ಸೆರೆನಾ ವಿಲಿಯಮ್ಸ್‌ಗೆ ಹೆಣ್ಣು ಮಗು

Update: 2017-09-02 05:12 GMT

ವಾಷಿಂಗ್ಟನ್, ಸೆ.2: ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫ್ಲೋರಿಡಾದ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಈ ವಿಷಯವನ್ನು ಸೆರೆನಾ ಕೋಚ್ ಪ್ಯಾಟ್ರಿಕ್ ವೌರಾಟೊಗ್ಲೊ ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಗೆ ಮಗು ಜನಿಸಿದ್ದಕ್ಕೆ ವೀನಸ್ ವಿಲಿಯಮ್ಸ್‌ಗೆ ತುಂಬಾ ಸಂತೋಷವಾಗಿದೆ.

ರೆಡ್ಡಿಟ್ ಸಹ-ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್‌ರನ್ನು ಬಾಳಸಂಗಾತಿಯನ್ನಾಗಿಸಿಕೊಂಡಿರುವ 35ರ ಹರೆಯದ ಅಮೆರಿಕದ ಆಟಗಾರ್ತಿ ಸೆರೆನಾ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿದ ಬಳಿಕ ಯಾವುದೇ ಟೂರ್ನಮೆಂಟ್‌ಗಳನ್ನು ಆಡಿಲ್ಲ. ಆದರೆ, ತಾನು ಗರ್ಭಿಣಿಯಾಗಿದ್ದಾಗ ಟೆನಿಸ್ ಆಡುತ್ತಿದ್ದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

‘‘ಹೆಣ್ಣುಮಗುವಿನ ತಾಯಿಯಾಗಿರುವ ಸೆರೆನಾ ವಿಲಿಯಮ್ಸ್‌ಗೆ ಅಭಿನಂದನೆಗಳು..ನಿನ್ನ ಬಗ್ಗೆ ನನಗೆ ತುಂಬಾ ಸಂತೋಷವಾಗುತ್ತಿದೆ. ನಿನ್ನ ಭಾವನೆಯನ್ನು ಅರ್ಥಮಾಡಿಕೊಳ್ಳುವೆ’’ ಎಂದು ಸೆರೆನಾರ ಕೋಚ್ ಪ್ಯಾಟ್ರಿಕ್ ಟ್ವೀಟ್ ಮಾಡಿದ್ದಾರೆ.

‘‘ಸೆರೆನಾ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ? ಆ ಮಗು ಟೆನಿಸ್ ಆಡಲಾರದು ಎಂಬ ವಿಶ್ವಾಸ ನನ್ನದು’’ ಎಂದು ವಿಶ್ವದ ನಂ.3ನೆ ಆಟಗಾರ್ತಿ ಗಾರ್ಬೈನ್ ಮುಗುರುಝ ತಮಾಷೆಯ ಟ್ವೀಟ್ ಮಾಡಿದರು.

ಸೆರೆನಾ ವಿಲಿಯಮ್ಸ್ ಎಪ್ರಿಲ್‌ನಲ್ಲಿ ತಾನು ಗರ್ಭಿಣಿ ಎಂದು ಬಹಿರಂಗಪಡಿಸಿದ್ದರು. ವಿಶ್ವದ ಶ್ರೀಮಂತ ಮಹಿಳಾ ಅಥ್ಲೀಟ್ ಆಗಿರುವ ಸೆರೆನಾ ಆಸ್ಟ್ರೇಲಿಯನ್ ಓಪನ್‌ನಲ್ಲಿ 23ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದಾಗ ಎರಡು ತಿಂಗಳ ಗರ್ಭಿಣಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News