ಬದಲಾಗ ಬೇಕಾಗಿರುವುದು ಸಚಿವರಲ್ಲ

Update: 2017-09-03 18:48 GMT

ಮೋದಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನದ ಭಾಗವಾಗಿ ಸಂಪುಟ ವಿಸ್ತರಣೆಯ ಪ್ರಹಸನವನ್ನು ನಡೆಸಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಘೋಷಿಸಿದ ಯೋಜನೆಗಳು, ತಳೆದ ಆರ್ಥಿಕ ನೀತಿಗಳೆಲ್ಲವೂ ಭಾರತದ ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ. ವಿದೇಶಿ ಕಪ್ಪು ಹಣವನ್ನು ಹೊರತರುತ್ತೇನೆ ಎಂದು ಅಧಿಕಾರ ಹಿಡಿದ ಮೋದಿ ಸರಕಾರ, ಅಂತಿಮವಾಗಿ ಭಾರತದೊಳಗಿರುವ ಕಪ್ಪುಹಣವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ‘ನೋಟು ನಿಷೇಧ’ವನ್ನು ಘೋಷಿಸಿತು. ದೇಶ ಅಕ್ಷರಶಃ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸಿತು. ಆದರೆ ಇದೀಗ ಅದರ ಫಲಿತಾಂಶ ಹೊರಬಿದ್ದಿದೆ.

ದೇಶದ ಜಿಡಿಪಿ ಕನಿಷ್ಠ ಮಟ್ಟಕ್ಕಿಳಿದಿದೆ. ಕಪ್ಪು ಹಣ ಹೊರ ಬರಲಿಲ್ಲ ಮಾತ್ರವಲ್ಲ, ಆರ್‌ಬಿಐ ಈ ಯೋಜನೆಯಿಂದ ತೀವ್ರ ನಷ್ಟಕ್ಕೊಳಗಾಗಿದೆ. ದೇಶದ ಗ್ರಾಮೀಣ ಉದ್ಯಮ ನೆಲಕಚ್ಚಿದೆ. ತಾಳ ತಪ್ಪಿರುವ ಅರ್ಥವ್ಯವಸ್ಥೆ ಯನ್ನು ಸರಿಪಡಿಸುವುದು ಸದ್ಯಕ್ಕಂತೂ ದೂರದ ಮಾತು. ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು, ಭಯೋತ್ಪಾದನೆ ನಿಗ್ರಹ, ಡಿಜಿಟಲ್ ಇಂಡಿಯಾ, ಕ್ಯಾಶ್‌ಲೆಸ್ ಇಂಡಿಯಾ ಎಂದೆಲ್ಲ ಸಮರ್ಥನೆಗಳನ್ನು ನೀಡಿತಾದರೂ, ಯಾವ ರೀತಿಯಲ್ಲೂ ನೋಟು ನಿಷೇಧ ತನ್ನ ಪರಿಣಾಮವನ್ನು ಬೀರುವುದಕ್ಕೆ ವಿಫಲವಾಯಿತು. ಕಾಶ್ಮೀರದಲ್ಲಿ ಉಗ್ರವಾದಿಗಳ ಉಪಟಳ ಅತಿಯಾಯಿತು. ಮೋದಿಯ ಅಧಿಕಾರಾವಧಿಯಲ್ಲಿ ಗಡಿಭಾಗದಲ್ಲಿ ಅತೀ ಹೆಚ್ಚು ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿದರು. ಡಿಜಿಟಲ್ ಇಂಡಿಯಾ, ಭೀಮ್‌ಆ್ಯಪ್ ಮೊದಲಾದವುಗಳು ತಮ್ಮ ಉದ್ದೇಶಗಳನ್ನು ಸಾಧಿಸುವಲ್ಲಿ ವಿಫಲವಾದವು. ದೇಶಾದ್ಯಂತ ಸರಕಾರದ ವಿರುದ್ಧ ಟೀಕೆಗಳು ಹೊರ ಹೊಮ್ಮುತ್ತಿರುವ ವೇಳೆಯಲ್ಲೇ ನರೇಂದ್ರ ಮೋದಿಯವರು ಸಂಪುಟ ಪುನಾರಚನೆಯನ್ನು ಘೋಷಿಸಿದರು. ಆ ಮೂಲಕ, ಸರಕಾರದ ವೈಫಲ್ಯವನ್ನು ಈಗಿರುವ ಸಚಿವರ ಹೆಗಲ ಮೇಲೆ ಹಾಕುವ ಪ್ರಯತ್ನವನ್ನು ಅವರು ನಡೆಸಿದ್ದಾರೆ.

ಮೋದಿ ನೇತೃತ್ವದ ಹೊಸ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಯಾರೂ ಸಚಿವರಿಂದ ವಿಶೇಷವಾದುದನ್ನು ನಿರೀಕ್ಷಿಸಿಯೇ ಇಲ್ಲ. ಯಾಕೆಂದರೆ, ಇಡೀ ಸರಕಾರ ಮೋದಿಯೆನ್ನುವ ಏಕ ವ್ಯಕ್ತಿಯನ್ನು ಕೇಂದ್ರೀಕರಿಸಿ ನಡೆಯುತ್ತಿದೆ. ಹಿರಿಯ ರಾಜಕೀಯ ಮುತ್ಸದ್ದಿ ಸುಶ್ಮಾ ಸ್ವರಾಜ್‌ರಂತಹ ನಾಯಕಿ ವಿದೇಶಾಂಗ ಸಚಿವೆಯಂತಹ ಉನ್ನತ ಸ್ಥಾನವನ್ನು ಹೊಂದಿಯೂ ಅವರು ನಿಸ್ಸಹಾಯಕರಾಗಿದ್ದಾರೆ. ಶ್ರೀಸಾಮಾನ್ಯರ ವೀಸಾ ಸಮಸ್ಯೆಗಳನ್ನು ಇತ್ಯರ್ಥ ಮಾಡುವುದಷ್ಟೇ ಅವರ ಕೆಲಸವಾಗಿ ಬಿಟ್ಟಿತು. ಗೃಹ, ವಿತ್ತ, ರಕ್ಷಣಾ ಖಾತೆಯಂತಹ ಉನ್ನತ ಸ್ಥಾನಗಳೂ ಕಳೆದ ಮೂರು ವರ್ಷಗಳಿಂದ ನಿಷ್ಕ್ರಿಯವಾಗಿವೆ. ಅವರೆಲ್ಲ ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು, ಅವರನ್ನು ಮುಂದಿಟ್ಟುಕೊಂಡು ಇತರ ಶಕ್ತಿಗಳು ದೇಶದ ಅರ್ಥವ್ಯವಸ್ಥೆಯನ್ನು ನಿರ್ವಹಿಸುತ್ತಿವೆ.

ಅಭಿವೃದ್ಧಿ ಎನ್ನುವುದು ಕಾರ್ಪೊರೇಟ್ ಮಟ್ಟಕ್ಕೆ ಸೀಮಿತವಾಗಿ ಉಳಿಯಿತು. ಅದಕ್ಕೆ ಪೂರಕವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ನೀತಿಗಳು ಜಾರಿಗೆ ಬರುತ್ತಿತ್ತು. ಮೋದಿ ಭಜನೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬ ರೀತಿಯಲ್ಲಿ ಜನರನ್ನು ಮಾಧ್ಯಮಗಳು ನಂಬಿಸಿದವು. ಸಂಪನ್ಮೂಲ ಖಾತೆಯಂತಹ ಮಹತ್ವದ ಸ್ಥಾನವನ್ನು ಸ್ಮತಿ ಇರಾನಿಯಂತಹ ಅಪ್ರಬುದ್ಧ ಮಹಿಳೆಗೆ ಒಂದು ಸರಕಾರ ವಹಿಸಬಹುದು ಎಂದ ಮೇಲೆ ಈ ಸರಕಾರವನ್ನು ನಾವು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬಹುದು? ಒಂದೆಡೆ ಆರೆಸ್ಸೆಸ್, ಇನ್ನೊಂದೆಡೆ ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಶಕ್ತಿಗಳು ಮೋದಿಯನ್ನು ಬಳಸಿಕೊಂಡು ತಮ್ಮ ತಮ್ಮ ಹಿತಾಸಕ್ತಿಗಳನ್ನು ಜಾರಿಗೊಳಿಸುತ್ತಿವೆ. ಈ ಶಕ್ತಿಗಳಿಗೆ ಮುತ್ಸದ್ದಿ ರಾಜಕಾರಣಿಗಳು, ಸ್ವಂತಿಕೆಯಿರುವ ನಾಯಕರು ಸಚಿವ ಖಾತೆಗಳನ್ನು ನಿರ್ವಹಿಸುವುದು ಬೇಕಾಗಿಲ್ಲ. ಅಂದ ಮೇಲೆ, ಈವರೆಗಿನ ವೈಫಲ್ಯಗಳಿಗೆ ನಾವು ವಿವಿಧ ಸಚಿವರನ್ನು ಹೊಣೆ ಮಾಡುವುದು ಎಷ್ಟು ಸರಿ? ಇದೇ ರೀತಿ, ಪುನಾರಚನೆಯಾಗಿರುವ ಸಚಿವ ಸಂಪುಟದಿಂದ ಈ ದೇಶ ಹೊಸತನ್ನು ನಿರೀಕ್ಷಿಸಲು ಸಾಧ್ಯವೇ?

ಸಚಿವ ಸಂಪುಟ ಪುನಾರಚನೆಯಾಗುತ್ತದೆ ಎನ್ನುವಾಗ ಈ ದೇಶದ ಗಮನ ಇದ್ದುದು ರಕ್ಷಣಾ ಖಾತೆಯ ಕುರಿತಂತೆ. ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ ಗಡಿಯಲ್ಲಿ ಕಾಲು ಕೆರೆಯುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಪೂರ್ಣ ಪ್ರಮಾಣದ ರಕ್ಷಣಾ ಸಚಿವರೇ ಇದ್ದಿರಲಿಲ್ಲ. ರಕ್ಷಣಾ ಸಚಿವರಾಗಿದ್ದ ಪಾರಿಕ್ಕರ್, ಗೋವಾದ ಮುಖ್ಯಮಂತ್ರಿಯಾಗುವ ಆಸೆಯಲ್ಲಿ ದೇಶದ ರಕ್ಷಣೆಯ ಹೊಣೆಗಾರಿಕೆಯಿಂದ ನುಣುಚಿಕೊಂಡರು. ‘ಈ ಖಾತೆ ತನ್ನ ವ್ಯಾಪ್ತಿ ಮತ್ತು ಶಕ್ತಿಗೆ ಮೀರಿದ್ದು’ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಿದೆ ಎನ್ನುವುದನ್ನು ಆನಂತರ ಅವರು ಪರೋಕ್ಷವಾಗಿ ಒಪ್ಪಿಕೊಂಡರು. ಇದಾದ ದಿನಗಳಿಂದ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿಯವರ ಹೆಗಲಿಗೆ ಈ ಹೊಣೆಯನ್ನೂ ಏರಿಸಲಾಯಿತು. ವಿತ್ತ ಸಚಿವರಾಗಿಯೇ ವಿಫಲವಾಗಿರುವ ಜೇಟ್ಲಿ, ರಕ್ಷಣಾ ಖಾತೆಯನ್ನೂ ಜೊತೆಯಾಗಿ ನಿರ್ವಹಿಸುತ್ತಾರೆನ್ನುವುದೇ, ದೇಶದ ರಕ್ಷಣೆಯ ಕುರಿತಂತೆ ಸರಕಾರ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ತಿಳಿಸುತ್ತದೆ.

ಒಂದೆಡೆ ಪಾಕಿಸ್ತಾನದ ಗಡಿಯಲ್ಲಿ ಪದೇ ಪದೇ ನಮ್ಮ ಸೈನಿಕರು ಸಾಮೂಹಿಕವಾಗಿ ಶತ್ರುಗಳ ದಾಳಿಗೆ ಬಲಿಯಾಗುತ್ತಿದ್ದರೆ, ಇತ್ತ ಚೀನಾ ದೇಶ ಭಾರತದ ಮೇಲೆ ಎರಗುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಇಂತಹ ಹೊತ್ತಿನಲ್ಲಿ, ಇದನ್ನು ನಿಭಾಯಿಸುವ ನಾಯಕರೇ ದೇಶದೊಳಗಿರಲಿಲ್ಲ. ರಕ್ಷಣಾ ಖಾತೆಯನ್ನು ವಹಿಸಿಕೊಳ್ಳಲು ಬಿಜೆಪಿಯ ಎಲ್ಲ ನಾಯಕರೂ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳೂ ಇದ್ದವು. ಇದೀಗ ಅದನ್ನು ಪುಷ್ಟೀಕರಿಸುವಂತೆ ನಿರ್ಮಲಾ ಸೀತಾರಾಮನ್ ಎನ್ನುವ ಅನನುಭವಿ ನಾಯಕಿಯೊಬ್ಬರ ಹೆಗಲಿಗೆ ಆ ಸ್ಥಾನವನ್ನು ಜಾರಿಸಿ, ಮೋದಿ ಕೈ ತೊಳೆದುಕೊಂಡಿದ್ದಾರೆ. ಗಂಗೆಯನ್ನು ಶುದ್ಧೀಕರಿಸುವಲ್ಲಿಯೇ ಸುಸ್ತಾಗಿ ಕುಳಿತಿದ್ದ ಉಮಾಭಾರತಿಯಿಂದ ಜಲಸಂಪನ್ಮೂಲ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. ಪದೇ ಪದೇ ಸಂಭವಿಸುತ್ತಿರುವ ರೈಲು ದುರಂತಗಳ ಕಳಂಕದಿಂದ ಮುಖ ಉಳಿಸಿಕೊಳ್ಳುವುದಕ್ಕಾಗಿ ಸುರೇಶ್ ಪ್ರಭು ಅವರನ್ನು ರೈಲ್ವೆ ಖಾತೆಯಿಂದ ಕೆಳಗಿಳಿಸಿ ಪಿಯೂಷ್ ಗೋಯಲ್‌ಗೆ ನೀಡಲಾಗಿದೆ.

ಉಳಿದಂತೆ ಕರ್ನಾಟಕದಿಂದ ಅನಂತಕುಮಾರ್ ಹೆಗಡೆಗೆ ಒಂದು ಸಹಾಯಕ ಸಚಿವ ಸ್ಥಾನವನ್ನು ನೀಡಲಾಗಿದೆ. ಈ ಸಂಪುಟ ಪುನಾರಚನೆಯಿಂದ ಆಡಳಿತದಲ್ಲಿ ವಿಶೇಷ ಬದಲಾವಣೆಗಳನ್ನು ನಾವು ನಿರೀಕ್ಷಿಸುವಂತಿಲ್ಲ. ಕನಿಷ್ಠ ಬಿಜೆಪಿಗಾದರೂ ಲಾಭವಾಗಬಹುದೇ ಎಂದರೆ ಆ ಸೂಚನೆಯೂ ಕಾಣಿಸುತ್ತಿಲ್ಲ. ಎನ್‌ಡಿಎಯೊಳಗೆ ಈ ಸಂಪುಟ ಪುನಾರಚನೆ ವ್ಯಾಪಕ ಅಸಮಾಧಾನವನ್ನು ತಂದಿದೆ. ಉಮಾಭಾರತಿ ಅದನ್ನು ಈಗಾಗಲೇ ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ಹೊರಗೆಡಹಿದ್ದಾರೆ. ಬಿಹಾರದ ಮಿತ್ರನಾಗಿರುವ ನಿತೀಶ್ ಬಳಗ ಮುನಿಸಿಕೊಂಡಿದೆ. ಶಿವಸೇನೆ ವ್ಯಂಗ್ಯವಾಡುತ್ತಿದೆ. ಇತ್ತ ಕರ್ನಾಟಕದಲ್ಲಿ ಅನಂತಕುಮಾರ್ ಹೆಗಡೆ ಸಚಿವರಾಗಿರುವುದು ಬಿಜೆಪಿಯ ನಾಯಕರೊಳಗೆ ಇನ್ನಷ್ಟು ಅಸಮಾಧಾನ ಸೃಷ್ಟಿಸಿದೆ.

ಯಡಿಯೂರಪ್ಪ ಬಣವಂತೂ ಹೆಗಡೆ ಆಯ್ಕೆಯ ಬಗ್ಗೆತುಟಿ ಬಿಚ್ಚಿಲ್ಲ. ಮುಂದಿನ ದಿನಗಳಲ್ಲಿ ಹೆಗಡೆ ಆಯ್ಕೆ ಬಿಜೆಪಿಯ ಭಿನ್ನಮತ ರೋಗವನ್ನು ಇನ್ನಷ್ಟು ಉಲ್ಬಣಗೊಳಿಸಲಿದೆ. ಒಟ್ಟಿನಲ್ಲಿ ಸಂಪುಟದೊಳಗಾಗಿರುವ ಈ ಬದಲಾವಣೆಯಿಂದ ಆಡಳಿತದ ಮೇಲೆ ಎಳ್ಳಷ್ಟು ಪರಿಣಾಮ ಬೀರುವ ಸೂಚನೆಗಳು ಕಾಣುತ್ತಿಲ್ಲ. ಬದಲಾವಣೆ ನಡೆಯಬೇಕಾಗಿರುವುದು ಸಂಪುಟದಲ್ಲಲ್ಲ. ಮೋದಿಯ ಆಡಳಿತ ನೀತಿಯಲ್ಲಿ. ದೇಶದ ಪ್ರಧಾನಿ, ಕಾರ್ಪೊರೇಟ್ ಶಕ್ತಿಯ ಪಿಆರ್‌ಒ ಕೆಲಸವನ್ನು ಬದಿಗಿಟ್ಟು, ದೇಶದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಲು ಮುಂದಾದರೆ ಮಾತ್ರ ಏನಾದರೂ ಬದಲಾವಣೆಗಳನ್ನು ನಿರೀಕ್ಷಿಸಬಹುದು. ನೋಟು ನಿಷೇಧದ ಎಲ್ಲ ಹೊಣೆಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ಹೊತ್ತಿರುವುದರಿಂದ, ಬದಲಾವಣೆ ಅವರಿಂದಲೇ ಆರಂಭವಾಗಬೇಕಾಗಿದೆ. ಅಂತಹದೊಂದು ಬದಲಾವಣೆಯನ್ನು ಬಿಜೆಪಿಯೊಳಗೆ ಸದ್ಯಕ್ಕಂತೂ ನಿರೀಕ್ಷಿಸಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News