ಕ್ವಿಟೋವಾ, ವೀನಸ್, ಕ್ವೆರ್ರಿ ಕ್ವಾರ್ಟರ್ ಫೈನಲ್ ಗೆ

Update: 2017-09-04 18:40 GMT

ನ್ಯೂಯಾರ್ಕ್, ಸೆ.4: ಯುಎಸ್ ಓಪನ್‌ನಲ್ಲಿ ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ಸವಾಲು ಅಂತ್ಯಗೊಂಡಿದೆ. ಪೆಟ್ರಾ ಕ್ವಿಟೋವಾ ಹಾಗೂ ವೀನಸ್ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಶರಪೋವಾರನ್ನು ಮಣಿಸಿದ ಲಾಟ್ವಿಯದ ಅನಸ್ಟೆಸಿಜಾ ಸೆವಾಸ್ಟೋವಾ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.

  15 ತಿಂಗಳ ನಿಷೇಧದ ಅವಧಿ ಪೂರೈಸಿ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾದ ಬಳಿಕ ಶರಪೋವಾ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯನ್ನು ಆಡಿದರು. ಮೊದಲ ಸುತ್ತಿನಲ್ಲಿ 2ನೆ ಶ್ರೇಯಾಂಕದ ಸಿಮೊನಾ ಹಾಲೆಪ್‌ರನ್ನು ಮಣಿಸಿ ಗಮನ ಸೆಳೆದಿದ್ದರು. ಫ್ರೆಂಚ್ ಓಪನ್‌ಗೆ ನೇರ ಪ್ರವೇಶ ಪಡೆಯಲು ವಿಫಲವಾಗಿದ್ದ ಶರಪೋವಾ ಗಾಯದ ಸಮಸ್ಯೆಯಿಂದಾಗಿ ವಿಂಬಲ್ಡನ್‌ನಿಂದ ದೂರವಿದ್ದರು. ಯುಎಸ್ ಓಪನ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದರು. ಮುಗುರುಝರನ್ನು ಮಣಿಸಿದ ಕ್ವಿಟೋವಾ: ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಝೆಕ್‌ನ ಪೆಟ್ರಾ ಕ್ವಿಟೋವಾ ಟೂರ್ನಿಯ ಫೇವರಿಟ್ ಗಾರ್ಬೈನ್ ಮುಗುರುಝರನ್ನು 7-6(3), 6-3 ಸೆಟ್‌ಗಳ ಅಂತರದಿಂದ ಮಣಿಸಿ ಗಮನ ಸೆಳೆದರು.

ಮನೆಯೊಳಗೆ ನುಗ್ಗಿದ ದರೋಡೆಕೋರನ ಚೂರಿ ಇರಿತದಿಂದ ಕೈಗೆ ಗಂಭೀರ ಗಾಯವಾಗಿ 5 ತಿಂಗಳ ಕಾಲ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದ ಕ್ವಿಟೋವಾ ಇದೀಗ ನಿಧಾನವಾಗಿ ಮೊದಲಿನ ಲಯಕ್ಕೆ ಮರಳುತ್ತಿದ್ದಾರೆ.

ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಮುಂದಿನ ಸುತ್ತಿನಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್‌ರನ್ನು ಎದುರಿಸಲಿದ್ದಾರೆ.

9ನೆ ಶ್ರೇಯಾಂಕದ ವೀನಸ್ ಸ್ಪೇನ್‌ನ ಕಾರ್ಲ ಸುಯರೆಝ್ ನವಾರ್ರೊರನ್ನು 6-3, 3-6, 6-1 ಸೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.

ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ಮೂರನೆ ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

 ವಿಂಬಲ್ಡನ್ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್-ಅಪ್ ಪ್ರಶಸ್ತಿ ಪಡೆದಿದ್ದ ವೀನಸ್ ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಝೆಕ್‌ನ ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ.

ಸ್ಯಾಮ್ ಕ್ವೆರ್ರಿ, ಕೆವಿನ್ ಆ್ಯಂಡರ್ಸನ್ ಅಂತಿಮ-8ರ ಸುತ್ತಿಗೆ

ನ್ಯೂಯಾರ್ಕ್: ಅಮೆರಿಕದ ಸ್ಯಾಮ್ ಕ್ವೆರ್ರಿ ಹಾಗೂ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ರವಿವಾರ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಕ್ವೆರ್ರಿ ಜರ್ಮನಿಯ ಮಿಸ್ಚಾ ಝ್ವೆರೆವ್‌ರನ್ನು 6-2, 6-2, 6-1 ಸೆಟ್‌ಗಳಿಂದ ಮಣಿಸಿ ಅಂತಿಮ-8ರ ಘಟ್ಟಕ್ಕೇರಿದ್ದಾರೆ.

ಕೇವಲ 77 ನಿಮಿಷದಲ್ಲಿ ಝ್ವೆರೆವ್‌ರನ್ನು ಮಣಿಸಿದ ಕ್ವೆರ್ರಿ 2011ರ ಬಳಿಕ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರ ಎನಿಸಿಕೊಂಡರು. ಈ ಹಿಂದೆ ಆ್ಯಂಡಿ ರಾಡಿಕ್ ಈ ಸಾಧನೆ ಮಾಡಿದ್ದರು.

ಕ್ವೆರ್ರಿ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕದ ಕೇವಿನ್ ಆ್ಯಂಡರ್ಸನ್‌ರನ್ನು ಎದುರಿಸಲಿದ್ದಾರೆ.

 ದೀರ್ಘ ಸಮಯದಿಂದ ಬೆನ್ನು ಹಾಗೂ ಕಾಲು ನೋವು ಸಮಸ್ಯೆ ಎದುರಿಸುತ್ತಿರುವ ಆ್ಯಂಡರ್ಸನ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು ಯುಎಸ್ ಓಪನ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಇಟಲಿಯ ಪಾಲೊ ಲೊರೆಂಝಿ ಅವರನ್ನು 6-4, 6-3, 6-7(4/7), 6-4 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಎರಡನೆ ಬಾರಿ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆ್ಯಂಡರ್ಸನ್ ಫ್ರೆಂಚ್ ಓಪನ್‌ನ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಮರಿನ್ ಸಿಲಿಕ್ ವಿರುದ್ಧ ಗಾಯಗೊಂಡು ನಿವೃತ್ತಿಯಾಗಿದ್ದರು. ಕಾಲು ಹಾಗೂ ಮೊಣಕೈ ಗಾಯದಿಂದಾಗಿ ಯುಎಸ್ ಓಪನ್‌ಗಿಂತ ಮೊದಲು ನಡೆದಿದ್ದ ಎರಡು ಟೂರ್ನಿಗಳಲ್ಲಿ ಆಡಿರಲಿಲ್ಲ.

ಗಾಯದ ಸಮಸ್ಯೆಯ ನಡುವೆಯೂ ವಾಷಿಂಗ್ಟನ್ ಓಪನ್‌ನಲ್ಲಿ ರನ್ನರ್-ಅಪ್ ಹಾಗೂ ಮಾಂಟ್ರಿಯಲ್ ಮಾಸ್ಟರ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಕ್ವೆರ್ರಿ ವಿರುದ್ಧ ಆ್ಯಂಡರ್ಸನ್ 8-6 ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ ಕ್ವೆರ್ರಿ ವಿರುದ್ಧ ಮಾಂಟ್ರಿಯಲ್ ಮಾಸ್ಟರ್ಸ್‌ ಪಂದ್ಯವನ್ನು ಜಯಿಸಿದ್ದ ಆ್ಯಂಡರ್ಸನ್ ಜುಲೈನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯಲ್ಲಿನ 5 ಸೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News