ಕ್ವೆರ್ರಿಗೆ ಸೋಲು, ಆ್ಯಂಡರ್ಸನ್ ಸೆಮಿಫೈನಲ್‌ಗೆ

Update: 2017-09-06 18:37 GMT

ನ್ಯೂಯಾರ್ಕ್, ಸೆ.6: ಅಮೆರಿಕದ ಆಟಗಾರ ಸ್ಯಾಮ್ ಕ್ವೆರ್ರಿ ಅವರನ್ನು ಮಣಿಸಿದ ದಕ್ಷಿಣ ಆಫ್ರಿಕದ ಕೇವಿನ್ ಆ್ಯಂಡರ್ಸನ್ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆ್ಯಂಡರ್ಸನ್ ‘ಸ್ಥಳೀಯ ಫೇವರಿಟ್’ ಕ್ವೆರ್ರಿ ವಿರುದ್ಧ 7-6(5), 6-7(9), 6-3, 7-6(7) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಕ್ವೆರ್ರಿ ಸೋಲಿನೊಂದಿಗೆ ಯುಎಸ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಅಮೆರಿಕದ ಆಟಗಾರನ ಹೋರಾಟ ಅಂತ್ಯವಾಗಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಆಟಗಾರ್ತಿಯರಾದ ಸ್ಲೊಯಾನ್ ಸ್ಟೀಫನ್ಸ್ ಹಾಗೂ ವೀನಸ್ ವಿಲಿಯಮ್ಸ್ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

 17ನೆ ಶ್ರೇಯಾಂಕದ ಕ್ವೆರ್ರಿ ಮೊದಲ ಸೆಟ್ ನಲ್ಲಿ ಸತತ 5 ಅಂಕ ಬಿಟ್ಟುಕೊಟ್ಟು ಎದುರಾಳಿ ಆ್ಯಂಡರ್ಸನ್ ಮೇಲುಗೈ ಸಾಧಿಸಲು ಕಾರಣರಾದರು. ಎರಡನೆ ಸೆಟ್‌ನ್ನು 7-6(9)ರಿಂದ ಜಯ ಸಾಧಿಸಿದ ಕ್ವೆರ್ರಿ ತಿರುಗೇಟು ನೀಡಿದರು. ಆದರೆ, ಉಳಿದೆರಡು ಸೆಟ್‌ಗಳನ್ನು 6-3, 7-6(7) ಅಂತರದಿಂದ ಜಯಿಸಿದ ಆ್ಯಂಡರ್ಸನ್ ಸೆಮಿ ಫೈನಲ್‌ಗೆ ತಲುಪಿದ್ದಾರೆ.

31ರ ಹರೆಯದ ಆ್ಯಂಡರ್ಸನ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ 12ನೆ ಶ್ರೇಯಾಂಕದ ಪಾಬ್ಲೊ ಕರ್ರೆನೊರನ್ನು ಎದುರಿಸಲಿದ್ದಾರೆ.

‘‘ವಿಶ್ವದ ಶ್ರೇಷ್ಠ ಯುಎಸ್ ಓಪನ್ ಟೆನಿಸ್ ಅಂಗಣದಲ್ಲಿನ ಈ ಗೆಲುವು ನನ್ನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ’’ ಎಂದು ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ ದಕ್ಷಿಣ ಆಫ್ರಿಕದ ಮೊದಲ ಆಟಗಾರನಾಗಿರುವ ಆ್ಯಂಡರ್ಸನ್ ಹೇಳಿದ್ದಾರೆ.

2006ರ ಬಳಿಕ ಸೆಮಿ ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರನಾಗಬೇಕೆಂಬ ಕ್ವೆರ್ರಿ ಕನಸು ಕೈಗೂಡಲಿಲ್ಲ. 2006ರಲ್ಲಿ ಆ್ಯಂಡಿ ರಾಡಿಕ್ ನಂತರ ಅಮೆರಿಕದ ಯಾವ ಆಟಗಾರನೂ ಅಂತಿಮ-4ರ ಸುತ್ತು ತಲುಪಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News