ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಟಾಪ್-5ರಲ್ಲಿ ರೊನಾಲ್ಡೊ

Update: 2017-09-02 18:43 GMT

ಮ್ಯಾಡ್ರಿಡ್, ಸೆ.2: ಫರೊ ಐಲ್ಯಾಂಡ್ಸ್ ತಂಡದ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೋರ್ಚುಗೀಸ್‌ನ ಪರ ಹ್ಯಾಟ್ರಿಕ್ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಸಾರ್ವಕಾಲಿಕ ಶ್ರೇಷ್ಠ ಅಂತಾರಾಷ್ಟ್ರೀಯ ಗೋಲ್ ಸ್ಕೋರರ್ ಎಲೈಟ್-5ಕ್ಕೆ ಸೇರ್ಪಡೆಯಾಗಿದ್ದಾರೆ. ಬ್ರೆಝಿಲ್‌ನ ಲೆಜೆಂಡ್ ಪೀಲೆ ದಾಖಲೆಯನ್ನು ಮುರಿದಿರುವ ರೊನಾಲ್ಡೊ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

 ಒಟ್ಟು 78 ಅಂತಾರಾಷ್ಟ್ರೀಯ ಗೋಲುಗಳನ್ನು ಬಾರಿಸಿದ ರೊನಾಲ್ಡೊ ಅವರು ಪೀಲೆ(77 ಗೋಲು) ದಾಖಲೆ ಮುರಿದರು. ಗರಿಷ್ಠ ಗೋಲು ಬಾರಿಸಿದ ವಿಶ್ವದ 5ನೆ ಆಟಗಾರ ಎನಿಸಿಕೊಂಡರು. ಇರಾನ್‌ನ ಆಲಿ ಡಾಯಿ(109)ಸಾರ್ವಕಾಲಿಕ ಶ್ರೇಷ್ಠ ಗೋಲ್‌ಸ್ಕೋರರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಪೊಲೆಂಡ್‌ನ ಫೆರನ್ಸ್ ಪುಸ್ಕಾಸ್(84), ಜಪಾನ್‌ನ ಕುನಿಶಿಗೆ ಕಮಾಮೊಟೊ(80) ಹಾಗೂ ಗಾಡ್‌ಫ್ರೈ ಚಿಟಾಲು(79) ನಂತರದ ಸ್ಥಾನದಲ್ಲಿದ್ದಾರೆ. ಜಪಾನ್‌ನ ಕುನಿಶಿಗೆ ದಾಖಲೆ ಸರಿಗಟ್ಟಲು ರೊನಾಲ್ಡೊಗೆ ಇನ್ನೆರಡು ಗೋಲುಗಳ ಅಗತ್ಯವಿದೆ.

ಪೀಲೆ ಕೇವಲ 92 ಪಂದ್ಯಗಳಲ್ಲಿ 77 ಗೋಲುಗಳನ್ನು ಬಾರಿಸಿದ್ದರು. ಪೋರ್ಚುಗಲ್ ಪರ ಈಗಾಗಲೇ 144 ಪಂದ್ಯಗಳನ್ನು ಆಡಿರುವ ರೊನಾಲ್ಡೊ ಅಂತಾರಾಷ್ಟ್ರೀಯ ಪಂದ್ಯದಲ್ಲಿ 5ನೆ ಹ್ಯಾಟ್ರಿಕ್ ಗೋಲು ಬಾರಿಸಿ ಇನ್ನಷ್ಟು ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ. ‘‘ಫಿಫಾ ಅಂತಾರಾಷ್ಟ್ರೀಯ ಗೋಲ್ ಸ್ಕೋರರ್ ಎಲೈಟ್-5ಕ್ಕೆ ಸೇರ್ಪಡೆಯಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊಗೆ ಅಭಿನಂದನೆಗಳು’’ ಎಂದು ಪೀಲೆ ಟ್ವೀಟ್ ಮಾಡಿದ್ದಾರೆ.

ಕಳೆದ ಋತುವಿನಲ್ಲಿ ರಿಯಲ್ ಮ್ಯಾಡ್ರಿಡ್ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದ ರೊನಾಲ್ಡೊ ಸತತ ಎರಡನೆ ಬಾರಿ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟ್ರೋಫಿ ಜಯಿಸಲು ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News