ಈ ವರ್ಷ ದೇಶದಲ್ಲಿ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆಯೆಷ್ಟು ಗೊತ್ತೇ?

Update: 2017-09-02 06:22 GMT

ಹೊಸದಿಲ್ಲಿ,ಸೆ.2 : ದೇಶದಲ್ಲಿ ಈ ವರ್ಷ ಮಾರಕ ಹಂದಿಜ್ವರವು ಸುಮಾರು 1100 ಜನರನ್ನು ಬಲಿ ತೆಗೆದುಕೊಂಡಿದ್ದು ಸಾವಿರಾರು ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಹಂದಿ ಜ್ವರದಿಂದ ಅತಿ ಹೆಚ್ಚು, ಅಂದರೆ 488 ಮಂದಿ  ಬಲಿಯಾಗಿದ್ದರೆ, ಗುಜರಾತ್ ರಾಜ್ಯದಲ್ಲಿ ಹಂದಿಜ್ವರದಿಂದ ಸಾವಿಗೀಡಾದವರ ಸಂಖ್ಯೆ 343 ಆಗಿದೆ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳಂತೆ ದೇಶಾದ್ಯಂತ ಹಂದಿಜ್ವರದ 22,186 ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷ  ಮಹಾರಾಷ್ಟ್ರದಲ್ಲಿ ಕೇವಲ 25 ಹಂದಿಜ್ವರ ಪ್ರಕರಣಗಳು ವರದಿಯಾಗಿದ್ದರೆ, ಈ ವರ್ಷ ದೇಶದಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವ ಪೈಕಿ ಶೇ 25ರಷು ಮಂದಿ ಈ ರಾಜ್ಯದವರಾಗಿದ್ದಾರೆ. ಸಾವಿಗೀಡಾದವರಲ್ಲಿ ಹೆಚ್ಚಿನವರು 25ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಗುಜರಾತ್ ರಾಜ್ಯದಲ್ಲಿ ಈ ವರ್ಷ ಒಟ್ಟು 4,751 ಪ್ರಕರಣಗಳು ವರದಿಯಾಗಿದ್ದು ಶೇ 7.23 ಪ್ರಕರಣಗಳಲ್ಲಿ ಸಾವು ಸಂಭವಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ  ಐದು ಪಟ್ಟು ಹೆಚ್ಚಾಗಿದೆ. ಕಳೆದ 15 ದಿನಗಳಲ್ಲಿಯೇ  ಈ ರೋಗದಿಂದ ಸಾವಿಗೀಡಾದವರ ಸಂಖ್ಯೆ 152 ಆಗಿದೆ.

ಉತ್ತರ ಪ್ರದೇಶದಲ್ಲಿ ಈ ವರ್ಷ ಇಲ್ಲಿಯ ತನಕ 2,791 ಹಂದಿಜ್ವರ ಪ್ರಕರಣಗಳು ವರದಿಯಾಗಿದ್ದು 64 ಸಾವುಗಳು ಸಂಭವಿಸಿವೆ.  ಅತ್ತ ಪಂಜಾಬ್ ರಾಜ್ಯದಲ್ಲಿ ಹಂದಿಜ್ವರದಿಂದ 31 ಮಂದಿ ಸಾವಿಗೀಡಾಗಿದ್ದರೆ, ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಕ್ರಮವಾಗಿ 27 ಹಾಗೂ 23 ಮಂದಿ ಸಾವಿಗೀಡಾಗಿದ್ದಾರೆ. ರಾಜಸ್ಥಾನದಲ್ಲಿ ಒಟ್ಟು 910 ಪ್ರಕರಣಗಳು ವರದಿಯಾಗಿದ್ದರೆ, 86 ಮಂದಿ ಸಾವಿಗೀಡಾಗಿದ್ದಾರೆ. ತೆಲಂಗಾಣದಲ್ಲಿ 1,704 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಆಗಸ್ಟ್ 30ರ ತನಕ 1,308 ಪ್ರಕರಣಗಳು ವರದಿಯಾಗಿದ್ದು 74 ಮಂದಿ ಸಾವಿಗೀಡಾಗಿದ್ದಾರೆ, ತಮಿಳುನಾಡಿನಲ್ಲಿ 3000 ಪ್ರಕರಣಗಳು ವರದಿಯಾಗಿದ್ದು 15 ಮಂದಿ ಬಲಿಯಾಗಿದ್ದಾರೆ, ಗೋವಾ ಮತ್ತು ಅಸ್ಸಾಂನಲ್ಲಿ ಈ ಮಾರಕ ರೋಗಕ್ಕೆ ಕ್ರಮವಾಗಿ 19 ಹಾಗೂ ಮೂರು ಮಂದಿಯನ್ನು ಬಲಿ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News