×
Ad

ಬೆನಜೀರ್ ಹತ್ಯೆ ಪ್ರಕರಣ: ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿಗೆ ಜರ್ದಾರಿ ನಿರ್ಧಾರ

Update: 2017-09-03 23:28 IST

ಕರಾಚಿ, ಸೆ.2: ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಕಳೆದ ವಾರ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರ ಪತಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸೀಫ್ ಅಲಿ ಝರ್ದಾರಿ ರವಿವಾರ ತಿಳಿಸಿದ್ದಾರೆ. ಬೆನಜೀರ್ ಭುಟ್ಟೋ ಕೊಲೆ ಪ್ರಕರಣದ ಆರೋಪಿಗಳಾದ ಐವರು ಶಂಕಿತ ಪಾಕಿಸ್ತಾನಿ ತಾಲಿಬಾನ್ ಕಾರ್ಯಕರ್ತರನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯದ ತೀರ್ಪು ತನಗೆ ತೃಪ್ತಿಯುಂಟು ಮಾಡಿಲ್ಲವೆಂದು ಅವರು ಹೇಳಿದ್ದಾರೆ.

 2007ರ ಡಿಸೆಂಬರ್ 27ರಂದು ರಾವಲ್ಪಿಂಡಿಯ ಲಿಯಾಖತ್ ಭಾಗ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ನಡೆದ ಬಂಧೂಕು ಹಾಗೂ ಬಾಂಬ್ ದಾಳಿಯಲ್ಲಿ ಬೆನಜೀರ್ ಸೇರಿದಂತೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆಯಾಗಿದ್ದ ಬೆನಜೀರ್ ಎರಡು ಅವಧಿಗೆ ಪಾಕ್ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.

  ಬೆನಜೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಕಳೆದ ವಾರ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಹಾಗೂ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ತಲೆಮೆಸಿಕೊಂಡ ಅಪರಾಧಿಯೆಂದು ಘೋಷಿಸಿತ್ತು ಮತ್ತು ಅವರ ಎಲ್ಲಾ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News