×
Ad

ಸಮುದ್ರದ ಮಧ್ಯೆ 20 ದಿನಗಳು...: ಇಬ್ರಾಹೀಂ ಮದನಿ

Update: 2017-09-01 00:19 IST

35 ವರ್ಷಗಳ ಹಿಂದಿನ ಸಮುದ್ರಯಾನದ ಹಜ್ ಯಾತ್ರೆಯ ಅನುಭವ ಹಂಚಿಕೊಂಡ ಖಾಝಿ ಇಬ್ರಾಹೀಂ ಮದನಿ.

‘‘ಹಿಂದೆ ಹಜ್ ನಿರ್ವಹಿಸುವುದೆಂದರೆ ಈಗಿನಂತೆ ಕೆಲವೇ ಗಂಟೆಗಳಲ್ಲಿ ತಲುಪಬಲ್ಲ ವಿಮಾನಗಳ ಸೌಲಭ್ಯವಾಗಲಿ, ಮನೆಯ ಬಾಗಿಲಿನಿಂದ ಹೊರಡುವ ವಾಹನದ ಸೌಲಭ್ಯಗಳಾಗಲಿ ಇದ್ದಿಲ್ಲ. ಹಜ್ ನಿರ್ವಹಿಸಲು ಆಸಕ್ತಿ ಇರುವವರು ಅಂದಿನ ಕಾಲದಲ್ಲಿ ಮುಂಬೈಗೆ ಬಂದು ಸೇರಬೇಕಾಗಿತ್ತು. ನನಗೆ ನೆನಪಿದ್ದ ಹಾಗೆ ಮುಂಬೈಯಿಂದ ಹಜ್ ಯಾತ್ರಿಗಳನ್ನು ಹೊತ್ತೊಯ್ಯಲು ಅಕ್ಬರ್ ಮತ್ತು ನೂರ್‌ಜಹಾನ್ ಎಂಬ ಹೆಸರಿನ ಎರಡು ಹಡಗುಗಳಿರುತ್ತಿದ್ದವು. ದೇಶದಿಂದ ಹಜ್ ಯಾತ್ರೆ ಕೈಗೊಳ್ಳಬೇಕಾದರೆ ಈ ಹಡಗುಗಳಿಂದಲೇ ಹಜ್ ಯಾತ್ರೆ ಕೈಗೊಳ್ಳಬೇಕಾಗಿತ್ತು. ಮುಂಬೈನಿಂದ ಹೊರಡುವ ಈ ಹಡಗು ಸೌದಿ ಅರೇಬಿಯಾದ ಜಿದ್ದಾ ತಲುಪಬೇಕಾದರೆ 10 ದಿನಗಳು ಬೇಕಾಗಿದ್ದವು. ಹಜ್ ನಿರ್ವಹಿಸಿ ಹಿಂದಿರುಗಲು ಮತ್ತೆ 10 ದಿನಗಳು. ಹೀಗೆ 20 ದಿನಗಳು ಸಮುದ್ರ ಯಾನದಲ್ಲೇ ಕಳೆಯಬೇಕಾಗಿತ್ತು.’’

‘‘ಅದು 1983ರ ಘಟನೆ. ಆಗ ನನಗೆ 30ರ ಹರೆಯ. ಪ್ರಥಮ ಬಾರಿಗೆ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಮಂಗಳೂರಿನಿಂದ ಮುಂಬೈಗೆ ಬಸ್ಸಿನಲ್ಲಿ ಹೊರಟಿದ್ದೆ. ಮನೆಯಿಂದ ಹೊರಡಬೇಕಾದರೆ ಊರಿನವರೆಲ್ಲರನ್ನೂ ಮನೆಗೆ ಕರೆಸಿ ಊಟ ಹಾಕಿಸಿ ದುವಾ ನೆರವೇರಿಸಿ ಹಜ್ ತೆರಳುವುದು ವಾಡಿಕೆಯಾಗಿತ್ತು. ಮನೆಗೆ ಬಂದ ಕುಟುಂಬಸ್ಥರು, ಸ್ನೇಹಿತರು, ನೆರೆ ಹೊರೆಯವರು ನಮ್ಮನ್ನು ಬೀಳ್ಕೊಡುವಾಗ ಅವರ ಕಣ್ಣಂಚಿನಿಂದ ಹನಿ ಉದುರುತ್ತಿದ್ದವು. ಮನೆಯವರಂತೂ ಬೀಳ್ಕೊಡುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರ ದುಃಖಕ್ಕೆ ಕಾರಣಗಳಿದ್ದವು. 20 ದಿನಗಳ ಸಮುದ್ರ ಯಾನದಲ್ಲಿ ಹುಟ್ಟೂರಿಗೆ ಹಿಂದಿರುಗುವ ಖಾತರಿ ಇರುತ್ತಿರಲಿಲ್ಲ. ಜೀವದ ಹಂಗು ತೊರೆದು ಪ್ರಯಾಣ ಬೆಳೆಸಬೇಕಾಗಿತ್ತು. ಅಲ್ಲಾಹನ ಸಂಪ್ರೀತಿ ಗಳಿಸಲು ಅಲ್ಲಾಹನ ಭವನದ ಕಡೆಗೆ ಹೊರಡುತ್ತಿದ್ದೇನೆಂಬ ಖುಷಿ ಈ ಎಲ್ಲಾ ದುಃಖಗಳನ್ನು ಮರೆಯುವಂತೆ ಮಾಡುತ್ತಿತ್ತು’’

 ಇದು 40 ವರ್ಷಗಳಿಂದ ಇಮಾಂ, ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಸುರತ್ಕಲ್ ಸಮೀಪದ ಕಾಟಿಪಳ್ಳದ 6 ಜಮಾಅತ್‌ಗೊಳಪಟ್ಟ ಮಸೀದಿಗಳ ಸಂಯುಕ್ತ ಖಾಝಿಯಾಗಿ ನೇಮಿಸಲ್ಪಟ್ಟ ಬೆಳ್ತಂಗಡಿಯ ಪುತ್ತಿಲ ಗ್ರಾಮದ ಇ.ಕೆ.ಇಬ್ರಾಹೀಂ ಮದನಿ (64 ವರ್ಷ) ಅವರ ಅನುಭವಗಳು.

ಮುಂಬೈಗೆ ತರಳುವ ಹಜ್ ಯಾತ್ರಿಕರಿಗೆ ಅಲ್ಲಿ ‘ಮುಸಾಫಿರ್ ಖಾನಾ’ ಇತ್ತು. ಹಡಗಿನಲ್ಲಿ ಯಾನ ಕೈಗೊಳ್ಳುವ ಮುಂಚೆ ನಾವೆಲ್ಲರೂ ಈ ‘ಮುಸಾಫಿರ್ ಖಾನಾ’ ಸೇರುತ್ತಿದ್ದೆವು. ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿ ಸ್ಟಾಂಪಿಂಗ್ ಸಹಿತ ಮತ್ತಿತರ ದಾಖಲೆ ಪತ್ರಗಳು ಇಲ್ಲೇ ಸರಿಪಡಿಸಬೇಕಿತ್ತು. ಈ ದಾಖಲೆ ಪತ್ರಗಳು ಪಡೆಯಲು ಎರಡರಿಂದ ಮೂರು ದಿನಗಳು ತಂಗಬೇಕಾಗಿತ್ತು. ಈ ದಾಖಲೆ ಪತ್ರಗಳು ಕೈಗೆ ಸಿಕ್ಕಿದ ಬಳಿಕವೇ ಹಡಗಿನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು.

ಹಜ್ ಯಾತ್ರಿಕರಿಗೆ ಹಡಗಿನಲ್ಲಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಾನು ಪ್ರಯಾಣಿಸಿದ ಹಡಗಿನಲ್ಲಿ ಸುಮಾರು 2000 ಮಂದಿ ಹಜ್ ಯಾತ್ರಿಕರು ಇದ್ದರು. ಈ ವಿಶಾಲವಾದ ಹಡಗಿನಲ್ಲಿ ಕೊಠಡಿಗಳು, ವಿಧಾನಸೌಧ ಎಂಬ ವಿಶೇಷ ಕೊಠಡಿ, ಶೌರದ ಅಂಗಡಿ, ತಿನಿಸುಗಳ ಅಂಗಡಿ, ಈಜು ಕೊಳ ಸಹಿತ ವಿವಿಧ ಸೌಲಭ್ಯಗಳು ಇದ್ದವು. ಕುಡಿಯಲು, ಸ್ನಾನ ಮಾಡಲು ಪ್ರತ್ಯೇಕ ನೀರಿನ ವ್ಯವಸ್ಥೆ ಇತ್ತು. ಸೌದಿ ಅರೇಬಿಯಾಕ್ಕೆ ತೆರಳುವ ಮಾರ್ಗ ಮಧ್ಯೆ ನಾವು ಸಂಚರಿಸುತ್ತಿದ್ದ ಹಡಗು ಬೇರೊಂದು ರಾಷ್ಟ್ರದ ಬಂದರು ಪ್ರದೇಶದಲ್ಲಿ ನಿಂತು ಡೀಸೆಲ್ ಮತ್ತು ನೀರು ತುಂಬಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ನಾವು ಒಂದು ದಿನ ಅಲ್ಲೇ ತಂಗಬೇಕಾಯಿತು. ಡೀಸೆಲ್ ಮತ್ತು ನೀರು ತುಂಬಿಸಿಕೊಂಡು ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದ ಬಳಿಕ ಹಡಗು ಮತ್ತೆ ಸೌದಿ ಅರೇಬಿಯಾದ ಕಡೆಗೆ ಹೊರಟಿತ್ತು. ಈ ಸಮುದ್ರ ಮಧ್ಯೆ ಚಳಿ, ಗಾಳಿ ಇದ್ದರೂ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ, ಸಮುದ್ರಮಧ್ಯೆ ಬೀಸುತ್ತಿರುವ ಗಾಳಿಯೊಂದಿಗೆ ಮೂಗಿಗೆ ಬಡಿಯುತ್ತಿದ್ದ ಗಡಸು ವಾಸನೆ ಮಾತ್ರ ಸಹಿಸಲಸಾಧ್ಯವಾಗಿತ್ತು. ಸಮುದ್ರದ ನೀರಿನ ಮೇಲೆ ಎಣ್ಣೆಯನ್ನು ಕಾಣುತ್ತಿದ್ದೆವು. ಈ ಎಣ್ಣೆಯು ಸಂಚರಿಸುವ ಹಡಗುಗಳಿಂದ ಸೋರಿಕೆಯಾಗಿರುವ ಡೀಸೆಲ್ ಆಗಿರಬಹುದೆಂದು ನಾವು ಭಾವಿಸುತ್ತಿದ್ದೆವು. ಹಡಗು ಮುಂದೆ ಸಂಚರಿಸಿದಂತೆ ಸಮುದ್ರದಲ್ಲಿ ನೀರಿನ ಬದಲು ಎಣ್ಣೆಯ ಅಂಶವನ್ನೇ ಕಾಣುತ್ತಿದ್ದೆವು. ನಮಗೆ ವಾಕರಿಕೆ ಬರುತ್ತಿತ್ತು. ಕೆಲವರು ಈ ದುರ್ವಾಸನೆಗೆ ವಾಂತಿ ಮಾಡುತ್ತಿದ್ದರು. ಇದರ ನಡುವೆ ಹಡಗು ತುಸು ವಾಲಿಕೊಳ್ಳುವಾಗ ಹೆದರಿಕೆಯಾಗುತ್ತಿತ್ತು. ಎಲ್ಲರೂ ಒಂದು ಕೊಠಡಿಯೊಳಗೆ ಸೇರುತ್ತಿದ್ದೆವು. ಅಲ್ಲಿ ನಮಗೆ ತರಬೇತಿಯನ್ನು ನೀಡಲಾಗುತ್ತಿತ್ತು. ಐದು ಅಥವಾ 10 ಜನರ ಪತ್ಯೇಕ ತಂಡವನ್ನು ಮಾಡಿ ತಲಾ ತಂಡಕ್ಕೆ ಒಬ್ಬೊಬ್ಬರಂತೆ ಉಸ್ತುವಾರಿ ನೋಡಿಕೊಳ್ಳಲು ನೇಮಕ ಮಾಡಲಾಗುತ್ತಿತ್ತು. ಒಂದು ತಂಡದ ನಾಯಕತ್ವವನ್ನು ನಾನು ವಹಿಸಿದ್ದೆ ಎನ್ನುತ್ತಾರೆ ಇ.ಕೆ.ಇಬ್ರಾಹೀಂ ಮದನಿ ಉಸ್ತಾದ್.

1 ಕ್ವಿಂಟಾಲ್ ಸಾಮಾನುಗಳೊಂದಿಗೆ ತೆರಳಿದ್ದೆ

ಹಜ್ ನಿರ್ವಹಿಸಲು ಅಂದು ಲಗೇಜ್‌ಗಳಿಗೆ ಯಾವುದೇ ನಿರ್ಬಂಧ ಇರಲಲ್ಲಿ. 90 ದಿನಗಳ ಬಳಿಕ ಹಿಂದಿರಬೇಕಾಗಿರುವುದರಿಂದ ಅಷ್ಟು ದಿನಗಳಿಗೆ ಬೇಕಾಗುವಷ್ಟು ಅಕ್ಕಿ ಸಹಿತ ಒಣ ಮೀನು, ಆಯುರ್ವೇದಿಕ್ ಮದ್ದು, ಪಾತ್ರೆ, ಸ್ಟೌ ಮತ್ತಿತರ ಆಹಾರ ಸಾಮಗ್ರಿಗಳ ಸಹಿತ ಸುಮಾರು ಒಂದು ಕ್ವಿಂಟಾಲ್‌ನಷ್ಟು ಸಾಮಾನುಗಳನ್ನು ಹೊತ್ತೊಯ್ದಿದ್ದೆ. ಹಡಗಿನಲ್ಲಿ ಊಟೋಪಚಾರ ಸಹಿತ ಎಲ್ಲ ವ್ಯವಸ್ಥೆಗಳೂ ಪೂರೈಸಲಾಗುತ್ತಿದ್ದರೂ ಜಿದ್ದಾ ಪಟ್ಟಣದಲ್ಲಿ ಇಳಿದ ಬಳಿಕ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕಾಗಿತ್ತು.

ಮರೆಯಲಾಗದ ಕ್ಷಣ

  ನಮ್ಮದೇ ಹಡಗಿನಲ್ಲಿ ಕೇರಳ ತಲಶ್ಶೇರಿಯ ಅಬ್ದುಲ್ಲಾ ಎಂಬ ವೃದ್ಧರೊಬ್ಬರು ಹಜ್ ಯಾತ್ರೆ ಕೈಗೊಂಡಿದ್ದರು. ಜಿದ್ದಾಕ್ಕೆ ಹೋಗುವ ಪ್ರಯಾಣದ ಸಂದರ್ಭದಲ್ಲಿ ಅವರು ತಮ್ಮ ಮನೆಯ ಕೆಲವು ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ‘‘ಎಷ್ಟೋ ವರ್ಷಗಳ ಬಳಿಕ ನನಗೆ ಹಜ್ ನಿರ್ವಹಿಸುವ ಭಾಗ್ಯ ಲಭಿಸಿದೆ. ನನ್ನ ಆರೋಗ್ಯವನ್ನು ಗಮನಿಸುವಾಗ ನಾನು ಮನೆಗೆ ಹಿಂದಿರುಗುತ್ತೇನೆಂಬ ಗ್ಯಾರಂಟಿ ನನಗಿಲ್ಲ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಜ್ ನಿರ್ವಹಿಸುವ ಹಲವು ವರ್ಷಗಳ ಕನಸು ನನಸಾಗಬೇಕೆಂಬುದೇ ನನ್ನ ಆಸೆ’’ ಎಂದು ಹೇಳಿಕೊಳ್ಳುತ್ತಿದ್ದರು. ಕೊನೆಗೂ ನನ್ನೊಂದಿಗೆ ಅವರು ಜಿದ್ದಾ ಪಟ್ಟಣ ತಲುಪಿದ್ದರು. ಹಜ್ ಕಾರ್ಯಗಳನ್ನು ಪೂರೈಸಿ ಸುಮಾರು ಎರಡೂವರೆ ತಿಂಗಳ ಬಳಿಕ ನಾವು ಹುಟ್ಟೂರಿಗೆ ಮರಳಲು ಹಡಗು ಏರಿದ್ದೆವು. ಕೆಲವೇ ದಿನಗಳು ಕಳೆದಿದ್ದವು. ಒಂದು ದಿನ ಸಂಜೆಯ ಹೊತ್ತಿಗೆ ಹಡಗಿನ ಮೇಲಂತಸ್ತಿನಲ್ಲಿ ಮಲಗಿಕೊಂಡಿದ್ದ ಅಬ್ದುಲ್ಲಾ ಅವರು ಹಠಾತ್ ಆಗಿ ಕೆಳಗಿನ ಅಂತಸ್ತಿಗೆ ಬಿದ್ದರು. ಹಡಗಿನೊಳಗಿನಿಂದ ನಾವೆಲ್ಲಾ ಓಡಿ ಬಂದೆವು. ಅವರಿಗೆ ಹಡಗಿನಲ್ಲಿದ್ದ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆ ನೀಡಿದರು. ಆದರೆ, ಅಬ್ದುಲ್ಲಾ ಅವರು ಬದುಕುಳಿಯಲಿಲ್ಲ. ಸಿಬ್ಬಂದಿ ಅವರ ವಾರೀಸುದಾರರನ್ನು ಹುಡುಕುತ್ತಿದ್ದರು. ಆದರೆ ಅವರ ವಾರೀಸುದಾರರಾರೂ ಇರಲಿಲ್ಲಿ. ಹಡಗಿನಲ್ಲಿ ಮೃತದೇಹ ಹೆಚ್ಚು ದಿನ ಇಡಲು ಸಾಧ್ಯವಾಗಿರಲಿಲ್ಲ. ಅದನ್ನು ವಿಲೇವಾರಿ ಮಾಡಬೇಕಾಗಿತ್ತು. ಕೊನೆಗೆ ಸಿಬ್ಬಂದಿ ಮೃತದೇಹದ ವಿಲೇವಾರಿಗೆ ನನ್ನ ಸಹಿಯನ್ನು ಪಡೆದುಕೊಂಡರು. ಬಳಿಕ ನನ್ನ ಉಸ್ತುವಾರಿಯಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿದ ಬಳಿಕ ಸಿಬ್ಬಂದಿ ಅಬ್ದುಲ್ಲಾರ ಮೃತದೇಹವನ್ನು ಪೆಟ್ಟಿಗೆಯಲ್ಲಿ ಹಾಕಿ ಮುದ್ರಕ್ಕೆ ಇಳಿಯಬಿಟ್ಟರು. ಈ ಘಟನೆಯಿಂದ ನಾನು ತುಂಬಾ ದುಃಖಿತನಾಗಿದ್ದೆ. ಮುಂಬೈ ಪಟ್ಟಣ ತಲುಪುವವರೆಗೂ ಅಬ್ದುಲ್ಲಾರ ಲಗ್ಗೇಜ್‌ನ್ನು ಜೋಪಾನವಾಗಿಟ್ಟು ಮುಂಬೈನ ಕಸ್ಟಂ ಕಚೇರಿಗೆ ಒಪ್ಪಿಸಿ ಅವರ ಮನೆಗೆ ತಲುಪಿಸುವಂತೆ ಕೇಳಿಕೊಂಡೆ. ಅಬ್ದುಲ್ಲಾರ ಆ ಲಗೇಜ್‌ನಲ್ಲಿ ಒಂದು ಸ್ಟೌ ಮತ್ತು 2 ಪಾತ್ರೆಗಳಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ