ತೆಂಡುಲ್ಕರ್ ಸಾಧನೆ ಸರಿಗಟ್ಟಿದ ಕೊಹ್ಲಿ

Update: 2017-09-04 18:34 GMT

ದುಬೈ, ಸೆ.4: ಐಸಿಸಿ ಏಕದಿನ ಬ್ಯಾಟ್ಸ್‌ಮನ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ವಿರಾಟ್ ಕೊಹ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ ಗಳಿಸುವ ಮೂಲಕ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕೊಹ್ಲಿ 30ನೆ ಶತಕವನ್ನು ಪೂರೈಸಿದ್ದರು. ಒಟ್ಟು 887 ರೇಟಿಂಗ್ ಪಾಯಿಂಟ್ ಗಳಿಸಿರುವ ಕೊಹ್ಲಿ 1998ರಲ್ಲಿ ತೆಂಡುಲ್ಕರ್ ನಿರ್ಮಿಸಿದ್ದ ರೇಟಿಂಗ್‌ಪಾಯಿಂಟ್ ದಾಖಲೆಯನ್ನು ಸರಿಗಟ್ಟಿದರು. ಭಾರತ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 5-0 ಅಂತರದಿಂದ ಗೆದ್ದ ಮರುದಿನವೇ(ಸೋಮವಾರ) ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಂ.1 ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ ಆಸ್ಟ್ರೇಲಿಯದ ಡೇವಿಡ್ ವಾರ್ನರ್‌ಗಿಂತ 26 ಅಂಕ ಮುಂದಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಎರಡನೆ ಗರಿಷ್ಠ ಸ್ಕೋರ್(302 ರನ್) ಗಳಿಸಿದ್ದ ರೋಹಿತ್ ಶರ್ಮ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಅಗ್ರ-10ಕ್ಕೆ ವಾಪಸಾಗಿದ್ದಾರೆ. ಏಕದಿನ ಸರಣಿಯಲ್ಲಿ ಎರಡು ಶತಕ ಗಳಿಸಿದ್ದ ರೋಹಿತ್ 5 ಸ್ಥಾನ ಭಡ್ತಿ ಪಡೆದು 9ನೆ ಸ್ಥಾನಕ್ಕೇರಿದ್ದಾರೆ. ಒಟ್ಟು 162 ರನ್ ಗಳಿಸಿದ್ದ ಧೋನಿ ಎರಡು ಸ್ಥಾನ ಭಡ್ತಿ ಪಡೆದು 10ನೆ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ 27 ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ ನಾಲ್ಕನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. 23ರ ಹರೆಯದ ಬುಮ್ರಾ ಈ ವರ್ಷದ ಜೂನ್‌ನಲ್ಲಿ 24ನೆ ಸ್ಥಾನಕ್ಕೇರಿದ್ದರು. 15 ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿರುವ ಬುಮ್ರಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಲಂಕಾ ವಿರುದ್ಧ ಸರಣಿಯ ವೇಳೆ ಬುಮ್ರಾ ಲ್ಲೆಕಲೆ ಏಕದಿನದಲ್ಲಿ 27 ರನ್‌ಗೆ 5 ವಿಕೆಟ್ ಕಬಳಿಸಿದ್ದರು.

 4 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದ ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 20ನೆ ಸ್ಥಾನದಿಂದ 10ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಪಟೇಲ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜೀವನಶ್ರೇಷ್ಠ 9ನೆ ರ್ಯಾಂಕ್ ತಲುಪಿದ್ದರು.

ಹಾರ್ದಿಕ್ ಪಾಂಡ್ಯ(2 ಸ್ಥಾನ ಭಡ್ತಿ ಪಡೆದು 61ನೆ ರ್ಯಾಂಕ್), ಕುಲ್‌ದೀಪ್ ಯಾದವ್(12 ಸ್ಥಾನ ಭಡ್ತಿ ಪಡೆದು 89ನೆ ರ್ಯಾಂಕ್)ಹಾಗೂ ಯುರ್ವೆುಂದ್ರ ಚಾಹಲ್( 55 ಸ್ಥಾನ ಭಡ್ತಿ ಪಡೆದು 99ನೆ ರ್ಯಾಂಕ್) ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಟೀಮ್ ರ್ಯಾಂಕಿಂಗ್‌ನಲ್ಲಿ ಭಾರತ 3ನೆ ಸ್ಥಾನದಲ್ಲೇ ಉಳಿದಿದೆ. ಆದರೆ, ಮೂರು ಅಂಕ ಗಳಿಸಿ ಆಸ್ಟ್ರೇಲಿಯಕ್ಕೆ ಹತ್ತಿರವಾಗಿದೆ. ಭಾರತ ವಿರುದ್ಧ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಲೇಬೇಕಾಗಿದ್ದ ಶ್ರೀಲಂಕಾ 2019ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುವ ಅವಕಾಶ ವಂಚಿತವಾಗಿದೆ. ಆದರೆ, ಅರ್ಹತಾ ಟೂರ್ನಿಯಲ್ಲಿ ಆಡುವ ಮೂಲಕ ವಿಶ್ವಕಪ್‌ಗೆ ಪ್ರವೇಶ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News