲಾಕ್‌ವುಡ್(41)ರೊಂದಿಗೆ 5ನೆ ವಿಕೆಟ್‌ಗೆ 74 ರನ್ ಜೊತೆಯಾಟ ನಡೆಸಿದ ಹೋಪ್ ವಿಂಡೀಸ್ 91.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ರನ್ ದಾಖಲಿಸಲು ನೆರವಾದರು.

  1948ರ ಬಳಿಕ ಲೀಡ್ಸ್ ಮೈದಾನದಲ್ಲಿ ನಾಲ್ಕನೆ ಇನಿಂಗ್ಸ್‌ನಲ್ಲಿ 322ಕ್ಕೂ ಅಧಿಕ ಮೊತ್ತ ಬೆನ್ನಟ್ಟಿದ ಸಾಧನೆ ಮಾಡಿತು. 1948ರಲ್ಲಿ ಆಸ್ಟ್ರೇಲಿಯ ತಂಡ ಅರ್ಥರ್ ಮೊರಿಸ್(182) ಹಾಗೂ ಡಾನ್ ಬ್ರಾಡ್ಮನ್(ಅಜೇಯ 173) ಶತಕದ ನೆರವಿನಿಂದ 3 ವಿಕೆಟ್‌ಗಳ ನಷ್ಟಕ್ಕೆ 404 ರನ್ ಗಳಿಸಿತ್ತು.

ನಾಲ್ಕನೆ ದಿನವಾದ ಸೋಮವಾರ ಎರಡನೆ ಇನಿಂಗ್ಸ್‌ನ್ನು 8 ವಿಕೆಟ್‌ಗೆ 490 ರನ್‌ಗೆ ಡಿಕ್ಲೇರ್ ಮಾಡಿದ್ದ ಇಂಗ್ಲೆಂಡ್ ತಂಡ ವಿಂಡೀಸ್ ಗೆಲುವಿಗೆ ಕಠಿಣ ಸವಾಲು ನೀಡಿತು.

ಇಂಗ್ಲೆಂಡ್‌ನ ಪರ ಎರಡನೆ ಇನಿಂಗ್ಸ್‌ನಲ್ಲಿ ಮೊಯಿನ್ ಅಲಿ ಅಗ್ರ ಸ್ಕೋರರ್(84) ಎನಿಸಿಕೊಂಡರು. ನಾಯಕ ಜೋ ರೂಟ್ 72, ಕ್ರಿಸ್ ವೋಕ್ಸ್ ಅಜೇಯ 61, ಡೇವಿಡ್ ಮಲಾನ್ 61 ಹಾಗೂ ಬೆನ್ ಸ್ಟೋಕ್ಸ್ 58 ರನ್ ಗಳಿಸಿದರು.

 ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 209 ರನ್‌ಗಳಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯಲ್ಲಿತ್ತು. ಇದೀಗ 2ನೆ ಪಂದ್ಯವನ್ನು ಜಯಿಸಿರುವ ವಿಂಡೀಸ್ ಸರಣಿ ಸಮಬಲಗೊಳಿಸಿದೆ.

ಅನುಚಿತ ವರ್ತನೆ: ಹೋಲ್ಡರ್‌ಗೆ ಛೀಮಾರಿ

 ಇಂಗ್ಲೆಂಡ್ ವಿರುದ್ಧ ಹೆಡ್ಡಿಂಗ್ಲೆ ಯಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದ ವೇಳೆ ಸಹ ಆಟಗಾರ ಕ್ಯಾಚ್ ಕೈಚೆಲ್ಲಿದ್ದಕ್ಕೆ ಅನುಚಿತ ವರ್ತನೆ ತೋರಿದ ವೆಸ್ಟ್‌ಇಂಡೀಸ್ ನಾಯಕ ಜೇಸನ್ ಹೋಲ್ಡರ್‌ಗೆ ಐಸಿಸಿ ಮಂಗಳವಾರ ಛೀಮಾರಿ ಹಾಕಿದೆ.

ಇಂಗ್ಲೆಂಡ್‌ನ 2ನೆ ಇನಿಂಗ್ಸ್‌ನ 70ನೆ ಓವರ್‌ನಲ್ಲಿ ಹೋಲ್ಡರ್ ಬೌಲಿಂಗ್‌ನಲ್ಲಿ ಕೀರನ್ ಪೊವೆಲ್ ಅವರು ಡೇವಿಡ್ ಮಲಾನ್ ನೀಡಿದ್ದ ಕ್ಯಾಚ್ ಕೈಚೆಲ್ಲಿದ್ದರು. ಇದರಿಂದ ಹತಾಶರಾದ ಆಲ್‌ರೌಂಡರ್ ಹೋಲ್ಡರ್ ಸಹ ಆಟಗಾರನನ್ನು ಅನುಚಿತವಾಗಿ ಟೀಕಿಸಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News