ಫ್ರಾಂಕ್‌ಫರ್ಟ್‌ನಲ್ಲಿ ಜಾಗತಿಕ ಯುದ್ಧದ ದೈತ್ಯ ಬಾಂಬ್‌ಗಳು ಪತ್ತೆ: ಸಾವಿರಾರು ಮಂದಿಯ ಸ್ಥಳಾಂತರ

Update: 2017-09-03 18:14 GMT

ಫ್ರಾಂಕ್‌ಫರ್ಟ್,ಸೆ.3: ಜರ್ಮನಿಯ ವಾಣಿಜ್ಯ ನಗರ ಪ್ರಾಂಕ್‌ಫರ್ಟ್‌ನ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಪತ್ತೆಯಾಗಿರುವ ಎರಡನೆ ವಿಶ್ವಮಹಾಯುದ್ಧ ಕಾಲದ ಎರಡು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಪರಿಸರದಲ್ಲಿರುವ ಸಾವಿರಾರು ನಿವಾಸಿಗಳನ್ನು ಅವರ ಮನೆಗಳಿಂದ ತೆರವು ಗೊಳಿಸಲಾಗಿದೆ.

 ತೆರವುಗೊಳಿಸಲ್ಪಟ್ಟ ನಿವಾಸಿಗಳಿಗೆ ಫ್ರಾಂಕ್‌ಫರ್ಟ್‌ನ ವಾಣಿಜ್ಯ ಮೇಳ ಪ್ರಾಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಕೇಂದ್ರವೊಂದರಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

  ಫ್ರಾಂಕ್‌ಫರ್ಟ್‌ನ ವೆಸ್ಟೆಂಡ್ ಉಪನಗರದಲ್ಲಿ ಕಳೆದ ವಾರ ಬೃಹತ್ ಗಾತ್ರದ ಈ ಎರಡು ಬಾಂಬ್‌ಗಳು ಪತ್ತೆಯಾಗಿದ್ದವು. ಈ ಪ್ರದೇಶದಲ್ಲಿ ಹಲವಾರು ಶ್ರೀಮಂತ ಉದ್ಯಮಿಗಳು, ಬ್ಯಾಂಕರ್‌ಗಳು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ. 70 ಶತಕೋಟಿ ಡಾಲರ್ ವೌಲ್ಯದ ಚಿನ್ನದ ನಿಧಿಯ ಸಂಗ್ರಹವಿರುವ ಜರ್ಮನಿಯ ಕೇಂದ್ರೀಯ ಬ್ಯಾಂಕನ್ನು ಕೂಡಾ ಸ್ಥಳಾಂತರಿಸಲಾಗಿದೆ.

  ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸುಮಾರು 60 ಸಾವಿರ ನಿವಾಸಿಗಳನ್ನು ತೆರವುಗೊಳಿಸಬೇಕಾಗಿದೆ. ಅಗತ್ಯಬಿದ್ದಲ್ಲಿ ಬಲಪ್ರಯೋಗದ ಮೂಲಕವೂ ನಿವಾಸಿಗಳನ್ನು ತೆರವುಗೊಳಿಸಲಾಗುವುದು ಎಂದು ಪೊಲೀಸ್ ವರಿಷ್ಠರು ತಿಳಿಸಿದ್ದಾರೆ. ಈ ಬಾಂಬ್‌ಗಳ ನಿಯಂತ್ರಿತ ಸ್ಫೋಟ ಸಾಧ್ಯವಾಗದಿದ್ದಲಿ ್ಲ ನಗರದ ಒಂದು ಭಾಗವೇ ನಾಮಾವಶೇಷವಾಗಲಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.

  ಬಾಂಬ್ ಪತ್ತೆಯಾದ 1.5 ಕಿ.ಮೀ. ವ್ಯಾಪ್ತಿಯೊಳಗಿನ ನಿವಾಸಿಗಳನ್ನು ತೆರವುಗೊಳಿಸಲಾಗುತ್ತಿದೆ. ನವಜಾತ ಶಿಶುಗಳು ಹಾಗೂ ತೀವ್ರನಿಗಾ ವಿಭಾಗದ ರೋಗಿಗಳನ್ನು ಒಳಗೊಂಡಂತೆ ಎರಡು ಆಸ್ಪತ್ರೆಗಳನ್ನು ಕೂಡಾ ತೆರವುಗೊಳಿಸಲಾಗಿದೆ. ಎಂದು ಮೂಲಗಳು ಹೇಳಿವೆ.

    1939-45ರವರೆಗೆ ನಡೆದ ಎರಡನೆ ವಿಶ್ವಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ನ ವಾಯುಪಡೆಯು ಈ ಬಾಂಬ್‌ಗಳನ್ನು ಎಸೆದಿರಬೇಕೆಂದು ಶಂಕಿಸಲಾಗಿದೆ. ಎರಡನೆ ಮಹಾಯುದ್ಧದಲ್ಲಿ ಬ್ರಿಟನ್ ಹಾಗೂ ಅಮೆರಿಕದ ಯುದ್ಧವಿಮಾನಗಳು 1.5 ದಶಲಕ್ಷ ಟನ್‌ಗಳಷ್ಟು ಬಾಂಬ್‌ಗಳನ್ನು ಜರ್ಮನಿಯ ಮೇಲೆ ಎಸೆದಿದ್ದು, 6 ಲಕ್ಕಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಶೇ.15ರಷ್ಟು ಬಾಂಬ್‌ಗಳು ಸ್ಪೋಟಿಸಲು ವಿಫಲವಾಗಿದ್ದು, ಅವು ಸುಮರು ನೆಲದಿಂದ ಆರು ಮೀಟರ್ ಆಳದಲ್ಲಿ ಹೂತುಹೋಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News