'ಹಾರ್ವೆ’ ಚಂಡಮಾರುತ ಸಂತ್ರಸ್ತರಿಗೆ ನೆರವಾಗುವ ಮೂಲಕ ಈದ್ ಆಚರಣೆ !

Update: 2017-09-03 10:17 GMT

ಈದುಲ್ ಅಝ್ ಹಾ ದಿನದಂದು ಎಲ್ಲಾ ಮುಸ್ಲಿಮರಂತೆ ಮನೆಯನ್ನು ಸ್ವಚ್ಛಗೊಳಿಸಿ, ಮನೆಗೆ ಬರುವ ಅತಿಥಿಗಳಿಗಾಗಿ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸುವ ಸಿದ್ಧತೆಯಲ್ಲಿ ಹ್ಯೂಸ್ಟನ್ ನ ನಿವಾಸಿಯಾದ ಶಾಝಿಯಾ ಅಶ್ರಫ್ ಇದ್ದರು. ಆದರೆ ಈ ವರ್ಷ ಸ್ವಚ್ಛಗೊಳಿಸಲು ಅವರಿಗೆ ಮನೆಯಿಲ್ಲ, ತಿಂಡಿ ತಿನಿಸುಗಳನ್ನು ತಯಾರಿಸಲು ಅಡುಗೆ ಕೋಣೆಯೂ ಇಲ್ಲ. ಈ ವರ್ಷ ಇಲ್ಲಿನ ಎಲ್ಲಾ ನಿವಾಸಿಗಳಂತೆ ‘ಹಾರ್ವೆ’ ಚಂಡಮಾರುತದಿಂದ ಶಾಝಿಯಾ ಎಲ್ಲವನ್ನೂ ಕಳೆದುಕೊಂಡಿದ್ದಾರೆ.

“ನಗರದಲ್ಲಿ ‘ಹಾರ್ವೆ’ ಭೀಕರ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಅರಿತ ಕೂಡಲೇ ಇಸ್ಲಾಮಿಕ್ ಸೊಸೈಟಿ ಆಫ್ ಗ್ರೇಟರ್ ಹ್ಯೂಸ್ಟನ್ (ಐಎಸ್ ಜಿಎಚ್) ತನ್ನ ತಂಡವನ್ನು ಬೇರೆ ಬೇರೆ ಪ್ರದೇಶಗಳಿಗೆ ಕಳುಹಿಸಿ ಮಸೀದಿಗಳನ್ನು ಆಶ್ರಯತಾಣವಾಗಿ ತಯಾರು ಮಾಡಿತು. ಈ ಬಗ್ಗೆ ನಾವು ನಮ್ಮ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡೆವು” ಎನ್ನುತ್ತಾರೆ ಐಎಸ್ ಜಿಎಚ್ ನ ಸಿಸ್ಟರ್ಸ್ ಕಮಿಟಿಯ ಸದಸ್ಯೆ ಶಾಝಿಯಾ.

ಶಾಝಿಯಾರ ಮನೆಯ ಸಮೀಪದ ಸುಮಾರು 80ರಿಂದ 100 ಮನೆಗಳು ‘ಹಾರ್ವೆ’ಯಿಂದಾಗಿ ಭಾಗಶಃ ಹಾನಿಗೊಳಗಾಗಿದೆ.

“ನಾನು ಹ್ಯೂಸ್ಟನ್ ನಲ್ಲಿ ಸುಮಾರು 30 ವರ್ಷಗಳಿಂದ ವಾಸಿಸುತ್ತಿದ್ದು, ಸಾಮಾನ್ಯವಾಗಿ ಚಂಡಮಾರುತದಂತಹ ಪ್ರಕೃತಿ ವಿಕೋಪಗಳನ್ನು ಕಂಡಿದ್ದೇನೆ. ಆದರೆ ಅವೆಂದೂ ಇಷ್ಟರ ಮಟ್ಟಿಗೆ ವಿನಾಶಕಾರಿಯಾಗಿರಲಿಲ್ಲ” ಎನ್ನುತ್ತಾರೆ ಅವರು.

ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಅತೀ ಹೆಚ್ಚು ಮುಸ್ಲಿಮರಿದ್ದಾರೆ. 60 ಸಾವಿರ ಮುಸ್ಲಿಮರಿದ್ದು, ಇದು ಇಲ್ಲಿನ ಜನಸಂಖ್ಯೆಯ 1.2  ಶೇ,ದಷ್ಟಾಗಿದೆ. ಇಲ್ಲಿ ಸುಮಾರು 40 ಮಸೀದಿಗಳಿದ್ದು, ‘ಹಾರ್ವೆ’ ಚಂಡಮಾರುತದಿಂದಾಗಿ ಎಲ್ಲವೂ ಹಾನಿಗೊಳಗಾಗಿವೆ.

“ಮಸೀದಿಯ ಸೀಲಿಂಗ್ ನಲ್ಲಿ ಲೀಕೇಜ್ ಕಾಣಿಸಿಕೊಂಡಿದ್ದು, ಮಸೀದಿಯ ಕಾರ್ಪೆಟನ್ನು ಬದಲಾಯಿಸಬೇಕಾಗಿದೆ. ಇದಕ್ಕೆ ಸುಮಾರು 10 ಸಾವಿರ ಡಾಲರ್ ಬೇಕಾಗಬಹುದು” ಎನ್ನುತ್ತಾರೆ ಅಹಮದಿಯ ಮುಸ್ಲಿಮ್ ಕಮ್ಯುನಿಟಿಯ ಅಧ್ಯಕ್ಷ ಬಿಲಾಲ್ ರಾಣಾ. ಚಂಡಮಾರುತದಿಂದಾಗಿ ತತ್ತರಿಸಿರುವ ಜನರ ಮನೆಗಳನ್ನು ಸ್ವಚ್ಛಗೊಳಿಸುವುದು, ತಮ್ಮ ತಂಡದ ಜೊತೆ ಸ್ವಯಂ ಸೇವೆಯಲ್ಲಿ ಬಿಲಾಲ್ ತೊಡಗಿದ್ದಾರೆ.

ಮಸೀದಿಗಳ ಮುಂಭಾಗ ಸಂಪೂರ್ಣ ಹಾನಿಗೀಡಾಗಿರುವುದರಿಂದ ಸ್ಥಳೀಯ ಚರ್ಚೊಂದು ಕಾರ್ ಪಾರ್ಕಿಂಗ್ ಗೆ ಸ್ಥಳಾವಕಾಶ ನೀಡಿದೆ ಎನ್ನುತ್ತಾರೆ ಬಿಲಾಲ್.

‘ಹಾರ್ವೆ’ ಚಂಡಮಾರತದ ಸಂತ್ರಸ್ತರಿಗಾಗಿ ಮಸೀದಿಗಳು ಆಶ್ರಯತಾಣಗಳಾಗಿ ಮಾರ್ಪಾಡಾಗಿದೆ. ಇಸ್ಲಾಮಿಕ್ ಸೊಸೈಟಿ ಆಫ್ ಗ್ರೇಟರ್ ಹ್ಯೂಸ್ಟನ್ ನ ಸದಸ್ಯರು ಚಂಡಮಾರುತ ಸಂತ್ರಸ್ತರಿಗಾಗಿ ಆಹಾರ, ಆರ್ಥಿಕ ಸಹಾಯಗಳನ್ನು ಮಾಡುತ್ತಿದೆ. ಈ ಸಂಘಟನೆಯ ಕಾರ್ಯಕರ್ತರು ಜಲಾವೃತ ಪ್ರದೇಶಗಳಿಂದ ಹಲವರನ್ನು ಈಗಾಗಲೇ ರಕ್ಷಿಸಿದ್ದಾರೆ. ಈದ್ ದಿನ ನೂರಾರು ಜನರು ಸೇರುತ್ತರಾದರೂ ಆಶ್ರಯ ಪಡೆದವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರಿಗೆ ಮೊದಲ ಆದ್ಯತೆ ನೀಡಲಾಗುವುದಿಲ್ಲ. ಅವರಿಗೆ ಯಾವುದೇ ತೊಂದರೆಯಾಗಿಲ್ಲ” ಎನ್ನುತ್ತಾರೆ ಐಎಸ್ ಜಿಎಚ್ ನ ಅಧ್ಯಕ್ಷ ಎಂ.ಜೆ. ಖಾನ್.

ಇಲ್ಲಿನ ನಿವಾಸಿಗಳಾದ ಇಸ್ಮಾಯೀಲ್ ಹಾಗೂ ರಾಬಿಯಾ ವೈದ್ ಅಮೆರಿಕನ್ ರೆಡ್ ಕ್ರಾಸ್ ನ ಸ್ವಯಂ ಸೇವಕರಾಗಿದ್ದಾರೆ. ಸಾವಿರಾರು ಜನರಿಗೆ ಆಶ್ರಯ ನೀಡಿರುವ ಸಂಸ್ಥೆಯಲ್ಲಿ ಅವರು ಈದ್ ನ ನಡುವೆಯೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ನೈಸರ್ಗಿಕವಾಗಿಯೋ ಅಥವಾ ಮಾನವನ ಕೃತ್ಯದಿಂದಲೋ ಸರ್ವರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದು ಮುಸ್ಲಿಮರಾಗಿಯೂ , ಮಾನವರಾಗಿಯೂ ನಮ್ಮ ಕರ್ತವ್ಯವಾಗಿದೆ” ಎನ್ನುತ್ತಾರೆ ಇಸ್ಮಾಯೀಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News