×
Ad

ತಾಯಿಯನ್ನು ಹೆಗಲಲ್ಲಿ ಹೊತ್ತು ಹಜ್ ನಿರ್ವಹಿಸಿದೆ: ಬಶೀರ್ ಬೆಂಗ್ರೆ

Update: 2017-09-01 00:28 IST

ಸುಮಾರು 21 ವರ್ಷದ ಹಿಂದೆ. ಅಂದರೆ ನನಗಾಗ 41 ವರ್ಷ ವಯಸ್ಸು. ಉಮ್ಮನಿಗೆ 64 ವರ್ಷ ವಯಸ್ಸು. ಎಳೆಯ ಪ್ರಾಯದಲ್ಲಿ ದುಡಿದ ಕಾರಣವೋ, ವಯೋಸಹಜವೋ ಅವರ ಕಾಲು ಶಕ್ತಿ ಕಳಕೊಂಡಿತ್ತು. ಅತ್ತಿಂದಿತ್ತ ನಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅದೊಂದು ದಿನ ನನ್ನ ಉಮ್ಮ ‘ಮೋನೇ... ಹಜ್‌ಗೆ ಹೋಗೋಣವೇ?’ ಎಂದು ಕೇಳಿದರು.

ಉಮ್ಮನ ಬಾಯಿಯಿಂದ ನಾನು ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಯಾಕೆಂದರೆ ಅವರು ಅತ್ತಿಂದಿತ್ತ ಒಂದು ಹೆಜ್ಜೆ ಇಡುತ್ತಿರಲಿಲ್ಲ. ಹೀಗಿರುವಾಗ ಉಮ್ಮನ ಈ ಮಾತು ನನ್ನನ್ನು ಆಶ್ಚರ್ಯಚಕಿತಗೊಳಿಸಿತ್ತು. ಹಜ್ ಪೂರೈಸಿದ ಬಳಿಕವಾದರೂ ಆರೋಗ್ಯ ಸುಧಾರಿಸೀತು ಎಂಬ ಆಶಾಭಾವನೆಯಿಂದ ಕೇಳುತ್ತಾರೋ ಏನೋ ಎಂದು ಭಾವಿಸಿ ‘ಉಮ್ಮ... ನೀವು ಮಾನಸಿಕವಾಗಿ ಸಿದ್ಧರಾಗುವುದಾದರೆ ನಾನು ನಿಮ್ಮಾಡನೆ ಬರುವೆ. ನಿಮ್ಮ ಆಸೆ ನೆರವೇರಿಸಲು ನಾನು ಪ್ರಯತ್ನಿಸುವೆ’ ಎಂದೆ. ಅಷ್ಟೇ ಅಲ್ಲ. 1996ರಲ್ಲಿ ಖಾಸಗಿ ಹಜ್ ಟೂರ್ ಸಂಸ್ಥೆಯ ಮೂಲಕ ಉಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡೇ ಹಜ್ ಕರ್ಮ ಪೂರೈಸಿದೆ. ಆ ತೃಪ್ತಿ ನನಗೆ ಈಗಲೂ ಇದೆ.

ಇದು ಕಸಬಾ ಬೆಂಗರೆಯ ಹಾಜಿ ಮುಹಮ್ಮದ್ ಬಶೀರ್ ಅವರ ಮಾತು. ಬಶೀರ್‌ಗೆ ಈಗ 62ರ ಹರೆಯ. ಅವರ ಉಮ್ಮ ನಫೀಸಾರಿಗೆ 85 ವರ್ಷ ದಾಟಿದೆ. ವಯೋ ಸಹಜದಿಂದ ನಫೀಸಮ್ಮ ಈಗ ಹಾಸಿಗೆ ಹಿಡಿದಿದ್ದಾರೆ. ಬಶೀರ್ ಎಂದಿನಂತೆ ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗರೆಯಿಂದ ಕಾರಿನಲ್ಲಿ ಬಜ್ಪೆಗೆ ಪ್ರಯಾಣ ಬೆಳೆಸಿ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಮತ್ತೆ ಅಲ್ಲಿಂದ ನೇರ ಮದೀನಾಕ್ಕೆ ತೆರಳಿದೆ. ಹೀಗೆ ಸುಮಾರು 35 ದಿನ ಉಮ್ಮನನ್ನು ಅಲ್ಲಿ ಹೆಗಲ ಮೇಲೆ ಹೊತ್ತುಕೊಂಡೇ ಹಜ್ ಕರ್ಮ ಪೂರೈಸಿದೆ. ತವಾಫ್ ಮಾಡುವಾಗಲೂ ನಾನು ಉಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡೆ. ಅಪರೂಪಕ್ಕೊಮ್ಮೆ ಗಾಲಿಚಕ್ರ ಬಳಸಿದ್ದು ಬಿಟ್ಟರೆ ಉಳಿದಂತೆ ನಾನು ಉಮ್ಮನಿಗೆ ಆಸರೆಯಾಗಿ ನಿಂತೆ. ಈ ಸಂದರ್ಭ ಅಲ್ಲಿದ್ದ ಊರಿನ ಗೆಳೆಯರ ಸಹಕಾರ ಮರೆಯಲು ಸಾಧ್ಯವಿಲ್ಲ.

ಉಮ್ಮನ ಹಿರಿಯ ಮಗನಾಗಿ ನಾನು ನನ್ನ ಕರ್ತವ್ಯ ಪೂರೈಸುವುದು ಅನಿವಾರ್ಯವಾಗಿತ್ತು. ಅಂದರೆ, ಆವರೆಗೂ ನಾನು ನನ್ನ ಬಟ್ಟೆಬರೆಯನ್ನು ಒಗೆದವನಲ್ಲ. ಆದರೆ, ಹಜ್ ಯಾತ್ರೆಯ ಸಂದರ್ಭ ನಾನು ಉಮ್ಮನ ಬಟ್ಟೆಬರೆಯನ್ನೂ ಒಗೆದೆ. ಅವರ ಎಲ್ಲಾ ಕಷ್ಟಗಳಿಗೆ ಸ್ಪಂದಿಸಿದೆ, ಸೇವಾ ಮನೋಭಾವದಿಂದ ಉಪಚರಿಸಿದೆ. ಮರಳಿ ಮನೆಗೆ ಬರುವಾಗಲೂ ಅಷ್ಟೆ, ಉಮ್ಮನನ್ನು ಹೆಗಲಿಗೇರಿಸಿಕೊಂಡೆ.

ಪವಿತ್ರ ಹಜ್ ಯಾತ್ರೆ ಪೂರೈಸಬೇಕು ಎಂಬ ಆಸೆ ನನಗೆ ಹಿಂದಿನಿಂದಲೂ ಇತ್ತು. ಆದರೆ, ಅದರೊಂದಿಗೆ ಆ ಪವಿತ್ರ ಭೂಮಿಯಲ್ಲಿ ಉಮ್ಮನ ಸೇವೆ ಮಾಡುವ ಸೌಭಾಗ್ಯ ಸಿಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಆದರೆ ಅಲ್ಲಾಹು ಅವೆಲ್ಲವನ್ನೂ ನನಗೆ ಕರುಣಿಸಿದ. ಅದಕ್ಕಾಗಿ ನಾನು ಅಲ್ಲಾಹನಿಗೆ ಎಷ್ಟು ಕೃತಜ್ಞನಾದರೂ ಸಾಲದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ