ಟೆಸ್ಟ್ ರ‍್ಯಾಂಕಿಂಗ್‌: ನಥಾನ್ ಲಿಯೊನ್ ಜೀವನಶ್ರೇಷ್ಠ ಸಾಧನೆ

Update: 2017-09-08 18:50 GMT

ದುಬೈ, ಸೆ.8: ಆಸ್ಟ್ರೇಲಿಯದ ಆಫ್-ಸ್ಪಿನ್ನರ್ ನಥಾನ್ ಲಿಯೊನ್ ಶುಕ್ರವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 8ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಚಿತ್ತಗಾಂಗ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ 2ನೆ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಲಿಯೊನ್ ಆಸ್ಟ್ರೇಲಿಯ ಏಳು ವಿಕೆಟ್‌ಗಳಿಂದ ಜಯ ಸಾಧಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲ ಸಾಧಿಸಲು ಪ್ರಮುಖ ಕಾಣಿಕೆ ನೀಡಿದ್ದರು. 2ನೆ ಟೆಸ್ಟ್‌ನಲ್ಲಿ ಲಿಯೊನ್ ಜೀವನಶ್ರೇಷ್ಠ (154 ರನ್‌ಗೆ 13 ವಿಕೆಟ್)ಪ್ರದರ್ಶನ ನೀಡಿದ್ದರು. ಏಷ್ಯಾದಲ್ಲಿ ಆಸ್ಟ್ರೇಲಿಯ ಆಟಗಾರ ನೀಡಿರುವ ಶ್ರೇಷ್ಠ ಪ್ರದರ್ಶನ ಇದಾಗಿತ್ತು. ಈ ಪ್ರದರ್ಶನದ ಹಿನ್ನೆಲೆಯಲ್ಲಿ ಲಿಯೊನ್ 9 ಸ್ಥಾನ ಭಡ್ತಿ ಪಡೆದು ಇದೇ ಮೊದಲ ಬಾರಿ 8ನೆ ರ‍್ಯಾಂಕ್ ಪಡೆದಿದ್ದಾರೆ.

ಲಿಯೊನ್ ಕಳೆದ ವರ್ಷ ಮೇನಲ್ಲಿ 12ನೆ ಸ್ಥಾನ ಪಡೆದಿದ್ದರು. ಸರಣಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಕಬಳಿಸಿರುವ ಲಿಯೊನ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್(807ರನ್) ಅವರೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.ಚಿತ್ತಗಾಂಗ್ ಟೆಸ್ಟ್‌ನಲ್ಲಿ 123 ರನ್ ಗಳಿಸಿದ್ದ ವಾರ್ನರ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಭಡ್ತಿ ಪಡೆದು ಐದನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News